ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪದ ಗೋಳು!
ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಬದಲಾವಣೆ ಮಾಡಿದ ನಂತರ ತಮ್ಮ ಊರಿನ ಚಿತ್ರವೇ ಬದಲಾಗುತ್ತದೆ. ಜಮೀನು, ನಿವೇಶನಗಳಿಗೆ ಹೆಚ್ಚಿನ ಬೆಲೆ ಬರುತ್ತದೆ. ವಾಣಿಜ್ಯ, ವ್ಯವಹಾರ, ಸಾರಿಗೆ ವ್ಯವಸ್ಥೆ ಉತ್ತಮಗೊಳ್ಳುತ್ತದೆ ಎಂಬುದು ಕೇವಲ ಭ್ರಮೆಯಾಗಿದ್ದು, ಬರೀ ಸಮಸ್ಯೆಗಳ ಪಟ್ಟಿಯೇ ಬೆಳೆಯುತ್ತಾ ಸಾಗಿದೆ ಎಂದು ಜವನಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಖಾಲಿದ್ ಹುಸೇನ್ ದೂರಿದರು.
ಹೆದ್ದಾರಿ ವಿಸ್ತರಣೆ ನಂತರ ಊರು ಎರಡು ಭಾಗವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಹಂಚಿ ಹೋಗಿರುವ ಗ್ರಾಮಸ್ಥರು ಒಬ್ಬರನ್ನೊಬ್ಬರು ಭೇಟಿ ಮಾಡಲು ಸರ್ಕಸ್ ಮಾಡಬೇಕಿದೆ. ಎರಡು ಊರುಗಳನ್ನು ಸಂಪರ್ಕಿಸಲು ನಿರ್ಮಾಣ ಮಾಡಿರುವ ಅಂಡರ್ಪಾಸ್ನಲ್ಲಿ ಮಳೆಗಾಲ ನಿಂತು ಆರು ತಿಂಗಳು ಕಳೆದರೂ, ನೀರು ಹರಿದು ಹೋಗಲು ವ್ಯವಸ್ಥೆ ಮಾಡದ ಕಾರಣ ನೀರು ಕೊಚ್ಚೆಯಾಗಿದೆ. ಹೀಗಾಗಿ, ಅಂಡರ್ಪಾಸ್ ರಸ್ತೆ ಸ್ವಯಂ ಬಂದ್ ಆಗಿದ್ದು, ಗ್ರಾಮದಿಂದ ಒಂದು ಕಿ.ಮೀ. ದೂರದವರೆಗೆ ಸೇವಾ ರಸ್ತೆಯಲ್ಲಿ ಹೋಗಿ ತಿರುವು ಪಡೆಯಲು ಬಯಸದ ಜನ, ರಸ್ತೆಯ ಅಡ್ಡೆಗಳನ್ನು ದಾಟಿ ಮತ್ತೊಂದು ಭಾಗಕ್ಕೆ ಹೋಗುತ್ತಿದ್ದು, ಈ ರೀತಿ ರಸ್ತೆ ದಾಟುವಾಗ ಕಳೆದ ಎರಡು ವರ್ಷದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಂಚಾರ ಅಸ್ತವ್ಯಸ್ತ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳಿಗೆ ನಿಲುಗಡೆ ಕೊಟ್ಟಿದ್ದು, ಯಾವುದೇ ಬಸ್ ಸೇವಾ ರಸ್ತೆಯಲ್ಲಿ ಬರುವುದಿಲ್ಲ. ಪ್ರಧಾನ ರಸ್ತೆಯಲ್ಲೇ ನಿಲ್ಲುವ ಕಾರಣ ಚಿತ್ರದುರ್ಗ, ಬೆಂಗಳೂರು ಕಡೆ ಹೋಗುವ ಪ್ರಯಾಣಿಕರು ಬಸ್ ಹಿಡಿಯಲು ಎರಡೂ ಕಡೆಯಿಂದ ರಸ್ತೆ ದಾಟಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ದಿನನಿತ್ಯ ಅಪಾಯವನ್ನು ಆಹ್ವಾನಿಸುತ್ತಲೇ ಇರುವ ಕರ್ಮ ಗ್ರಾಮಸ್ಥರದ್ದಾಗಿದ ಎಂದು ಖಾಲಿದ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸದರಿಗೆ ಮನವಿ: ಇತ್ತೀಚೆಗೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಪ್ರಯಾಣಿಸುತ್ತಿದ್ದ ಸಂಸದ ಜನಾರ್ದನಸ್ವಾಮಿ, ಪ್ರಧಾನ ರಸ್ತೆಯಲ್ಲಿ ಬಸ್ಗಾಗಿ ಹತ್ತಾರು ಜನ ಕಾದು ನಿಂತಿದ್ದನ್ನು ನೋಡಿ, ವಾಹನದಿಂದ ಇಳಿದು, ಚಿತ್ರ ತೆಗೆದುಕೊಂಡರು. ಕಳೆದ ನಾಲ್ಕು ವರ್ಷದಿಂದ ಗ್ರಾಮಸ್ಥರು ಅನುಭವಿಸುತ್ತಿರುವ ನಿತ್ಯ ಯಾತನೆಯ ಅರಿವನ್ನು ಮಾಡಿಕೊಡಲಾಯಿತು. ಕೇಂದ್ರ ಸಚಿವರ ಜತೆ ಮಾತನಾಡಿ, ಸಮಸ್ಯೆಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದಾರೆ. ಈ ಪರಿಹಾರ ಆದಷ್ಟು ಬೇಗ ಬರಲಿ ಎನ್ನುವುದು ಜನರ ಆಶಯ ಎಂದು ಅವರು ತಿಳಿಸಿದ್ದಾರೆ.
ಒತ್ತಾಯ: ಜವನಗೊಂಡನಹಳ್ಳಿ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಹೆದ್ದಾರಿಯ ಎರಡೂ ಕಡೆಯ ಸೇವಾ ರಸ್ತೆಯನ್ನು ಸರಿಪಡಿಸಿ, ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳು ಬರುವಂತೆ ಮಾಡಬೇಕು. ಎರಡೂ ಭಾಗದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು. ಅವ್ಯವಸ್ಥೆಗೆ ಉದಾಹರಣೆಯಂತಿರುವ ಅಂಡರ್ಪಾಸ್ ಅನ್ನು ತಕ್ಷಣ ವ್ಯವಸ್ಥಿತ ರೂಪಕ್ಕೆ ತರಬೇಕು ಎಂದು ಖಾಲಿದ್ ಒತ್ತಾಯ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.