ಗುರುವಾರ , ನವೆಂಬರ್ 14, 2019
18 °C
ನಾದದ ಬೆನ್ನೇರಿ...

ರಿಯಾಲಿಟಿ ಪ್ರತಿಭೆಗಳನ್ನಿತ್ತ ಸಂಚಾರಿ ಮೇಷ್ಟರ ಶಾಲೆ

Published:
Updated:

`ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ..' ಭಕ್ತಿರಸ ಸೂಸುವ ಈ ಜನಪ್ರಿಯ ಹಾಡಿಗೆ ಮನಸೋಲದವರಾರು? `ಹಂಸಧ್ವನಿ' ರಾಗದಲ್ಲಿರುವ ಈ ಗೀತೆಯ ಆರೋಹಣ, ಅವರೋಹಣ, ಯಾವ ರಾಗದಿಂದ ಜನ್ಯವಾಗಿದೆ ಇವೇ ಮುಂತಾದ ಶಾಸ್ತ್ರ ಭಾಗವನ್ನು ಹೇಳಿಕೊಟ್ಟ ನಂತರ ರಾಗಕ್ಕೆ ಅನುಸಾರವಾಗಿ ಹಾಡನ್ನು ಹೇಳಿಕೊಡುತ್ತಿದ್ದರು ಸುಗಮ ಸಂಗೀತ ಗಾಯಕ ನರಹರಿ ದೀಕ್ಷಿತ್ ಮಂಚಾಲೆ. ಇದು ತ್ಯಾಗರಾಜನಗರದಲ್ಲಿರುವ ಸೃಜನ ಸಂಗೀತ ಶಾಲೆಯಲ್ಲಿನ ದೃಶ್ಯವಾದರೆ, ಬನಶಂಕರಿಯಲ್ಲಿರುವ ಇದೇ ಶಾಲೆಯ ಶಾಖೆಯಲ್ಲಿ ಭಾವಗೀತೆ, ನಾಡಗೀತೆಗಳ ಪಾಠ.ಅದಾಗಿ ಇನ್ನೊಂದು ದಿನ ಸಂಗೀತ ಶಿಕ್ಷಕ ಹೋಗುವುದು ಪದ್ಮನಾಭನಗರಕ್ಕೆ. ಅಲ್ಲಿ ದೇಶಭಕ್ತಿಗೀತೆಯಾದರೆ ಜಯನಗರದ ಸೃಜನ ಸಂಗೀತ ಶಾಲೆಯ ಶಾಖೆಯಲ್ಲಿ ರಂಗಗೀತೆ. ಇವೆಲ್ಲ ಪದೇಪದೇ ಪುನರಾವರ್ತನೆಯಾಗುತ್ತವೆ. ಹೀಗೆ ನಗರದ ಬೇರೆ ಬೇರೆ ಶಾಖೆಗಳಲ್ಲಿ ಒಬ್ಬರೇ ಶಿಕ್ಷಕ ಸಂಗೀತ ಹೇಳಿಕೊಡುತ್ತಾರೆ. ಈ ಸಂಗೀತ ಶಾಲೆಗೆ ಇದೀಗ 18 ವರ್ಷ ತುಂಬಿದೆ. ಎಲ್ಲ ಶಾಖೆಗಳಲ್ಲಿ 400ಕ್ಕೂ ಹೆಚ್ಚು ವಿವಿಧ ವಯೋಮಾನದ ಮಕ್ಕಳಿದ್ದಾರೆ.`ಹಾಡು ಕಲಿಯಿರಿ, ಕಲಿತು ಹಾಡಿರಿ, ಕಲಿತು ಕಲಿಸಿರಿ' ಎಂಬುದು ಸೃಜನ ಸಂಗೀತ ಶಾಲೆಯ ಧ್ಯೇಯ. 1995ರಲ್ಲಿ ನಾಲ್ಕೇ ನಾಲ್ಕು ವಿದ್ಯಾರ್ಥಿಗಳೊಂದಿಗೆ ಸಣ್ಣದೊಂದು ಕೊಠಡಿಯಲ್ಲಿ ಆರಂಭವಾದ ಸೃಜನ ಸಂಗೀತ ಶಾಲೆ ಇದೀಗ 16 ಶಾಖೆಗಳನ್ನು ಹೊಂದಿದೆ. ಇಲ್ಲಿ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ರಂಗಗೀತೆ ಪಾಠ ಹೇಳಿಕೊಡುತ್ತಾರೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಾಗಗಳನ್ನು ಆಧರಿಸಿ ಇಲ್ಲಿ ಹೇಳಿಕೊಡುವ ಸುಗಮ ಸಂಗೀತ ಪಾಠ ಆಧುನಿಕ ಮನೋಭಾವದ ಮಕ್ಕಳಿಗೆ ಆಕರ್ಷಣೀಯವಾಗಿರುತ್ತದೆ.ವಿವಿಧ ಶಾಖೆಗಳಲ್ಲಿ ವಾರಕ್ಕೆ ಎರಡು ದಿನ ಕ್ಲಾಸ್‌ಗಳಿರುತ್ತವೆ. ಒಂದು ಶಾಖೆಯಲ್ಲಿ ಎರಡು ಗಂಟೆ ಅವಧಿ ಮಾತ್ರ ತರಗತಿ ನಡೆಯುತ್ತದೆ. ಗಾಂಧಿಬಜಾರ್, ಹನುಮಂತನಗರ, ಗಿರಿನಗರ, ಮಲ್ಲೇಶ್ವರಂ, ನಂದಿನಿ ಬಡಾವಣೆ, ಜಯನಗರ ನಾಲ್ಕನೇ ಬ್ಲಾಕ್, 7ನೇ ಬ್ಲಾಕ್, ತ್ಯಾಗರಾಜನಗರ, ಕತ್ರಿಗುಪ್ಪೆ, ಬನಶಂಕರಿ, ಪದ್ಮನಾಭನಗರ, ಚಿಕ್ಕಲಸಂದ್ರ, ಗೌರವ ನಗರ, ಕೋಣನಕುಂಟೆಗಳಲ್ಲಿ ಸೃಜನ ಸಂಗೀತ ಶಾಲೆಯ ಶಾಖೆಗಳಿವೆ.`ಇಲ್ಲಿ ಕಲಿತ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಎಸ್.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ `ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧೆಯ ಕೊನೆಯ ಹಂತದವರೆಗೂ ತಲುಪಿದವರಿದ್ದಾರೆ.ಬಹುಮಾನ ಪಡೆದ ಮಕ್ಕಳೂ ಇದ್ದಾರೆ. ಸುಮಾರು 80 ವಿದ್ಯಾರ್ಥಿಗಳು ಈಗ ಸಂಗೀತದಲ್ಲಿ ವಿದ್ವತ್‌ಪೂರ್ಣ ಸಾಧನೆ ಮಾಡಿದ್ದು, ಪುಟ್ಟ ಮಕ್ಕಳಿಗೆ ಪಾಠ ಹೇಳಿಕೊಡುವ ಮಟ್ಟಿಗೆ ತಯಾರಾಗಿದ್ದಾರೆ' ಎಂದು ವಿವರ ನೀಡುತ್ತಾರೆ ನರಹರಿ ದೀಕ್ಷಿತ್.ಮೈಕ್ ಹಿಡಿದ ಮಕ್ಕಳ ಸಂಭ್ರಮ

ಇಲ್ಲಿ ಕಲಿತ ಮಕ್ಕಳಿಗೆ ಮೈಕ್ ಹಿಡಿದು ಹಾಡುವುದೆಂದರೆ ರೋಮಾಂಚನ. ಸೃಜನ ಸಂಗೀತ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿಯೊಬ್ಬರೂ ಮೈಕ್ ಹಿಡಿದು ಹಾಡಬೇಕು. ಹೀಗಾಗಿ ವೇದಿಕೆ ಮೇಲೆ ಸುಗಮ ಸಂಗೀತ ಗಾಯನ ಇಲ್ಲಿ ಕಲಿಯುವ ಮಕ್ಕಳಿಗೆ ಸಲೀಸು.ಅದು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಈ-ಟೀವಿಯಲ್ಲಿ ನಡೆಸಿಕೊಡುತ್ತಿದ್ದ `ಎದೆ ತುಂಬಿ ಹಾಡುವೆನು' ಕಾರ್ಯಕ್ರಮಕ್ಕಾಗಿ ವೀಕ್ಷಕರು ಕಾಯುತ್ತಿದ್ದ ಕಾಲ. ಅತ್ಯಂತ ಹೆಚ್ಚು ಜನ ವೀಕ್ಷಿಸುತ್ತಿದ್ದ ಈ ಕಾರ್ಯಕ್ರಮದಲ್ಲಿ ಪುಟ್ಟ ಪುಟ್ಟ ಮಕ್ಕಳು ಮೈಕ್ ಹಿಡಿದು ವೇದಿಕೆಗೆ ಬಂದರೆ ಎಸ್‌ಪಿ ಆತ್ಮೀಯವಾಗಿ ಮಕ್ಕಳನ್ನು ಮೊದಲು ಕೇಳುತ್ತಿದ್ದುದು ಮಗುವಿನ ಹೆಸರು ಮತ್ತು ಗುರುಗಳ ಹೆಸರು. ಹಲವಾರು ಎಪಿಸೋಡ್‌ಗಳಲ್ಲಿ ಅನೇಕ ಮಕ್ಕಳು ಹೇಳುತ್ತಿದ್ದುದು ಗುರುಗಳ ಹೆಸರು ನರಹರಿ ದೀಕ್ಷಿತ್ ಎಂದು. ರಿಯಾಲಿಟಿ ಶೋಗಳಲ್ಲಿ ಸುಗಮ ಸಂಗೀತ, ಭಕ್ತಿಗೀತೆಗಳನ್ನು ಹಾಡುವವರಲ್ಲಿ ನರಹರಿ ದೀಕ್ಷಿತ್ ಅವರ ಶಿಷ್ಯರದ್ದೇ ಸಿಂಹಪಾಲು.`ನಾನು ವಾರದಲ್ಲಿ ಒಂದು ದಿನ ಕೂಡ ರಜೆ ತೆಗೆದುಕೊಳ್ಳುವುದಿಲ್ಲ. ಹುಷಾರು ತಪ್ಪಿದರೂ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗುತ್ತೇನೆ. ತೀರಾ ಕೈಲಾಗದಿದ್ದರೆ ಹಿರಿಯ ಶಿಷ್ಯರಿಗೆ ಕಲಿಸುವಂತೆ ಹೇಳಿ ಪಕ್ಕದಲ್ಲೇ ಕುಳಿತು ಸಲಹೆ ಕೊಡುತ್ತೇನೆ. ನನ್ನ ಈ ಶ್ರದ್ಧೆ ಮಕ್ಕಳಲ್ಲೂ ಬಂದುಬಿಟ್ಟಿದೆ. ಏನೇ ಕೆಲಸವಿದ್ದರೂ ಮಕ್ಕಳು ಸಂಗೀತ ಕ್ಲಾಸ್‌ಗೆ ಮಾತ್ರ ಚಕ್ಕರ್ ಹಾಕುವುದೇ ಇಲ್ಲ. ಈ `ಸಂಗೀತ ಶಿಸ್ತು' ಹೊಸದಾಗಿ ಕಲಿಯುವವರಿಗೆ ಪ್ರೇರಣೆ ನೀಡುತ್ತದೆ.ಪರಿಶ್ರಮ, ಹಾಡಬೇಕು ಎನ್ನುವ ತುಡಿತ ಹೆಚ್ಚುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಸೃಜನ ಸಂಗೀತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಸಾಮಾನ್ಯವಾಗಿ ಒಂದು ಶಾಖೆಗೆ ಹೆಚ್ಚೆಂದರೆ 25 ಮಕ್ಕಳಿಗಷ್ಟೇ ಅವಕಾಶ. ಅದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಕಲಿಸುವುದು ಕಷ್ಟ. ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ಸಲುವಾಗಿ ಈ ರೀತಿ ಮಾಡುತ್ತೇವೆ' ಎಂದು ಹೇಳುತ್ತಾರೆ ಗಾಯಕ, ಸಂಗೀತ ಶಿಕ್ಷಕ ನರಹರಿ ದೀಕ್ಷಿತ್.ಮಲೆನಾಡಿನಿಂದ ನಗರಕ್ಕೆ

ನರಹರಿ ದೀಕ್ಷಿತ್ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಗ್ರಾಮೀಣ ಪ್ರದೇಶದ ಮಂಚಾಲೆಯವರು. ಬಾಲ್ಯದ ವಿದ್ಯಾಭ್ಯಾಸವನ್ನು ಊರಲ್ಲೇ ಪೂರೈಸಿ ಬಿ.ಎ. ಪದವಿಯನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ, ನಂತರ ಎರಡು ವರ್ಷ ಎಲ್.ಎಲ್.ಬಿ ಪದವಿ ಓದಿ, ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಶಾಲಾ ಕಾಲೇಜು ದಿನಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಅನೇಕ ಬಹುಮಾನ ಗಳಿಸಿದವರು.ನ್ಯಾಷನಲ್ ಕಾಲೇಜಿನಲ್ಲಿ ದಿ. ಎಚ್. ನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ಬೆಳೆದ ಇವರು ತಮ್ಮ ಉದ್ಯೋಗ ನಿಲ್ಲಿಸಿ ಹವ್ಯಾಸವಾಗಿದ್ದ ಸುಗಮ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಈ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಇವರು ಸ್ಥಾಪಿಸಿದ `ಸಂಚಾರಿ ಸಂಗೀತ ಶಾಲೆ' ಒಂದು ಅಪರೂಪದ ಯಶಸ್ವೀ ಪ್ರಯೋಗ. ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಕಲಾಪೋಷಕರ ಮನೆಗಳಲ್ಲಿ, ವಾರದ ಬೇರೆ ಬೇರೆ ದಿನಗಳಲ್ಲಿ ಸಂಗೀತ ಪಾಠ ಮಾಡುತ್ತಾರೆ.  ದಿ. ಜಿ.ವಿ. ಅತ್ರಿ ಸ್ಮರಣಾರ್ಥ ನೀಡುವ ಉಪಾಸನಾ ಪ್ರಶಸ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಸನ್ಮಾನ, ಸ್ಪಂದನ  ಪ್ರಶಸ್ತಿ, ಭಾವಯಾನ ಪ್ರಶಸ್ತಿ, ಗಾನ ಕಲಾಭಿಜ್ಞ ಕಲಾ ಕೌಸ್ತುಭ ಪ್ರಶಸ್ತಿ ಇವರಿಗೆ ಲಭಿಸಿದೆ.ವಿಳಾಸ: ನರಹರಿ ದೀಕ್ಷಿತ್, ಸೃಜನ ಸಂಗೀತ ಶಾಲೆ, ನಂ 182/ಎ, 9ನೇ ಅಡ್ಡರಸ್ತೆ, ಮೂರನೇ ಬ್ಲಾಕ್, ಎಸ್‌ಎಸ್‌ಎಂ ಶಾಲೆ ರಸ್ತೆ, ತ್ಯಾಗರಾಜನಗರ, ಬೆಂಗಳೂರು 28. ಫೋನ್: 9448928611/ 90358929675.

 

ಪ್ರತಿಕ್ರಿಯಿಸಿ (+)