ರಿಯಾಲಿಟಿ ಶೋಗಳಿಂದ ಸಂಸ್ಕಾರಕ್ಕೆ ಕೊಡಲಿಪೆಟ್ಟು

7

ರಿಯಾಲಿಟಿ ಶೋಗಳಿಂದ ಸಂಸ್ಕಾರಕ್ಕೆ ಕೊಡಲಿಪೆಟ್ಟು

Published:
Updated:

ಸಂದರ್ಶನ

`ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜನರಿಗೆ ಮುಟ್ಟಿಸಬೇಕಾದ್ದು ಕಲಾವಿದರ ಕರ್ತವ್ಯ. ಜನರು ಅದನ್ನು ಇಷ್ಟಪಡುವಂತೆ ಮಾಡಬೇಕಾದ್ದು ಕಲಾವಿದರ ಹೊಣೆಗಾರಿಕೆ~ ಎಂಬ ತತ್ವವನ್ನು ನಂಬಿ ಅದರಂತೆ ಬದುಕುತ್ತಿರುವ ಹಾಗೂ ನಂಬಿದ ತತ್ವದ ಅನುಷ್ಠಾನಕ್ಕೆ ಹಲವು ಪ್ರಯತ್ನ ನಡೆಸುತ್ತಿರುವ ವಿಶಿಷ್ಟ ಕಲಾವಿದ ವಿದ್ವಾನ್ ಆರ್.ಕೆ.ಪದ್ಮನಾಭ.

 

ಅವರು ಕಳೆದ 9 ವರ್ಷಗಳಿಂದ `ಕರ್ನಾಟಕ ಗಾನ ಕಲಾ ಪರಿಷತ್~ನ ಅಧ್ಯಕ್ಷರಾಗಿ ಸಂಗೀತ ಸೇವೆ ಮಾಡುತ್ತಿದ್ದಾರೆ. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಈಚೆಗೆ ಪರಿಷತ್ ವತಿಯಿಂದ ಹಿರಿಯ ಮತ್ತು ಯುವ ಸಂಗೀತ ವಿದ್ವಾಂಸರ ರಾಜ್ಯಮಟ್ಟದ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ಮಾತಿಗೆ ಸಿಕ್ಕ ಪದ್ಮನಾಭ ಅವರು ಸಂಗೀತ ಜಗತ್ತಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಇಂದಿಗೂ ಜನಮನ್ನಣೆ ಇದೆಯೇ? ಸಂಗೀತ ಆಸ್ವಾದಿಸುವವರ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ ನಿಮಗೆ ಏನನ್ನಿಸುತ್ತದೆ?

ಜನಮನ್ನಣೆ ಖಂಡಿತಾ ಇದೆ. ಆಸ್ವಾದಿಸುವವರ ಸಂಖ್ಯೆಯೂ ಇದೆ. ತಕ್ಕ ಸಂಸ್ಕಾರ ಕೊಡುವಲ್ಲಿ ಹಾಗೂ ಜನರಿಗೆ ಕಲೆಯನ್ನು ತಲುಪಿಸುವಲ್ಲಿ ಸಂಗೀತ ವಿದ್ವಾಂಸರಾದ ನಾವು ವಿಫಲರಾಗಿದ್ದೇವೆ. ಜನರಿಗೆ ನಮ್ಮ ಕಲೆಯ ಸಾಮರ್ಥ್ಯ ಅರ್ಥಮಾಡಿಸಬೇಕಾದ ಹೊಣೆಗಾರಿಕೆಯನ್ನು ಇನ್ನಾದರೂ ನಾವು ಸಮರ್ಥವಾಗಿ ನಿರ್ವಹಿಸಬೇಕು.

ನಿಮ್ಮ ಅಭಿಪ್ರಾಯವನ್ನು ಮತ್ತಷ್ಟು ವಿವರಿಸಿ...

ಜನ ಹಿಂದೆಯೂ- ಇಂದಿಗೂ- ಎಂದೆಂದಿಗೂ ಸಂಗೀತವನ್ನು ಇಷ್ಟಪಡುತ್ತಾರೆ. ಸಂಗೀತ ಇಷ್ಟಪಡುತ್ತಿಲ್ಲ ಎಂದು ಕೊರಗುವುದಕ್ಕಿಂತ ಜನ ಸಂಗೀತ ಇಷ್ಟಪಡಲು ವಿದ್ವಾಂಸರಾದ ನಾವು ಏನು ಮಾಡಬೇಕು ಎಂಬ ಬಗ್ಗೆ ಆಲೋಚಿಸಬೇಕು. ಹಾಸನ ಜಿಲ್ಲೆಯ ಪುಟ್ಟ ಹಳ್ಳಿ ರುದ್ರಪಟ್ಟಣದಲ್ಲಿ ನಾನು ಕಳೆದ 8 ವರ್ಷದಿಂದ ಸಂಗೀತ ಉತ್ಸವ ನಡೆಸುತ್ತಿದ್ದೇನೆ. ಸಪ್ತಸ್ವರ ಮಂದಿರ ಕಟ್ಟಿಸಿದ್ದೇನೆ. ವರ್ಷದಿಂದ ವರ್ಷಕ್ಕೆ ಸಂಗೀತ ಉತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಜಾತಿ, ಧರ್ಮದವರೂ ಸಂಗೀತವನ್ನು ಆಸ್ವಾದಿಸುತ್ತಿದ್ದಾರೆ. ಸಂಜೆಯವರೆಗೂ ಹೊಲದಲ್ಲಿ ದುಡಿದು ದಣಿದ ರೈತರು ಸಂಗೀತ ಕೇಳಿ ಉಲ್ಲಸಿತರಾಗುತ್ತಿದ್ದಾರೆ. ಎಷ್ಟೋ ಹಳ್ಳಿಗಳಲ್ಲಿ ನಾನು ಸಂಗೀತ ಕಚೇರಿ ನಡೆಸಿಕೊಟ್ಟಿದ್ದೇನೆ. ಜನ ಉತ್ಸಾಹದಿಂದ ಕೇಳಿದ್ದಾರೆ. ಚಪ್ಪಾಳೆ ತಟ್ಟಿದ್ದಾರೆ. ನಮ್ಮಲ್ಲಿರುವ ಕಲೆಯನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ನಿರ್ವಹಿಸಬೇಕೆಂಬ ಭಾವ ಸಂಗೀತಗಾರರಲ್ಲಿ ಬರಬೇಕು.

ಹಿಂದೂಸ್ತಾನಿಗೆ ಸಿಕ್ಕ ಜನಮನ್ನಣೆ ಕರ್ನಾಟಕ ಸಂಗೀತಕ್ಕೆ ಏಕೆ ಸಿಗಲಿಲ್ಲ? ಅತಿ ವ್ಯಾಕರಣದ ಭಾರವೇ ಕರ್ನಾಟಕ ಸಂಗೀತದ ಭಾವಾಭಿವ್ಯಕ್ತಿಗೆ ತೊಡಕು ಎಂಬ ಮಾತು ನಿಜವೇ?

ನನ್ನ ಪ್ರಕಾರ ಕರ್ನಾಟಕ ಸಂಗೀತವೇ `ಮೋಸ್ಟ್ ಪೊಟೆನ್ಷಿಯಲ್- ಮೋರ್ ಕ್ರಿಯೇಟಿವ್~. ಸಮಗ್ರ ಭಾರತದಲ್ಲಿ ಹಿಂದೂಸ್ತಾನಿಯ ಪ್ರಭಾವವಿದೆ. ದಕ್ಷಿಣ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಕೆಲ ಭಾಗಗಳಲ್ಲಿ ಮಾತ್ರ ಕರ್ನಾಟಕ ಸಂಗೀತದ ಅಭ್ಯಾಸ ಹೆಚ್ಚಾಗಿ ನಡೆಯುತ್ತಿದೆ. ಕಲೆ ವ್ಯಾಪ್ತಿಯ ಭೌಗೋಳಿಕ ಮಿತಿಯನ್ನು ಕಲೆಯ ಮಿತಿ ಎನ್ನುವುದು ತಪ್ಪು. ಸಾಹಿತ್ಯ ಕಲೆಯಲ್ಲಿ ನಿಪುಣರಾದ ಕೆಲವರು ಇಂಥ ಮಾತನ್ನು ಆಗಾಗ ಆಡುತ್ತಿರುತ್ತಾರೆ.

`ಮಂದ್ರ~ ಬರೆದ ಎಸ್.ಎಲ್.ಭೈರಪ್ಪ ಅವರಲ್ಲೂ ಇಂಥದ್ದೇ ಅಭಿಪ್ರಾಯವಿತ್ತು. ಅವರ ಮನೆಗೆ ನಾನೇ ಹೋಗಿ ಹಾಡಿದೆ. ಅವರು ಭೇಷ್ ಎಂದು ಒಪ್ಪಿಕೊಂಡರು. ಒಬ್ಬ ಕೆಟ್ಟ ಕಲಾವಿದನ ಕಛೇರಿ ಕೇಳಿ ಕರ್ನಾಟಕ ಸಂಗೀತವೇ ಸರಿಯಿಲ್ಲ ಎನ್ನುವುದು ಸರಿಯೇ? ಇಂಥದ್ದೇ ಮಾತನ್ನು ಇತರ ಸಂಗೀತ ಪದ್ಧತಿಗಳ ಬಗ್ಗೆಯೂ ಅರಿಯದವರು ಆಡಬಹುದಲ್ಲವೇ?

ಫ್ಯೂಷನ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾನೆಂದಿಗೂ ಫ್ಯೂಷನ್ ಒಪ್ಪುವುದಿಲ್ಲ. ಸಂಗೀತವೆನ್ನುವುದು ಶಬ್ದ ಆಗಬಾರದು- ನಾದ ಆಗಬೇಕು. ಶಬ್ದವನ್ನು ನಾದವಾಗಿ ಪರಿವರ್ತಿಸುವವನೇ ಸಂಗೀತಗಾರ. ಫ್ಯೂಷನ್‌ನಲ್ಲಿ ಈ ಆಶಯವೇ ವಿಫಲವಾಗುತ್ತದೆ. ನಮ್ಮಲ್ಲಿಯೇ ಮೃದಂಗ- ಘಟಂನಂಥ ಲಯ ವಾದ್ಯಗಳಿವೆ. ಇಂಥ ಸಂದರ್ಭದಲ್ಲಿ ಡ್ರಂ- ರಿದಮ್ ಪ್ಯಾಡ್‌ಗಳು ಏಕೆ ಬೇಕು? ಇದರಿಂದ ನಮ್ಮ ಸಂಗೀತ ಪರಂಪರೆಗೆ ಅಪಾಯ. ಸಂಗೀತದ ಒಂದು ಪದ್ಧತಿಯಲ್ಲಿ ತಲಸ್ಪರ್ಶಿ ಅಧ್ಯಯನವಾದ ನಂತರ ಇತರ ಸಂಗೀತ ಪದ್ಧತಿಗಳನ್ನು ಆಸ್ವಾದಿಸುವುದು ಬೇರೆ, ಒಂದನ್ನು ಇನ್ನೊಂದಕ್ಕೆ ಬೆರೆಸಿ ಮತ್ತೇನೋ ಮಾಡುವುದು ಬೇರೆ. ಇದನ್ನು ನಾನು ಎಂದಿಗೂ ಒಪ್ಪುವುದಿಲ್ಲ.

ಸಂಗೀತವನ್ನೇ ನಂಬಿ ಬದುಕಲು ಸಾಧ್ಯವೇ?

ಅಸಾಧ್ಯ, ಹೊಟ್ಟೆಪಾಡಿಗಾಗಿ ಸಂಗೀತವನ್ನು ಆಶ್ರಯಿಸಿದವರು ಗುಣಮಟ್ಟ ಮತ್ತು ಶುದ್ಧತೆ ಕಾಪಾಡಿಕೊಳ್ಳುವುದು ಕಷ್ಟ. ಶುಲ್ಕಕ್ಕಾಗಿ ಸಂಗೀತದ ಪಾಠ ಹೇಳಿ ಹೊಟ್ಟೆಹೊರೆಯುವ ಗುರುಗಳು ಅತ್ಯುತ್ತಮ ಶಿಷ್ಯನನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಸಾಧ್ಯತೆ ಕಡಿಮೆ. ನಾನು 30 ವರ್ಷ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡಿ, ನಂತರವಷ್ಟೇ ಸಂಗೀತವನ್ನು ಪೂರ್ಣಾವಧಿ ಕಾಯಕ ಮಾಡಿಕೊಂಡೆ. ಆರ್ಥಿಕ ಸ್ವಾತಂತ್ರ್ಯ ಇದ್ದರೆ ಮಾತ್ರ ಕಲಾವಿದ ಸ್ವತಂತ್ರವಾಗಿ ಚಿಂತಿಸಲು- ಜೀವಿಸಲು ಸಾಧ್ಯ. ಹೊಟ್ಟೆಪಾಡಿಗೆ ಪುಸ್ತಕ ಬರೆಯುವವರಿಗೂ- ಆತ್ಮತೃಪ್ತಿಗಾಗಿ ಪುಸ್ತಕ ಬರೆಯುವವರಿಗೂ ಇರುವ ವ್ಯತ್ಯಾಸವನ್ನೇ ಇಲ್ಲಿಗೂ ಅನ್ವಯಿಸಿ ಚಿಂತಿಸಿ. ನಿಮಗೇ ಅರ್ಥವಾಗುತ್ತದೆ.

ವಾದಿರಾಜರನ್ನು ಕಂಡರೆ ನಿಮಗೆ ಯಾಕೆ ಇಷ್ಟ?

ವಾದಿರಾಜರು ಸಾಮಾಜಿಕ ಕಳಕಳಿ ಇದ್ದ ಮಹಾನ್ ವಿದ್ವಾಂಸರು. ಕ್ರಿ.ಶ 1480ರಿಂದ 1600ರ ತನಕ ಜೀವಿಸಿದ್ದ ಅವರು ಬ್ರಾಹ್ಮಣಿಕೆಯ ಗೋಡೆಗಳನ್ನು ಕೆಡವಿ ಹಲವು ಮನಸುಗಳಿಗೆ ಸಂಗೀತ ಸೇತುವೆ ಕಟ್ಟಿದ ಮಹಾನುಭಾವರು. ಬೆಸ್ತರಿಗಾಗಿ ತುಳುವಿನಲ್ಲಿ ದಶಾವತಾರ ಬರೆದಿದ್ದಾರೆ. ಮಠಾಧೀಶರಾಗಿದ್ದರೂ ಸಾಮಾನ್ಯ ಜನರ ಎದುರಿಗೆ ಅನೇಕ ಕೃತಿಗಳನ್ನು ಅವರೇ ಸ್ವತಃ ಪಾಠ ಮಾಡಿದ್ದರು ಎಂದೂ ಇತಿಹಾಸ ತಿಳಿಸುತ್ತದೆ. ಉಡುಪಿ ಮಠದಲ್ಲಿ ಪೂಜೆಯ ವೇಳೆ ಇಂದಿಗೂ 60ಕ್ಕೂ ಹೆಚ್ಚು ಲಯ ವಾದ್ಯಗಳು ಬಳಕೆಯಾಗುತ್ತವೆ. ಈ ಕ್ರಮವನ್ನು  ಜಾರಿಗೆ ತಂದವರೂ ಅವರೇ. ವಾದ್ಯಗಳನ್ನೂ ಒಂದೊಂದು ಜನಾಂಗದ ಆಸ್ತಿಯಾಗಿ ಬಿಂಬಿಸಿ ಸಮಾಜದಲ್ಲಿ ಶಾಶ್ವತ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಬೆಳೆಸಿದರು. ಈ ಎಲ್ಲ ಕಾರಣದಿಂದ ನನಗೆ ವಾದಿರಾಜರು ಇಷ್ಟ. ನಾನು ಸೃಷ್ಟಿಸಿದ ರಾಗವನ್ನು `ಹಯಾಸ್ಯ~ ಎಂದು ವಾದಿರಾಜರಿಗೆ ಅರ್ಪಿಸಿದ್ದೇನೆ.

ಸಾಧನೆ, ಏಕಾಂತ, ಧ್ಯಾನ, ಮೌನದಲ್ಲಿ ಅರಳಬೇಕಾದ ಸಂಗೀತ ಇಂದು ಏನಾಗುತ್ತಿದೆ? ರಿಯಾಲಿಟಿ ಶೋಗಳಿಂದ ಸಂಗೀತ ಜಗತ್ತಿಗೆ ನಿಜಕ್ಕೂ ಒಳಿತಾಗಿದೆಯೇ?

ರಿಯಾಲಿಟಿ ಶೋಗಳು ನನಗೆ ಇಷ್ಟವಾಗುವುದಿಲ್ಲ. ಪಿಳ್ಳಾರಿ ಗೀತೆಗಳನ್ನು ಹಾಡಬೇಕಾದ ಮಕ್ಕಳ ಬಾಯಲ್ಲಿ ವಯಸ್ಸಿಗೆ ಮೀರಿದ ಅಸಭ್ಯ- ಆಶ್ಲೀಲ ಸಾಹಿತ್ಯ ಕೇಳುವುದು ಹಿಂಸೆ. ಅದು ಮಕ್ಕಳ ಮನಸಿನ ಮೇಲೆ ಹಾಗೂ ಒಟ್ಟಾರೆ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರುತ್ತವೆ. ಸಂಗೀತದ ಮೂಲ ಉದ್ದೇಶವಾದ `ಸಂಸ್ಕಾರ~ಕ್ಕೆ ಇದು ಕೊಡಲಿಪೆಟ್ಟು. ಸಾತ್ವಿಕ ಸಂಗೀತ ರೂಢಿಸಿಕೊಂಡರೆ ವಿಕೃತ ಭಾವನೆ ಮರೆಯಾಗುತ್ತದೆ. ಮಕ್ಕಳ ಮನಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ರಿಯಾಲಿಟಿ ಶೋಗಳಿಂದ ಸಂಗೀತ ಕ್ಷೇತ್ರದ ಪುನರುಜ್ಜೀವನವಾಗುತ್ತಿದೆ. ಹೆಚ್ಚು ಜನ ಮಕ್ಕಳನ್ನು ಸಂಗೀತ ಕಲಿಸಲು ಸೇರಿಸುತ್ತಿದ್ದಾರೆ ಎಂಬ ವಾದವೂ ಇದೆಯಲ್ಲ?

ಈ ಮಾತನ್ನೂ ನಾನು ಒಪ್ಪುವುದಿಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತ ಅದರ ಸತ್ವದಿಂದ ಬದುಕುತ್ತದೆ- ಬೆಳೆಯುತ್ತದೆ- ಬೆಳಗುತ್ತದೆ. ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನವಾಯಿತು. ನಂತರದ 150 ವರ್ಷ ಅಂದರೆ ಪುರಂದರದಾಸರ ನಂತರ ವಿಜಯದಾಸರು ಪ್ರವರ್ಧಮಾನಕ್ಕೆ ಬರುವವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಲೆ ದೂಳು ಕವಿದಿತ್ತು. ಆ ಕಾಲಕ್ಕೆ ಮಹಾಪುರುಷರಾದ ವಿಜಯದಾಸರು ಸಂಗೀತವನ್ನು ಊರ್ಜಿತ ಮಾಡಿದರು. ಈ ಕಾಲಕ್ಕೂ ಅಂಥವರೊಬ್ಬರು ಬೇಕು. ತ್ಯಾಗರಾಜ, ತಾನಸೇನರಂಥವರನ್ನು ಆದರ್ಶವಾಗಿ ಸ್ವೀಕರಿಸಿದ ಸಾಧಕರು ನಮಗೆ ಬೇಕು. ಪ್ರಚಾರ ಮತ್ತು ಮನ್ನಣೆಯನ್ನು ಅರಗಿಸಿಕೊಳ್ಳಲು ಸಾಮರ್ಥ್ಯ- ಅಭ್ಯಾಸ ಬೇಕು. ಅಪಕ್ವ ಸ್ಥಿತಿಯಲ್ಲಿ ಅವೆರೆಡೂ ಸಿಕ್ಕರೆ ಸಾಧನೆಗೆ ಭಂಗ. ಈಗಿನ ರಿಯಾಲಿಟಿ ಶೋಗಳಿಂದ ಸಮಾಜ ಎದುರಿಸುತ್ತಿರುವ ಮುಖ್ಯ ಅಪಾಯ ಇದು. 

       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry