ಸೋಮವಾರ, ಮೇ 10, 2021
21 °C

ರಿಯಲ್ ಎಸ್ಟೇಟ್ ಕಡೆಗೆ ಜನರ ಒಲವು

ಪ್ರಜಾವಾಣಿ ವಾರ್ತೆ/ ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ತುಮಕೂರು: ನೋಂದಣಿ ದರ ಏರಿಕೆ ನಂತರ ಮಂದವಾಗಿದ್ದ ರಿಯಲ್ ಎಸ್ಟೇಟ್ ಚಟುವಟಿಕೆ ಈಚಿನ ದಿನಗಳಲ್ಲಿ ಮತ್ತೆ ಗರಿಗೆದರಿದೆ. ನೋಂದಣಿ ದರ ಪರಿಷ್ಕರಣೆಯನ್ನು ಸರ್ಕಾರ ಮರುಪರಿಶೀಲಿಸಬಹುದು ಎಂದು ಕೆಲ ಕಾಲ ಖರೀದಿ ಆಸೆ ಯನ್ನು ಮುಂದೂಡಿದ್ದ ಮಧ್ಯಮ ವರ್ಗ ನಿಧಾನವಾಗಿ ನಿವೇಶನ ಖರೀದಿಗೆ ಮುಂದಾಗಿದ್ದಾರೆ.ತುಮಕೂರಿಗೆ ಮಹಾನಗರ ಪಾಲಿಕೆ ಸ್ಥಾನಮಾನ ಸಿಗಲಿದೆ, ಊರುಕೆರೆ ಸಮೀಪ ಭಾರೀ ರೈಲ್ವೆ ಜಂಕ್ಷನ್ ಸ್ಥಾಪನೆಯಾಗ ಲಿದೆ, ಹೆಗ್ಗೆರೆ ಸಮೀಪದ ಸಿದ್ಧಾರ್ಥ ನಗರದಲ್ಲಿ ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣವಾಗಲಿದೆ, ಕುಣಿಗಲ್- ತುಮಕೂರು ರಸ್ತೆ ಅತ್ಯುತ್ತಮ ಗುಣಮಟ್ಟದ ರಸ್ತೆಯಾಗಿ ಮೇಲ್ದರ್ಜೆಗೇರಲಿದೆ ಇತ್ಯಾದಿ ಸುದ್ದಿಗಳು ರಿಯಲ್ ಎಸ್ಟೇಟ್ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಿವೆ.ನಗರದ ಹೃದಯ ವ್ಯಾಪ್ತಿಯಲ್ಲಿ ನಿವೇಶನ ದರ ಭಾರಿ ಪ್ರಮಾಣದಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬಗಳು ನಗರದ ಹೊರವಲಯದಲ್ಲಿ ನಿವೇಶನ ಖರೀದಿಗೆ ಒಲವು ತೋರುತ್ತಿವೆ. ಮನೆ ಕಟ್ಟುವ ಉದ್ದೇಶ ಕ್ಕಿಂತಲೂ ಹಣ ಹೂಡಿಕೆ ಉದ್ದೇಶವೇ ನಿವೇಶನ ಖರೀದಿಯ ಹಿಂದಿನ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ವಿಶೇಷ.ಮನೆ ಕಟ್ಟುವ ಉದ್ದೇಶದಿಂದ ನಿವೇಶನ ಖರೀದಿಸುವವರು ನಗರ ವ್ಯಾಪ್ತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಕೇವಲ ಬಂಡವಾಳ ಹೂಡಿಕೆ ದೃಷ್ಟಿಯಿಂದ ಅಥವಾ ಭವಿಷ್ಯದ ಆಪದ್ಧನ ಎಂದು ನಿವೇಶನ ಖರೀದಿಸಲು ಮುಂದಾಗುವವರು ನಗರದ ಕೇಂದ್ರ ಭಾಗದಿಂದ ಸುಮಾರು 10 ಕಿ.ಮೀ. ಸುತ್ತಳತೆಯಲ್ಲಿ ನಿವೇಶನ ತೋರಿಸಿದರೂ ಖರೀದಿಸಲು ಒಪ್ಪುತ್ತಾರೆ.ಈ ಹಿಂದೆ ನಗರದ ಹೊರವಲಯ ಎನಿಸಿಕೊಂಡಿದ್ದ ಜಯ ನಗರ, ಶೆಟ್ಟಿಹಳ್ಳಿ, ಮಂಜುನಾಥನಗರ, ಬಟವಾಡಿ, ಕ್ಯಾತ್ಸಂದ್ರ, ಶಿರಾಗೇಟ್, ರಿಂಗ್‌ರೋಡ್ ಇತ್ಯಾದಿ ಪ್ರದೇಶ ಗಳನ್ನು ನಗರ ಇದೀಗ ಬರಸೆಳೆದು ಅಪ್ಪಿಕೊಂಡಿದೆ.

 

ನಗರದ ವ್ಯಾಪ್ತಿ ಇದೀಗ ಕೋರಾ (ಶಿರಾ ರಸ್ತೆ), ಬೆಳಧರ (ಮಧುಗಿರಿ ರಸ್ತೆ), ಬೆಳಗುಂಬ (ದೇವರಾಯನದುರ್ಗ ರಸ್ತೆ), ಹಿರೇಹಳ್ಳಿ (ಬೆಂಗಳೂರು ರಸ್ತೆ), ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ (ಕುಣಿಗಲ್ ರಸ್ತೆ), ಮಲ್ಲಸಂದ್ರ (ಗುಬ್ಬಿರಸ್ತೆ) ಮತ್ತು  ಬುಗುಡನಹಳ್ಳಿಯನ್ನು (ಬೆಳ್ಳಾವಿ ರಸ್ತೆ) ಗಡಿಯಾಗಿ ಗುರುತಿಸಿಕೊಂಡಿದೆ. ಈ ವ್ಯಾಪ್ತಿಯಲ್ಲಿದ್ದ ಎಷ್ಟೋ ಹೊಲ, ಗದ್ದೆ, ತೋಟ ಬಡಾವಣೆಗಳಾಗಿ ಹಸಿರು ಕಳೆದುಕೊಂಡು ಬೋಳಾಗಿವೆ.ಬಸ್ ನಿಲ್ದಾಣವನ್ನು ಕೇಂದ್ರ ಎಂದು ಪರಿಗಣಿಸಿ ಒಂದು ವೃತ್ತ ಎಳೆದರೆ ಅಂದಾಜು 10 ಕಿ.ಮೀ ವ್ಯಾಪ್ತಿಯಲ್ಲಿ ಹತ್ತು ಹಲವು ಲೇಔಟ್‌ಗಳು ನಿರ್ಮಾಣವಾಗುತ್ತಿರುವುದು ಗೋಚ ರಿಸುತ್ತವೆ. ಈ ಮೊದಲು ಬಸ್ ನಿಲ್ದಾಣದಿಂದ ನಿವೇಶನಕ್ಕೆ ಇರುವ ಅಂತರವೇ ದರ ನಿಗದಿಯಲ್ಲಿ ಪ್ರಧಾನ ಅಂಶವಾಗಿ ಪರಿಗಣಿತವಾಗುತಿತ್ತು. ಕಳೆದ ಒಂದು ವರ್ಷದ ಹಿಂದೆ ಸಿಟಿ ಬಸ್‌ಗಳು ಓಡಾಟ ಪ್ರಾರಂಭಿಸಿದ ನಂತರ `ದೂರ~ ದೊಡ್ಡ ಸಮಸ್ಯೆಯಾಗಿ ಉಳಿಯಲಿಲ್ಲ.ಸಿಟಿ ಬಸ್ ಓಡಾಟಕ್ಕೆ ಮೊದಲು ರೂ. 500ರ ಗಡಿ ದಾಟದ ಜಯನಗರ ಬಡಾವಣೆಯ ನಿವೇಶನಗಳು ಈಗ ರೂ. 1000 ದಾಟಿವೆ. ಕೇವಲ ಹೂಡಿಕೆ ಉದ್ದೇಶದಿಂದ ನಿವೇಶನ ಖರೀದಿಸಿದ್ದವರು ಈ ಪ್ರದೇಶದಲ್ಲಿ ಇದೀಗ ಮನೆಗಳನ್ನು ಕಟ್ಟುತ್ತಿದ್ದಾರೆ.ನಿವೇಶನ ಬೆಲೆ ಏರಿಕೆ

ಬಡಾವಣೆ ನಿರ್ಮಾಣ, ನಿವೇಶನ ಖರೀದಿ ಚುರುಕಾಗಿ ರುವ ಪ್ರದೇಶಗಳ ಸರಾಸರಿ ಬೆಲೆ ಹೀಗಿದೆ (ಚದರ ಅಡಿಗೆ).* ಊರುಕೆರೆಯಿಂದ ಕೋರಾ- ರೂ. 200ರಿಂದ 250

* ರಾ.ಹೆ. 4ರಿಂದ ಬೆಳಗುಂಬ- ರೂ. 500ರಿಂದ 1500

* ಯಲ್ಲಾಪುರದಿಂದ ಬೆಳಧರ- ರೂ. 200ರಿಂದ 300

* ಕ್ಯಾತ್ಸಂದ್ರದಿಂದ ಹಿರೇಹಳ್ಳಿ- ರೂ. 350ರಿಂದ 1500

* ಗೂಳೂರಿನಿಂದ ಹೊನ್ನುಡಿಕೆ- ರೂ. 200ರಿಂದ 400

* ಭೀಮಸಂದ್ರ- ಮಲ್ಲಸಂದ್ರ- ರೂ. 200ರಿಂದ 500

* ಭೀಮಸಂದ್ರ- ಬುಗುಡನಹಳ್ಳಿ ರೂ. 200ರಿಂದ 450ವಂಚನೆ- ಎಚ್ಚರ

ರಿಯಲ್ ಎಸ್ಟೇಟ್ ಚಟುವಟಿಕೆ ಗರಿಗೆದರಿದ ಬೆನ್ನಲ್ಲೇ ಕೆಲವು ರಿಯಲ್ ಎಸ್ಟೇಟ್ ಏಜೆಂಟರು ಮೋಸದಾಟವನ್ನೂ ಚುರುಕುಗೊಳಿಸಿದ್ದಾರೆ. ತಮ್ಮ ಕಪಟ ಮಾತು, ಚುರುಕು ವರ್ತನೆಯಿಂದ ನಿವೇಶನಗಳ ಮಾಲೀಕರು ಮತ್ತು ಖರೀದಿದಾರರಿಬ್ಬರಿಗೂ ಪಂಗನಾಮ ಹಾಕುತ್ತಿದ್ದಾರೆ.ನಿವೇಶನದ ಮಾಲೀಕರಿಂದ ಮೂರು ಕಾಸಿಗೆ `ಅಗ್ರಿ ಮೆಂಟ್~ ಮಾಡಿಕೊಂಡು ಖರೀದಿದಾರರಿಂದ ಆರು ಕಾಸು ಪಡೆದು ಇಬ್ಬರನ್ನೂ ಏಕಕಾಲಕ್ಕೆ ವಂಚಿಸುತ್ತಿದ್ದಾರೆ. ನೋಂದಣಿ ಕಚೇರಿಯಲ್ಲೂ ನಿವೇಶನ ಮಾಲೀಕರು, ಖರೀದಿದಾರರ ನಡುವೆ ಮಾತುಕತೆಗೆ ಆಸ್ಪದ ಮಾಡಿ ಕೊಡುವುದಿಲ್ಲ. ಒಂದೇ ನಿವೇಶನವನ್ನು ಮೂರ‌್ನಾಲ್ಕು ಜನರಿಗೆ ಮಾರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.`ನಿವೇಶನ ಖರೀದಿಸುವ ಸಂದರ್ಭದಲ್ಲಿ ಖರೀದಿದಾರರು ರಿಯಲ್ ಎಸ್ಟೇಟ್ ಏಜೆಂಟರ ಮಾತನ್ನು ಸಂಪೂರ್ಣ ನಂಬಬಾರದು. ನಿವೇಶನದ ಮಾಲೀಕರನ್ನು ನೇರವಾಗಿ ಸಂಪರ್ಕಿಸಿ ವ್ಯವಹರಿಸಬೇಕು. ರಿಯಲ್ ಎಸ್ಟೇಟ್ ಏಜೆಂಟ್ ಎಷ್ಟು ಕಮಿಷನ್ ಪಡೆಯುತ್ತಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕು.

 

ಮೂಲ ದಾಖಲೆಗಳನ್ನು ಪರಿಶೀಲಿಸಿ- ಕಚೇರಿ ದಾಖಲೆಗಳೊಂದಿಗೆ ಪರಮಾರ್ಶಿಸಿದ ನಂತರವೇ ಮುಂದಿನ ಹೆಜ್ಜೆ ಇಡಬೇಕು. ರಿಯಲ್ ಎಸ್ಟೇಟ್ ಲೋಕದಲ್ಲಿ ಕೊಂಚ ಎಚ್ಚರ ತಪ್ಪಿದರೂ ಮುಳುಗಿಸಿಬಿಡುತ್ತಾರೆ~ ಎಂದು ಕಿವಿ ಮಾತು ಹೇಳುತ್ತಾರೆ ನೋಂದಣಿ ಕಚೇರಿ ಸಮೀಪ ಹಲವು ವರ್ಷದಿಂದ ಡೀಡ್ ರೈಟರ್ ಕೆಲಸ ಮಾಡುವ ರಾಜೇಂದ್ರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.