ರಿಕಿ ಪಾಂಟಿಂಗ್ ಸೊಗಸು ಆಟಗಾರ

7

ರಿಕಿ ಪಾಂಟಿಂಗ್ ಸೊಗಸು ಆಟಗಾರ

Published:
Updated:
ರಿಕಿ ಪಾಂಟಿಂಗ್ ಸೊಗಸು ಆಟಗಾರ

ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆ ಎಂಬುದೊಂದಿರುತ್ತದೆ. ಯಾವುದೇ ಕಲಾಕಾರನಿಗಾಗಲೀ, ಸಂಗೀತಗಾರನಿಗಾಗಲೀ ಅಥವಾ ಕ್ರೀಡಾಪಟುವಿಗೇ ಆಗಲೀ ಪ್ರವೃತ್ತಿಗೆ ಕೊನೆ ಇಲ್ಲವಾದರೂ ವೃತ್ತಿಗೆ ಮಾತ್ರ ನಿವೃತ್ತಿ ಎಂಬುದು ಇದ್ದೇ ಇರುತ್ತದೆ.

ಕ್ರೀಡಾಪಟುವೂ ಕಲಾಕಾರನೇ. ಅವನ ಆಟದ ಅಂಕಣವೇ ರಂಗಮಂದಿರ. ಆಟವನ್ನು ನೋಡಿ  ವಾಹ್ ವಾ  ಎಂದವರು, ಆಟ ಮುಗಿದ ಮೇಲೆ ಆ ನೆನಪನ್ನು ತಮ್ಮ ಮನದಲ್ಲಿ ಕಟ್ಟಿಕೊಳ್ಳುತ್ತಾರೆ. ಅದರಲ್ಲಿ ಸಿಹಿಯೂ ಇರುತ್ತದೆ, ಕಹಿಯೂ ಕಾಡುತ್ತದೆ. ಆಸ್ಟ್ರೇಲಿಯದ ರಿಕಿ ಥಾಮಸ್ ಪಾಂಟಿಂಗ್ ಅಂಥ ಹೆಚ್ಚು ಸಿಹಿ, ಸ್ವಲ್ಪ ಕಹಿ ನೆನಪುಗಳನ್ನು ಮೂಡಿಸಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಆಸ್ಟ್ರೇಲಿಯ ಆಟಗಾರರಲ್ಲಿ ಸಾಮಾನ್ಯವಾಗಿ ಕಂಡುಬರುವ ಒರಟುತನ, ಪುಂಡಾಟಿಕೆ ಮನಸ್ಸು, ಎಂಥ ಪರಿಸ್ಥಿತಿಯಲ್ಲೂ ಹೋರಾಟ ಬಿಟ್ಟುಕೊಡದ ಛಲ, ತನ್ನನ್ನು ಬಿಟ್ಟರೆ ಬೇರೆ ಇಲ್ಲ ಎಂಬ ಸೊಕ್ಕು `ಪಂಟರ್' ಪಾಂಟಿಂಗ್ ಅವರಲ್ಲೂ ಇತ್ತು. ಇದರ ಜೊತೆಗೆ ಅವರು ಚೆಂಡನ್ನು ಪುಲ್ ಮಾಡಿದಾಗ ಧಾರ್ಷ್ಟ್ಯ ಎದ್ದುಕಂಡರೆ, ಕವರ್ ಡ್ರೈವ್‌ನಲ್ಲಿ ಸೊಗಸುಗಾರನಾಗಿರುತ್ತಿದ್ದರು. ಪಂದ್ಯಕ್ಕೆ ಮೊದಲಿನ ಪತ್ರಿಕಾಗೋಷ್ಠಿಗಳಲ್ಲಿ ಮುಗುಳ್ನಗುತ್ತಲೇ ಪತ್ರಕರ್ತರ ಕಾಲೆಳೆಯುತ್ತಿದ್ದರು. ಅವರಲ್ಲಿಯ ಆಟ ಮಾಗಿದಂತೆ ಸ್ವಭಾವವೂ ಪಕ್ವಗೊಂಡು ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠರ ಸಾಲಿನಲ್ಲಿ ನಿಂತರು.

ನಿನ್ನೆ, ಅಂದರೆ ಶನಿವಾರ, ಡಿಸೆಂಬರ್ ಒಂದರಂದು, ಇದನ್ನು ಬರೆಯಲು ಶುರು ಮಾಡುವ ಮೊದಲು ಪಾಂಟಿಂಗ್ ಅವರ ಕೊನೆಯ ಟೆಸ್ಟ್ ನೋಡೋಣ ಎಂದು ಟೀವಿ ಮುಂದೆ ಕುಳಿತಿದ್ದೆ. ದಕ್ಷಿಣ ಆಫ್ರಿಕದ ಸ್ಟೇಯ್ನ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ಔಟಾಗಿದ್ದ ಡೇವಿಡ್ ವಾರ್ನರ್, ಅಂಪೈರ್ ತೀರ್ಪನ್ನು ಪ್ರಶ್ನಿಸಿ ಯಶಸ್ವಿಯಾಗದೇ ಪೆವಿಲಿಯನ್‌ಗೆ ಮರಳಿದಾಗ, ಪಾಂಟಿಂಗ್ ತಮ್ಮ ಎಂದಿನ ಉತ್ಸಾಹದಲ್ಲೇ ಬ್ಯಾಟ್ ಬೀಸುತ್ತ, ಲವಲವಿಕೆಯಿಂದಲೇ ಕ್ರೀಸ್‌ಗೆ ಬಂದರು. ಕ್ರೀಡಾಂಗಣದಲ್ಲಿದ್ದ ಪ್ರತಿಯೊಬ್ಬ ಪ್ರೇಕ್ಷಕನೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಸ್ವಾಗತಿಸಿದರು. `ಸುಂದರ ನೆನಪುಗಳಿಗಾಗಿ ಧನ್ಯವಾದ' ಎಂಬ ಭಿತ್ತಿಪತ್ರ ಅವರನ್ನು ಸ್ವಾಗತಿಸಿತ್ತು. ಮೊದಲ ಎಸೆತಕ್ಕೇ ಅವರು ಔಟಾಗಬಹುದಿತ್ತು. ಆದರೆ ಷಾರ್ಟ್‌ಲೆಗ್‌ನಲ್ಲಿ ಫೀಲ್ಡರ್ ಇರಲಿಲ್ಲ.

ಮರುಎಸೆತದಲ್ಲಿ ಚೆಂಡನ್ನು ಪುಲ್ ಮಾಡಿದರಾದರೂ ಅದು ಬೌಂಡರಿ ದಾಟಲಿಲ್ಲ. ಸ್ವಲ್ಪ ಹೊತ್ತಿನಲ್ಲೇ, ಇವರ ಉತ್ತರಾಧಿಕಾರಿ ಮೈಕೆಲ್ ಕ್ಲಾರ್ಕ್ ಕ್ರೀಸ್‌ಗೆ ಬಂದರು. ಫಿಲಾಂಡರ್ ಓವರ್‌ನಲ್ಲಿ ಪಾಂಟಿಂಗ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಾಗ, ಆ ನಿರ್ಣಯವನ್ನು ಅವರು ಪ್ರಶ್ನಿಸಿದರು. ಆದರೆ ಮೂರನೇ ಅಂಪೈರ್ ನಿರ್ಣಯವನ್ನು ಎತ್ತಿಹಿಡಿದರು. ಕೇವಲ ನಾಲ್ಕು ರನ್ ಮಾಡಿದ್ದ ಪಾಂಟಿಂಗ್ ಮಂಕಾದರು. ಅವರಿಗೆ ಇನ್ನೊಂದು ಇನಿಂಗ್ಸ್ ಇದೆಯಾದರೂ, ದಕ್ಷಿಣ ಆಫ್ರಿಕದ ವೇಗದ ದಾಳಿಗೆ ತತ್ತರಿಸುತ್ತಿದ್ದ ಆಸ್ಟ್ರೇಲಿಯಕ್ಕೆ ಚೇತರಿಕೆ ನೀಡಲಾಗಲಿಲ್ಲ ಎಂಬ ಭಾವನೆ ಅವರಲ್ಲಿದ್ದಿರಬಹುದು. ದಶಕಗಳ ಹಿಂದೆ, ಡಾನ್ ಬ್ರಾಡ್ಮನ್ ತಮ್ಮ ಕೊನೆಯ ಇನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದರೆ ಅವರ ಟೆಸ್ಟ್ ಸರಾಸರಿ ಸರಿಯಾಗಿ ನೂರು ಆಗುತ್ತಿತ್ತು. ಆದರೆ ಬ್ರಾಡ್ಮನ್ ಸೊನ್ನೆಗೆ ಔಟಾಗಿದ್ದರು. ಹಾಗೆಂದು ಅವರು ನಿವೃತ್ತಿಯ ನಿರ್ಧಾರ ಬದಲಿಸಲಿಲ್ಲ. ಬ್ರಾಡ್ಮನ್ ಸಾಲಿನಲ್ಲಿಯೇ ನಿಲ್ಲುವ ಪಾಂಟಿಂಗ್ ಕೂಡ ತಮ್ಮ ನಿರ್ಧಾರ ಬದಲಿಸುವುದಿಲ್ಲ.

ಇಲ್ಲೊಂದು ಕುತೂಹಲಕರ ಅಂಶವಿದೆ. ಹದಿನೇಳು ವರ್ಷಗಳ ಹಿಂದೆ, ಅಂದರೆ 1995 ರಲ್ಲಿ ಪಾಂಟಿಂಗ್, ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಆಡಿದರು. ಅದರಲ್ಲಿ ಅವರು 96 ರನ್ ಮಾಡಿದ್ದಾಗ, ಚಮಿಂದಾ ವಾಸ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ನಿರ್ಣಯ ಬಂತು. ಚೆಂಡು ಅವರ ಬಲಗಾಲಿನ ಪ್ಯಾಡ್ ಮೇಲ್ಭಾಗದಲ್ಲಿ ಬಡಿದಿತ್ತು ಮತ್ತು ಸ್ಟಂಪ್ ಮೇಲೆ ಹೋಗುವಂತೆ ಕಂಡಿತ್ತು. ಅವರು ಅಂಪೈರ್ ಕಡೆ ಪ್ರಶ್ನಾರ್ಥಕವಾಗಿ ದುರುಗುಟ್ಟಿ ನೋಡಿದರಾದರೂ ಅದನ್ನವರು ಪ್ರಶ್ನಿಸುವಂತಿರಲಿಲ್ಲ. ಆಗ ಡಿಆರ್‌ಎಸ್ (ಡಿಸಿಷನ್ ರಿವ್ಯೆ ಸಿಸ್ಟೆಮ್) ಅಂದರೆ `ನಿರ್ಣಯ ಪರಿಶೀಲನಾ ವ್ಯವಸ್ಥೆ' ಇರಲಿಲ್ಲ. ಈಗ ನಡೆಯುತ್ತಿರುವ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕ ನಡುವಣ ಟೆಸ್ಟ್ ಸರಣಿಯಲ್ಲಿ ಆ ವ್ಯವಸ್ಥೆ ಇದೆ. ಅದರಂತೆ ಪಾಂಟಿಂಗ್ ನಿರ್ಣಯವನ್ನು ಪ್ರಶ್ನಿಸಿದರಾದರೂ ಯಶಸ್ವಿಯಾಗಲಿಲ್ಲ.

ಕಳೆದ ವರ್ಷ ಭಾರತದಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯವೇ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಆದರೆ ಅಹ್ಮದಾಬಾದ್‌ನಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ದೋನಿ ಅವರ ಭಾರತ ತಂಡ ಪಾಂಟಿಂಗ್ ಅವರ ಪಾರ್ಟಿಯನ್ನು ಹಾಳುಮಾಡಿತ್ತು. ಪಂದ್ಯದ ಹಿಂದಿನ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಬಹಳ ವಿಶ್ವಾಸದಿಂದಲೇ ಮಾತನಾಡಿದ್ದರು. ನಿವೃತ್ತಿಯ ಯೋಚನೆ ಇಲ್ಲ, ಭಾರತವನ್ನು ಸೋಲಿಸಿ, ಸೆಮಿಫೈನಲ್‌ಗೆ ಹೋಗುವುದೇ ಗುರಿ ಎಂದು ಹೇಳಿದ್ದ ಅವರು, ಸತತ ಮೂರನೇ ಬಾರಿಗೆ ವಿಶ್ವ ಕಪ್ ಗೆಲ್ಲುವ ಕನಸಿನಲ್ಲಿದ್ದರು.

ಅದರಂತೆಯೇ ಅವರು ಶತಕ ಬಾರಿಸಿ ಆಸ್ಟ್ರೇಲಿಯ ಉತ್ತಮ ಗಳಿಸುವಂತೆ ಮಾಡಿದ್ದರು. ಆದರೆ ನಂತರ ಅವರ ವೇಗದ ಬೌಲರುಗಳು ಕೈಕೊಟ್ಟರು. ಭಾರತ ಜಯಗಳಿಸಿತು. ಪಾಂಟಿಂಗ್ ಅವರ `ಹ್ಯಾಟ್ರಿಕ್' ಕನಸು ಭಗ್ನಗೊಂಡಿತ್ತು. 2003 ಮತ್ತು 2007ರಲ್ಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯ ತವರಿಗೆ ಮರಳಿತ್ತು. 2003ರ ಫೈನಲ್‌ನಲ್ಲಿ ಇದೇ ಪಾಂಟಿಂಗ್ ಅವರಿಂದ ಮನಬಂದಂತೆ ಹೊಡೆಸಿಕೊಂಡು ಸೋತಿದ್ದ ಭಾರತ ಸೇಡು ತೀರಿಸಿಕೊಂಡಿತ್ತು.

ಸೌರವ್ ಗಂಗೂಲಿ 2003ರ ವಿಶ್ವ ಕಪ್ ಫೈನಲ್‌ನಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯವನ್ನು ಆಡಲು ಇಳಿಸಿದ್ದರು. ಆಸ್ಟ್ರೇಲಿಯದ ವೇಗದ ದಾಳಿಗೆ ಅವರು ಹೆದರಿದ್ದರು ಎಂಬ ಟೀಕೆ ಕೇಳಿಬಂದಿತ್ತು. ನಿಧಾನವಾಗಿ ಆಟ ಆರಂಭಿಸಿದ್ದ ಪಾಂಟಿಂಗ್ ತಮ್ಮ ಮೊದಲ ಅರ್ಧಶತಕಕ್ಕೆ 74 ಎಸೆತ ತೆಗೆದುಕೊಂಡಿದ್ದರು. ಅದರಲ್ಲಿ ಒಂದೇ ಒಂದು ಬೌಂಡರಿ ಇತ್ತು. ಆದರೆ ಮುಂದಿನ 47ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳಿದ್ದ 90 ರನ್ನುಗಳನ್ನು ಅವರು ಚಚ್ಚಿದಾಗ ಭಾರತದ ಬೌಲರುಗಳು ಹಾರಿಹೋಗಿದ್ದರು. ಆಸ್ಟ್ರೇಲಿಯದ 359 ರನ್ನುಗಳ ಸಮೀಪವೂ ಭಾರತ ಬರಲಿಲ್ಲ.

ಪಾಂಟಿಂಗ್ ತಮ್ಮ 16ನೇ ವಯಸ್ಸಿನಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ಅಕಾಡೆಮಿ ಸೇರಿದಾಗ, ಒಬ್ಬ ವೇಗದ ಬೌಲರನ ಬೌನ್ಸರ್‌ನಲ್ಲಿ ಚೆಂಡನ್ನು ಪುಲ್ ಮಾಡಿದಾಗ, ಇದನ್ನು ನೋಡಿದ ರಾಡ್ನಿ ಮಾರ್ಷ್, `ಈತ ಆಸ್ಟ್ರೇಲಿಯ ತಂಡಕ್ಕೆ ಆಡುತ್ತಾನೆ' ಎಂದು ಹೇಳಿದ ಮಾತು ಸತ್ಯವಾಯಿತು. ಪಾಂಟಿಂಗ್ ಅಷ್ಟೇ ಧೈರ್ಯದಿಂದಲೇ ಆಡುತ್ತ, `ನೋಡು ಮಗನೇ ಹ್ಯಾಗೆ ಹೊಡೆದೆ' ಎಂದು ಬೌಲರುಗಳನ್ನು ಕಾಡಿದರು. 168 ಟೆಸ್ಟ್ ಪಂದ್ಯಗಳು, 375 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಅವರ ಸಾಧನೆಯನ್ನು ಹೇಳುತ್ತವೆ. ಅವರು ಅದ್ಭುತ ಫೀಲ್ಡರ್ ಕೂಡ ಆಗಿದ್ದರು. ಪಾಯಿಂಟ್ ಆಗಿರಲಿ, ಮಿಡ್‌ವಿಕೆಟ್ ಆಗಿರಲಿ, ಷಾರ್ಟ್ ಲೆಗ್ ಆಗಿರಲಿ ಅಥವಾ ಮೈದಾನದ ಯಾವುದೇ ಭಾಗದಲ್ಲಿದ್ದರೂ ಚೆಂಡು ಇವರ ಕೈ ಜಾರುತ್ತಿರಲಿಲ್ಲ. ರಾಹುಲ್ ದ್ರಾವಿಡ್ ಬಿಟ್ಟರೆ ಇವರಷ್ಟು ಕ್ಯಾಚ್ ಹಿಡಿದವರು ಮತ್ತೊಬ್ಬರಿಲ್ಲ. ಚೆಂಡು ಇವರ ಬಳಿ ಹೋಗುತ್ತಿದೆಯೆಂದರೆ ಬ್ಯಾಟ್ಸಮನ್ ರನ್ ಓಡಲು ಹೆದರುತ್ತಿದ್ದರು. ಇವರ ಎಸೆತ ಅಷ್ಟು ಕರಾರುವಾಕ್ ಆಗಿರುತ್ತಿತ್ತು. ಇವರ ಫೀಲ್ಡಿಂಗ್ ಚಮತ್ಕಾರವನ್ನು ಆಸ್ಟ್ರೇಲಿಯದ ಖ್ಯಾತ ಆಟಗಾರ ರಿಚಿ ಬೇನೊ ರಸಿಕವಾಗಿ ವರ್ಣಿಸಿದ್ದಾರೆ. `ಕಾಮಸೂತ್ರದಲ್ಲಿರುವುದಕ್ಕಿಂತ ಹೆಚ್ಚಿನ ಭಂಗಿಗಳಲ್ಲಿ ರಿಕಿ ಚೆಂಡನ್ನು ಹಿಡಿಯಬಲ್ಲ' ಎಂದು ಅವರು ಹೇಳಿದ್ದರು. ಆಗೊಮ್ಮೆ ಈಗೊಮ್ಮೆ ಬೌಲಿಂಗ್ ಕೂಡ ಮಾಡುತ್ತಿದ್ದ ರಿಕಿ, ಒಮ್ಮೆ ಬ್ರಯಾನ್ ಲಾರಾ ಅವರ ವಿಕೆಟ್ ಪಡೆದಿದ್ದರು.

ಆಸ್ಟ್ರೇಲಿಯದ ಬಹಳಷ್ಟು ಆಟಗಾರರು ಮೈದಾನದ ಹೊರಗೆ ಸ್ನೇಹಜೀವಿಗಳಾಗಿದ್ದರೂ, ಮೈದಾನದೊಳಗೆ ಮಾತ್ರ ಜಗಳಗಂಟರು. ಬ್ಯಾಟ್ಸಮನ್ನರನ್ನು ಕಾಡುವ ಚಟ ಅವರಿಗೆ. ಪಂದ್ಯ ಗೆದ್ದ ಮೇಲಂತೂ ಅವರನ್ನು ಹಿಡಿಯುವಂತೆಯೇ ಇಲ್ಲ. ಮುಂಬೈನಲ್ಲಿ ನಡೆದ 2006 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದ ನಂತರ, ಬಹುಮಾನ ವಿತರಣೆ ಸಮಯದಲ್ಲಿ, ಟ್ರೋಫಿ ಕೊಟ್ಟ ಶರದ್ ಪವಾರ್ (ಆಗವರು ಭಾರತ ಕ್ರಿಕೆಟ್ ಮಂಡಳಿ ಅಧ್ಯಕ್ಷ) ಪಕ್ಕಕ್ಕೆ ದೂಡಿ ಫೋಟೊ ತೆಗೆಸಿಕೊಂಡಿದ್ದರು. ಪವಾರ್‌ಗೆ ಅವಮಾನ ಮಾಡುವ ಉದ್ದೇಶ ಎದ್ದುಕಂಡಿತ್ತು. ವಿವಾದ ಬೆಳೆಯಲಿಲ್ಲವಾದರೂ, ಪಾಂಟಿಂಗ್‌ಗೆ ಅದು ಶೋಭೆ ತರುವ ವಿಷಯವಾಗಿರಲಿಲ್ಲ.

ಸಚಿನ್ ತೆಂಡೂಲ್ಕರ್ ಈಗಿರುವ ಸ್ಥಿತಿಯಲ್ಲೇ ಪಾಂಟಿಂಗ್ ಕೂಡ ಇದ್ದರು. ಬರುವ ಏಪ್ರಿಲ್ ತಿಂಗಳಲ್ಲಿ ತಮ್ಮ 40ನೇ ವಯಸ್ಸಿಗೆ ಕಾಲಿಡಲಿರುವ ಸಚಿನ್ ಕೂಡ ನಿವೃತ್ತಿಯಾಗಬೇಕು ಎಂಬ ಚರ್ಚೆ ಪಾಂಟಿಂಗ್ ನಿವೃತ್ತಿ ನಂತರ ಆರಂಭವಾಗಿದೆ.

2011 ರಲ್ಲಿ ವಿಶ್ವ ಕಪ್ ಸೋಲಿನ ನಂತರ ಪಾಂಟಿಂಗ್ ಅವರ ನಿವೃತ್ತಿ ಮಾತು ಕೇಳಿಬಂದಿತ್ತು. ನಾಯಕತ್ವ ಹೋದರೂ ಅವರು ಆಟ ಮುಂದುವರಿಸಿದ್ದರು. ಇದೇ ತಿಂಗಳು 19ರಂದು ತಮ್ಮ 39ನೇ ಜನ್ಮದಿನ ಆಚರಿಸಲಿರುವ ಪಾಂಟಿಂಗ್ ಅವರಿಗೆ ಕೆಲವು ದಿನಗಳ ಹಿಂದೆ  `ಇನ್ನು ಸಾಕು' ಎಂದೆನಿಸಿತ್ತು. `ಕ್ರಿಕೆಟ್‌ಗೆ ನನ್ನದೆಲ್ಲವನ್ನೂ ಕೊಟ್ಟಿದ್ದೇನೆ. 20 ವರ್ಷಗಳ ಕಾಲ ಕ್ರಿಕೆಟ್ ನನ್ನ ಉಸಿರಾಗಿತ್ತು. ಈಗ ನಾನು ಕ್ರಿಕೆಟ್‌ಗೆ ಕೊಡಲು ಹೆಚ್ಚೇನೂ ಉಳಿದಿಲ್ಲ' ಎಂದವರು ಹೇಳಿದ್ದರು. ಅದರಂತೆಯೇ ಅವರು ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಟೆಸ್ಟ್‌ಗೆ ಮೊದಲೇ ತಮ್ಮ ನಿವೃತ್ತಿ ಪ್ರಕಟಿಸಿದರು. ಪಂಟರ್ ಎಂದರೆ ಜೂಜುಗಾರ. ಕ್ರಿಕೆಟ್ ಜೂಜಿನಲ್ಲಿ ಅವರು ಯಾವಾಗಲೂ ವಿಜೇತನೇ ಆಗಿದ್ದರು.  ಅವರ ಆಟವನ್ನು ಕ್ರಿಕೆಟ್ ಜಗತ್ತು ಮರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry