ಮಂಗಳವಾರ, ಮಾರ್ಚ್ 2, 2021
31 °C

ರಿಯಾಯಿತಿ ದರದಲ್ಲಿ ಶುದ್ಧ ನೀರು

ಪ್ರಜಾವಾಣಿ ವಾರ್ತೆ/ ಮುಕ್ತೇಶ ಕೂರಗುಂದಮಠ Updated:

ಅಕ್ಷರ ಗಾತ್ರ : | |

ರಿಯಾಯಿತಿ ದರದಲ್ಲಿ ಶುದ್ಧ ನೀರು

ರಾಣೆಬೆನ್ನೂರು: ಗ್ರಾಮೀಣ ಪ್ರದೇಶಗಳಲ್ಲಿ ಬೊರ್‌ವೆಲ್ ನೀರು ಫ್ಲೋರೈಡ್‌ಯುಕ್ತವಾಗಿದ್ದು, ಸಾರ್ವಜನಿಕರು ಕುಡಿಯುತ್ತಿರುವುದರಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಅಲ್ಲದೆ ಕೈಕಾಲು, ಮಂಡಿ ನೋವು ಕಾಣಿಸಿಕೊಂಡು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಆದರೆ ಪ್ಲೋರೈಡ್‌ಯುಕ್ತ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲು ತಾಲ್ಲೂಕಿನ ಕರೂರು ಗ್ರಾಮ ಪಂಚಾಯ್ತಿ ಹೊಸ ಮಾರ್ಗವೊಂದನ್ನು ಹುಡುಕಿದೆ. ಗ್ರಾಮಸ್ಥರಿಗೆ ಕೇವಲ 1ರೂಪಾಯಿಗೆ 1 ಲೀಟರ್ ನೀರನ್ನು ರಿಯಾಯಿತಿ ದರದಲ್ಲಿ 10 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ತಾಲ್ಲೂಕಿನ ಇತರ ಗ್ರಾ.ಪಂ.ಗಳಿಗೆ  ಕರೂರ ಗ್ರಾ.ಪಂ. ಮಾದರಿಯಾಗಿದೆ. ಆ ಮೂಲಕ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮೊದಲ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿದೆ.ಕುಡಿಯುವ ನೀರಿನಿಂದ ಮನುಷ್ಯನಿಗೆ ಹಲವು ರೋಗಗಳು ಬರುವ ಸಾಧ್ಯತೆಗಳಿರುವ ಈ ದಿನಮಾನಗಳಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ದೊರಕದೆ ಸಾರ್ವಜನಿಕರು ಬವಣೆ ಪಡುತ್ತಿರುವುದನ್ನು ಮನಗಂಡು ಗ್ರಾ.ಪಂ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಈ ಯೋಜನೆಗೆ ಕೈ ಹಾಕಿ ಯಶಸ್ವಿಯೂ ಆಗಿದ್ದಾರೆ. ಈ ಯೋಜನೆ ಜಾರಿಗೊಳಿಸಲು ಕಳೆದ 6 ತಿಂಗಳ ಹಿಂದೆ ಗ್ರಾ.ಪಂ  ನಿರ್ಧರಿಸಿ ಕಾರ್ಯೋನ್ಮುಕರಾದರು. ಗದಗ ಜಿಲ್ಲೆಯ ಕೆ.ಎಚ್.ಪಾಟೀಲ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವೀಸ್ ಸೂಸೈಟಿಯ ವಾಟರ್ ಟೆಕ್ನಾಲಜಿಯಿಂದ ಶುದ್ಧೀಕರಣ ಯಂತ್ರವನ್ನು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿ ಕುಡಿಯುವ ನೀರು ಸರಬುರಾಜು ಮಾಡಲಾಗುತ್ತಿದೆ.ಈ ಘಟಕದಲ್ಲಿ ಒಂದು ಮೇಲ್ಪಟ್ಟದ ನೀರಿನ ತೊಟ್ಟಿ, ಒಂದು ಸ್ಟೀಲ್ ಟ್ಯಾಂಕ್, ಒಂದು ಫೀಲ್ಟರ್ ಮಷೀನ್, ಒಂದು ಕ್ಯಾಲ್ಸಿಯಮ್ ಫೀಲ್ಟರ್‌ಗಳ ನೆರವಿನಿಂದ ಮೂರು ಹಂತಗಳಲ್ಲಿ ಗಡಸು ನೀರನ್ನು ಶುದ್ಧಿಕರಿಸಿ, ನಂತರ ಶುದ್ಧ ನೀರನ್ನು ಕಳುಹಿಸುವ ವ್ಯವಸ್ಥೆಯಿದೆ. ನಿತ್ಯ 250 ರಿಂದ 300 ಕುಟುಂಬಗಳು ಈ ನೀರನ್ನು ಬಳಸಬಹುದು.`ಇದರಿಂದ ತಿಂಗಳಿಗೆ 9 ಸಾವಿರ ರೂಪಾಯಿ ಸಂಗ್ರಹವಾಗುತ್ತಿದೆ, ಕೆ.ಎಚ್.ಪಾಟೀಲ ಪ್ರತಿಷ್ಠಾನದ ಸೊಸೈಟಿಗೆ ಪ್ರತಿ ತಿಂಗಳು 2800 ರೂಪಾಯಿ ಹಣವನ್ನು ಸಂದಾಯ ಮಾಡುತ್ತಿದೆ. ವಿದ್ಯುತ್ ಬಿಲ್ ಹಾಗೂ ಶುದ್ಧೀಕರಣ ಘಟಕದ ನಿರ್ವಹಣೆ ಸಿಬ್ಬಂದಿ ವೆಚ್ಚ ಸೇರಿ ತಿಂಗಳಿಗೆ ಗ್ರಾ.ಪಂಗೆ ಒಟ್ಟು 3 ಸಾವಿರ ರೂಪಾಯಿ ಉಳಿಯುತ್ತಿದೆ' ಎಂದು ಗ್ರಾಪಂ  ಅಧ್ಯಕ್ಷೆ ಗೀತಾ ಮುದಿಗೌಡ್ರ ಮತ್ತು ಸದಸ್ಯ ಜಮಾಲಸಾಬ ತಾವರಗೊಂದಿ ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.