ರಾಷ್ಟ್ರೀಯ ಹಾಕಿ: ಕರ್ನಾಟಕ ತಂಡಕ್ಕೆ ಕೇರಳ ಶರಣು

7

ರಾಷ್ಟ್ರೀಯ ಹಾಕಿ: ಕರ್ನಾಟಕ ತಂಡಕ್ಕೆ ಕೇರಳ ಶರಣು

Published:
Updated:

ಬೆಂಗಳೂರು: ಫಾರ್ವರ್ಡ್ ಆಟಗಾರರಾದ ಮಹಮ್ಮದ್ ನಯೀಮುದ್ದಿನ್ ಹಾಗೂ ಬಿಜು ಯರಕಲ್ ಆಕ್ರಮಣಕಾರಿ ಆಟಕ್ಕೆ ಕೇರಳ ತಬ್ಬಿಬ್ಬುಗೊಂಡಿತು. ಇದರಿಂದ ಆತಿಥೇಯ ತಂಡ ದಕ್ಷಿಣ ವಲಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 13-1ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.

ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿ ಪ್ರಸಾದ್ ನಾಯಕತ್ವದ ಕರ್ನಾಟಕ ತಂಡ ಆರಂಭದ ನಿಮಿಷದಲ್ಲಿಯೇ ಪಾರಮ್ಯ ಮೆರೆಯಿತು. ಮೊದಲ ನಿಮಿಷದಲ್ಲಿ  ನಯೀಮುದ್ದಿನ್ ಗೋಲಿನ ಖಾತೆ ತೆರೆದರು. ಈ ಗೋಲು ಬಂದು ಮೂರು ನಿಮಿಷದ ಅಂತರದಲ್ಲಿ ನಯೀಮುದ್ದಿನ್ ನೀಡಿದ ಪಾಸ್‌ನ ನೆರವು ಪಡೆದು ಬಿಜು ಚೆಂಡನ್ನು ಗುರಿ ಸೇರಿಸಿದರು. ಕೇರಳದ ಕಿರಣ್ ಕುಮಾರ್ 11ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಆತಿಥೇಯರ ವೇಗಕ್ಕೆ ಕಡಿವಾಣ ಹಾಕಲು ಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ.

ಆಕ್ರಮಣಕಾರಿ ತಂತ್ರಕ್ಕೆ ಒತ್ತು ನೀಡಿದ ಎಚ್‌ಎಎಲ್‌ನ ನಯೀಮುದ್ದಿನ್ (14, 22, 39 ಹಾಗೂ 54ನೇ ನಿಮಿಷ) ಒಟ್ಟು ಐದು ಗೋಲುಗಳನ್ನು ಗಳಿಸಿದರು. ತಕ್ಕ ಸಾಥ್ ನೀಡಿದ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಬಿಜು (17, 58 ಹಾಗೂ 59ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಡಿ.ಎಸ್. ದರ್ಶನ್ 29ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರೆ, ಮಿಡ್‌ಫೀಲ್ಡರ್ ಚೀಯಣ್ಣ ಎ.ಬಿ. (55ನೇ ನಿ.), ಸಿ.ಕೆ ಸೋಮಣ್ಣ (62ನೇ ನಿ.) ಹಾಗೂ ದೀಪಕ್ ಬಿಜ್ವಾಡ್ (69ನೇ ನಿ.) ಗೋಲು ಗಳಿಸಿ ಆತಿಥೇಯ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ವಿಜಯಿ ತಂಡ ವಿರಾಮದ ವೇಳೆಗೆ 6-1ರಲ್ಲಿ ಮುನ್ನಡೆ ಹೊಂದಿತ್ತು.

ದಿನದ ಇತರ ಪಂದ್ಯದಲ್ಲಿ ಪುದುಚೇರಿ 10-1ಗೋಲುಗಳಿಂದ ಆಂಧ್ರ ಪ್ರದೇಶ ಮೇಲೂ, ತಮಿಳುನಾಡು 4-0ರಲ್ಲಿ ಹೈದರಾಬಾದ್ ವಿರುದ್ಧವೂ ಗೆಲುವು ಸಾಧಿಸಿತು.

ತಮಿಳುನಾಡು ತಂಡದಲ್ಲಿ ಕನ್ನಡಿಗರು

ಬೆಂಗಳೂರು: ಕನ್ನಡಿಗ ಹಾಕಿ ಪಟುಗಳು ಕೇವಲ ರಾಜ್ಯ ತಂಡದಲ್ಲಿ ಮಾತ್ರವಲ್ಲ, ಹೊರ ರಾಜ್ಯದ ತಂಡಗಳಲ್ಲೂ ಮಿಂಚು ಹರಿಸುತ್ತಿದ್ದಾರೆ. ಈ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ತಮಿಳುನಾಡು ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರಿದ್ದಾರೆ.

ಎಸ್.ಎಂ. ರಫೀಕ್ ಹಾಗೂ ಎಂ.ಕೆ. ಮುದ್ದಪ್ಪ ಸೋಮವಾರ ಹೈದರಾಬಾದ್ ವಿರುದ್ಧ ಪಂದ್ಯವನ್ನಾಡುವಾಗ ಕಣಕ್ಕಿಳಿದಿದ್ದರು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಮುದ್ದಪ್ಪ ಉದ್ಯೋಗಿಯಾಗಿದ್ದಾರೆ. `ಹಾಕಿ ಆಡಲು ಕಲಿತದ್ದು ಕರ್ನಾಟಕದಲ್ಲಿಯೇ ಆದರೂ, ತಮಿಳುನಾಡಿನಲ್ಲಿ ಉದ್ಯೋಗದಲ್ಲಿರುವ ಕಾರಣ ಆ ರಾಜ್ಯದ ಪರ ಆಡಬೇಕಿದೆ~ ಎಂದು ಮುದ್ದಪ್ಪ `ಪ್ರಜಾವಾಣಿ~ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry