ಬುಧವಾರ, ಡಿಸೆಂಬರ್ 11, 2019
27 °C

ರಿವಾಲ್ವರ್‌ ರಾಣಿ ಕಂಗನಾ

Published:
Updated:
ರಿವಾಲ್ವರ್‌ ರಾಣಿ ಕಂಗನಾ

ನಟಿಸುವ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ನಟಿ ಕಂಗನಾ ರನೌಟ್ ಈಗ ‘ರಿವಾಲ್ವರ್‌ ರಾಣಿ’ ಸಿನಿಮಾದಲ್ಲಿ ಮತ್ತೊಂದು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ನಾನು ಈ ಹಿಂದೆ ನಟಿಸಿದ ಎಲ್ಲ ಪಾತ್ರಗಳಿಗಿಂತಲೂ ಈ ಚಿತ್ರದಲ್ಲಿನ ಪಾತ್ರ ತುಂಬ ಭಿನ್ನವಾಗಿದೆ’ ಎಂದು ಸ್ವತಃ ಕಂಗನಾ ಹೇಳಿಕೊಂಡಿದ್ದಾರೆ.‘ಶೂಟೌಟ್‌ ಅಟ್‌ ವಡಾಲಾ’ ಚಿತ್ರದಲ್ಲಿ ಗ್ಯಾಂಗ್‌ಸ್ಟರ್‌ ಗೆಳತಿಯಾಗಿ ಕಾಣಿಸಿಕೊಂಡಿದ್ದ ಕಂಗನಾಗೆ ಹೊಸ ಸಿನಿಮಾ ‘ರಿವಾಲ್ವರ್‌ ರಾಣಿ’ ಚಿತ್ರದಲ್ಲಿನ ಪಾತ್ರ ತುಂಬ ಸವಾಲಿನದ್ದಾಗಿತ್ತಂತೆ. ‘‘ಈ ಚಿತ್ರದಲ್ಲಿ ನನ್ನ ಪಾತ್ರ ಅತ್ಯಂತ ಕಷ್ಟದ್ದಾಗಿತ್ತು. ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ನಟಿಸುವುದು ಸವಾಲಿನ ಸಂಗತಿಯಾಗಿತ್ತು. ‘ರಿವಾಲ್ವರ್‌ ರಾಣಿ’ ಚಿತ್ರದಲ್ಲಿ ನನ್ನ ಪಾತ್ರ ಕಠಿಣವಾಗಿರುವುದರ ಜತೆಗೆ ಈ ಹಿಂದೆಯೂ ನಟಿಸಿದ ಪಾತ್ರಗಳಿಗಿಂತ ಭಿನ್ನವಾಗಿತ್ತು’’ ಎನ್ನುತ್ತಾರೆ ಅವರು.‘ಈ ಸಿನಿಮಾದ ಕಥೆ ಅಸಾಮಾನ್ಯವಾದುದು. ಬಾಲಿವುಡ್‌ನಲ್ಲಿ ಇಂಥ ಮಾದರಿಯ ಕತೆ ಇರುವ ಚಿತ್ರಗಳು ಬಂದಿರುವುದು ತೀರಾ ವಿರಳ. ಈ ಸಿನಿಮಾದಲ್ಲಿ ನಾನು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಬೆಳ್ಳಿತೆರೆಯ ಮೇಲೆ ನಾನು ಪ್ರೇಕ್ಷಕರಿಗೆ ಆಕರ್ಷಕವಾಗಿ ಅಥವಾ ಸುಂದರವಾಗಿ ಕಾಣಿಸದ ರೀತಿಯ ಪಾತ್ರವೊಂದನ್ನು ನಿರ್ವಹಿಸುತ್ತಿರುವುದು ಇದೇ ಮೊದಲು’ ಎನ್ನುವ ಕಂಗನಾ ಈ ಚಿತ್ರಕ್ಕಾಗಿ ರಿವಾಲ್ವರ್‌ ಬಳಕೆ ಮಾಡುವ ರೀತಿ ಅರಿತುಕೊಳ್ಳಲು ಪರಿಣತರಿಂದ ತರಬೇತಿ ಕೂಡ ಪಡೆದುಕೊಂಡಿದ್ದಾರಂತೆ.‘ರಿವಾಲ್ವರ್‌ ರಾಣಿ’ ಚಿತ್ರಕ್ಕೆ ಪಾತ್ರವರ್ಗವನ್ನು ಆಯ್ಕೆ ಮಾಡುವಾಗ ಈ ಪಾತ್ರ ನಿರ್ವಹಿಸಲು ಮೊದಲು ಟಬು ಅವರನ್ನು ಚಿತ್ರತಂಡ ಸಂಪರ್ಕಿಸಿತ್ತಂತೆ. ಕಾರಣಾಂತರಗಳಿಂದ ಅದು ಕಂಗನಾಗೆ ದೊರೆಯಿತು. ಕಳೆದ ಏಳು ವರ್ಷಗಳಿಂದ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಂಗನಾಗೆ, ಈ ಪಾತ್ರ ಹೆಚ್ಚಿನ ಖುಷಿ ಕೊಟ್ಟಿದೆಯಂತೆ. ಚಿತ್ರವನ್ನು ಸಾಯಿ ಕಬೀರ್‌ ನಿರ್ದೇಶಿಸುತ್ತಿದ್ದು, ಟಿಗ್ಮಾಂಶು ಧುಲಿಯಾ ಮತ್ತು ರಾಹುಲ್‌ ಮಿತ್ರಾ ಸಹ ನಿರ್ಮಾಪಕರಾಗಿದ್ದಾರೆ.  

ಪ್ರತಿಕ್ರಿಯಿಸಿ (+)