ಮಂಗಳವಾರ, ಜನವರಿ 28, 2020
21 °C

ರಾಸುಗಳ ನಂತರ ಕುರಿಗಳಿಗೆ ಕಾಲುಬಾಯಿ ರೋಗ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ರಾಸುಗಳ ಮಾರಣಹೋಮದ ನಂತರ ಕಾಲು ಬಾಯಿ ರೋಗವು ಈಗ ಕುರಿಗಳಿಗೆ ಕಾಡತೊಡಗಿದ್ದು, ಕುರಿ ಸಾಕಾಣಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ರೋಗಪೀಡಿತ ಕುರಿಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಯಾದರೂ ಒಂದು ವೇಳೆ ಕುರಿಗಳು ಸಾಲುಸಾಲಾಗಿ ಸಾವನ್ನಪ್ಪಲು ಆರಂಭಿಸಿದರೆ ಏನು ಮಾಡುವುದು ಎಂಬ ಚಿಂತೆ ಅವರನ್ನೂ ಕಾಡುತ್ತಿದೆ.ತಾಲ್ಲೂಕಿನ ಯಲುವಹಳ್ಳಿ, ಕಣಿತಹಳ್ಳಿ ಸೇರಿದಂತೆ ಕೆಲ ಗ್ರಾಮಗಳ ಕುರಿಗಳಲ್ಲಿ ರೋಗ ಕಾಣಿಸಿಕೊಂಡಿದೆ. ಏನು ಮಾಡಬೇಕೆಂದು ತೋಚದೆ ರೈತರು ಚಿಂತಾಕ್ರಾಂತರಾಗಿದ್ದಾರೆ.ಕಾಲುಬಾಯಿ ರೋಗದಿಂದ ಸಾಯುವ ರಾಸುಗಳ ವಯಸ್ಸಿನ ಆಧಾರದ ಮೇಲೆ ಪರಿಹಾರ ಧನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಅದೇ ರೋಗದಿಂದ ಸಾಯುವ ಕುರಿಗಳಿಗೆ ಪರಿಹಾರ ನೀಡುವ ಘೋಷಣೆ ಹೊರ ಬಿದ್ದಿಲ್ಲ. ಒಂದು ಕುರಿಯು ಸಾವನ್ನಪ್ಪಿದರೆ 8ರಿಂದ 10 ಸಾವಿರ ರೂಪಾಯಿ ನಷ್ಟವಾಗುತ್ತದೆ. ಆದರೂ ನಮಗೆ ಯಾವುದೇ ಪರಿಹಾರ ಧನ ಸಿಗುವುದಿಲ್ಲ. ಈಗಾಗಲೇ ಕೆಲ ಗ್ರಾಮಗಳಲ್ಲಿ ಕುರಿಗಳು ಸಾವನ್ನಪ್ಪಿವೆಯಾದರೂ ಯಾರಿಗೂ ಪರಿಹಾರ ಧನ ದೊರೆತಿಲ್ಲ ಎಂದು ರೈತರು ಹೇಳುತ್ತಾರೆ.‘ನಾನು ಸುಮಾರು 30 ಕುರಿಗಳನ್ನು ಸಾಕುತ್ತಿದ್ದೇನೆ. ಈಚೆಗೆ ಕೆಲ ಕುರಿಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ತುಂಬ ಭಯವಾಗುತ್ತಿದೆ. ಒಂದು ಕುರಿಯು ಈಗಾಗಲೇ ರೋಗದಿಂದ ಸಾವನ್ನಪ್ಪಿದ್ದು, ಸುಮಾರು 6 ಸಾವಿರ ರೂಪಾಯಿ ನಷ್ಟವಾಗಿದೆ. ಎಲ್ಲ ಕುರಿಗಳಿಗೂ ರೋಗ ಬಡಿದರೆ ಏನು ಗತಿ? ನಮ್ಮ ಕಷ್ಟ ಕೇಳೋರು ಯಾರು? ಎಂದು ಕಣಿತಹಳ್ಳಿ ಗ್ರಾಮದ ನಾರಾಯಣಸ್ವಾಮಿ ಪ್ರಶ್ನಿಸಿದರು.ಕುರಿಗೆ ಕಾಲುಬಾಯಿ ರೋಗ ಬಂದರೆ, ಅವು ಒಂದು ತಿಂಗಳಿಡಿ ಮೇವು ತಿನ್ನುವುದಿಲ್ಲ. ನೋಡನೋಡುತ್ತಿದ್ದಂತೆಯೇ ಬಾಯಿ ಊದಿಕೊಳ್ಳುತ್ತದೆ. ಕುಂಟುತ್ತ ನಡೆಯುತ್ತದೆ. ರೋಗಪೀಡಿತ ಕುರಿಗೆ ನಾವೇ ರಾಗಿಗಂಜಿ ನೀಡುತ್ತೇವೆ. ದೊಡ್ಡ ಕುರಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗುತ್ತವೆ. ಆದರೆ ಮರಿಗಳಲ್ಲಿ ರೋಗ ನಿಯಂತ್ರಣ ಶಕ್ತಿಯಿರುವುದಿಲ್ಲ. ರೋಗದ ಪರಿಣಾಮ ಮತ್ತು ನಿಶ್ಯಕ್ತಿಯಿಂದ ಕುರಿಮರಿಯು ಬೇಗನೇ ಸಾಯುತ್ತದೆ ಎಂದು ವಿವರಿಸಿದರು.ಕುರಿಯೊಂದು ಸತ್ತ ನಂತರ ಅದರ ಛಾಯಾಚಿತ್ರ ತೆಗೆದುಕೊಂಡು ಪಶುವೈದ್ಯಕೀಯ ಆಸ್ಪತ್ರೆಗೆ ಹೋಗಿದ್ದೆ. ಪರಿಹಾರ ಧನ ಕೊಡುವಂತೆ ಮನವಿಪತ್ರ ಸಲ್ಲಿಸಿದ್ದೆ. ಆದರೆ ಎಲ್ಲರೂ ಸಮಾಧಾನ ಮಾಡಿದರೇ ಹೊರತು ಯಾರೊಬ್ಬರೂ ಪರಿಹಾರ ಧನ ಕೊಡಿಸುವ ಭರವಸೆ ನೀಡಲಿಲ್ಲ. ತಾಲ್ಲೂಕಿನಲ್ಲಿ ಕುರಿ ಸಾಕಾಣಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ನಮ್ಮ ಬಗ್ಗೆಯೂ ಯೋಚಿಸಬೇಕು ಎಂದು ವಿನಂತಿಸಿದರು.ಕುರಿಗಳ ಸಾವಿಗೂ ಪರಿಹಾರಧನ

ಕಾಲುಬಾಯಿ ರೋಗವಷ್ಟೇ ಅಲ್ಲ, ಯಾವುದೇ ರೋಗದಿಂದ ಕುರಿಗಳು ಸಾವನ್ನಪ್ಪಿದರೂ ಆಯಾ ಕುರಿ ಸಾಕಾಣಿಕೆದಾರರಿಗೆ ಒಂದು ಕುರಿಗೆ ಮೂರು ಸಾವಿರ ರೂಪಾಯಿಯಂತೆ ಪರಿಹಾರ ಧನ ವಿತರಿಸಲಾಗುತ್ತದೆ. ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಈ ಆದೇಶ ಹೊರಡಿಸಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಎಲ್‌.ಪ್ರಕಾಶ್ ತಿಳಿಸಿದರು.

ಕುರಿಗಳು ಕಾಲುಬಾಯಿ ರೋಗಕ್ಕೆ ತುತ್ತಾಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಆದರೆ ಕುರಿಗಳು ಸಾವನ್ನಪ್ಪಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ರೋಗಪೀಡಿತ ಕುರಿಗಳಿಗೆ ತಕ್ಷಣವೇ ಅಗತ್ಯ ಚಿಕಿತ್ಸೆ ನೀಡಿದ್ದಲ್ಲಿ, ಅವು ಬೇಗನೇ ಗುಣಮುಖವಾಗುತ್ತವೆ. ರಾಸುಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುರಿಗಳಿಗೂ ಲಸಿಕೆ ಹಾಕಿಸಿದ್ದೇವೆ ಮತ್ತು ಔಷಧಿಗಳನ್ನು ಸಹ ವಿತರಿಸಿದ್ದೇವೆ. ರೈತರಿಂದ ಕರೆ ಬಂದ ಕೂಡಲೇ ಪಶುವೈದ್ಯರು ತೆರಳಿ ಅಗತ್ಯ ಚಿಕಿತ್ಸೆ ಕೊಡುತ್ತಿದ್ದಾರೆ ಎಂದು ಹೇಳಿದರು.ಮುಂದುವರಿದ ಸಂಶೋಧನೆ

ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮವೊಂದರಲ್ಲಿ ಹಸುವೊಂದು ಕಾಲುಬಾಯಿ ರೋಗದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನ ‘ಪ್ರಾಣಿಗಳ ಆರೋಗ್ಯ ಮತ್ತು ಪಶುವೈದ್ಯಕೀಯ ಸಂಸ್ಥೆ’ಯ ತಜ್ಞರು ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿದರು. ಪ್ರಾಣಿಯ ಕೆಲವು ಅಂಗಗಳನ್ನು ಸಂಶೋಧನೆಗೆ ಒಯ್ದರು.

ಪ್ರತಿಕ್ರಿಯಿಸಿ (+)