ರಾಹುಲ್-ಗೌತಮ್ ಜೋಡಿಗಾನ

6
ರಣಜಿ ಟ್ರೋಫಿ: ಗಂಗೋತ್ರಿ ಅಂಗಳದಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಮೆರೆದಾಟ

ರಾಹುಲ್-ಗೌತಮ್ ಜೋಡಿಗಾನ

Published:
Updated:
ರಾಹುಲ್-ಗೌತಮ್ ಜೋಡಿಗಾನ

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಶನಿವಾರ  ಕೆ.ಎಲ್. ರಾಹುಲ್‌ಗೆ ಚೊಚ್ಚಲ ಶತಕದ ಸಂಭ್ರಮ, ಸಿ.ಎಂ. ಗೌತಮ್‌ಗೆ ಏಳನೇ ಶತಕದ ಸಡಗರ. ಇವರಿಬ್ಬರ ಜೊತೆಯಾಟದ ಅಬ್ಬರಕ್ಕೆ ವಿದರ್ಭ ತಂಡ ಸುಸ್ತು!ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಆರನೇ ಪಂದ್ಯದ ಮೊದಲ ದಿನವೇ ರಾಹುಲ್ ಮತ್ತು ಗೌತಮ್ ಮೂರನೇ ವಿಕೆಟ್‌ಗೆ ಸೇರಿಸಿದ  256 ರನ್‌ಗಳ ಜೊತೆಯಾಟದಿಂದಾಗಿ ಕರ್ನಾಟಕ 90 ಓವರ್‌ಗಳಲ್ಲಿ 2 ವಿಕೆಟ್‌ಗೆ 308 ರನ್ನುಗಳನ್ನು ಕಲೆ ಹಾಕಿದೆ.  ಕೆ.ಎಲ್. ರಾಹುಲ್ (ಔಟಾಗದೇ 144, 269ಎಸೆತ, 390ನಿಮಿಷ, 15ಬೌಂಡರಿ) ಮತ್ತು ಸಿ.ಎಂ. ಗೌತಮ್ (ಔಟಾಗದೇ 129, 215ಎಸೆತ, 310ನಿ, 11ಬೌಂಡರಿ) ಭಾನುವಾರಕ್ಕೂ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.ಇಬ್ಬನಿಯಿಂದಾಗಿ ಬೆಳಿಗ್ಗೆ 20 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಿಗೆ ನೆರವಾಗುವಂತೆ ಕಂಡ ಗಂಗೋತ್ರಿಯ ಪಿಚ್ ಮೊದಲ ಒಂದು ತಾಸು ಹಾಗೆಯೇ ವರ್ತಿಸಿತು.  16 ಓವರ್ ಮುಗಿಯುವುಷ್ಟರಲ್ಲಿಯೇ ರಾಬಿನ್ ಉತ್ತಪ್ಪ ಮತ್ತು ಗಣೇಶ್ ಸತೀಶ್ ಅವರು ಸಂದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.ಪುಟ್ಟ ಹಸಿರು ಗರಿಕೆಗಳಿದ್ದ ಗಟ್ಟಿ ಪಿಚ್ ಉತ್ತಮ ಬೌನ್ಸ್ ಮತ್ತು ಸ್ವಿಂಗ್‌ಗೆ ನೆರವು ನೀಡಿತ್ತು. ಇದರ ಲಾಭ ಪಡೆದ ಸಂದೀಪ್ ಸಿಂಗ್ ತಮ್ಮ ಎರಡನೇ ಸ್ಪೆಲ್‌ನಲ್ಲಿ ರಾಬಿನ್ ಉತ್ತಪ್ಪ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದಾಗ ತಂಡದ ಮೊತ್ತ 44. ವೇಗವಾಗಿ ಒಳನುಗ್ಗಿದ ಎಸೆತವನ್ನು ಆಡಲು ರಾಬಿನ್ ಬ್ಯಾಟ್ ಎತ್ತುವಷ್ಟರಲ್ಲಿ ಚೆಂಡು ಮಧ್ಯದ ಸ್ಟಂಪ್ ಉರುಳಿಸಿತ್ತು.ನಂತರ ಬಂದ ಗಣೇಶ್ ಸತೀಶ್, ಸಿಂಗ್ ಓವರ್‌ನಲ್ಲಿ ಹೊರಹೋಗುತ್ತಿದ್ದ ಎಸೆತವನ್ನು ಹೊಡೆಯುವ ಯತ್ನದಲ್ಲಿ ಬ್ಯಾಟ್ ಸವರಿದ ಚೆಂಡು ವಿಕೆಟ್‌ಕೀಪರ್ ಅಮೋಲ್ ಉಬರಾಂದೆ ಕೈಗಳಲ್ಲಿ ಬಂಧಿಯಾಯಿತು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಗಣೇಶ್ ಸೊನ್ನೆ ಸುತ್ತಿದ್ದು, ವಿದರ್ಭ ತಂಡದಲ್ಲಿ ಖುಷಿಯ ಅಲೆ ಎಬ್ಬಿಸಿತ್ತು. ಆದರೆ ಇದು ಬಹಳ ಹೊತ್ತು ಉಳಿಯಲಿಲ್ಲ. ಬಿಸಿಲು ಏರಿದಂತೆ ಬೌಲರ್‌ಗಳ ಉತ್ಸಾಹ ತಣ್ಣಗಾಯಿತು. ಪ್ರತಿ ಅವಧಿಯಲ್ಲಿಯೂ ರಾಹುಲ್ ಮತ್ತು ಗೌತಮ್ ಶಕ್ತಿ ವರ್ಧಿಸಿತು. ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ  91 ರನ್ನುಗಳು ಬಂದರೆ, ಊಟದಿಂದ ಚಹಾ ವಿರಾಮದವರೆಗೆ ವಿಕೆಟ್ ನಷ್ಟವಿಲ್ಲದೇ 86 ರನ್ನುಗಳು ಬಂದವು. ಚಹಾದ ನಂತರವಂತೂ ಯಾವುದೇ ಆತಂಕವಿಲ್ಲದೇ 131 ರನ್ನುಗಳು ಹರಿದುಬಂದವು. ರಾಹುಲ್-ಗೌತಮ್ ಜೋಡಿಗಾನ: `ಗಟ್ಟಿ ಮನೋಬಲದ ಆಟಗಾರರಿಗೇ ಈ ಅಂಗಳ ಒಲಿಯುವುದು ಖಚಿತ. ಚಾಣಾಕ್ಷತನ, ತಾಳ್ಮೆಯಿಂದ ಆಡಬೇಕು' ಎಂದು ಕರ್ನಾಟಕದ ತರಬೇತುದಾರ ಶುಕ್ರವಾರ ಹೇಳಿದ ಮಾತಿನಂತೆಯೇ ರಾಹುಲ್ ಮತ್ತು ಗೌತಮ್ ಬ್ಯಾಟಿಂಗ್ ಮಾಡಿದರು.ಬೆಂಗಳೂರಿನಲ್ಲಿ ನಡೆದ  ದೆಹಲಿ ವಿರುದ್ಧದ ಪಂದ್ಯದಲ್ಲಿ ಮೈಸೂರು ಹುಡುಗ ಕೆ.ಬಿ. ಪವನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ರಾಹುಲ್ `ಕಿತ್ತಳೆ' ನಾಡಿನ  ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಏಳನೇ ಕ್ರಮಾಂಕದಿಂದ  ಮೂರನೇ ಸ್ಥಾನಕ್ಕೆ ಬಡ್ತಿ ಪಡೆದು ಬಂದ ಸಿ.ಎಂ. ಗೌತಮ್ ಸೇರಿ ಒಂದು ಸಾವಿರ ಪ್ರೇಕ್ಷಕರಿಗೆ ರಸದೌತಣ ನೀಡಿದರು. 20ರ ಹರೆಯದ  ರಾಹುಲ್ ಮೈಸೂರಿನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ರೀತಿ ಮನಮೋಹಕವಾಗಿತ್ತು. ಅಫ್‌ಸೈಡ್ ಮತ್ತು ಸ್ಕ್ವೇರ್‌ಲೆಗ್ ಪ್ರದೇಶಗಳಿಂದಲೇ ಹೆಚ್ಚಿನ ರನ್‌ಗಳನ್ನು ಎತ್ತಿ ತಮ್ಮ ಖಾತೆಗೆ ಸೇರಿಸಿಕೊಂಡ ರಾಹುಲ್, 32ನೇ ಓವರ್‌ನಲ್ಲಿ ಮಿಡ್‌ವಿಕೆಟ್‌ನತ್ತ ಬೌಂಡರಿ ಬಾರಿಸುವ ಮೂಲಕ ಅರ್ಧಶತಕದ ಗಡಿ ದಾಟಿದರು. ನಂತರ  ಒಂದು ಬಾರಿ ಅವರಿಗೆ ಅದೃಷ್ಟವೂ ಜೊತೆ ನೀಡಿತು. ಸಂದೀಪ್‌ಸಿಂಗ್ ಎಸೆತವನ್ನು ಗೌತಮ್ ಹೊಡೆದಾಗ ಚೆಂಡು ನಾನ್‌ಸ್ಟ್ರೈಕರ್ ತುದಿಯ ಸ್ಪಂಪ್‌ಗಳಿಗೆ ಅಪ್ಪಳಿಸಿತ್ತು. ಆಗ ರಾಹುಲ್ ಕ್ರೀಸ್ ಬಿಟ್ಟಿದ್ದರು.ಬೌಲರ್ ಚೆಂಡು ಹಿಡಿಯಲು ಪ್ರಯತ್ನಿಸಿದ್ದರು.  ಇದರಿಂದ ಚೆಂಡಿಗೆ ಕೈತಾಗಿದೆ ಎಂದುಕೊಂಡ ಬೌಲರ್ ಅಪೀಲ್ ಮಾಡಿದರು. ಆದರೆ, ಮೂರನೇ ಅಂಪೈರ್ ಪರಿಶೀಲನೆಯಲ್ಲಿ ರಾಹುಲ್ ನಾಟೌಟ್ ಸಂದೇಶ ಬಂದಾಗ ಗ್ಲೇಡ್ಸ್‌ನಲ್ಲಿ ಚಪ್ಪಾಳೆ, ಕೇಕೆಗಳು ಪ್ರತಿಧ್ವನಿಸಿದವು. ಮೂವರು ಸ್ಲಿಪ್ ಫೀಲ್ಡರ್‌ಗಳ ತಲೆಯ ಮೇಲಿಂದ ಅಪ್ಪರ್ ಕಟ್ ಮೂಲಕ ಹೊಡೆದ ಬೌಂಡರಿಯನ್ನು ಸಾಯಿರಾಜ್ ಬಹುತುಳೆ ಅಚ್ಚರಿಯಿಂದ ನೋಡುತ್ತ ನಿಂತರು. ಚಹಾ ಕುಡಿಯಲು ಹೋಗುವ ಮುನ್ನ ಗೌತಮ್ ಕೂಡ ಅರ್ಧಶತಕ ಗಳಿಸಿದರು.  ನಂತರದ ಓವರ್‌ನಲ್ಲಿಯೇ ಒಂದು ಜೀವದಾನವನ್ನೂ ಪಡೆದರು. ಸಂದೀಪ್ ಸಿಂಗ್ ಎಸೆತವನ್ನು ಗೌತಮ್ ಹುಕ್ ಮಾಡಿದಾಗ ಚೆಂಡು ಎತ್ತರಕ್ಕೆ ಚಿಮ್ಮಿತು. ವಿಕೆಟ್ ಕೀಪರ್ ಉಬರಾಂದೆ ಸ್ಕ್ವೇರ್‌ಲೆಗ್‌ವರೆಗೂ ಓಡಿ ಹೋಗಿ ಕ್ಯಾಚ್ ಪಡೆಯುವ ಪ್ರಯತ್ನ ಫಲಿಸಲಿಲ್ಲ. 72ನೇ ಓವರ್‌ನಲ್ಲಿ ಸಾಯಿರಾಜ್‌ಎಸೆತವನ್ನು ಮಿಡ್‌ವಿಕೆಟ್‌ನತ್ತ ತಳ್ಳಿ ಒಂದು ರನ್ ಗಳಿಸಿದ ರಾಹುಲ್ ಶತಕದ ಸಂಭ್ರಮ ಆಚರಿಸಿದರು. ತಮ್ಮ ಐದನೇ ರಣಜಿ ಪಂದ್ಯದಲ್ಲಿ ರಾಹುಲ್ ಮಾಡಿದ  ಸಾಧನೆಗೆ ಪೆವಿಲಿಯನ್‌ನಲ್ಲಿದ್ದ ಸಹ ಆಟಗಾರರಿಂದಲೂ ಚಪ್ಪಾಳೆಯ ಅಭಿನಂದನೆ ಸಿಕ್ಕಿತು.  ನಂತರ ಇನ್ನಷ್ಟು ಬಿರುಸಿನ ಆಟಕ್ಕೆ ಇಳಿದ ರಾಹುಲ್, ಪೆಡಲ್ ಸ್ವೀಪ್‌ಮೂಲಕ ಗಳಿಸಿದ ಬೌಂಡರಿ ಆಕರ್ಷಕವಾಗಿತ್ತು.ಇನ್ನೊಂದು ಬದಿಯಲ್ಲಿ ಬಿರುಸಿನ ಆಟವಾಡುತ್ತಿದ್ದ ಗೌತಮ್ 77ನೇ ಓವರ್‌ನಲ್ಲಿ ಸಾಯಿರಾಜ್ ಎಸೆತವನ್ನು ಸ್ಕೇರ್ ಲೆಗ್‌ನತ್ತ ಹೊಡೆದು ಒಂದು ರನ್ ಗಳಿಸಿ, ಶತಕದ ಗಡಿ ದಾಟಿ ಸಂಭ್ರಮಿಸಿದರು. ಚೆನ್ನೈನಲ್ಲಿ ತಮಿಳುನಾಡು ವಿರುದ್ಧ ಶತಕ (130) ಗಳಿಸಿದ್ದ ಅವರು ಗಾಯಗೊಂಡು ನಿವೃತ್ತಿಯಾಗಿದ್ದರು.ಚೇತರಿಸಿಕೊಂಡು ಬಂದ ನಂತರ ಬೆಂಗಳೂರಿನಲ್ಲಿ ದೆಹಲಿ ವಿರುದ್ಧ 71 ರನ್ ಗಳಿಸಿದ್ದರು. ಮೈಸೂರಿನಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನದ 7ನೇ ಶತಕವನ್ನು ಪೂರೈಸಿದರು. ಶಲಭ್ ಶ್ರೀವಾಸ್ತವ್ ಸೇರಿದಂತೆ ಒಂಬತ್ತು ಬೌಲರ್‌ಗಳಿಗೆ ಇಬ್ಬರನ್ನೂ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. 88.2 ಓವರ್‌ಗಳಲ್ಲಿ ತಂಡದ ಮೊತ್ತ 300 ರನ್‌ಗಳ ಗಡಿ ದಾಟಿತು.ಸ್ಕೋರು ವಿವರ

ಕರ್ನಾಟಕ 90 ಓವರ್‌ಗಳಲ್ಲಿ 2 ವಿಕೆಟ್‌ಗೆ 308

ರಾಬಿನ್ ಉತ್ತಪ್ಪ ಬಿ ಸಂದೀಪ್ ಸಿಂಗ್  24

ಕೆ.ಎಲ್. ರಾಹುಲ್  ಬ್ಯಾಟಿಂಗ್  145

ಗಣೇಶ್ ಸತೀಶ್ ಸಿ ಅಮೋಲ್ ಉಬರಾಂದೆ ಬಿ ಸಂದೀಪ್ ಸಿಂಗ್  00

ಸಿ.ಎಂ. ಗೌತಮ್ ಬ್ಯಾಟಿಂಗ್  129ಇತರೆ: (ಬೈ 1, ಲೆಗ್‌ಬೈ 4, ವೈಡ್ 5) 10ವಿಕೆಟ್ ಪತನ: 1-44 (11.1, ಉತ್ತಪ್ಪ), 2-52 (15.3, ಗಣೇಶ್),ಬೌಲಿಂಗ್: ಸಂದೀಪ್ ಸಿಂಗ್ 20-6-45-2 (ವೈಡ್ 1),  ಶ್ರೀಕಾಂತ್ ವಾಘ್  19-0-60-0, ರವಿ ಠಾಕೂರ್ 17-3-71-0, ಫಯಾಜ್ ಫಜಲ್ 2-0-13-0, ಸಾಯಿರಾಜ್ ಬಹುತುಳೆ  14-0-59-0, ಗೌರವ್ ಉಪಾಧ್ಯಾಯ 14-1-44-0,  ಹೇಮಂಗ್ ಬದಾನಿ 2-0-7-0,     ಅಪೂರ್ವ್ ವಾಕರೆ 1-0-3-0, ಶಲಭ್ ಶ್ರೀವಾಸ್ತವ್ 1-0-1-0.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry