ರಿದಮ್ನಲ್ಲಿ ದೇಸಿ ಸೊಗಡು

7

ರಿದಮ್ನಲ್ಲಿ ದೇಸಿ ಸೊಗಡು

Published:
Updated:
ರಿದಮ್ನಲ್ಲಿ ದೇಸಿ ಸೊಗಡು

ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳು ಅಲ್ಲಿಯ ಜನರ ಅಂತಃಕರಣ, ಜೀವನ ಪ್ರೀತಿ, ಗಟ್ಟಿತನಕ್ಕೆ ಹೆಸರಾಗಿವೆ. ಹಾಗೆಯೇ ಅಲ್ಲಿನ ಕಲಾ ಪರಂಪರೆ. ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಗುಲ್ಬರ್ಗಗಳ ಮನೆಮನೆಯಲ್ಲಿ ಚಿತ್ರಕಲಾವಿದ, ಸಂಗೀತ ಕಲಾವಿದರಿದ್ದಾರೆ. ಹುಟ್ಟುತ್ತಲೇ ಕುಂಚ ಹಿಡಿದವರಂತೆ, ವರ್ಣಗಳ ವ್ಯತ್ಯಾಸ ತಿಳಿದವರಂತೆ ಇರುತ್ತಾರೆ. ಉತ್ತರ ಕರ್ನಾಟಕದ ಆರು ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ‘ರಿದಮ್’ ಈಗ ನಗರದಲ್ಲಿ ನಡೆಯುತ್ತಿದೆ. ಕೆ. ಗಂಗಾಧರ, ಚನ್ನಪ್ಪಗೌಡ ಜಿ. ಪಾಟೀಲ, ವೀರಭದ್ರಪ್ಪ ಡಿ. ಸಾಲಿ, ಕಲ್ಲಪ್ಪ ವೈ. ಚೌಗಲೆ, ಪ್ರಕಾಶ್ ಐ. ಪತ್ತಾರ ಹಾಗೂ ಶಿವಾನಂದ ಪತ್ತಾರ ಇಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇವರ ಕಲಾಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ.

ಕೆ. ಗಂಗಾಧರ್ ಬಸವನಬಾಗೇವಾಡಿಯ ವಡವಾಡಗಿಯವರು. ಹಲವು ಏಕವ್ಯಕ್ತಿ ಪ್ರದರ್ಶನ, ಸಮೂಹ ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಇವರು ಪ್ರಸ್ತುತ ಬಸವನಬಾಗೇವಾಡಿಯ ಸರ್ವೋದಯ ಶಾಲೆಯಲ್ಲಿ ಕಲಾಶಿಕ್ಷಕರಾಗಿದ್ದಾರೆ. ದೆಹಲಿಯ ಸಂಸತ್ ಭವನದ ಮುಂದೆ ಬಸವ ಪುತ್ಥಳಿ ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ ಗಂಗಾಧರ್ ರಚಿಸಿದ್ದ  ಬಸವಣ್ಣನವರ ಜೀವನ ಬಿಂಬಿಸುವ ಸರಣಿ ಕಲಾಕೃತಿ ಪ್ರದರ್ಶಿಸಲಾಗಿತ್ತು.ಚನ್ನಪ್ಪಗೌಡ ಜಿ. ಪಾಟೀಲ ಹಿರೇಕೆರೂರು ತಾಲ್ಲೂಕು ರಟ್ಟಿಹಳ್ಳಿಯವರು. ಪ್ರಸ್ತುತ ಧಾರವಾಡದ ಕೆಲಗೇರಿಯ ಜೆಎಸ್‌ಎಸ್ ಹಾಲಭಾವಿ ಆರ್ಟ್ ಸ್ಕೂಲ್‌ನಲ್ಲಿ ಉಪನ್ಯಾಸಕರು. ದಟ್ಟ ಬಣ್ಣಗಳನ್ನು ಬಳಸಿರುವ ಇವರ ಕಲಾಕೃತಿಗಳು ಗ್ರಾಮೀಣ ಮಹಿಳೆಯ ಜೀವನ ಪ್ರತಿಬಿಂಬಿಸುತ್ತಿವೆ.ವೀರಭದ್ರಪ್ಪ ಡಿ. ಸಾಲಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಉಗರಗೋಳದವರು. ಪ್ರಸ್ತುತ ರಾಯಭಾಗದ ವಿವೇಕಾನಂದ ಕಲಾ ಮಂದಿರದಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದ ಮೊಗಲ್ ಶೈಲಿಯ ಕಲಾಕೃತಿಗಳಿಂದ ಪ್ರೇರಣೆ ಪಡೆದಂತಿರುವ ಇವರ ಕಲಾಕೃತಿಗಳಲ್ಲಿ ನಯ, ನಾಜೂಕಿನಿಂದ ಕೂಡಿವೆ. ಪ್ರಕೃತಿ, ಹೆಣ್ಣಿನ ಚೆಲುವನ್ನು ಅವರು ಈ ಕಲಾಕೃತಿಗಳಲ್ಲಿ ಚಿತ್ರಿಸಿದ್ದಾರೆ.ಬೆಳಗಾವಿಯ ಕಲ್ಲಪ್ಪ ವೈ. ಚೌಗಲೆ ಧಾರವಾಡದ ವಿವಿ ಪಬ್ಲಿಕ್ ಶಾಲೆ ಕಲಾ ಶಿಕ್ಷಕ. ಇವರ ಕಲಾಕೃತಿಗಳಲ್ಲಿ ಗ್ರಾಮೀಣ ಜೀವನದ ಸೊಗಡು ಕಣ್ಣಿಗೆ ಕಟ್ಟುವಂತೆ ನಿರೂಪಿತವಾಗಿದೆ.ಬೆಳಗಾವಿಯ ಘಟಪ್ರಭಾ ಮೂಲದ ಪ್ರಕಾಶ್ ಐ. ಪತ್ತಾರ ಸದ್ಯ ರಾಯಭಾಗದ ವಿವೇಕಾನಂದ ಕಲಾ ಮಂದಿರದಲ್ಲಿ ಕಲಾ ಶಿಕ್ಷಕ. ಇವರು ತಮ್ಮ ಕಲಾಕೃತಿಗಳಲ್ಲಿ ಪ್ರಕೃತಿಯ ಅಸೀಮ  ಸೌಂದರ್ಯ ಸೆರೆಹಿಡಿದಿದ್ದಾರೆ.ಬೆಳಗಾವಿ ಜಿಲ್ಲೆ ಸವದತ್ತಿಯ ಶಿವಾನಂದ ಕೆ. ಪತ್ತಾರ ಧಾರವಾಡದ ಫೈನ್ ಆರ್ಟ್ ಕಾಲೇಜಿನಲ್ಲಿ ಉಪನ್ಯಾಸಕರು. ಗ್ರಾಮೀಣ ಜೀವನ ಇವರ ಹೃದಯಕ್ಕೆ ಹತ್ತಿರವಾದಂತಿದೆ. ಗ್ರಾಮೀಣ ಹೆಣ್ಣು ಮಕ್ಕಳ ದೈನಂದಿನ ಕೆಲಸದ ಸೊಬಗನ್ನು ದಟ್ಟ ವರ್ಣಗಳ ಮೂಲಕ ಚಿತ್ರಿಸಿದ್ದಾರೆ.ಈ ಸಮೂಹ ಪ್ರದರ್ಶನ ಶುಕ್ರವಾರದವರೆಗೆ ನಡೆಯಲಿದೆ.   ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry