ರಾಹುಲ್ ಗಾಂಧಿ ಭೇಟಿ: ಫ್ಲೆಕ್ಸ್ ಹಾಕಲೂ ಪೈಪೋಟಿ

7

ರಾಹುಲ್ ಗಾಂಧಿ ಭೇಟಿ: ಫ್ಲೆಕ್ಸ್ ಹಾಕಲೂ ಪೈಪೋಟಿ

Published:
Updated:

ಹುಬ್ಬಳ್ಳಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಜೂನ್ 2ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಕಾಂಗ್ರೆಸ್ ಗುಂಪುಗಳಲ್ಲಿ ಉತ್ಸಾಹ ಪುಟಿದೆದ್ದಿದ್ದು, ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಹಾಕುವುದರಲ್ಲೂ ಪೈಪೋಟಿ ಕಾಣುತ್ತಿದೆ.ಕೆಪಿಸಿಸಿಯಿಂದ ಬ್ಯಾನರ್, ಫ್ಲೆಕ್ಸ್ ಹಾಗೂ ಕಟೌಟ್ ಸಾಮಗ್ರಿ ಮಂಗಳವಾರ ಬೆಂಗಳೂರಿನಿಂದ ನಗರಕ್ಕೆ ಆಗಮಿಸಲಿದ್ದು, ಪ್ರಮುಖ ರಸ್ತೆಗಳಲ್ಲಿ ರಾಹುಲ್ ಗಾಂಧಿ ಕಟೌಟ್‌ಗಳು ಎದ್ದು ನಿಲ್ಲಲಿವೆ. ಈ ಮಧ್ಯೆ ಸ್ಥಳೀಯ ಮುಖಂಡರು ಪಕ್ಷದ ಅಧಿನಾಯಕನ ಜೊತೆ ತಮ್ಮ  ಚಿತ್ರವನ್ನೂ ಛಾಪಿಸಿಕೊಂಡು ಬೀದಿಗಳಲ್ಲಿ ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬ್ಯಾನರ್‌ಗಳನ್ನು ಮುದ್ರಿಸುವ ಅವಳಿನಗರದ ಮುದ್ರಣ ಸಂಸ್ಥೆಗಳಿಗೆ ಬಿಡುವೇ ಇಲ್ಲವಾಗಿದೆ.ನಗರದ ಕೆಲವು ಮುದ್ರಣ ಘಟಕಗಳಿಗೆ ಸೋಮವಾರ `ಪ್ರಜಾವಾಣಿ~ ಭೇಟಿ ನೀಡಿದಾಗ, ನಾಯಕರ ಚಿತ್ರಗಳನ್ನು ಬದಲಿಸುತ್ತಾ ಪ್ರಿಂಟ್ ತೆಗೆಯುವ ಕೆಲಸ ಸಮರೋಪಾದಿಯಲ್ಲಿ ನಡೆದಿತ್ತು. ಧಾರವಾಡ ಜಿಲ್ಲಾ ಕಾಂಗ್ರೆಸ್‌ನಿಂದ ಬ್ಯಾನರ್ ಕಟ್ಟಲು ಪಾಲಿಕೆಯಿಂದ ಅನುಮತಿ ಪಡೆಯಲಾಗಿದ್ದು, ವಿಮಾನ ನಿಲ್ದಾಣ ರಸ್ತೆ ಹಾಗೂ ಧಾರವಾಡ ರಸ್ತೆಗಳು ಕಾಂಗ್ರೆಸ್ `ಹಸ್ತ~ಗಳಿಂದ ರಾರಾಜಿಸಲಿವೆ.ರಾಜ್ಯ ಯುವ ಕಾಂಗ್ರೆಸ್ ಘಟಕದ ಎಲ್ಲ ಪದಾಧಿಕಾರಿಗಳು ನಗರದಲ್ಲೇ ಬೀಡುಬಿಟ್ಟಿದ್ದು, ಸಿದ್ಧತೆಗಳ ಉಸ್ತುವಾರಿ ಹೊತ್ತಿದ್ದಾರೆ. ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ (ಎಐವೈಸಿಸಿ) ರಾಷ್ಟ್ರೀಯ ಕಾರ್ಯಕಾರಿಣಿ ಇದೇ 31ರಿಂದ ನವೀನ್ ಹೋಟೆಲ್‌ನಲ್ಲಿ ನಡೆಯಲಿದ್ದು, ಹೋಟೆಲ್‌ನಲ್ಲಿರುವ ಎಲ್ಲ 43 ಕೋಣೆಗಳನ್ನು ಪ್ರತಿನಿಧಿಗಳಿಗಾಗಿ ಕಾಯ್ದಿರಿಸಲಾಗಿದೆ.ಎಲ್ಲ ರಾಜ್ಯ ಯುವ ಘಟಕಗಳ ಅಧ್ಯಕ್ಷರು 30ರಂದು ನಗರಕ್ಕೆ ಆಗಮಿಸಲಿದ್ದು, ಜೂನ್ 2ರವರೆಗೆ ತಂಗಲಿದ್ದಾರೆ. ಪ್ರತಿಯೊಬ್ಬರಿಗೆ ಒಂದೊಂದು ಕಿಟ್ ಕೊಡಲಾಗುತ್ತಿದ್ದು, ಬೆಂಗಳೂರಿನಿಂದ ಅವುಗಳನ್ನೆಲ್ಲ ತರಿಸಿಕೊಳ್ಳಲಾಗುತ್ತಿದೆ. ಒಗ್ಗಟ್ಟಾಗಿ ಪಕ್ಷ ಮುನ್ನುಗ್ಗಲಿದೆ ಎನ್ನುವ ಭರವಸೆಯನ್ನು ಪಕ್ಷದ ಮುಖಂಡರು ವ್ಯಕ್ತಪಡಿಸುವುರಾದರೂ ಸಿದ್ಧತೆಯಲ್ಲೂ ಗುಂಪುಗಾರಿಕೆ ಎದ್ದು ಕಾಣುತ್ತಿದೆ.ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಭಾನುವಾರ ನಗರಕ್ಕೆ ಆಗಮಿಸಿದಾಗ ಮೂರುಸಾವಿರ ಮಠದ ಆವರಣದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಸಭೆ ರದ್ದಾಗಿದ್ದು, ಪಕ್ಷದ ಲಿಂಗಾಯತ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡಿದೆ. `ಅಧ್ಯಕ್ಷರನ್ನು ಸಭೆಗೆ ಬಾರದಂತೆ ಕರೆದೊಯ್ದ ಸಂತೋಷ ಲಾಡ್ ಮತ್ತು ಶ್ರೀನಿವಾಸ ಮಾನೆ, ಚುನಾವಣೆಯಲ್ಲಿ ಮತಗಳನ್ನು ಗಳಿಸಿಕೊಡುತ್ತಾರೆಯೇ~ ಎಂಬ ಪ್ರಶ್ನೆ ಹಾಕುತ್ತಿದ್ದಾರೆ.ರಾಜ್ಯ ಯುವ ಕಾಂಗ್ರೆಸ್‌ನಲ್ಲೂ ಎರಡು ಗುಂಪುಗಳಿದ್ದು, ಎಲ್ಲರೂ ಒಟ್ಟಾಗಿ ಹೋಗಬೇಕು ಎನ್ನುವ ಸಂದೇಶ ನೇತಾರರಿಂದ ಬಂದಿದೆ ಎಂದು ಕೆಳಹಂತದ ಕಾರ್ಯಕರ್ತರು ಹೇಳುತ್ತಾರೆ. ಆ ಗುಂಪುಗಳು ಯಾವವು ಎಂದು ಕೇಳಿದರೆ ಹಾಲಿ ಅಧ್ಯಕ್ಷ ರಿಜ್ವಾನ್ ಆರ್ಷದ್ ಮತ್ತು ಮಾಜಿ ಅಧ್ಯಕ್ಷ ಪ್ರಿಯಾಂಕ ಖರ್ಗೆ ಕಡೆ ಬೊಟ್ಟು ಮಾಡುತ್ತಾರೆ. ಆದರೆ, ಇಬ್ಬರೂ ಮುಖಂಡರು ನಾವು ಒಟ್ಟಾಗಿದ್ದೇವೆ ಎನ್ನುತ್ತಾರೆ.ಈ ಮಧ್ಯೆ ವಿಭಜನಾ ಪೂರ್ವ ಧಾರವಾಡ ಜಿಲ್ಲೆಯಿಂದ ಸಮಾವೇಶಕ್ಕೆ ಅಧಿಕ ಸಂಖ್ಯೆ ಜನರನ್ನು ಕರೆತರಲು ಉದ್ದೇಶಿಸಿದ ಮುಖಂಡರು, ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಎಡೆಬಿಡದೆ ಸಭೆ ನಡೆಸುತ್ತಿದ್ದಾರೆ. ಸಮಾವೇಶ ನಡೆಯಲಿರುವ ನೆಹರು ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry