ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಏರಿಳಿತ

7

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಏರಿಳಿತ

Published:
Updated:

ಏರಿದ್ದು ಇಳಿಯಲೇ ಬೇಕು. ಬೆಳಿಗ್ಗೆ ಅದೇ ತಾನೇ ಹುಟ್ಟುವ ದಿನಕರ ಮಧ್ಯಾಹ್ನದ ಹೊತ್ತಿಗೆ ನೆತ್ತಿಯ ಮೇಲಕ್ಕೇರಿದರೂ ಸಂಜೆ ಹೊತ್ತಿಗೆ ಪಡುವಣಕ್ಕೆ ಇಳಿಯಲೇ ಬೇಕು. ಮತ್ತೆ ಬೆಳಿಗ್ಗೆ ಉದಯಿಸಬೇಕು. ಇದು ಪ್ರಕೃತಿ ನಿಯಮ.ಈ ನಿಯಮ ಜೀವನದ ಸಕಲ ರಂಗಗಳಿಗೂ ಅನ್ವಯಿಸುತ್ತದೆ. ಇತ್ತೀಚಿನ ಕೆಲ ವರ್ಷಗಳಿಂದ ಹಣ ಗಳಿಕೆ ವಿಚಾರದಲ್ಲಿ ಆರ್ಭಟಿಸುತ್ತಿರುವ ರಿಯಲ್ ಎಸ್ಟೇಟ್ ವಲಯಕ್ಕೂ ಅನ್ವಯಿಸತೊಡಗಿದೆ.ಸರ‌್ರನೇ ಮೇಲಕ್ಕೇರಿ ಅಬ್ಬರಿಸತೊಡಗಿದ್ದ ರಿಯಲ್ ಎಸ್ಟೇಟ್ ಕ್ಷೇತ್ರ, ಹೂಡಿಕೆದಾರರನ್ನು ಸೂಜಿಗಲ್ಲಿನಂತೆ ಕಳೆದ ಕೆಲವು ವರ್ಷಗಳಿಂದ ಸೆಳೆಯುತ್ತಿದ್ದದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚೆಗೆ ದೇಶದ ರಿಯಲ್ ಎಸ್ಟೇಟ್ ರಂಗವು ಈ ಮೊದಲಿನಷ್ಟು ಆಕರ್ಷಣೆ ಹೊಂದಿಲ್ಲ ಎಂದು ಇತ್ತೀಚೆಗಷ್ಟೆ ಬಿಡುಗಡೆಯಾದ ಸಮೀಕ್ಷೆಯೊಂದು ತಿಳಿಸಿದೆ.ಹಾಗೆಂದು ನೋಡಿದರೆ ರಿಯಲ್ ಎಸ್ಟೇಟ್ ಉದ್ಯಮದ ಹಿಂಜರಿತ ಇದೇ ಮೊದಲೇನಲ್ಲ. ವಿಶ್ವ ಆರ್ಥಿಕ ಹಿಂಜರಿತ ಇದ್ದಾಗಲೂ ರಿಯಲ್ ಎಸ್ಟೇಟ್ ವಲಯವು ಹಿಂಜರಿತ ಕಂಡಿದ್ದು ನಿಜ. ನಂತರ ಚೇತರಿಸಿಕೊಂಡು ಪ್ರಗತಿಯ ಏಣಿಯನ್ನು ಏರುತ್ತಲೇ ಹೊರಟ ಈ ವಲಯ ಅನಿರೀಕ್ಷಿತವಾಗಿ ಪ್ರಸ್ತುತ ಇಳಿಯತೊಡಗಿದ್ದು ಮಾತ್ರ ವಿಚಿತ್ರ ಆದರೂ ಸತ್ಯ.ಹರ್ಬನ್ ಲ್ಯಾಂಡ್ ಇನ್‌ಸ್ಟಿಟ್ಯೂಟ್ ಹಾಗೂ ಪ್ರೈಸ್ ವಾಟರ್ ಹೌಸ್ ಕೂಪರ್(ಪಿಡಬ್ಲ್ಯುಸಿ) ಲೆಕ್ಕ ಪರಿಶೋಧನಾ ಸಂಸ್ಥೆ ಇತ್ತೀಚಿಗೆ ನಡೆಸಿದ  ಸಮೀಕ್ಷೆ, ದೇಶದ ರಿಯಲ್ ಎಸ್ಟೇಟ್ ವಲಯದ ಹೂಡಿಕೆ ಕಳೆಗುಂದುತ್ತಿರುವುದನ್ನು ಬಹಿರಂಗಪಡಿಸಿದೆ. ಅದರಲ್ಲೂ ಮುಖ್ಯವಾಗಿ ದೇಶದ ಮೂರು ಮುಂಚೂಣಿ ನಗರಗಳಾದ ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿ ಈ ಹಿಂಜರಿತ ಕಾಣಿಸಿಕೊಂಡಿದೆ.ಈ ಹಿಂದಿನ ರಿಯಲ್ ಎಸ್ಟೇಟ್ ಹೂಡಿಕೆಯ ಸಮೀಕ್ಷೆಯಲ್ಲಿ ಬೆಂಗಳೂರು, ಮುಂಬೈ ಹಾಗೂ ದೆಹಲಿ ನಗರಗಳು ಕ್ರಮವಾಗಿ 10 ಮತ್ತು 15 ಹಾಗೂ 12ನೇ ಸ್ಥಾನಗಳನ್ನು ಪಡೆದಿದ್ದವು. ಆದರೆ ಪ್ರಸ್ತುತ 19 ಮತ್ತು 20 ಹಾಗೂ 21ನೇ ಸ್ಥಾನಕ್ಕೆ ಕುಸಿದಿವೆ. `ಕೆಲವೊಂದು ಅನಿಶ್ಚಿತ ಸಂಗತಿಗಳು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ರಿಯಲ್ ಎಸ್ಟೇಟ್ ವಲಯದಿಂದ ವಿಮುಖವಾಗಿಸುತ್ತಿವೆ' ಎನ್ನುವುದು `ಪ್ರೈಸ್ ವಾಟರ್ ಹೌಸ್ ಕೂಪರ್' ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗೌತಮ್ ಮೆಹ್ರಾ ಅವರ ಸ್ಪಷ್ಟ ಅಭಿಮತ.ಸರ್ಕಾರದ ಸ್ಪಷ್ಟತೆ ಇಲ್ಲದ ಕೆಲವೊಂದು ನೀತಿ ನಿಯಮಗಳೇ ಈ ಬೆಳವಣಿಗೆಗಳಿಗೆ ಕಾರಣ ಎಂಬುದು ಅವರ ವಿಶ್ಲೇಷಣೆ. ಮುಖ್ಯವಾಗಿ ಗಗನಮುಖಿಯಾಗಿರುವ ಹಣದುಬ್ಬರ, ಗೃಹಸಾಲಗಳ ಬಡ್ಡಿದರ, ದೇಶದಲ್ಲಿನ ಅನಿಶ್ಚಿತ ಹಣಕಾಸು ನೀತಿಗಳಿಂದಾಗಿ `ವಸತಿ ನಿರ್ಮಾಣ-ಮಾರಾಟ' ವಲಯ ಕಳೆಗುಂದಿದೆ ಎಂದು ಅವರು ಹೇಳುತ್ತಾರೆ.ಇವುಗಳ ಜತೆಗೆ ದೇಶದಲ್ಲೆಗ ಸಿವಿಲ್ ಎಂಜಿನಿಯರ್‌ಗಳ ಕೊರತೆ ಇದೆ. ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಅತ್ಯಗತ್ಯವಾದ ನುರಿತ ಕಾರ್ಮಿಕರೂ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಲಭಿಸುತ್ತಿಲ್ಲ. ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಮರಳು, ವಿದ್ಯುತ್ ಪರಿಕರಗಳ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿದೆ.ಇದೆಲ್ಲದರಿಂದಾಗಿ ಮನೆ ಮತ್ತು ವಸತಿ ಸಂಕೀರ್ಣಗಳ ನಿರ್ಮಾಣ ವೆಚ್ಚವೂ ದುಪ್ಪಟ್ಟಾಗಿದೆ. ಪರಿಣಾಮ ಪ್ರತ್ಯೇಕ ಮನೆ-ಅಪಾರ್ಟ್‌ಗಳಲ್ಲಿನ ಫ್ಲಾಟ್‌ಗಳ ಬೆಲೆಯೂ ಬಹುದೊಡ್ಡ ಗ್ರಾಹಕ ಸಮೂಹವಾದ ಮಧ್ಯಮ ಮತ್ತು  ಕೆಳ ಮಧ್ಯಮ ವರ್ಗದವರ ಕೈಗೆ ಸುಲಭಕ್ಕೆ ಎಟುಕದಷ್ಟು ದುಬಾರಿಯಾಗಿದೆ.ಇದೆಲ್ಲದರಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರದ ಮಂದಗತಿಯಲ್ಲಿದೆ. ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ವಸತಿ ಸಂಕೀರ್ಣಗಳಲ್ಲಿನ ಮನೆಗಳು ಮಾರಾಟವಾಗದೆ ತಿಂಗಳು-ವರ್ಷದವರೆಗೆ ಖಾಲಿ ಉಳಿಯುತ್ತಿವೆ (ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ನಿರ್ಮಾಣಗೊಂಡಿರುವ ವಸತಿ ಸಂಕೀರ್ಣಗಳಲ್ಲಿ ಸದ್ಯ 5 ಲಕ್ಷ ಮನೆಗಳು ಮಾರಾಟವಾಗದೇ ಉಳಿದುಕೊಂಡಿವೆ ಎಂಬ ಅಂಕಿ-ಅಂಶವನ್ನು ಇನ್ನೊಂದು ಸಮೀಕ್ಷೆ ಹೊರಗೆಡಹಿತ್ತು). ಹೂಡಿದ ಹಣ ಪೂರ್ಣ ಪ್ರಮಾಣದಲ್ಲಿ ವಾಪಸ್ ಬಾರದೇ ಸಕಾಲದಲ್ಲಿ ಬ್ಯಾಂಕ್ ಸಾಲ ತೀರಿಸಲಾಗುತ್ತಿಲ್ಲ. ಸಾಲದ ಮೇಲಿನ ಬಡ್ಡಿಯೂ ಬೆಳೆಯುತ್ತಿದೆ. ಈ ಎಲ್ಲ ಅಂಶಗಳೂ ರಿಯಲ್ ಎಸ್ಟೇಟ್ ಉದ್ಯಮದ ಮೇಲಿನ ಹೂಡಿಕೆಯನ್ನು ಅನುತ್ಪಾದಕ ಲೆಕ್ಕಕ್ಕೆ ತಂದಿವೆ.ಮುಂಬೈಗೆ ಹೋಲಿಸಿದರೆ ಬೆಂಗಳೂರು ಸ್ಥಿರವಾದ ಬೆಲೆಯಿಂದಾಗಿ ದೇಶದ ರಿಯಲ್ ಎಸ್ಟೇಟ್ ವಲಯದ ಪ್ರಬುದ್ಧ ಮಾರುಕಟ್ಟೆ ಎಂಬ ಹೆಸರನ್ನು ಇನ್ನೂ ಉಳಿಸಿಕೊಂಡಿದೆ. ಆದಾಗ್ಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಕಾಡುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ಈ `ಸಿಲಿಕಾನ್ ಸಿಟಿ'ಯ ರಿಯಲ್ ಎಸ್ಟೇಟ್ ವಲಯದ ಹೂಡಿಕೆ ಮೇಲೂ ಚಾಚಿಕೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.ಆದರೆ, ದೇಶದ ರಾಜಧಾನಿ ನವದೆಹಲಿಯತ್ತ ನಿರೀಕ್ಷೆಗಳು ಗರಿಗೆದರಿವೆ ಎಂದು ಸಮೀಕ್ಷೆ ಗಮನ ಸೆಳೆಯುತ್ತದೆ. `ರಾಷ್ಟ್ರೀಯ ರಾಜಧಾನಿ ವಲಯ'(ಎನ್‌ಸಿಆರ್)ದಲ್ಲಿ ಮಾತ್ರ ರಿಯಲ್ ಎಸ್ಟೇಟ್ ಹೂಡಿಕೆ ಕಳೆಗುಂದಿಲ್ಲ. ಭಾರಿ ಸಂಖ್ಯೆಯ ವಸತಿ ಯೋಜನೆಗಳು ಈ ಭಾಗದಲ್ಲಿ ಅನುಷ್ಠಾನಗೊಳ್ಳುತ್ತಿವೆ ಎನ್ನುತ್ತದೆ ಈ ಸಮೀಕ್ಷಾ ವರದಿ.ಇದರೊಟ್ಟಿಗೆ ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿರುವ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ರಿಯಲ್ ಎಸ್ಟೇಟ್ ವಲಯ ಮತ್ತೆ ಉತ್ತೇಜಿತವಾಗಲಿದೆ ಎಂಬ ಆಶಾಭಾವನೆಯನ್ನೂ ಸಮೀಕ್ಷೆ ವ್ಯಕ್ತಪಡಿಸಿದೆ. ಸಣ್ಣ ಸಣ್ಣ ಮಾರುಕಟ್ಟೆಗಳು ಹೂಡಿಕೆಗೆ ಅವಕಾಶ ಮಾಡಿಕೊಡಲಿವೆ ಎನ್ನುವುದು ಸಮೀಕ್ಷೆಯ ಒಟ್ಟಾರೆ ನಿರೀಕ್ಷೆಯೂ ಆಗಿದೆ.`ದೇವನಹಳ್ಳಿ ಆಕರ್ಷಣೆ'

`ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದಾಗಿನಿಂದ ರಿಯಲ್ ಎಸ್ಟೇಟ್ ಉದ್ಯಮದ ಗಮನವೆಲ್ಲಾ ಅತ್ತ ಕಡೆಯೇ ಕೇಂದ್ರೀಕೃತವಾಗಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿ -7ರಲ್ಲಿ ರಸ್ತೆ ಅಗಲ ಹೆಚ್ಚಿಸುವ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ರಿಯಲ್ ಎಸ್ಟೇಟ್ ಹೂಡಿಕೆ ಮತ್ತಷ್ಟು ಹೆಚ್ಚಲಿದೆ'.

- ಬ್ರೋತಿನ್ ಬ್ಯಾನರ್ಜಿ,  ಸಿಇಒ , ಟಾಟಾ ಹೌಸಿಂಗ್ ಕಂಪೆನಿ`ಹೂಡಿಕೆ ಪ್ರಮಾಣ ಏರಿಳಿತ'

`ಬೆಂಗಳೂರಿನ ಉತ್ತರ ವಿಭಾಗದಲ್ಲಿ ಮಾತ್ರ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಾಣುತ್ತಿದೆ. ಆದರೆ ಉಳಿದೆಡೆ ಹಿಂದಿನಷ್ಟು ಪ್ರಮಾಣದಲ್ಲಿ ಹೂಡಿಕೆ ಬರುತ್ತಿಲ್ಲ. ಭೂಸ್ವಾಧೀನ ಹಾಗೂ ಮಂಜೂರಾತಿಯಲ್ಲಿ ವಿಳಂಬವಾಗುವುದು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮದ ದೊಡ್ಡ ಸಮಸ್ಯೆ ಎನಿಸಿವೆ'.

- ಅವಿನಾಶ್ ರೆಡ್ಡಿ, ತಾನಿಷ್ಕ್ ಬಿಲ್ಡರ್ಸ್‌2014 ಆಶಾದಾಯಕ; ಕ್ರಿಸಿಲ್


ಮೌಲ್ಯಮಾಪನ ಸಂಸ್ಥೆ `ಕ್ರಿಸಿಲ್' ರಿಯಲ್ ಎಸ್ಟೇಟ್ ವಲಯಕ್ಕೆ 2014ನೇ ವರ್ಷ ಆಶಾದಾಯಕವಾಗಲಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಸದ್ಯ ಕುಂಟುತ್ತಿರುವ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ತಗ್ಗಲು ಏರುತ್ತಿರುವ ಬಡ್ಡಿದರ, ನಿರ್ಮಾಣ ವೆಚ್ಚ ದುಬಾರಿ ಆಗಿರುವುದೇ ಮುಖ್ಯ ಕಾರಣ ವಾಗಿದೆ ಎಂದು ಅಂದಾಜು ಮಾಡಿದೆ.2014ರಲ್ಲಿ ದೇಶದ `ಜಿಡಿಪಿ'(ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ) ಚೇತರಿಕೆ ಕಾಣಲಿದ್ದು, ಹಣದುಬ್ಬರ ತಹಬಂದಿಗೆ ಬರಲಿದೆ. ಪರಿಣಾಮ ಬಡ್ಡಿದರ ಇಳಿಮುಖವಾಗುವ ನಿರೀಕ್ಷೆ ಇದೆ. ಆಗ ರಿಯಲ್ ಎಸ್ಟೇಟ್ ಉದ್ಯಮವೂ ಮತ್ತೆ ಗರಿಗೆದರುವ ನಿರೀಕ್ಷೆ ಇದೆ ಎಂದು ಕ್ರಿಸಿಲ್ ಸಮೀಕ್ಷೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry