ಭಾನುವಾರ, ಅಕ್ಟೋಬರ್ 20, 2019
25 °C

ರಿಯಾಯಿತಿ ಸ್ಥಗಿತ: 12 ರಂದು ರೈತರ ಧರಣಿ

Published:
Updated:

ಹುಣಸೂರು: ರೈತರಿಗೆ ಸರ್ಕಾರ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದ ಕೃಷಿ ಉಪಕರಣ ಮತ್ತು ತುಂತುರು ನೀರಾವರಿ ಸೆಟ್‌ಗಳನ್ನು ಒಂದು ವರ್ಷದಿಂದ ನಿಲ್ಲಿಸಿದೆ. ಇದರಿಂದ ಹಲವಾರು ರೈತರು ಅತಂತ್ರರಾಗಿದ್ದಾರೆ.ಇದನ್ನು ಖಂಡಿಸಿ ಪಟ್ಟಣದ ಕೃಷಿ ಇಲಾಖೆ ಎದುರು ಜನವರಿ 12ರಂದು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೃಷಿ ಉಪಕರಣ, ಹನಿ ನೀರಾವರಿ ಮತ್ತು ತುಂತುರು ನೀರಾವರಿಗಳಿಗೆ ರಿಯಾಯಿತಿ ಬಿಡುಗಡೆ ಮಾಡದ ಕಾರಣ, ಕೃಷಿ ಉಪಕರಣಗಳು ರೈತರ ಕೈಗೆ ನಿಲುಕದಂತಾಗಿವೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಟ್ರ್ಯಾಕ್ಟರ್‌ಗೆ 1 ಲಕ್ಷ ರೂ. ರಿಯಾಯಿತಿ ಮತ್ತು ಸಾಲದ ಬಡ್ಡಿ ದರ ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಈ ಘೋಷಣೆ ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದರು.`ವಿದ್ಯುತ್ ಅಭಾವ ಎದುರಿಸುತ್ತಿರುವ ರೈತರು, ತುಂತುರು ನೀರಾವರಿ ಅವಲಂಬಿಸಿ ಬೇಸಿಗೆಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ತುಂತುರು ನೀರಾವರಿಯಿಂದ ಬಹುತೇಕ ಸಮಸ್ಯೆ ನಿವಾರಣೆ ಆಗಿತ್ತು. 2010-11ರಿಂದ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದ ತುಂತುರು ನೀರಾವರಿ ಸೆಟ್ ರದ್ದು ಮಾಡಲಾಗಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ~ ಎಂದರು.ಕೃಷಿ ಇಲಾಖೆ ವಿತರಣೆ ಮಾಡುತ್ತಿರುವ ಬಿತ್ತನೆ ಬೀಜ ಕೂಡ ರೈತರಿಗೆ ಸಮಪರ್ಕವಾಗಿ ಸರಬರಾಜು ಆಗುತ್ತಿಲ್ಲ. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಖಾಸಗಿ ಅಂಗಡಿಯಲ್ಲಿ ಹೆಚ್ಚು ಬೆಲೆಗೆ ಖರೀದಿಸಬೇಕಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರದ ಅಂಗಡಿ ಮಾಲೀಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳದೆ ಅವರು ಹೇಳಿದಂತೆ ಕುಣಿದು ರೈತರಿಗೆ ಕಳಪೆ ಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸುತ್ತಿದ್ದಾರೆ ಎಂದು ಹೊಸೂರು ಕುಮಾರ್ ದೂರಿದರು.

ಸರ್ಕಾರ ರೂಪಿಸಿರುವ `ಸುವರ್ಣ ಭೂಮಿ~ ಯೋಜನೆಯಲ್ಲಿ ಉತ್ತಮ ಬೇಸಾಯ ಮಾಡುವ ರೈತರಿಗೆ ಆರ್ಥಿಕ ಸಹಾಯ ನೀಡಲಿ ಎಂದರು.ಸೇತುವೆ ದುರಸ್ತಿ ಮಾಡಿ: ಹನುಮಂತಪುರ ನಾಲೆ ಏರಿ ಮತ್ತು ಈ ಭಾಗದಲ್ಲಿ ಬರುವ 4 ಸೇತುವೆ ಕುಸಿದು ವರ್ಷ ಕಳೆದಿದ್ದರೂ ಕಾಮಗಾರಿ ತೆಗೆದುಕೊಂಡಿಲ್ಲ. ಇದರಿಂದಾಗಿ ರೈತರು 8 ಕಿ.ಮೀ. ಸುತ್ತಿಕೊಂಡು ಗದ್ದೆ ಬಯಲಿಗೆ ಬರಬೇಕಾಗಿದೆ. ಆದ್ದರಿಂದ ಆದಷ್ಟುಬೇಗ ಸೇತುವೆ ದುರಸ್ತಿ ಮಾಡಬೇಕು. ಅಲ್ಲದೇ ಲಕ್ಷ್ಮಣತೀರ್ಥ ನದಿಯ ನಾಲೆಯಲ್ಲಿ ತುಂಬಿರುವ ಹೂಳು ತೆಗೆಯುವ ಕಾಮಗಾರಿಗೆ ಶಾಸಕರು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.ತಾಲ್ಲೂಕಿನಲ್ಲಿ ಹಲವಾರು ವರ್ಷದಿಂದ ಸರ್ಕಾರಿ ಗೋಮಾಳವನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ನೀಡಬೇಕು. ಗೋಮಾಳ ಎಂದು ಕಂದಾಯ ಇಲಾಖೆಯಲ್ಲಿ ದಾಖಲೆ ಇದ್ದರೂ ವಾಸ್ತವವಾಗಿ ರೈತರು ಆ ಸ್ಥಳವನ್ನು 40-50 ವರ್ಷದಿಂದ ಸಾಗುವಳಿ ಮಾಡುತ್ತಿದ್ದಾರೆ. ಈ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುವುದರಿಂದ ತಾಲ್ಲೂಕಿನಲ್ಲಿ ಶಾಂತಿ ಕದಡಲಿದೆ. ಈ ಸಂಬಂಧ ಕಂದಾಯ ಇಲಾಖೆ ಮತ್ತು ಶಾಸಕರು ಕುಳಿತು ತೀರ್ಮಾನಕ್ಕೆ ಬರಬೇಕಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಣ್ಣ, ರಾಮೇನಹಳ್ಳಿ ಶ್ರೀನಿವಾಸ್ ಮತ್ತು ಬಿ.ಎಸ್. ರಘು ಇದ್ದರು.

Post Comments (+)