ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್: ಪ್ರೀ ಕ್ವಾರ್ಟರ್‌ಗೆ ಪಂಕಜ್

7

ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್: ಪ್ರೀ ಕ್ವಾರ್ಟರ್‌ಗೆ ಪಂಕಜ್

Published:
Updated:

ಪುಣೆ: ಕರ್ನಾಟಕದ ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪಿವೈಸಿ ಹಿಂದು ಜಿಮ್ಖಾನಾ ಹಾಲ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪಂಕಜ್ 50-36, 80-39, 62-42, 76-22 (4-0) ಫ್ರೇಮ್‌ಗಳಿಂದ ದೇವೇಂದ್ರ ಜೋಶಿ ಅವರನ್ನು ಪರಾಭವಗೊಳಿಸಿದರು.

ಅವರು ಒಟ್ಟು ಸತತ ನಾಲ್ಕು ಗೆಲುವಿನೊಂದಿಗೆ ಹದಿನಾರರ ಘಟ್ಟ ಪ್ರವೇಶಿಸಿದರು. ಪಿಎಸ್‌ಪಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಆಟಗಾರನಿಗೆ ಅಂಥ ದೊಡ್ಡ ಬ್ರೇಕ್ ಸಿಗಲಿಲ್ಲ. ಆದರೆ ಸ್ಥಿರ ಪ್ರದರ್ಶನದ ಮೂಲಕ ಯಶಸ್ಸು ಸಾಧಿಸಿದರು. ಮೂರು ದಿನಗಳ ಹಿಂದೆ ಬಿಲಿಯರ್ಡ್ಸ್‌ನಲ್ಲಿ ಚಾಂಪಿಯನ್ ಆಗಿರುವ ಪಂಕಜ್ ಈಗ ಪ್ರಶಸ್ತಿ `ಡಬಲ್~ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಶಹಬಾಜ್ ಅದಿಲ್ ಖಾನ್ ಅವರನ್ನು ಎದುರಿಸಲಿದ್ದಾರೆ.

ಹಾಲಿ ಚಾಂಪಿಯನ್ ಆದಿತ್ಯ ಮೆಹ್ತಾ, ಸೌರವ್ ಕೊಠಾರಿ, ಬ್ರಿಜೇಶ್ ದಾಮನಿ, ಸಿದ್ಧಾರ್ಥ್ ಪಾರಿಖ್ ಕೂಡ ಪ್ರೀಕ್ವಾರ್ಟರ್ ಫೈನಲ್ ತಲುಪಿದರು.

ಮೆಹ್ತಾ 77-33, 13-46, 80-21, 94-25, 93-24ರಲ್ಲಿ ರೈಲ್ವೇಸ್‌ನ ನೀರಜ್ ಕುಮಾರ್ ಅವರನ್ನು ಸೋಲಿಸಿದರು. ಕುತೂಹಲ ಕೆರಳಿಸಿದ್ದ ಮತ್ತೊಂದು ಪಂದ್ಯದಲ್ಲಿ ಸೌರವ್ ಕೊಠಾರಿ 35-51, 65-8, 48-61, 65-21, 55-73, 61-11, 84-17ರಲ್ಲಿ ಕರ್ನಾಟಕದ ಎಂ.ಯೋಗೇಶ್ ಕುಮಾರ್ ಅವರನ್ನು ಸೋಲಿಸಿದರು.

ಸಾಕಷ್ಟು ಪೈಪೋಟಿಗೆ ಕಾರಣವಾದ ಈ ಹೋರಾಟದಲ್ಲಿ ಉಭಯ ಆಟಗಾರರು 3-3 ಸಮಬಲ ಸಾಧಿಸಿದ್ದರು. ಹಾಗಾಗಿ ನಿರ್ಣಾಯ ಫ್ರೇಮ್ ಕುತೂಹಲ ಮೂಡಿಸಿತ್ತು. ಇದರಲ್ಲಿ ಸೌರವ್ 84-17ರಲ್ಲಿ ಜಯಭೇರಿ ಮೊಳಗಿಸಿದರು.

ಕಳೆದ ವರ್ಷದ ರನ್ನರ್ ಅಪ್ ಅಲೋಕ್ ಕುಮಾರ್ 64-32, 66-45, 66-17, 104-4 ಫ್ರೇಮ್‌ಗಳಿಂದ ಆಂಧ್ರಪ್ರದೇಶದ ಸುನಿಲ್ ಕುಮಾರ್ ಅವರನ್ನು ಮಣಿಸಿ 16 ಘಟ್ಟ ತಲುಪಿದರು. ಈ ಹೋರಾಟ ಬಹುತೇಕ ಏಕಪಕ್ಷೀಯವಾಗಿತ್ತು.

ಮನನ್ ಚಂದ್ರ 47-30, 73-9, 76-27, 60-10ರಲ್ಲಿ ರಜತ್ ಖನೇಜಾ ಎದುರು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry