ರಾಷ್ಟ್ರೀಯ ಸೀನಿಯರ್ ಹಾಕಿ: ಕರ್ನಾಟಕ ತಂಡಕ್ಕೆ ಮೂರನೇ ಸ್ಥಾನ

7

ರಾಷ್ಟ್ರೀಯ ಸೀನಿಯರ್ ಹಾಕಿ: ಕರ್ನಾಟಕ ತಂಡಕ್ಕೆ ಮೂರನೇ ಸ್ಥಾನ

Published:
Updated:
ರಾಷ್ಟ್ರೀಯ ಸೀನಿಯರ್ ಹಾಕಿ: ಕರ್ನಾಟಕ ತಂಡಕ್ಕೆ ಮೂರನೇ ಸ್ಥಾನ

ಬೆಂಗಳೂರು: ಕಠಿಣ ಪ್ರಯತ್ನ ಹಾಗೂ ತುಸು ಅದೃಷ್ಟದ ಫಲವಾಗಿ ಪಂಜಾಬ್ ತಂಡದವರು ಮಂಗಳವಾರ ಇಲ್ಲಿ ಕೊನೆಗೊಂಡ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಸೀನಿಯರ್ ಪುರುಷರ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡದವರು 2-1 ಗೋಲುಗಳಿಂದ ಏರ್ ಇಂಡಿಯಾ ಬಳಗವನ್ನು ಮಣಿಸಿದರು. ಈ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದು ಹೆಚ್ಚುವರಿ ಸಮಯದಲ್ಲಿ.ನಿಗದಿತ ಅವಧಿಯಲ್ಲಿ ಪಂದ್ಯ 1-1 ಗೋಲಿನಿಂದ ಸಮಬಲವಾಗಿತ್ತು. ಆದರೆ ಹೆಚ್ಚುವರಿ ಸಮಯದಲ್ಲಿ ಏರ್ ಇಂಡಿಯಾ ಮಾಡಿದ ಎಡವಟ್ಟು ಪಂದ್ಯ ಕೈತಪ್ಪಲು ಪ್ರಮುಖ ಕಾರಣವಾಯಿತು. ಪಂಜಾಬ್ ತಂಡಕ್ಕೆ ಉಡುಗೊರೆ ಗೋಲು ನೀಡಿದ ಕಾರಣ ಅರ್ಜುನ್ ಹಾಲಪ್ಪ ಸಾರಥ್ಯದ ಏರ್ ಇಂಡಿಯಾ ತಂಡದ ಪ್ರಶಸ್ತಿ ಕನಸು ನುಚ್ಚು ನೂರಾಯಿತು.ನಿಗದಿತ ಅವಧಿಯ 36ನೇ ನಿಮಿಷದಲ್ಲಿ ಪ್ರಭದೀಪ್ ಸಿಂಗ್ ಗಳಿಸಿದ ಗೋಲು ಪಂಜಾಬ್ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿತು. ಆದರೆ ಎರಡು ನಿಮಿಷಗಳ ಅಂತರದಲ್ಲಿ ಏರ್ ಇಂಡಿಯಾದ ವಿ.ಎಸ್.ವಿನಯ್ ತಂದಿತ್ತ ಗೋಲು 1-1 ಸಮಬಲಕ್ಕೆ ಕಾರಣವಾಯಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಅವರು ಗೋಲಾಗಿ ಪರಿವರ್ತಿಸಿದರು. ನಂತರ ಉಭಯ ತಂಡಗಳು ಗೋಲು ಗಳಿಸಲಿಲ್ಲ. ಈ ಎರಡೂ ತಂಡಗಳು ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದವು.1-1 ಸಮಬಲವಾದ ಕಾರಣ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು. ಹೆಚ್ಚುವರಿ ಸಮಯದ ಎರಡನೇ ನಿಮಿಷದಲ್ಲಿಯೇ ಏರ್ ಇಂಡಿಯಾ ತಂಡದ ವಿನಯ್ ತಪ್ಪೆಸಗಿದರು. ಪಂಜಾಬ್ ತಂಡದ ಗುರ್ಬಜ್ ಸಿಂಗ್ ದಬ್ಬಿದ ಚೆಂಡನ್ನು ತಡೆಯುವಾಗ ಅವರು ಎಡವಿದರು. ಹಾಗಾಗಿ ಚೆಂಡು ತಮ್ಮದೇ  ಗೋಲು ಪೆಟ್ಟಿಗೆ ಸೇರಿತು. ಇದು ಪಂಜಾಬ್ ತಂಡದ ಸಂಭ್ರಮಕ್ಕೆ ಕಾರಣವಾಯಿತು.ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್ ತಂಡದವರು ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಈಗ ಸೀನಿಯರ್ ವಿಭಾಗದಲ್ಲೂ ಟ್ರೋಫಿ ಎತ್ತಿ ಹಿಡಿದರು. `ಇದೊಂದು ಸ್ಮರಣೀಯ ಕ್ಷಣ. ಈ ತಂಡದ ಮೇಲೆ ನನಗೆ ನಂಬಿಕೆ ಇತ್ತು. ಆ ನಂಬಿಕೆಯನ್ನು ಉಳಿಸಿಕೊಂಡರು. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿದರು~ ಎಂದು ಪಂಜಾಬ್ ತಂಡದ ಕೋಚ್ ಬಲ್ಜಿತ್ ಸಿಂಗ್ ನುಡಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಈ ಪಂದ್ಯ ವೀಕ್ಷಿಸಿದರು.

ಕರ್ನಾಟಕಕ್ಕೆ ಜಯ: ಇದಕ್ಕೂ ಮೊದಲು ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದವರು 2-1 ಗೋಲಿನಿಂದ ಕಳೆದ ಬಾರಿಯ ಚಾಂಪಿಯನ್ ಹರಿಯಾಣ ತಂಡವನ್ನು ಸೋಲಿಸಿದರು.ಕರ್ನಾಟಕ ತಂಡದ ಎಂ.ಬಿ.ಅಯ್ಯಪ್ಪ (24ನೇ ನಿಮಿಷ) ಹಾಗೂ ನಾಯಕ ವಿ.ಆರ್.ರಘುನಾಥ್ (41ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರು. ಹರಿಯಾಣ ತಂಡದ ಏಕೈಕ ಗೋಲನ್ನು ಸರ್ದಾರ್ ಸಿಂಗ್ 60ನೇ ನಿಮಿಷದಲ್ಲಿ ಗಳಿಸಿದರು.ವಿಶೇಷ ಪ್ರಶಸ್ತಿ (ಟಾಟಾ ನ್ಯಾನೊ ಕಾರು ಬಹುಮಾನ): ಅತ್ಯುತ್ತಮ ಫಾರ್ವರ್ಡ್ ಆಟಗಾರ: ಅರ್ಜುನ್ ಹಾಲಪ್ಪ (ಏರ್ ಇಂಡಿಯಾ), ಅತ್ಯುತ್ತಮ ಡಿಫೆಂಡರ್: ಗುರ್ಜಿಂದರ್ ಸಿಂಗ್ (ಪಂಜಾಬ್), ಉದಯೋನ್ಮುಖ ಆಟಗಾರ: ಎಂ.ಬಿ.ಅಯ್ಯಪ್ಪ (ಕರ್ನಾಟಕ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry