ಮಂಗಳವಾರ, ಏಪ್ರಿಲ್ 20, 2021
25 °C

ರಿಯಲ್ ಎಸ್ಟೇಟ್ ಉದ್ಯಮಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೊತ್ತನೂರು ಬಳಿಯ ಪ್ರಶಾಂತ್‌ನಗರದಲ್ಲಿ ಶನಿವಾರ ನಡೆದಿದೆ.  ಕುಮಾರ್ ಉರುಫ್ ನವೀನ್‌ಕುಮಾರ್ (30) ಮೃತಪಟ್ಟವರು. ಅವರ ಮದುವೆಯಾಗಿ 8 ವರ್ಷವಾಗಿತ್ತು ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು, ಪತ್ನಿ ದೀಪಿಕಾ ಮತ್ತು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದೀಪಿಕಾ ಅವರ ಸಂಬಂಧಿಕರ ಮಗನಾದ ಬಾಬು ಎಂಬುವರು ನವೀನ್‌ಕುಮಾರ್‌ರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಇದರಿಂದಾಗಿ ಬಾಬು ಅವರು, ಪತ್ನಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದೆಂದು ನವೀನ್‌ಕುಮಾರ್‌ಗೆ ಸಂದೇಹವಿತ್ತು ಎಂದು ಪೊಲೀಸರು ಹೇಳಿದ್ದಾರೆ.ಈ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ಶುಕ್ರವಾರ ರಾತ್ರಿಯೂ ಜಗಳವಾಗಿತ್ತು. ಅದೇ ವೇಳೆಗೆ ಮನೆಗೆ ಬಂದ ಬಾಬು ಜತೆಯೂ ನವೀನ್‌ಕುಮಾರ್ ವಾಗ್ವಾದ ನಡೆಸಿದ್ದರು.ಆ ನಂತರ ಎಲ್ಲರೂ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದರು. ಶನಿವಾರ ಬೆಳಿಗ್ಗೆ  ಎಚ್ಚರಗೊಂಡ ದೀಪಿಕಾ, ಪತಿಯ ಬಳಿ ಹೋದಾಗ ಅವರ ಮೂಗು ಮತ್ತು ಬಾಯಿಯಿಂದ ರಕ್ತ ಸುರಿಯುತ್ತಿದ್ದನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.ನವೀನ್‌ಕುಮಾರ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ನವೀನ್‌ಕುಮಾರ್ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

 

ಈ ನಡುವೆ ನವೀನ್‌ಕುಮಾರ್ ಪೋಷಕರು, ದೀಪಿಕಾ ಮತ್ತು ಬಾಬು ಅವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಪೋಷಕರು ದೂರು ನೀಡಿದರೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ~ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.