ರಿಕಿ ಪಾಂಟಿಂಗ್‌ಗೆ ಹ್ಯಾಟ್ರಿಕ್ ಸಾಧನೆ ಗುರಿ

7

ರಿಕಿ ಪಾಂಟಿಂಗ್‌ಗೆ ಹ್ಯಾಟ್ರಿಕ್ ಸಾಧನೆ ಗುರಿ

Published:
Updated:

ಸಿಡ್ನಿ (ಎಎಫ್‌ಪಿ): ಆಸ್ಟ್ರೇಲಿಯಾ ತಂಡವು ಸತತ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟವನ್ನು ಪಡೆಯಬೇಕು ಹಾಗೂ ತಮ್ಮ ನಾಯಕತ್ವದಲ್ಲಿ ವಿಶ್ವಕಪ್ ಗೆಲುವಿನ ‘ಹ್ಯಾಟ್ರಿಕ್’ ಸಾಧ್ಯವಾಗಬೇಕು ಎನ್ನುವ ಆಶಯವು ರಿಕಿ ಪಾಂಟಿಂಗ್ ಮನದಲ್ಲಿ ಬಲವಾಗಿದೆ.ಆ್ಯಷಸ್ ಸರಣಿಯಲ್ಲಿ ನಿರಾಸೆ ಹೊಂದಿದ ನಂತರ ಕಾಂಗರೂಗಳ ನಾಡಿನ ಪಡೆಯ ಸಾಮರ್ಥ್ಯದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಅನುಮಾನ ಮೂಡಿದೆ. ಈ ಅನುಮಾನವನ್ನು ಹುಸಿಯಾಗಿಸಿ ಮತ್ತೆ ವಿಶ್ವಕಪ್ ಎತ್ತಿಹಿಡಿಯುವುದು ‘ಪಂಟರ್’ ಛಲ!ಇಂಥದೊಂದು ದೊಡ್ಡ ನಿರೀಕ್ಷೆ ಇರುವುದರಿಂದ ಒತ್ತಡವೂ ಸಹಜವಾಗಿ ಹೆಚ್ಚಿದೆ ಎನ್ನುವುದನ್ನು ಪಾಂಟಿಂಗ್ ಅಲ್ಲಗಳೆಯುವುದಿಲ್ಲ. ಇತ್ತೀಚಿನ ಪಂದ್ಯಗಳಲ್ಲಿ ತಮ್ಮ ಪ್ರದರ್ಶನವೂ ಉತ್ತಮವಾಗಿಲ್ಲ ಎನ್ನುವ ಆತಂಕವೂ ಬೆನ್ನಿಗೆ ಬಿದ್ದ ಭೂತವಾಗಿದೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸುವುದು ದೊಡ್ಡ ಸವಾಲು.ಬೆರಳಿಗೆ ಗಾಯವಾಗಿದ್ದರಿಂದ ಕೆಲವು ಸಮಯ ವಿಶ್ರಾಂತಿ ಪಡೆದಿರುವ 36 ವರ್ಷ ವಯಸ್ಸಿನ ಪಾಂಟಿಂಗ್ ಮತ್ತೆ ನೆಟ್ಸ್‌ನಲ್ಲಿ ಕಾಣಿಸಿಕೊಂಡಿದ್ದು ಇದೇ ತಿಂಗಳ ಆದಿಯಲ್ಲಿ. ಸ್ವಂತ ನೆಲದಲ್ಲಿ ಆ್ಯಷಸ್ ಸರಣಿ ಸೋಲಿನ ನೋವನ್ನು ತಮ್ಮ ಗಾಯಕ್ಕೆ ಹೋಲಿಕೆ ಮಾಡಿರುವ ಅವರು ‘ಆ ನೋವು ಕೆಲವು ಸಮಯ ಖಂಡಿತವಾಗಿಯೂ ಕಾಡುತ್ತದೆ. ಅದು ಸತ್ಯ ಕೂಡ. ಆದರೆ ಮತ್ತೆ ಎಲ್ಲ ನೋವು-ಬೇಸರ ದೂರವಾಗಲಿದೆ ಎನ್ನುವ ವಿಶ್ವಾಸವಿದೆ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.ಇಂಗ್ಲೆಂಡ್ ವಿರುದ್ಧದ ಸಿಡ್ನಿ ಟೆಸ್ಟ್‌ಗೂ ಮೊದಲೇ ಗಾಯಗೊಂಡಿದ್ದ ಪಾಂಟಿಂಗ್ ಅವರು ಆನಂತರ ಏಕದಿನ ಪಂದ್ಯಗಳ ಸರಣಿಯಲ್ಲಿಯೂ ಆಡಿರಲಿಲ್ಲ. ಆಸ್ಟ್ರೇಲಿಯಾ 6-1ರಲ್ಲಿ ವಿಜಯ ಸಾಧಿಸಿದ ಏಕದಿನ ಸರಣಿಯಲ್ಲಿ ಮೈಕಲ್ ಕ್ಲಾರ್ಕ್ ತಂಡದ ನೇತೃತ್ವ ವಹಿಸಿದ್ದರು. ಆ ಸರಣಿ ವಿಜಯದಿಂದ ವಿಶ್ವಕಪ್‌ನಲ್ಲಿ ಹೋರಾಡಲು ತಂಡದಲ್ಲಿ ಹೊಸ ಹುಮ್ಮಸ್ಸು ಬಂದಿದೆ.ಇದೇ ಉತ್ಸಾಹದೊಂದಿಗೆ ಮುನ್ನುಗ್ಗಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆದರೆ ಅದು ಪಾಂಟಿಂಗ್‌ಗೂ ವಿಶಿಷ್ಟವಾದ ಹೆಮ್ಮೆಯ ಗರಿಯಾಗಲಿದೆ. ಏಕೆಂದರೆ ನಾಯಕರಾಗಿ ಅವರು ವಿಶ್ವಕಪ್ ಎತ್ತಿಹಿಡಿದದ್ದು ಅದು ಸತತ ಮೂರನೇ ಬಾರಿ ಎನಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry