ಸೋಮವಾರ, ಮಾರ್ಚ್ 1, 2021
31 °C

ರಿಯೊ ಮ್ಯಾರಥಾನ್ ಅಂಗಳದಲ್ಲಿ ಸೌದಿಯ ಸಾರಾ ಅಲ್ ಅತ್ತಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯೊ ಮ್ಯಾರಥಾನ್ ಅಂಗಳದಲ್ಲಿ ಸೌದಿಯ ಸಾರಾ ಅಲ್ ಅತ್ತಾರ್

ರಿಯೊ ಡಿ ಜನೈರೊ (ಎಎಫ್‌ಪಿ):  ಸೌದಿ ಅರೇಬಿಯಾದ ಮಹಿಳಾ ಅಥ್ಲಿಟ್  ಸಾರಾ ಅಲ್ ಅತ್ತಾರ್ ಅವರು ಈಗ ಮತ್ತೊಮ್ಮೆ ತಮ್ಮ ದೇಶದ ಸಾಂಪ್ರದಾಯಿಕತೆಯ ಚೌಕಟ್ಟನ್ನು  ಮೀರಲಿದ್ದಾರೆ.  ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಮ್ಯಾರಥಾನ್ (42 ಕಿಲೋಮೀಟರ್ಸ್) ನಲ್ಲಿ ಸ್ಪರ್ಧಿಸಲಿದ್ದಾರೆ.ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಆಡಿಯಿಂದ ಮುಡಿಯವರೆಗೆ ಬಟ್ಟೆಗಳನ್ನು  (ಬೂಟು, ಟ್ರ್ಯಾಕ್‌ ಪ್ಯಾಂಟ್, ತುಂಬುತೋಳಿನ ಟೀಶರ್ಟ್, ಸ್ಕಾರ್ಫ್‌) ಧರಿಸಿ ಕಣಕ್ಕಿಳಿದಿದ್ದರು. 800 ಮೀಟರ್ಸ್ ಓಟದಲ್ಲಿ ಅವರು ಸ್ಪರ್ಧಿಸಿದ್ದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸೌದಿಯ ಪ್ರಥಮ ವನಿತೆಯಾಗಿದ್ದರು.ಮಹಿಳೆಯರ ಮೇಲೆ ಹಲವು ಕಟ್ಟುಪಾಡುಗಳಿವೆ. ಸೌದಿ ಅರೇಬಿಯಾದ ಒಲಿಂಪಿಕ್ಸ್ ಸಮಿತಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ತಂಡದಲ್ಲಿ ಮಹಿಳೆಯರ ಹೆಸರುಗಳನ್ನೂ ಹಾಕಿಲ್ಲ.  ಇಷ್ಟೆಲ್ಲವುಗಳ ಹೊರತಾಗಿಯೂ  ಅರೇಬಿಯಾದಿಂದ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ.23 ವರ್ಷದ ಅತ್ತಾರ್ ಅವರೂ ಸೇರಿದಂತೆ ನಾಲ್ವರು ವನಿತೆಯರು  ಮತ್ತು ಏಳು ಮಂದಿ ಪುರುಷ ಅಥ್ಲೀಟ್‌ಗಳು ಇರುವ ತಂಡವು ಸೋಮವಾರ ರಾತ್ರಿ ರಿಯೊ ತಲುಪಿದೆ.  ಆಧರೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಅವರಿಗೆ ಆದೇಶ ನೀಡಲಾಗಿದೆ. ವನಿತೆಯರ ಜುಡೊದಲ್ಲಿ ವುಜುದ್ ಫಹಾಮಿ, ಫೆನ್ಸರ್ ಲುಬನಾ ಅಲ್ ಒಮೇರ್ ಮತ್ತು 100 ಮೀಟರ್ಸ್ ಓಟದಲ್ಲಿ ಕೆರಿಮನ್ ಅಬು ಅಲ್ ಜದೈಲ್ ಅವರು ಸ್ಪರ್ಧಿಸಲಿದ್ದಾರೆ.ಇವರೆಲ್ಲರೂ ಯಾವುದೇ ಅರ್ಹತಾ ಸುತ್ತಿನಲ್ಲಿಯೂ ಭಾಗವಹಿಸಿರಲಿಲ್ಲ. ಕ್ರೀಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಯು (ಐಒಸಿ) ಸೌದಿ ವನಿತೆಯರಿಗೆ ವಿಶೇಷ ಆಹ್ವಾನ ನೀಡಿತ್ತು. ‘ಇಲ್ಲಿ ನಾನು ಸೌದಿಯ ಸಮಸ್ತ ವನಿತೆಯರನ್ನು ಪ್ರತಿನಿಧಿಸುತ್ತಿದ್ದೇನೆ.

ಇದರಿಂದ ದೇಶದ ಬಾಲಕಿಯರು, ಯುವತಿಯರು ಕ್ರೀಡೆಯತ್ತ ಆಸಕ್ತಿ ಬೆಳೆಯಲು ಉತ್ತೇಜನ ಸಿಗಲಿ ಎಂಬುದು ನನ್ನ ಆಶಯ’ ಎಂದು ಇತ್ತೀಚೆಗೆ ಕ್ರೀಡಾ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ಅತ್ತಾರ್ ಹೇಳಿಕೆಯು ಉಲ್ಲೇಖವಾಗಿತ್ತು. ಅವರು ಲಂಡನ್ ಒಲಿಂಪಿಕ್ಸ್‌ನ 800 ಮೀಟರ್ಸ್ ಓಟದ ಹೀಟ್ಸ್‌ನಲ್ಲಿ ಕೊನೆಯವರಾಗಿ ಗುರಿ ಮುಟ್ಟಿದ್ದರು. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು, ಕ್ರೀಡಾಪಟುಗಳು ಅತ್ತಾರ್ ಅವರಿಗೆ ಎದ್ದು ನಿಂತು, ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.