ಶುಕ್ರವಾರ, ಮೇ 7, 2021
26 °C

ರಿಯಲ್ ಎಸ್ಟೇಟ್‌ಗೆ ಮೂಗುದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮನೆ ಕಟ್ಟಿ ನೋಡು' ಎನ್ನುವ ಗಾದೆ ಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ. ನಗರಗಳಲ್ಲಿ ಬೃಹದಾಕಾರವಾಗಿ ನಾಯಿಕೊಡೆಗಳಂತೆ ಬೆಳೆದಿರುವ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೂಲಕ ಫ್ಲ್ಯಾಟ್ ಕೊಳ್ಳುವವರಿಗೂ ಈ ಗಾದೆ ಅರ್ಥವತ್ತಾಗಿ ಹೊಂದಿಕೊಳ್ಳುತ್ತದೆ. ನೆತ್ತಿಯ ಮೇಲೊಂದು ಸೂರು ಕಟ್ಟಿಕೊಳ್ಳುವುದು ಎಲ್ಲ ವರ್ಗದ ಜನರ ಕನಸು. ಮಧ್ಯಮವರ್ಗದ ಜನರಂತೂ ನಗರ ಪ್ರದೇಶಗಳಲ್ಲಿ ಆಕರ್ಷಕ ಜಾಹೀರಾತಿನ ಮೂಲಕ ರಿಯಲ್ ಎಸ್ಟೇಟಿನವರು ನೀಡುವ ಆಮಿಷಗಳಿಗೆ ಬಲಿಬಿದ್ದು, ವಂಚನೆಗೆ ಒಳಗಾಗುವುದೇ ಹೆಚ್ಚು.ಬಿಲ್ಡರ್‌ಗಳು ಫ್ಲ್ಯಾಟ್‌ಗಳನ್ನು ನೀಡುವಾಗ ಎಲ್ಲ ಕಾನೂನು ನಿಯಮಗಳನ್ನು ಪಾಲಿಸಿರುವುದಾಗಿ ಮೌಖಿಕವಾಗಿ ಹೇಳಿ ವ್ಯವಹಾರ ನಡೆಸುತ್ತಾರೆ. ಜನ ಸಾಮಾನ್ಯರಿಗೆ ಈ ವ್ಯವಹಾರದ ಒಳಸುಳಿಗಳಾಗಲಿ, ಕಾನೂನುಗಳ ಅರಿವಾಗಲಿ ಇಲ್ಲದಿರುವುದರಿಂದ ರಿಯಲ್‌ಎಸ್ಟೇಟ್ ದಂಧೆ ಎನ್ನುವುದು ಹಗಲು ದರೋಡೆಯ ರೀತಿಯದೇ ಆಗಿ, ಬಹಳಷ್ಟು ಮಂದಿ ನಿವೇಶನ, ಮನೆ, ಫ್ಲ್ಯಾಟ್‌ಗಳಿಗೆ ಹಣ ಹೂಡಿ, ಯಾವುದೂ ಕೈಗೆ ಸಿಗದೆ ಮೋಸ ಹೋದ ಪ್ರಕರಣಗಳು ನಡೆದಿವೆ. ಫ್ಲ್ಯಾಟ್ ಪಡೆದವರೂ ಹಲವಾರು ತೊಡಕುಗಳಿಗೆ ಸಿಲುಕಿಕೊಂಡು ಪರಿತಪಿಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕೇಂದ್ರ ಸಚಿವ ಸಂಪುಟ `ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ' ಯನ್ನು ಅನುಮೋದಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ದಾರಿ ತಪ್ಪಿಸುವ ಉತ್ಪ್ರೇಕ್ಷಿತ ಜಾಹೀರಾತುಗಳ ಮೂಲಕ ವಸತಿ ನಿರ್ಮಾಣ ಯೋಜನೆಗಳ ಬಗ್ಗೆ ಜನರನ್ನು ದಾರಿ ತಪ್ಪಿಸುವ ಕಟ್ಟಡ ನಿರ್ಮಾಣಗಾರರು ಮತ್ತು ನಿವೇಶನ ಅಭಿವೃದ್ಧಿಪಡಿಸುವವರನ್ನು ಸೆರೆಮನೆಗೆ ಕಳುಹಿಸುವುದೂ ಸೇರಿದಂತೆ ಈ ಮಸೂದೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ನಿಯಂತ್ರಣ ಸಾಧಿಸಲಿದೆ.

ಮನೆ ಖರೀದಿಸುವವರ ಹಿತಕಾಯುವ ಈ ಮಸೂದೆ ಜನಪರವಾಗಿದೆ. ಕರ್ನಾಟಕವೊಂದರಲ್ಲೇ ಅಲ್ಲ ಇಡೀ ರಾಷ್ಟ್ರದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು ತಮ್ಮ ಕಬಂಧಬಾಹುಗಳನ್ನು ಚಾಚಿದ್ದು, ರಾಜಕಾರಣಿಗಳು,ಅಧಿಕಾರಿಗಳು, ಸ್ಥಳೀಯ ಆಡಳಿತ, ಪೊಲೀಸರು ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ. ಅಲ್ಲದೆ, ಭೂಗಳ್ಳರು, ಭೂಗತ ಲೋಕದ ಕುಖ್ಯಾತರು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ರಹಸ್ಯವಾಗೇನೂ ಉಳಿದಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಎಲ್ಲ ರಾಜ್ಯಗಳಲ್ಲೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳನ್ನು ರಚಿಸುವುದು, ಪ್ರಾಧಿಕಾರದ ಅಂತಿಮ ಅನುಮೋದನೆ ಪಡೆಯದೆ ಯಾವುದೇ ಫ್ಲ್ಯಾಟ್, ನಿವೇಶನ, ಮನೆ ಹಸ್ತಾಂತರ ಮಾಡುವಂತಿಲ್ಲ ಎನ್ನುವ ನಿಯಮ ಕಡ್ಡಾಯ ಮಾಡುತ್ತಿರುವುದು ರಿಯಲ್ ಎಸ್ಟೇಟ್‌ನ ಎಲ್ಲ ಕಳ್ಳ ವ್ಯವಹಾರಗಳನ್ನು ನಿಯಂತ್ರಿಸುತ್ತದೆ. ಈ ಪ್ರಾಧಿಕಾರದಲ್ಲಿ ಎಲ್ಲ ಯೋಜನೆಗಳನ್ನೂ ನೋಂದಣಿ ಮಾಡುವುದು ಕಡ್ಡಾಯ.

ಸುಳ್ಳು ಭರವಸೆ ನೀಡುವಂತಿಲ್ಲ, ರಿಯಲ್ ಎಸ್ಟೇಟ್ ಬ್ರೋಕರ್‌ಗಳೂ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ ಎನ್ನುವ ಬಿಗಿ ನಿಯಮಗಳಿರುವುದರಿಂದಲೇ  ಆರು ವರ್ಷಗಳಿಂದ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಬಿಡಿಎ ಆಗಲಿ, ಗೃಹನಿರ್ಮಾಣ ಮಂಡಳಿಯಾಗಲಿ ಜನಸಾಮಾನ್ಯರ ಬೇಡಿಕೆ ಪೂರೈಸಲು ಸಮರ್ಥವಾಗಿಲ್ಲ. ಆದರೆ ನಿವೇಶನಕ್ಕೆ, ಮನೆಗಳಿಗೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿರುವುದರಿಂದ ರಿಯಲ್ ಎಸ್ಟೇಟ್ ವ್ಯವಹಾರ ಬೇರುಬಿಡಲು ಕಾರಣವಾಯಿತು. ಮಾಫಿಯಾಗಳು ಭೂತಾಕಾರವಾಗಿ ಬೆಳೆದುನಿಂತ ಮೇಲೆ ಮೂಗುದಾರ ಹಾಕಲು ಹೊರಟಿರುವುದು ತಡವಾದರೂ ದಿಟ್ಟ ಹೆಜ್ಜೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.