ಮಂಗಳವಾರ, ಸೆಪ್ಟೆಂಬರ್ 29, 2020
23 °C

ರಿಯಾಲಿಟಿ ಶೋ ತಿದ್ದಿದ ಭಾವಚಿತ್ರ ನಾನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಾಲಿಟಿ ಶೋ ತಿದ್ದಿದ ಭಾವಚಿತ್ರ ನಾನು

ನಾನೊಬ್ಬ ಸಾಧಾರಣ ಹುಡುಗ. ನನ್ನದೂ ಒಂದು ಕತೆ ಇರುತ್ತದೆ, ಅದನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತೇನೆ ಎಂದು ಕನಸು ಸಹ ಕಂಡಿರಲಿಲ್ಲ. ಆದರೆ ಬದುಕಿನ ಹಾದಿಯಲ್ಲಿ ಅನಿರೀಕ್ಷಿತ ತಿರುವುಗಳು ಬಂದು ಬಿಡುತ್ತವೆ. ಅವುಗಳು ನಮ್ಮನ್ನು ಎಲ್ಲಿಗೋ ಕರೆದುಕೊಂಡು ಹೋಗಿ ನಿಲ್ಲಿಸುತ್ತವೆ.

ನನ್ನದೂ ಹಾಗೆಯೇ ಆಯಿತು. ನಾನು ನನ್ನ ಪಾಡಿಗೆ ಮೈಸೂರಿನಲ್ಲಿ ಮ್ಯಾಟ್ ಕುಸ್ತಿ ಮಾಡಿಕೊಂಡು ಬಹುಮಾನಗಳ ಮೇಲೆ ಬಹುಮಾನ ಗೆಲ್ಲುತ್ತಾ ಖುಷಿಯಾಗಿದ್ದೆ. ಆಗ ಹೆಚ್ಚೆಂದರೆ ಕುಸ್ತಿಪಟುಗಳು, ಕುಸ್ತಿಪ್ರೇಮಿಗಳಿಗೆ ಮಾತ್ರ ಗೊತ್ತಿದೆ. ಸುವರ್ಣ ಚಾನೆಲ್‌ನ ರಿಯಾಲಿಟಿ ಶೋ `ಪ್ಯಾಟೆ ಮಂದಿ ಕಾಡಿಗ್ ಬಂದ್ರು ಸೀಸನ್-2~ ನನ್ನನ್ನು ಲಕ್ಷಾಂತರ ಮಂದಿಗೆ  ಪರಿಚಯಿಸಿಬಿಟ್ಟಿತು.ವೀಕ್ಷಕರೂ ಸಹ ನನ್ನನ್ನು ತಮ್ಮ ಮನೆಯ ಹುಡುಗ ಎನ್ನುವಂತೆ ಪ್ರತಿ ಎಪಿಸೋಡ್, ಪ್ರತಿ ಟಾಸ್ಕ್‌ನಲ್ಲಿಯೂ ಗೆಲ್ಲುವಂತೆ ಬಯಸುತ್ತಿದ್ದರು. ಬಗೆ ಬಗೆಯ ಟಾಸ್ಕ್‌ಗಳನ್ನು ಗೆಲ್ಲುತ್ತಾ ಕೊನೆಗೆ ಸೀಸನ್-2 ನಲ್ಲಿ ವಿಜೇತನಾದೆ!ನಾನು ನಿಮಗೊಂದು ಸಣ್ಣ ಲೆಕ್ಕವನ್ನು ಹೇಳುತ್ತೇನೆ. `ಪ್ಯಾಟೆ ಮಂದಿ ಕಾಡಿಗ್ ಬಂದ್ರು  ಸೀಸನ್-2~ ನಲ್ಲಿ ಭಾಗವಹಿಸಲು 7 ಸಾವಿರ ಯುವಕ, ಯುವತಿಯರು ಅರ್ಜಿ ಹಾಕಿದ್ದರು. ಅವರಲ್ಲಿ 200 ರಷ್ಟು ಮಂದಿಯನ್ನು ಆಡಿಷನ್‌ಗೆ ಕರೆದು 16  ಮಂದಿಯನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಎಂಟು ಹುಡುಗರು, ಎಂಟು ಹುಡುಗಿಯರು ಇದ್ದರು. ಆ ಎಂಟು ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ. ಕೊನೆಗೆ ಗೆಲುವೂ ನನ್ನದಾಗಿತ್ತು!ನಾನು ನಿಮ್ಮಂದಿಗೆ ಹೇಳಿಕೊಳ್ಳಲು ಇರುವುದು ಎರಡೇ ಸಂಗತಿ. ಒಂದು- ಬಾಲ್ಯದಿಂದ ಉಸಿರಾಗಿರುವ ಕುಸ್ತಿ. ಎರಡು-ರಿಯಾಲಿಟಿ ಶೋ ಕಲಿಸಿದ ಜೀವನ ಪಾಠ. ಹೀಗಾಗಿ ನನ್ನ ಕತೆ ಇವುಗಳ ಸುತ್ತಲೇ ಗಿರಕಿ ಹಾಕುತ್ತದೆ. ನಿಮಗೆ ಗೊತ್ತಾ? ನಾನು ಭಾಗವಹಿಸಿದ್ದ ರಿಯಾಲಿಟಿ ಶೋ ನಡೆದದ್ದು ಅಂಡಮಾನ್‌ನ ಹ್ಯಾವ್‌ಲಾಕ್ ದ್ವೀಪದಲ್ಲಿ!ನಾನು ಅಂಡಮಾನ್, ಅಲ್ಲಿರುವ ಐತಿಹಾಸಿಕ ಮಹತ್ವವುಳ್ಳ ಜೈಲು ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ, ನೋಡುವ ಆಸೆ ಇತ್ತು. ಇಂತಹ ಆಸೆ ರಿಯಾಲಿಟಿ ಶೋ ಮೂಲಕ ಈಡೇರಿತು. ಹ್ಯಾವ್‌ಲಾಕ್ ದ್ವೀಪ ಅಂತ ಹೇಳಿದೆನಲ್ಲ, ಅದು ಹೇಗಿದೆ ಗೊತ್ತಾ?

 

ಅಲ್ಲಿ ನರಪಿಳ್ಳೆಯೂ ಕಾಣಸಿಗುವುದಿಲ್ಲ, ದಟ್ಟವಾದ ಕಾಡು, ಕೆಲವು ಕಡೆ ಸೂರ್ಯನ ಕಿರಣಗಳು ನುಸುಳಲು ಆಗುವುದಿಲ್ಲ. ಅಂತಹ ದ್ವೀಪದಲ್ಲಿ ಬರೋಬರಿ 90 ದಿನ ಶೋ ಗಾಗಿ ಬದುಕಬೇಕಾಯಿತು. ನಿಜ ಹೇಳ್ತೀನಿ, ಹೋದ ಒಂದೆರಡು ದಿನದಲ್ಲೇ ಬದುಕಿ ಮಹತ್ವದ ಪಾಠವೊಂದನ್ನು ಕಲಿತೆ. ಅಪ್ಪ ಸಂಪಾದಿಸಿದ ಹಣ, ಆಸ್ತಿಯನ್ನು ಕುಳಿತುಕೊಂಡು ತಿಂದು, ಶೋಕಿ ಮಾಡಿ ಕರಗಿಸಿಬಿಡುತ್ತೇವೆ.ಆದರೆ ಆ ಕಾಡಿನಲ್ಲಿ ತುತ್ತು ಅನ್ನ ಕೂಡ ಸಿಗುತ್ತಿರಲಿಲ್ಲ. ಹಸಿವು ತಾಳಲಾರದೆ ಭಿಕ್ಷೆಬೇಡಿಯಾದರೂ ತಿನ್ನೋಣವೆಂದರೆ ಎಲ್ಲಿದ್ದಾರೆ ಸ್ವಾಮೀ ಅಲ್ಲಿ ಜನ? ಆಗ ತಿಳಿಯಿತು, ಅನ್ನದ ಬೆಲೆ.ಇನ್ನು ಶೋ ಕಥೆ ಹೇಳ್ತೀನಿ. ನಾನು ಜನರೇ ಇಲ್ಲದ ಗುರುತು ಪರಿಚಯವಿಲ್ಲ ಜಾಗದಲ್ಲಿ 90 ದಿನ ಬದುಕಬೇಕಿತ್ತು, ಅದು ಸುಮ್ಮನೆ ಕಾಲ ಕಳೆಯುತ್ತಾ ಅಲ್ಲ. ಟಾಸ್ಕ್‌ಗಳ ಮೇಲೆ ಟಾಸ್ಕ್‌ಗಳು ಇರುತ್ತಿದ್ದವು. ಅವುಗಳಲ್ಲಿ ಭಾಗವಹಿಸಬೇಕಿತ್ತು. ಪ್ರತಿ ಟಾಸ್ಕ್ ಕೂಡ ಕಷ್ಟ ಅಂದ್ರೆ ಕಷ್ಟ. ರಕ್ತ ಬರಿಸಿಕೊಳ್ಳದೇ ಯಾವುದೇ ಟಾಸ್ಕ್ ಅನ್ನು ಪೂರ್ಣಗೊಳಿಸಿದ್ದು ನನಗೆ ನೆನಪೇ ಇಲ್ಲ.

 

ಏಕೆಂದರೆ ಟಾಸ್ಕ್‌ಗಳು ಇದ್ದದ್ದೇ ಹಾಗೆ. ಒಬ್ಬರು ಚಾಟಿ ಹೊಡೆಯುವ, ಹೊಡೆಸಿಕೊಳ್ಳುವ ಟಾಸ್ಕ್ ಇತ್ತು. ಇದರಲ್ಲಿ ಚರ್ಮವನ್ನು ಕಿತ್ತು, ಜೊತೆಗೆ ರಕ್ತ ಕೂಡ ಬಂದಿತು. ಉರಿಯನ್ನು ಸಹಿಸಿಕೊಳ್ಳುವುದೇ ದೊಡ್ಡ ಕಷ್ಟವಾಗಿತ್ತು. ಇಂತಹ ಹತ್ತಾರು ಟಾಸ್ಕ್‌ಗಳನ್ನು ಜಯಿಸಲೇಬೇಕಿತ್ತು.ಇವುಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದೆ. ಕೊನೆ ಹಂತದ ಮೆಗಾಟಾಸ್ಕ್ ಇತ್ತಲ್ಲ, ಅದು ನಿಜವಾದ ಸವಾಲಾಗಿತ್ತು. ಅದನ್ನು ನೀವು ನೋಡಿದ್ದರೆ ನೆನಪಿಸಿಕೊಳ್ಳಿ. ಆ ಮೆಗಾಟಾಸ್ಕ್ ಪೂರೈಸುವುದರೊಂದಿಗೆ ಗೆಲುವಿನ ನಗೆ ಬೀರಿದೆ!ಸ್ಪರ್ಧೆ ಅಂದ ಮೇಲೆ ಪೈಪೋಟಿ ಇದ್ದೇ ಇರುತ್ತದೆ. ಪ್ರತಿಯೊಬ್ಬ ಸ್ಪರ್ಧಿಯೂ ಎದುರಿಗೆ ಇರುವವರನ್ನು ಹಿಂದಿಕ್ಕಲು ಸಿಗುವ ಸಣ್ಣ ಅವಕಾಶವನ್ನೂ ಬಿಡುವುದಿಲ್ಲ. ಸ್ಪರ್ಧೆಯಲ್ಲಿ ಇರಬೇಕು, ಇದ್ದು ಜಯಿಸಬೇಕು, ಅಂದರೆ ಪಟ್ಟಿಗೆ ಪಟ್ಟು ಹಾಕುತ್ತಾ ಎದುರಾಳಿಯನ್ನು ಸೋಲಿಸಲೇಬೇಕು. ನಾನು ಕುಸ್ತಿಪಟುವಾಗಿದ್ದರಿಂದ ಟಾಸ್ಕ್ ಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದಲೇ ಮುಖಾಮುಖಿಯಾದೆ. ನನಗೆ ಸರಳ ತಿಳಿವಳಿಕೆ ಇತ್ತು.ಸ್ಪರ್ಧೆಯಲ್ಲಿರುವ ಟಾಸ್ಕ್‌ಗಳಿಂದ ಪ್ರಾಣ ಹೋಗುವುದಿಲ್ಲ, ಅಂದಮೇಲೆ ಯಾಕೆ ಹೆದರಬೇಕು? ನಾನು ಬಂದಿರುವುದೇ ಗೆಲ್ಲುವುದಕ್ಕಾಗಿ ಎಂದುಕೊಂಡು ಮುನ್ನುಗ್ಗುತ್ತಲೇ ಹೋದೆ. ಕ್ರೀಡೆಗೆ ಎಂಥ ತಾಕತ್ತು ಇದೆ ಎಂದರೆ ನನಗೆ ನಿಜವಾಗಿ ಪೈಪೋಟಿ ನೀಡಿದ್ದು ಹಾಕಿ ಆಟಗಾರ ಪದ್ಮನಾಭ ಮತ್ತು ಬಾಡಿಬಿಲ್ಡರ್ ಮಂಜುನಾಥ್.ಈ ಶೋ ನಲ್ಲಿ ನಾನು ಜೀವನದ ಪಾಠವನ್ನು ಕಲಿಯುತ್ತಾ ಹೋದೆ. ಯಾವ ಸನ್ನಿವೇಶದಲ್ಲಿ ಹೇಗೆ ವರ್ತಿಸಬೇಕು, ಯಾರೊಂದಿಗೆ ಹೇಗೆ ಮಾತನಾಡಬೇಕು. ಸಮಸ್ಯೆಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಶೋ ನಲ್ಲಿ 4 ಲಕ್ಷ ರೂಪಾಯಿ ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದೆ ಎನ್ನುವ ಅಹಂ ಇಲ್ಲ. ಆದರೆ ಈ ಗೆಲುವು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಗೆಲುವನ್ನು ಚಿಮ್ಮು ಹಲಗೆಯನ್ನಾಗಿ ಮಾಡಿಕೊಂಡು ನನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತೇನೆ. ನಾನು ಸಾಯುವ ಹೊತ್ತಿಗೆ ನಾಲ್ಕು ಜನ ಒಳ್ಳೆಯ ರೀತಿ ಮಾತನಾಡಿಕೊಳ್ಳುವಂತೆ ಬದುಕುತ್ತೇನೆ.ನಾನು ಈ ರಿಯಾಲಿಟಿ ಶೋ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಹುಮಾನ ಗೆಲ್ಲುವ ತಾಕತ್ತು ನೀಡಿದ್ದು ನನ್ನ ಕುಸ್ತಿ. ನಾನು ಇಂತಹ ಶೋ ಗಾಗಿಯೇ ಹೇಳಿ ಮಾಡಿಸಿದಂತೆ ದೇಹವನ್ನು ಹದ ಮಾಡಿ ಇಟ್ಟುಕೊಂಡಿದ್ದೆ. ನನಗೆ ಕುಸ್ತಿಯನ್ನು ಬಿಟ್ಟು ಬೇರೆ ಗೊತ್ತೇ ಇಲ್ಲ.ಕುದುರೆಗೆ ಕಣ್ಣುಪಟ್ಟಿ ಕಟ್ಟಿದಂತೆ. ಮೊದಲೇ ಹೇಳಿದಂತೆ ನಾನು ಕುಸ್ತಿಪಟ್ಟು. ಅಂದರೆ ಗಲ್ಲಿಯಿಂದ ದಿಲ್ಲಿಯವರೆಗೂ ಕುಸ್ತಿ ಮಾಡಿ ಬಹುಮಾನ ಗಳಿಸಿದ್ದೇನೆ. ಬಿ.ಕಾಂ ಪದವೀಧರನಾದ ನಾನು ಕುಸ್ತಿಪಟು ಹೇಗಾದೆ ಎನ್ನುವುದನ್ನು ಹೇಳುತ್ತೇನೆ. ನನ್ನೂರು ಕೆ.ಜಿ.ಕೊಪ್ಪಲು. ಅಂದರೆ ಕನ್ನೇಗೌಡನಕೊಪ್ಪಲು. ಇದು ಬೇರೆಯಲ್ಲೂ ಇಲ್ಲ, ಮೈಸೂರಿನಲ್ಲೇ ಇದೆ. ನನ್ನೂರು  ಕುಸ್ತಿಗೆ ತುಂಬಾ ಫೇಮಸ್ಸು.

 

ತಾತ ಮೆರವೇಗೌಡ ಪೈಲ್ವಾನ. ಅವರಿಗೆ ನನ್ನನ್ನು ದೊಡ್ಡ ಪೈಲ್ವಾನನ್ನಾಗಿ ನೋಡುವ ಆಸೆಯಿತ್ತು, ಹೀಗಾಗಿ ನನಗೆ ಕುಸ್ತಿಯನ್ನು  ಪರಿಚಯಿಸಿಕೊಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಕುಸ್ತಿ ಕೋಚ್ ಎಲ್. ಮಂಜಪ್ಪ ಪಟ್ಟುಗಳನ್ನು ಕಲಿಸಿಕೊಟ್ಟರು. ಇವರಿಬ್ಬರು ದೇವರಿಗೆ ಸಮಾನ. ನನಗೆ ಚೆನ್ನಾಗಿ ನೆನಪಿದೆ.

 

ಚಾಮರಾಜೇಂದ್ರ ಅರಸು ಬೋರ್ಡಿಂಗ್ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ಕುಸ್ತಿಯತ್ತ ಪ್ರೀತಿ ಶುರುವಾಯಿತು. ಮುಂಜಾನೆ ಐದೂವರೆಯಿಂದ ಎಂಟೂವರೆ ತನಕ ಕುಸ್ತಿಗಾಗಿ ದೇಹವನ್ನು ಹದ ಮಾಡಿಕೊಂಡು ಕಾದಾಡುತ್ತಿದ್ದೆ. ನಾನು ಶಾಲಾ-ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಡೆದ ಯಾವ ಕುಸ್ತಿ ಪಂದ್ಯಾವಳಿಯಲ್ಲಿಯೂ ಬೇರೆಯವರಿಗೆ ಮೊದಲ ಸ್ಥಾನವನ್ನು ಬಿಟ್ಟುಕೊಡಲೇ ಇಲ್ಲ.

 

ಹೀಗಾಗಿ ಅಖಿಲ ಭಾರತ ವಿಶ್ವವಿದ್ಯಾನಿಲಯ, ಅಖಿಲ ಭಾರತ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಾನು ಓದಿನಲ್ಲಿ ರ‌್ಯಾಂಕ್ ಪಡೆಯುವಷ್ಟು ಬುದ್ಧಿವಂತನಾಗಿರಲಿಲ್ಲ, ಆದರೆ ಪಾಸಾಗುವುದಕ್ಕೆ ಮೋಸವಿರಲಿಲ್ಲ. ಅರಸು ಶಾಲೆಯಲ್ಲಿ ನನ್ನನ್ನು ಕೊನೆಯ ಬೆಂಚ್‌ನಲ್ಲಿ ಕೂರಿಸುತ್ತಿದ್ದರು.ನಾನು ಕುಸ್ತಿ ತಾಲೀಮು ನಡೆಸಿ ಸುಸ್ತಾಗಿದ್ದರಿಂದ ನಿದ್ದೆ ಮಾಡಿಬಿಡುತ್ತಿದ್ದೆ. ಆದರೂ ಎಲ್ಲ ಮೇಷ್ಟ್ರು ನನ್ನ ಮೇಲಿನ ಪ್ರೀತಿಗಾಗಿ ಸಹಿಸಿಕೊಂಡರು. ಅವರೆಲ್ಲ ಎಷ್ಟೊಂದು ಒಳ್ಳೆಯವರು.ನನ್ನ ತಂದೆ ರವಿಗೌಡ ಕೃಷಿಕ, ತಾಯಿ ಸುಜಾತಾ ಗೃಹಿಣಿ, ತಮ್ಮ ಪ್ರತಾಪ್ ಪಿಯುಸಿಗೆ ನಮಸ್ಕಾರ ಹೇಳಿ ಅಪ್ಪನಿಗೆ ಕೃಷಿಯಲ್ಲಿ ನೆರವಾಗುತ್ತಿದ್ದಾನೆ. ನನ್ನ ಚಿಕ್ಕಪ್ಪಂದಿರ ಬಗ್ಗೆ ಹೇಳಲೇಬೇಕು. ಅವರು ತಮ್ಮ  ಮಕ್ಕಳಿಗೆ ಕೊಡುವುದಕ್ಕಿಂತ ಹೆಚ್ಚು ಪ್ರೀತಿಯನ್ನು ನನಗೆ ನೀಡಿದ್ದಾರೆ. ಸದಾ ಹಿಂದೆ ನಿಂತು `ಹೋಗು ಮಗಾ, ನೀನು ಗೆದ್ದೇ ಗೆಲ್ತೀಯಾ~ ಅಂತ ಉತ್ತೇಜಿಸುವ ನನ್ನೂರಿನ ಗೆಳೆಯರಾದ ರವಿ, ಮಹೇಶ, ದೀಪು, ಮಧು ಇದ್ದಾರೆ.

 

ಗಾಡ್‌ಫಾದರ್ ಮಂಡ್ಯ (ಇಂಡವಾಳು)ದ ಸಚ್ಚಿದಾನಂದ, ಶೋ ನಲ್ಲಿ ಪರಿಚಯವಾದ ಪದ್ಮನಾಭ, ಮಂಜುನಾಥ್ ಇದ್ದಾರೆ. ಈಗ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲಿ ದೇಹವನ್ನು ಹುರಿಗೊಳಿಸುತ್ತಿದ್ದೇನೆ. ಡ್ಯಾನ್ಸ್, ಫೈಟ್ ಕಲಿಯುತ್ತಿದ್ದೇನೆ.ಅಭಿನಯವನ್ನು ಅಭ್ಯಾಸ ಮಾಡುತ್ತಿದ್ದೇನೆ. ಮುಂದೆ ಸಿನಿಮಾದಲ್ಲಿ ಅಭಿನಯಿಸಲು ಇಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಹಾರೈಕೆ ಇರಲಿ. (ಮೊಬೈಲ್-9591576123) 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.