ಮಂಗಳವಾರ, ಜೂನ್ 22, 2021
24 °C

ರಾಹುಲ್ ಹಿಮ್ಮೆಟ್ಟಿಸಿದ ಅಖಿಲೇಶ್ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮಹತ್ವದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಮೂವರು ಯುವಕರು ಮೈ ಮನವನ್ನೆಲ್ಲಾ ಅರ್ಪಿಸಿಕೊಂಡು ಬಸವಳಿದಿದ್ದರು. ಆ ಪೈಕಿ ಯಶಸ್ವಿಯಾಗಿ ಗೆದ್ದು ಹೊಳೆಯುತ್ತಿರುವವರು ಅಖಿಲೇಶ್ ಸಿಂಗ್ ಯಾದವ್. ಕಾಂಗ್ರೆಸ್ಸಿನ ಭವಿಷ್ಯದ ನಾಯಕ ಎಂದೇ ಬಿಂಬಿತರಾದ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಜಯಂತ್ ಚೌಧರಿ ಅವರನ್ನು ಕಾರ್ಯತಂತ್ರದ ಮೂಲಕ ಹಿಮ್ಮೆಟ್ಟಿಸುವಲ್ಲಿ ಅಖಿಲೇಶ್ ಯಶಸ್ವಿಯಾಗಿದ್ದಾರೆ.ಇಲ್ಲಿ ರಾಹುಲ್ ಮತ್ತು ಜಯಂತ್ ಅವರ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೆ, ಅಖಿಲೇಶ್‌ರ ಸಮಾಜವಾದಿ ಪಕ್ಷ 403 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಕಣಕ್ಕೆ ಧುಮುಕಿತ್ತು.ಈ ಮೂವರು ಯುವಕರಲ್ಲೂ ಕೆಲವು ಸಮಾನ ಅಂಶಗಳಿದ್ದವು. ಎಲ್ಲರೂ ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದು, ಉತ್ತರ ಪ್ರದೇಶದಿಂದಲೇ ಸಂಸದರಾಗಿ ಆಯ್ಕೆಯಾದವರು.ಅಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂಗ್ಲಿಷ್ ವಿರೋಧಿಯಾದರೂ 38ರ ಪ್ರಾಯದ ಮಗ ಅಖಿಲೇಶ್ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿದವರು. ಈ ವಿದೇಶಿ ಪ್ರಭಾವಳಿಯ ಮಧ್ಯೆಯೂ ತಮ್ಮ ರ‌್ಯಾಲಿಗಳ ಮೂಲಕ ಉತ್ತರ ಪ್ರದೇಶದ ಗ್ರಾಮೀಣ ಭಾಗದ ತಳಸ್ತರದ ಜನರ ಮನಸ್ಸು ಮುಟ್ಟುವುದರ ಜತೆಗೆ, ತಮ್ಮನ್ನು ಯಾರು ಬೇಕಾದರೂ ಪ್ರಯಾಸವಿಲ್ಲದೇ ಭೇಟಿಯಾಗಬಹುದೆಂಬ ಸಂದೇಶವನ್ನು ಅವರು ಯಶಸ್ವಿಯಾಗಿ ರವಾನಿಸಿದರು.ಅಖಿಲೇಶ್ ಜಾತಿ ಸಮೀಕರಣದ ಆಚೆಗೂ ಯೋಚಿಸಿ, ತಮ್ಮ ಪ್ರಚಾರ ಯುವಜನರ ಆಶೋತ್ತರಕ್ಕೆ ಸ್ಪಂದನಶೀಲವಾಗಿರುವಂತೆ ನೋಡಿಕೊಂಡರು ಎನ್ನುತ್ತಾರೆ ಪಕ್ಷದ ನಾಯಕರು.ಸಮಾಜವಾದಿ ಪಕ್ಷವೆಂದರೆ ಕಂಪ್ಯೂಟರ್ ಹಾಗೂ ಇಂಗ್ಲಿಷನ್ನು ದ್ವೇಷಿಸುವವರ ಪಕ್ಷ ಎಂಬ ಸ್ಥಿತಿ ಚುನಾವಣೆಗೆ ಮುನ್ನ ಇತ್ತು. ಅಖಿಲೇಶ್, ಅದೇ ಮನಃಸ್ಥಿತಿಗೆ ಜೋತು ಬೀಳಲಿಲ್ಲ. ಬದಲಾಗಿ, ಪಕ್ಷಕ್ಕಿದ್ದ ಕಂಪ್ಯೂಟರ್- ಇಂಗ್ಲಿಷ್ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಲು ಮುಂದಾದರು. ಈ ಹಿನ್ನೆಲೆಯಲ್ಲಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆ/ ಕಾಲೇಜುಗಳಿಂದ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ ಎಂಬ ಭರವಸೆ ಹೊರಹೊಮ್ಮವಂತೆ ಮಾಡಿದರು.ತಮ್ಮದು ಕ್ರಿಮಿನಲ್‌ಗಳೊಂದಿಗೆ ಸಖ್ಯ ಹೊಂದಿರುವ ಪಕ್ಷ ಎಂಬ ಕಳಂಕವನ್ನೂ ತೊಡೆದುಹಾಕಲು ಅವರು ಕ್ರಮ ಕೈಗೊಂಡರು. ಕುಖ್ಯಾತ ಕ್ರಿಮಿನಲ್ ರಾಜಕಾರಣಿ ಡಿ.ಪಿ.ಯಾದವ್ ಅವರನ್ನು ದೂರವಿಟ್ಟರು.

ಪ್ರತಿಪಕ್ಷದ ಸ್ಥಾನದಲ್ಲಿದ್ದ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿತ್ತು. 2007ರ ಚುನಾವಣೆಯಲ್ಲಿ ಶೇ 25ರಷ್ಟು ಮತ ಗಳಿಸಿದ್ದ ಆ ಪಕ್ಷಕ್ಕೆ ಮುಲಾಯಂ ಸಿಂಗ್ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದರ್ಲ್ಲಲಿ ಕೂಡ ಯಾವ ಗೊಂದಲವೂ ಇರಲಿಲ್ಲ.ಆದರೆ ಕಾಂಗ್ರೆಸ್ ಇಲ್ಲಿ ಕಾರ್ಯಕರ್ತರ ಕೊರತೆ ಸೇರಿದಂತೆ ಹಲವು ದೌರ್ಬಲ್ಯಗಳಿಂದ ಬಳಲಿತ್ತು. ತಮ್ಮ ಅಬ್ಬರದ ಪ್ರಚಾರದ ಮೂಲಕ ರಾಹುಲ್ ಗಾಂಧಿ ಅವನ್ನೆಲ್ಲಾ ಮೆಟ್ಟಿ ನಿಲ್ಲಬಹುದೆಂದು ನಿರೀಕ್ಷಿಸಿದ್ದರಾದರೂ, ಅದು ಹುಸಿಯಾಯಿತು.ಜಗ್ಗದ ಮತದಾರ: ಅಮೇಥಿ ಕ್ಷೇತ್ರದ ಸಂಸದ ರಾಹುಲ್ 200ಕ್ಕೂ ಹೆಚ್ಚು ರ‌್ಯಾಲಿಗಳನ್ನು ಹಾಗೂ ನವೆಂಬರ್‌ನಿಂದ ಈಚೆಗೆ ಐದು ಬಾರಿ ಜನ ಸಂಪರ್ಕ ಯಾತ್ರೆಗಳನ್ನು ಕೈಗೊಂಡು, 3500 ಕಿ.ಮೀಗೂ ಹೆಚ್ಚು ದೂರವನ್ನು ಪ್ರಚಾರಕ್ಕಾಗಿ ಸವೆಸಿದರು. ಜನವರಿ 28ರಿಂದ ಫೆಬ್ರುವರಿ 29ರ ನಡುವಿನ ಒಂದು ತಿಂಗಳಲ್ಲಿ 10,700 ಕಿ.ಮೀ ಉದ್ದಕ್ಕೆ ರೋಡ್ ಷೋಗಳನ್ನು ನಡೆಸಿದರು. ಆದರೆ ಇದ್ಯಾವುದಕ್ಕೂ ರಾಜ್ಯದ ಮತದಾರ ಜಗ್ಗಲಿಲ್ಲ. ತಮ್ಮ ಆಸಕ್ತಿ ಇರುವುದು ಚುನಾವಣೆಯಲ್ಲಿ ಮಾತ್ರವಲ್ಲ; ಉತ್ತರ ಪ್ರದೇಶವನ್ನು ಬದಲಾಯಿಸುವುದೇ ತಮ್ಮ ಅಂತಿಮ ಗುರಿ ಎಂದು ರಾಹುಲ್ ಪದೇಪದೇ ಹೇಳಿದರೂ ಜನ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇನ್ನು, ಮಾಜಿ ಪ್ರಧಾನಿ ಚರಣ್ ಸಿಂಗ್ ಮೊಮ್ಮಗ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರ ಪುತ್ರರಾದ ಜಯಂತ್ ಚೌಧರಿ (33) ಆರ್‌ಎಲ್‌ಡಿ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿದಿದ್ದರು. ಅವರು ಪ್ರಸ್ತಾಪಿಸಿದ ಭೂಸ್ವಾಧೀನ, ಭ್ರಷ್ಟಾಚಾರ, ರೈತರಿಗೆ ಅನ್ಯಾಯ ಮತ್ತಿತರ ವಿಷಯಗಳಲ್ಲಿ ಮತದಾರರಿಗೆ ಹೊಸತನವೇನೂ ಕಾಣಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.