ಬುಧವಾರ, ಏಪ್ರಿಲ್ 14, 2021
23 °C

ರಾಹುಲ್‌ಗೆ ಹೆಚ್ಚಿನ ಹೊಣೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲು ನಾನು ಸಿದ್ಧ~ ಎಂದು ಕಾಂಗ್ರೆಸ್ ಯುವಮುಖವೆಂದೇ ಬಿಂಬಿತರಾಗಿರುವ ರಾಹುಲ್ ಗಾಂಧಿ  ಇದೇ ಮೊದಲ ಬಾರಿಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಅಥವಾ ಪಕ್ಷದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಅವರು ಪಕ್ಷದ `ನಂಬರ್ 2~ ಸ್ಥಾನಕ್ಕೆ ಮೇಲಕ್ಕೇರುವ ಮಾತು ಕೂಡ ಕೇಳಿಬಂದಿದೆ.

ರಾಷ್ಟ್ರಪತಿ ಆಯ್ಕೆಗೆ ಗುರುವಾರ ಮತ ಚಲಾಯಿಸಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಮಾತನಾಡಿ, `ಪಕ್ಷದ ಹಾಗೂ ಸರ್ಕಾರದ ನೀತಿ ನಿರೂಪಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊರಲು ನಾನು ಸಿದ್ಧ~ ಎಂದು ಪ್ರಕಟಿಸಿದರು. ಇದರೊಂದಿಗೆ, ತಾವು ಹೆಚ್ಚಿನ ಹೊಣೆ ಹೊರಬೇಕೆಂದು ಪಕ್ಷದ ನಾಯಕರಿಂದ ಇತ್ತೀಚೆಗೆ ಪದೇಪದೇ ಕೇಳಿಬರುತ್ತಿದ್ದ ಕೂಗಿನ ಬಗೆಗಿನ  ಮೌನ ಮುರಿದರು.

`ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಯಾವಾಗ ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂಬುದು ಇಬ್ಬರು ಹಿರಿಯರಾದ- ಪಕ್ಷದ ಅಧ್ಯಕ್ಷರು ಹಾಗೂ ಪ್ರಧಾನಿ- ಅವರಿಗೆ ಬಿಟ್ಟ ಸಂಗತಿ~ ಎಂದು ಇದೇ ಸಂದರ್ಭದಲ್ಲಿ  ಒತ್ತಿ ಹೇಳಿದರು.

`ಪಕ್ಷದೊಳಗೆ ಹೆಚ್ಚಿನ ಹೊಣೆ ಹೊರುವ ಅಥವಾ ಸರ್ಕಾರವನ್ನು ಸೇರಬಹುದಾದ, ಎರಡೂ ಆಯ್ಕೆಗಳ ಬಗ್ಗೆ  ಮುಕ್ತ ಮನಸ್ಸು ಹೊಂದಿದ್ದೇನೆ~ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಹೆಚ್ಚಿನ ಜವಾಬ್ದಾರಿ ವಹಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಮಗನಿಗೆ ಬಿಟ್ಟ ವಿಷಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ ಮರುದಿನವೇ, ರಾಹುಲ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ರಾಹುಲ್ ಈ ಹೇಳಿಕೆಗೆ ಪಕ್ಷದ ನಾಯಕರಿಂದ ತಕ್ಷಣವೇ ಸ್ವಾಗತ, ಸಂತಸ ವ್ಯಕ್ತವಾಯಿತು. `ಯುವ ನಾಯಕ ಪಕ್ಷದಲ್ಲಿ ಎರಡನೇ ನಂಬರ್ ಪಾತ್ರ ನಿರ್ವಹಿಸಲು ಸಿದ್ಧರಾಗಿದ್ದಾರೆ~ ಎಂದು ಎಐಸಿಸಿ ವಕ್ತಾರ ಜನಾರ್ದನ ದ್ವಿವೇದಿ ಪ್ರತಿಕ್ರಿಯಿಸಿದರು.

ರಾಹುಲ್ ಪಕ್ಷದಲ್ಲಿ ಬಡ್ತಿ ಪಡೆದರೆ, ಪಕ್ಷದ ವರಿಷ್ಠರ ಸಮಿತಿಯಲ್ಲಿ ಅವರೂ ಒಬ್ಬರಾಗಲಿದ್ದಾರೆ. ಈಗ ಈ ಸಮಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಸಚಿವರಾದ ಪಿ.ಚಿದಂಬರಂ, ಎ.ಕೆ.ಆಂಟನಿ ಮತ್ತು ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಇದ್ದಾರೆ.

ರಾಹುಲ್ ಅವರ ರಾಜಕೀಯ ಗುರು ಎಂದೇ ಗುರುತಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಲಖನೌದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.