ರಿಯಲ್ ಎಸ್ಟೇಟ್: ರೂಪಾಯಿ ಪ್ರಭಾವ

7

ರಿಯಲ್ ಎಸ್ಟೇಟ್: ರೂಪಾಯಿ ಪ್ರಭಾವ

Published:
Updated:

ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕುಸಿತವು ರಿಯಲ್ ಎಸ್ಟೇಟ್ ಉದ್ಯಮ ಮೇಲೆ ಸಹ     ಪ್ರತಿಕೂಲ ಪರಿಣಾಮ ಬೀರಿದೆ. ಉಕ್ಕು ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ ಆಮದು ತುಟ್ಟಿಯಾಗಿದೆ. ಸರಕು ಸಾಗಾಣಿಕೆಗೆ ಈಗ ಮೊದಲಿಗಿಂತಲೂ ಹೆಚ್ಚಿನ ವೆಚ್ಚ ಭರಿಸಬೇಕಾಗಿದೆ. ಕಾರ್ಮಿಕರ ವೇತನ ಹೆಚ್ಚಿದೆ. ಒಳಾಂಗಣ ವಿನ್ಯಾಸ, ವಾಸ್ತು ಸೇರಿದಂತೆ ಹೊರಗುತ್ತಿಗೆ ನೀಡುವ  ಸೇವೆಗಳಿಗೆ ಹೆಚ್ಚುವರಿ ಮೊತ್ತ ಪಾವತಿಸಬೇಕಿದೆ. ಇದರಿಂದ ಒಟ್ಟಾರೆ ಯೋಜನೆ  ವಿಳಂಬವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.`ಕಟ್ಟಡ ನಿರ್ಮಾಣದಲ್ಲಿ ಬಳಸುವ ಕೆಲವು ಉಪಕರಣಗಳು ಮತ್ತು ಸುಧಾರಿತ ತಂತ್ರಜ್ಞಾನಭಾರತದಲ್ಲಿ ಲಭ್ಯವಿಲ್ಲ. ಇವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ರೂಪಾಯಿ ವಿನಿಮಯ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದ ಹಿನ್ನೆಲೆಯಲ್ಲಿ ಈ ಸೇವೆಗಳಿಗೆ ನಿರ್ಮಾಣಗಾರರು ಹೆಚ್ಚುವರಿ ಮೊತ್ತ ಪಾವತಿಸಬೇಕಿದೆ' ಎನ್ನುತ್ತಾರೆ `ಎಸ್‌ವಿಪಿ' ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಜಿಂದಾಲ್.ರೂಪಾಯಿ ಅಪಮೌಲ್ಯದಿಂದ ಒಟ್ಟಾರೆ ಕಾಮಗಾರಿ ವಿಳಂಬವಾಗಿದೆ. ಹಲವು ಯೋಜನೆಗಳನ್ನು ಮುಂದೂಡಲಾಗಿದೆ. ಹೂಡಿಕೆದಾರರು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ವಲಯದಲ್ಲಿ ನೇಮಕಾತಿ ಕೂಡ ಕಡಿಮೆಯಾಗಿದೆ.ಬೆಂಗಳೂರು, ಅಹಮದಾಬಾದ್, ನವದೆಹಲಿಯಲ್ಲಿ ನಿವೇಶನಗಳ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಗ್ರಾಹಕರು ಕೂಡ ಇನ್ನಷ್ಟು ದಿನ `ಕಾದು ನೋಡುವ ತಂತ್ರ'ಕ್ಕೆ ಮೊರೆ ಹೋಗಿದ್ದಾರೆ ಎನ್ನುತ್ತದೆ 99 ಏಕರ್ಸ್ ಡಾಟ್ ಕಾಂ ನಡೆಸಿದ ಸಮೀಕ್ಷೆ.ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಬ್ಯಾಂಕುಗಳ ನಗದು ಮೀಸಲು ಅನುಪಾತ (ಸಿಆರ್‌ಆರ್) ಸಹ ಇಳಿಕೆಯಾಗಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಕಡಿಮೆಯಾಗಿದೆ. ಹೊಸ ಸಾಲ ಲಭಿಸುತ್ತಿಲ್ಲ ಎಂದು  ಈ ಅಧ್ಯಯನ ವಿವರಿಸಿದೆ. ಗ್ರಾಹಕರು ಮತ್ತು ನಿರ್ಮಾಣಗಾರರು ಇಬ್ಬರಿಗೂ ರೂಪಾಯಿ ಅಪಮೌಲ್ಯದ ಬಿಸಿ ತಟ್ಟಿದೆ. ಗ್ರಾಹಕರು ಹೊಸ ಗೃಹ ಖರೀದಿ ಮುಂದೂಡಿದರೆ, ನಿರ್ಮಾಣಗಾರರು ಹೊಸ ಹೂಡಿಕೆ ಮುಂದೂಡುತ್ತಿದ್ದಾರೆ. ಈಗಾಗಲೇ ಗೃಹ ಖರೀದಿಸಿ `ಇಎಂಐ' ಪಾವತಿಸುತ್ತಿರುವವರು ಹೆಚ್ಚುವರಿ ಮೊತ್ತ ತೆತ್ತಬೇಕಾಗಿದೆ.`ಎನ್‌ಆರ್‌ಐ' ಲಾಭ

ರೂಪಾಯಿ ವಿನಿಮಯ ಮೌಲ್ಯ ಕುಸಿತವು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ತಾತ್ಕಾಲಿಕ ಲಾಭ ತಂದಿದೆ. ಭಾರತದಲ್ಲಿ ಗೃಹ, ನಿವೇಶನ ಖರೀದಿಸಬೇಕೆಂದು ಯೋಜನೆ ಹಾಕಿಕೊಂಡಿದ್ದವರಿಗೆ ಈಗ ಒಟ್ಟಾರೆ ದರದಲ್ಲಿ ಶೇ 10ರಿಂದ 15ರಷ್ಟು ಲಾಭ ಲಭಿಸುತ್ತಿದೆ.ಕಟ್ಟಡ ನಿರ್ಮಾಣಗಾರರು ಅನಿವಾಸಿ ಗ್ರಾಹಕರಿಗೆ ಮುಂಗಡ ಕಾಯ್ದಿರಿಸುವಿಕೆಯಲ್ಲಿ ರಿಯಾಯ್ತಿ ಪ್ರಕಟಿಸಿದ್ದಾರೆ.  ಇನ್ನೊಂದೆಡೆ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಅನಿವಾಸಿ ಹೂಡಿಕೆ ಕೂಡ ಹೆಚ್ಚಿದೆ. ಹಣ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.`ಅನಿವಾಸಿ ಗ್ರಾಹಕರು ಭಾರತದಲ್ಲಿ ಗೃಹ, ನಿವೇಶನ ಖರೀದಿಸಬೇಕಾದರೆ ಕನಿಷ್ಠ ಮೂರು ತಿಂಗಳಾದರೂ ( ಒಟ್ಟಾರೆ ಪ್ರಕ್ರಿಯೆ ಪೂರ್ಣಗೊಳ್ಳಲು) ಬೇಕಾಗುತ್ತದೆ. ಅಷ್ಟರೊಳಗೆ ರೂಪಾಯಿ ಮೌಲ್ಯ ಸ್ಥಿರಗೊಂಡಿರುತ್ತದೆ. ಹೀಗಾಗಿ ಹೆಚ್ಚಿನ ಲಾಭವೇನೂ ಲಭಿಸುವುದಿಲ್ಲ.ಈಗಿನದು ತಾತ್ಕಾಲಿಕ ಲಾಭ ಮಾತ್ರ. ನಿರ್ಮಾಣ ಹಂತದ ಕಟ್ಟಡಗಳಿಗೆ ಮುಂಗಡ ಪಾವತಿ ಮಾಡಿದರೂ, ನಿರ್ಮಾಣ ಪೂರ್ಣಗೊಂಡ ನಂತರ ಅದೇ ಬೆಲೆಗೆ ಸಿಗುತ್ತದೆ ಎಂಬ ಖಾತ್ರಿ  ಇಲ್ಲ. ಒಟ್ಟಾರೆ ರೂಪಾಯಿ ಅಪಮೌಲ್ಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದೆ' ಎನ್ನುತ್ತಾರೆ ಶ್ರೀ ಬಿಲ್ಡರ್ಸ್ ಸಂಸ್ಥೆಯ ಮುಖ್ಯಸ್ಥ ಸುಮಿತ್ ನಾಗ್‌ಪಾಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry