ರಾಹುಲ್ ಸುತ್ತ ಈಗ ವಲಸೆ ವಿವಾದ

7

ರಾಹುಲ್ ಸುತ್ತ ಈಗ ವಲಸೆ ವಿವಾದ

Published:
Updated:
ರಾಹುಲ್ ಸುತ್ತ ಈಗ ವಲಸೆ ವಿವಾದ

ನವದೆಹಲಿ (ಪಿಟಿಐ): ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಉತ್ತರ ಪ್ರದೇಶದ ಜನರು ವಲಸೆ ಹೋಗುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಆಡಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.`ಉತ್ತರ ಪ್ರದೇಶದ ಜನರು ಉದ್ಯೋಗಕ್ಕಾಗಿ ಮಹಾರಾಷ್ಟ್ರ, ಪಂಜಾಬ್‌ನಂತಹ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದು ಎಲ್ಲರಿಗೂ ಉದ್ಯೋಗ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದರೂ ಸಹ, ಉತ್ತರ ಪ್ರದೇಶದಲ್ಲಿ ಯೋಜನೆ ಜಾರಿಯಾಗುತ್ತಿಲ್ಲ. ಹಾಗಾಗಿ ಇಲ್ಲಿನ (ಉತ್ತರ ಪ್ರದೇಶ) ಜನ ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ~ ಎಂದು ರಾಹುಲ್ ಗಾಂಧಿ ಫೂಲ್‌ಪುರ್‌ದಲ್ಲಿ ಸೋಮವಾರ ಹೇಳಿದ್ದರು.ಇಂತಹ ಹೇಳಿಕೆ ನೀಡುವ ಮೂಲಕ ರಾಹುಲ್ ಉತ್ತರ ಪ್ರದೇಶದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.`ಇದು ಉತ್ತರ ಪ್ರದೇಶದ ಜನರಿಗೆ ರಾಹುಲ್ ಮಾಡಿರುವ ಅವಮಾನ. ಎಷ್ಟು ಬಾರಿ ಅವರು ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಉದ್ಯೋಗಕ್ಕಾಗಿ ಬೇಡುತ್ತಿರುವ ಉತ್ತರ ಪ್ರದೇಶ, ಬಿಹಾರದ ಜನರ ಬಗ್ಗೆ ವಿಚಾರಿಸಿದ್ದಾರೆ~ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಪ್ರಶ್ನಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಳಿಗೆಯನ್ನು ಸಹಿಸದ ಬಿಜೆಪಿ ರಾಜಕೀಯವಾಗಿ ಸಂಘರ್ಷಕ್ಕೆ ಇಳಿಯಲು ಯತ್ನಿಸುತ್ತಿದ್ದು, ಅವರ ಹತಾಶ ಭಾವನೆ ಅನಾವರಣಗೊಂಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಟೀಕಿಸಿದ್ದಾರೆ.ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಜನರ ಸ್ವಾಭಿಮಾನದ ಬಗ್ಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಂದರ್ಭದಲ್ಲಿ ಜನರು ಬೇರೆ ರಾಜ್ಯದಲ್ಲಿ ಉದ್ಯೋಗದ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿದ್ದು, ಅದರಲ್ಲಿ ಜನರಿಗೆ ಅವಮಾನ ಮಾಡುವ ಯಾವುದೇ ಉದ್ದೇಶ ಇಲ್ಲ. ಬದಲಾಗಿ ರಾಜ್ಯ ಸರ್ಕಾರದ ವೈಫಲ್ಯವನ್ನು ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧುರಿ ಸ್ಪಷ್ಟಪಡಿಸಿದ್ದಾರೆ.ಅವಮಾನ ಪದವನ್ನು ಬಿಜೆಪಿ ಮೊದಲು ಅರ್ಥ ಮಾಡಿಕೊಂಡರೆ, ಅವರಿಗೆ ಗೌರವದ ಅರ್ಥವೂ ತಿಳಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಮಾಯಾ ಸರ್ಕಾರದ ವಿರುದ್ಧ ವಾಗ್ದಾಳಿ

ಫೂಲ್‌ಪುರ್, (ಪಿಟಿಐ):
ಮಾಯಾವತಿ ನೇತೃತ್ವದ ಬಿಎಸ್ಪಿ ಸರ್ಕಾರ `ಸಂವೇದನಾಶೀಲತೆ ಕಳೆದುಕೊಂಡಿದೆ~ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಟೀಕಿಸಿದರು.ದಿವಂಗತ ಜವಹರಲಾಲ್ ನೆಹರು ಅವರು ಪ್ರತಿನಿಧಿಸುತ್ತಿದ್ದ ಫೂಲ್‌ಪುರ್ ಕ್ಷೇತ್ರದಲ್ಲಿ ಸೋಮವಾರ ಮುಂಬರುವ ವಿಧಾನ ಸಭಾ ಚುನಾವಣೆಗಾಗಿ ಪಕ್ಷದ ವತಿಯಿಂದ ಪ್ರಚಾರಾಂದೋಲನ  ಆರಂಭಿಸಿ ಅವರು ಮಾತನಾಡಿದರು.ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಣ ಬಿಎಸ್ಪಿ ಕಾರ್ಯಕರ್ತರು ಮತ್ತು ಗುತ್ತಿಗೆದಾರರ ಜೇಬು ಸೇರುತ್ತಿದೆ  ಎಂದೂ ಅವರು ಆರೋಪಿಸಿದರು. ನೆಹರು ಅಂತಹವರು ಉತ್ತರ ಪ್ರದೇಶದಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಾಫಿಯಾ ಜಗತ್ತು ಮತ್ತು ಆರೋಪಿ ಗಳು ಸಂಸದರಾಗುತ್ತಿದ್ದಾರೆ ಎಂದು ವಿಷಾದಿಸಿದರು.ಕಾಂಗ್ರೆಸ್-ಎಸ್ಪಿ ಸಂಘರ್ಷ


ರಾಹುಲ್ ರ‌್ಯಾಲಿಯ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಯತ್ನಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಸಂಘರ್ಷಕ್ಕೆ ಇಳಿದ ಘಟನೆಯೂ ನಡೆಯಿತು. ಸಮಾಜವಾದಿ ಪಕ್ಷದ ಯುವ ಘಟಕದ ಕಾರ್ಯಕರ್ತರು ಕಪ್ಪುಬಾವುಟ ತೋರಿಸಲು ಹೆಲಿಪ್ಯಾಡ್‌ನತ್ತ ನುಗ್ಗಿದಾಗ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಘರ್ಷಣೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry