ರಿಮೇಕ್ ಚಿತ್ರಗಳಿಂದ ಸ್ವಂತಿಕೆ ಕ್ಷೀಣ: ಚಿತ್ರೋದ್ಯಮಿ ಗುಪ್ತ

7

ರಿಮೇಕ್ ಚಿತ್ರಗಳಿಂದ ಸ್ವಂತಿಕೆ ಕ್ಷೀಣ: ಚಿತ್ರೋದ್ಯಮಿ ಗುಪ್ತ

Published:
Updated:

ಬೆಂಗಳೂರು: `ರಿಮೇಕ್ ಚಿತ್ರಗಳಿಂದ ಕನ್ನಡ ಚಿತ್ರರಂಗ ಸ್ವಂತಿಕೆ ಕಳೆದುಕೊಳ್ಳುತ್ತಿದೆ' ಎಂದು ಹಿರಿಯ ಚಿತ್ರೋದ್ಯಮಿ ಕೆ.ವಿ.ಗುಪ್ತ ವಿಷಾದಿಸಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರಿಂದ ಚಿತ್ರೋದ್ಯಮದಲ್ಲಿ ಸೃಜನಶೀಲತೆಯೇ ಮಾಯವಾಗುತ್ತಿದೆ. ನಮ್ಮತನವನ್ನು ಕಳೆದುಕೊಂಡ ಚಿತ್ರಗಳು ಇಂದು ಹೆಚ್ಚಾಗುತ್ತಿವೆ. ಚಿತ್ರಗಳ ಡಬ್ಬಿಂಗ್‌ಗೆ ನನ್ನ ವಿರೋಧವಿದೆ. ಆದರೆ, ಕೆಲವರ ಮಟ್ಟಿಗೆ ಡಬ್ಬಿಂಗ್ ಅನಿವಾರ್ಯವಾಗಿದೆ' ಎಂದರು.`ಹಿಂದೆ ಚಲನಚಿತ್ರಗಳ ನಿರ್ಮಾಣಕ್ಕೆ ನಿಖರವಾದ ಹಣಕಾಸಿನ ಹಾಗೂ ಕಾಲಮಿತಿಯ ಕಟ್ಟುಪಾಡು ಇರುತ್ತಿತ್ತು. ಹೀಗಾಗಿ ಚಿತ್ರಗಳು ಗುಣಮಟ್ಟವನ್ನು ಕಾಪಾಡಿಕೊಂಡು ತೆರೆ ಕಾಣುತ್ತಿದ್ದವು. ಹಿಂದಿನ ನಿರ್ಮಾಪಕರಿಗೆ ತಂತ್ರಜ್ಞಾನದ ಬಗ್ಗೆ ಅರಿವಿತ್ತು. ಆದರೆ, ಇಂದಿನ ನಿರ್ಮಾಪಕರಿಗೆ ಚಲನಚಿತ್ರ ಕ್ಷೇತ್ರದ ಬಗ್ಗೆಯೇ ಸರಿಯಾದ ಮಾಹಿತಿಯಿಲ್ಲ. ಬೇರೆ ಬೇರೆ ಕ್ಷೇತ್ರಗಳ ಜನರು ಕೇವಲ ಲಾಭದ ಕಾರಣಕ್ಕಾಗಿ ಚಿತ್ರೋದ್ಯಮದಲ್ಲಿ ಹಣ ಹೂಡುತ್ತಿರುವುದರಿಂದ ಚಿತ್ರಗಳ ಗುಣಮಟ್ಟ ಕಡಿಮೆಯಾಗುತ್ತಿದೆ' ಎಂದು ಅವರು ಹೇಳಿದರು.`ನಾಲ್ಕೈದು ದಶಕಗಳ ಹಿಂದೆ 50ರಿಂದ 60 ಸಾವಿರ ರೂಪಾಯಿ ಹಣದಲ್ಲಿ ಒಂದು ಚಿತ್ರವನ್ನು ನಿರ್ಮಿಸಬಹುದಿತ್ತು. ಆದರೆ, ಇಂದು ಹೂಡಿಕೆ ಹೆಚ್ಚಾಗಿ, ಗುಣಮಟ್ಟ ಕಡಿವೆುಯಾಗಿದೆ. ಇಂದು ಚಿತ್ರೋದ್ಯಮ ದೊಡ್ಡ ಉದ್ಯಮವಾಗಿ ಬೆಳೆದಿದೆಯೇ ಹೊರತು ಅಲ್ಲಿಂದ ಗುಣಮಟ್ಟದ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹಿಂದೆ ಚಿತ್ರ ನಿರ್ಮಾಣಕ್ಕೆ ಇದ್ದ ಕಷ್ಟಗಳೂ ಈಗಿಲ್ಲ' ಎಂದು ಅವರು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry