ಶನಿವಾರ, ಮೇ 21, 2022
25 °C

ರಾ-ವಣ್ ಅಲ್ಲ ತಮ್ಮಾ ರಾ-ಒನ್

ಡಿ.ಗರುಡ Updated:

ಅಕ್ಷರ ಗಾತ್ರ : | |

ರಾ-ವಣ್ ಅಲ್ಲ ತಮ್ಮಾ ರಾ-ಒನ್

`ರಾ..ವಣ್... ರಾವಣ್...! ಈ ಸಿನಿಮಾ ಮತ್ತೆ ಬಂತಾ. ಅಭಿಷೇಕ್ ಬಚ್ಚನ್ ಅಭಿನಯಿಸಿದ್ದಲ್ವಾ ಇದು~ ಎಂದು ರಾಗ ಎಳೆದಿದ್ದ ಎಲಚೇನಹಳ್ಳಿಯ ಆ ಮುಗ್ಧ ಯುವಕ.ಬನ್ನೇರುಘಟ್ಟ ರಸ್ತೆಯಲ್ಲಿನ ರಾಯಲ್ ಮೀನಾಕ್ಷಿ ಮಾಲ್ ಮುಂದೆ ನಿಂತಿದ್ದ ಆತನಿಗೆ `ರಾ-ಒನ್~ ಎಂದು ಇಂಗ್ಲಿಷಲ್ಲಿ ಬರೆದಿದ್ದ ಹೆಸರು ಅಷ್ಟು ಸರಿಯಾಗಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತೂ ಇಂತು ಕಷ್ಟ ಪಟ್ಟ ಓದಿದ. ಕೊನೆಗೆ ಅವನ ಬಾಯಲ್ಲಿ ಅದು `ರಾವಣ್~ ಆಯಿತು. ಸುತ್ತಲಿದ್ದ ಗೆಳೆಯರು ಗೊಳ್ಳನೆ ನಕ್ಕರು.ಯಾರೋ ಹೇಳಿದರು ಅಂತಾ ನಟ ಶಾರೂಖ್ ಖಾನ್ ನೋಡಲು ಭಾನುವಾರ ಬೆಳಿಗ್ಗೆಯೇ ರಾಯಲ್ ಮೀನಾಕ್ಷಿ ಮಾಲ್ ಮುಂದೆ ಹಾಜರಾಗಿತ್ತು ಆ ಯುವಕರ ದಂಡು. ಬೆಳಿಗ್ಗೆ 11.30ಕ್ಕೆ ಬರುತ್ತಾರೆ `ಕಿಂಗ್ ಖಾನ್~ ಎಂದು ತಾಸು ಮೊದಲೇ ಅಲ್ಲಿಗೆ ಬಂದವರಿಗೆ ಶಾರೂಖ್ ದರ್ಶನವೇ ಆಗಲಿಲ್ಲ. ಎಷ್ಟೆಂದರೂ ಭಾರತೀಯರಲ್ಲವೇ! ಭಾರತೀಯ ಕಾಲಮಾನವನ್ನು ಶಾರೂಖ್ ಕೂಡ ಅನುಸರಿಸುತ್ತಾರೆ! ಎನ್ನುವ ವ್ಯಂಗ್ಯ ನುಡಿಯೂ ಹೊರಹೊಮ್ಮಿತು.

 

ಅಂತೂ ಇಂತೂ `ಭಾರತೀಯ ಕಾಲಮಾನ~ ಎಂದರೆ ತಡವಾಗಿ ಬರುವುದು ಎನ್ನುವ ನಿಯಮ ಪಾಲಿಸಿದ ಶಾರೂಖ್ ಕೂಡ ಸಂಜೆ ಹೊತ್ತಿಗೆ ಬಂದರು. ಆದರೂ ಮುಂಜಾನೆಯಿಂದ ಸಂಜೆಯವರೆಗೆ ಅಭಿಮಾನಿಗಳ ದಂಡು ಹಾಗೆಯೇ ಕಾಯ್ದಿತ್ತು.

ಒಳಗೆ ಕಾಲಿಡುವಾಗ ಶಾರೂಖ್ ಎಂದಿನ ಗತ್ತಿನಲ್ಲೇ ಇದ್ದರು.ಮಾಲ್‌ನ ಕತ್ತಲೆಯಲ್ಲಿಯೂ ಕಪ್ಪು ಕನ್ನಡಕ ತೊಟ್ಟಿದ್ದ ಅವರು ಪಕ್ಕಾ ಸೌತ್ ಹೀರೊ ಥರಾನೇ! ಹೌದು ಬಿಡಿ. ರಾ-ಒನ್‌ನಲ್ಲಿ `ರಜನಿ ಸಾರ್~ ರೀತಿಯಲ್ಲಿಯೇ ಭಯಂಕರ ಅದ್ಭುತಗಳನ್ನು ಖಾನ್ ಸಾಹೇಬರು ತೆರೆಯ ಮೇಲೆ ಪ್ರದರ್ಶಿಸಿದ್ದಾರೆ. ಹಾಂ... ಕಪ್ಪು ಕನ್ನಡಕ, ಕಪ್ಪು ಟಿ-ಶರ್ಟ್, ಜಪಾನಿ ಹ್ಯಾಂಡ್ ಮೇಡ್ ನೀಲಿ ಜೀನ್ಸ್ ತೊಟ್ಟ ಶಾರೂಖ್ ತಮ್ಮದೇ ಹೊಸ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ನಲಿದರು.ಟಿವಿ ಪ್ರಸಾರ ಹಕ್ಕು ಮಾರಾಟದಲ್ಲಿ ಹೊಸ ದಾಖಲೆ (41 ಕೋಟಿ ರೂ.) ಬರೆದ `ರಾ-ಒನ್~ ಪ್ರಚಾರಕ್ಕೆ ಬಂದಿದ್ದ ಶಾರೂಖ್ ಸುದ್ದಿಗಾರರ ಮುಂದೆ ಒಂದಿಷ್ಟು ಹೊತ್ತು ಇದ್ದು ನಂತರ ಎದ್ದು ಕುಣಿದರು. ಮಾಲ್ ತುಂಬಾ ಸಾಗರವಾಗಿದ್ದ ಅಭಿಮಾನಿಗಳ ಕಡೆಗೆ ಕೈಬೀಸುತ್ತಾ ಕುಣಿದ ಅಕ್ಕರೆಯ ಬಾಲಿವುಡ್ ಸ್ಟಾರ್ ಕಡೆಗೆ ಮೊಬೈಲ್ ಹಿಡಿದು ಕ್ಯಾಮೆರಾಮನ್ ಆದವರ ಸಂಖ್ಯೆಯೂ ನೂರಾರು.ಕಪ್ಪು ವಸ್ತ್ರ ತೊಟ್ಟ ಭದ್ರತಾ ಸಿಬ್ಬಂದಿಯಿಂದ ರಾ-ವನ್ ಹೀರೊಗೆ ಹೋದಲ್ಲೆಲ್ಲಾ ರಕ್ಷಣೆಯ ಗೋಡೆ. ಜನರಿಲ್ಲದ ಕಡೆಗೂ ಅಡ್ಡ ಕೈಹಿಡಿದು ಕೃತಕವಾಗಿ ಜನದಟ್ಟಣೆಯ ಭ್ರಮೆ ಮೂಡಿಸುತ್ತಿದ್ದ ಅವರನ್ನು ನೋಡಿ ನಗಬೇಕು ಅನಿಸಿದ್ದಂತೂ ಸಹಜ. ಇಲ್ಲದ ಕಡೆಗೆಲ್ಲಾ ಭಾರಿ ಜನರೆನ್ನುವ ಭ್ರಮೆ ಮೂಡಿಸುವಂತೆ ಟೆಲಿವಿಷನ್ ಕ್ಯಾಮೆರಾದವರ ಕಡೆಗೆ ಕೈಅಡ್ಡ ಹಿಡಿದ ಅವರಿಗೆ ಕಟು ಮಾತಿನ ಪೆಟ್ಟು! ಆ ಸಿನಿಮಾ ಬಂದಾಗಲೂ ಹೀಗೆ ಮಾಡಿದ್ದರು ಏನಾಯಿತು ಕಥೆ! ಎನ್ನುವ ವ್ಯಂಗ್ಯದ ನುಡಿಯೂ ಕಿವಿಗೆ ಅಪ್ಪಳಿಸಿತು.ಅದೇನೇ ಇರಲಿ ತಮ್ಮ ಹೊಸ ಚಿತ್ರ ರಾ-ಒನ್ ಸಕ್ಸಸ್‌ಗೆ ದೇಶದ ಎಲ್ಲ ಮಹಾನಗರ ಯಾತ್ರೆ ಕೈಗೊಂಡಿರುವ ಶಾರೂಖ್ ಉದ್ಯಾನ ನಗರಿಗೂ ಬಂದು ಅಭಿಮಾನಿಗಳಿಗೆ ಸಂತಸ ತಂದರು. ಆದರೆ ಸಿನಿಮಾ ಸಕ್ಸಸ್ ಆಗಿ ಖಾನ್ ಮುಖದಲ್ಲಿಯೂ ಭಾರಿ ಸಂಭ್ರಮ ಮೂಡುತ್ತದೆಯೇ? ಕಾಯ್ದು ನೋಡಬೇಕು!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.