`ರಾಸಾಯನಿಕ ಬಳಕೆಯಿಂದ ಪರಿಸರ ನಾಶ'

7

`ರಾಸಾಯನಿಕ ಬಳಕೆಯಿಂದ ಪರಿಸರ ನಾಶ'

Published:
Updated:

ಬೆಂಗಳೂರು: `ಕೃಷಿಯ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಬಳಸಿ ನಮ್ಮ ಪರಿಸರವನ್ನು ಮಾಲಿನ್ಯ ಮಾಡಿದ್ದೇವೆ' ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ಅಧ್ಯಕ್ಷ ಡಾ.ಗುರುಬಚನ್ ಸಿಂಗ್ ಹೇಳಿದರು.ಭಾರತೀಯ ತೋಟಗಾರಿಕಾ ಇಲಾಖೆಯು ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ `ಆಧುನಿಕ ಮತ್ತು ಸಾಂಪ್ರದಾಯಿಕ ರೋಗಶಾಸ್ತ್ರ ವಿಧಾನಗಳ ಮೂಲಕ ಸುಸ್ಥಿರ ಕೃಷಿ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಬೆಳವಣಿಗೆಯ ಹೆಸರಿನಲ್ಲಿ ರಾಸಾಯನಿಕ ಮತ್ತು ಔಷಧಗಳನ್ನು ಹೆಚ್ಚಾಗಿ ಬಳಸಿ ಪರಿಸರವನ್ನು ಹಾಳು ಮಾಡುವುದಲ್ಲದೆ, ಅದರಿಂದ ಬೆಳೆಯುವ ತರಕಾರಿ, ಧಾನ್ಯಗಳನ್ನು ತಿಂದು ನಾವು ಕೂಡ ರೋಗ ಪೀಡಿತರಾಗುತ್ತಿದ್ದೇವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.

`ಕೃಷಿ ಬೆಳವಣಿಗೆಯ ಹೆಸರಿನಲ್ಲಿ ಆಗುವ ಅನಾಹುತಕ್ಕೆ ಪಂಜಾಬ್‌ನ ಇಂದಿನ ಸ್ಥಿತಿ ಜ್ವಲಂತ ಉದಾಹರಣೆಯಾಗಿದೆ. ಅಲ್ಲಿ ಅತಿ ಹೆಚ್ಚಿನ ಇಳುವರಿಗಾಗಿ ಹೆಚ್ಚು ರಾಸಾಯನಿಕಗಳು ಮತ್ತು ಔಷಧಗಳ ಸಿಂಪಡಣೆ ಮಾಡಲಾಯಿತು. ಇದರಿಂದ ಆಹಾರ ಧಾನ್ಯಗಳು ವಿಷಕಾರಿ ಅಂಶಗಳಿಂದ ಕೂಡಿವೆ. ಇದರಿಂದಾಗಿ ಪಂಜಾಬ್‌ನಲ್ಲಿ ಕ್ಯಾನ್ಸರ್ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಇದು ಸಂಶೋಧನೆಯಿಂದ ಕಂಡುಬಂದ ಸತ್ಯ' ಎಂದರು.`ಎಂಡೋಸಲ್ಫಾನ್‌ನಿಂದ ಆಗಿರುವ ಮಾರಕ ಅಂಶಗಳ ಬಗ್ಗೆ ಯಾರಲ್ಲಿಯೂ ಸರಿಯಾದ ಅಂಕಿ ಅಂಶಗಳು ಲಭ್ಯವಿಲ್ಲ. ಈ ರೀತಿ ಪ್ರಗತಿಯ ಹೆಸರಿನಲ್ಲಿ ಪರಿಸರದ ಮೇಲೆ ಅನ್ಯಾಯವನ್ನು ಎಸಗುತ್ತಿರುವುದು ದೊಡ್ಡ ಅಪರಾಧವಾಗಿದೆ' ಎಂದು ಹೇಳಿದರು.`ಜೀವ ವೈವಿಧ್ಯತೆಯ ಜತೆಗೆ ಪರಿಸರದ ಸಂಪನ್ಮೂಲಗಳು ನಾಶವಾಗುತ್ತಿವೆ. ಆದ್ದರಿಂದ ಅವುಗಳನ್ನು ಪುನರ್ ಬಳಕೆ ಮಾಡಬಹುದಾದ ಸಂಪನ್ಮೂಲಗಳನ್ನು ಹೆಚ್ಚು ಬಳಸುವ ಅಗತ್ಯವಿದೆ. ಸ್ವಾಭಾವಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ' ಎಂದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ ಮಾತನಾಡಿ, `ಇಂದಿನ ಯುಗದಲ್ಲಿ ತಂತ್ರಜ್ಞಾನ ಮುಖ್ಯವಾಗಿದೆ. ಆದರೆ, ಅದರ ಜತೆಗೆ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದು ಹೇಳಿದರು.`ನಮ್ಮ ರೈತರು ಕೃಷಿಗಾಗಿ ಕಾಡುಗಳನ್ನು ಕಡಿಯದೆ, ಅವರಿಗಿರುವ ಭೂಮಿಯಲ್ಲಿಯೇ ಫಲವತ್ತತೆಯ ಬೆಳೆಗಳನ್ನು ಬೆಳೆಯಬೇಕು. ಸಂಶೋಧಕರು ಕೈಗೊಳ್ಳುವ ಸಂಶೋಧನೆಗಳು ರೈತರಿಗೆ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry