ರೀಚ್-1 ಮೆಟ್ರೊ ಯಶಸ್ವಿ

7

ರೀಚ್-1 ಮೆಟ್ರೊ ಯಶಸ್ವಿ

Published:
Updated:

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ ರೀಚ್- 1ರಲ್ಲಿ `ನಮ್ಮ ಮೆಟ್ರೊ~ ದ ರೈಲು ಸಂಚಾರ ನಿರೀಕ್ಷೆಯಂತೆ ಯಶಸ್ವಿಯಾಗಿ ಸಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ  ಎನ್.ಶಿವಶೈಲಂ ಹೇಳಿದರು.ರೀಚ್- 1ರಲ್ಲಿ ಮೆಟ್ರೊ ರೈಲು ಸಂಚಾರ ಪ್ರಾರಂಭವಾಗಿ ಶುಕ್ರವಾರಕ್ಕೆ (ಅ. 19) ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.`ಮೊದಲ ಹಂತದಲ್ಲಿ ನಿರ್ಮಾಣವಾಗುವ ಮೆಟ್ರೊ ಮಾರ್ಗದ ಒಟ್ಟು ಉದ್ದ 42.30 ಕಿ.ಮೀ. ಅದರಲ್ಲಿ 6.7 ಕಿ.ಮೀ ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ನಡೆದಿದೆ. ಈ ಚಿಕ್ಕ ಮಾರ್ಗದಲ್ಲಿ ಸಂಗ್ರಹವಾಗುವ ಆದಾಯದ ಲೆಕ್ಕದಲ್ಲಿ ನಿಗಮಕ್ಕೆ ಲಾಭ ಆಗಿದೆಯೇ ನಷ್ಟ ಆಗಿದೆಯೇ ಎಂದು ವಿಶ್ಲೇಷಣೆ ಮಾಡುವುದು ಸೂಕ್ತವಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.`ಯೋಜನೆ ರೂಪಿಸುವಾಗ ಅಂದಾಜು ಮಾಡಿದ ಸಂಖ್ಯೆಯ ಪ್ರಯಾಣಿಕರು ರೀಚ್- 1ರಲ್ಲಿ ನಿತ್ಯ ಸಂಚರಿಸುತ್ತಿದ್ದಾರೆ. ನಿರೀಕ್ಷಿಸಿದಷ್ಟು ಪ್ರಮಾಣದ ಆದಾಯ ಸಂಗ್ರಹವಾಗುತ್ತಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಪ್ರಯಾಣ ದರದಿಂದ ಸಂಗ್ರಹವಾಗಿರುವ ಆದಾಯ 11.28 ಕೋಟಿ ರೂಪಾಯಿ. ಜಾಹೀರಾತು ಮತ್ತಿತರ ಮೂಲಗಳಿಂದ 4ರಿಂದ 5 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದರೆ ರೀಚ್- 1ರಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಆಗಿರುವ ವಾರ್ಷಿಕ ವೆಚ್ಚ 24.65 ಕೋಟಿ ರೂಪಾಯಿ. ಈ ಅಂಕಿ ಅಂಶವನ್ನು ನೋಡಿ ನಷ್ಟವಾಗಿದೆ ಎಂದು ಹೇಳಲು ಬರುವುದಿಲ್ಲ.

 

ರೀಚ್- 1ರ ಮಾರ್ಗವು ಉತ್ತರ- ದಕ್ಷಿಣ ಕಾರಿಡಾರ್‌ನ ಭಾಗವಾಗಿದೆ. ಇಡೀ ಕಾರಿಡಾರ್‌ನಲ್ಲಿ ರೈಲು ಸಂಚಾರ ಆರಂಭವಾದ ಮೇಲೆ ಪ್ರತಿ ಕಿ.ಮೀ.ಗೆ ತಗುಲುವ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವು ಸಹಜವಾಗಿಯೇ ಕಡಿಮೆಯಾಗಲಿದೆ. ಪ್ರಯಾಣ ದರದ ಆದಾಯವೂ ಹೆಚ್ಚಾಗಲಿದೆ~ ಎಂದು ಅವರು ವಿವರಿಸಿದರು.`ಸಾರ್ವಜನಿಕರ ಸಲಹೆ ಸೂಚನೆಗಳ ಮೇರೆಗೆ ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿದ್ದೇವೆ. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಆರಂಭಿಸಿದ ವಾಹನ ನಿಲುಗಡೆ ತಾಣವು ಬಹಳ ಜನಪ್ರಿಯವಾಗಿದೆ. ಶ್ರವಣ ದೋಷವುಳ್ಳವರಿಗಾಗಿ ನಿಗಮದ ಸಿಬ್ಬಂದಿಗೆ ಸಂಕೇತ ಭಾಷೆಯ ತರಬೇತಿ ನೀಡಿದ್ದೇವೆ~ ಎಂದು ಅವರು     ಹೇಳಿದರು.`ಮೆಟ್ರೊ ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ನಿರ್ಮಿಸುವ ಯೋಜನೆ ಇಲ್ಲ. ನೆಲದಡಿಯ ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯ ಅನುಕೂಲಕ್ಕಾಗಿ ಗಾಜಿನ ತಡೆಗೋಡೆ ಅಳವಡಿಸುವುದು ಸೂಕ್ತ. ನೆಲದ ಮೇಲೆ ಮತ್ತು ಎತ್ತರಿಸಿದ ಮಾರ್ಗಗಳಲ್ಲಿ ಗಾಜಿನ ತಡೆಗೋಡೆ ಹಾಕಲು ಭಾರಿ ಖರ್ಚು ಮಾಡಬೇಕಾಗುತ್ತದೆ~ ಎಂದು ಹೇಳಿದ ಅವರು, `ಆತ್ಮಹತ್ಯೆ ಎಂಬುದು ಸಾಮಾಜಿಕ ಸಮಸ್ಯೆ. ಅದಕ್ಕೆ ಸಾಮಾಜಿಕ ಪರಿಹಾರವನ್ನೇ ಕಂಡುಕೊಳ್ಳಬೇಕು~ ಎಂದರು.`ಮೊದಲ ಹಂತದ ಯೋಜನೆಯ ಎಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭವಾದ ಒಂದು ವರ್ಷದ ನಂತರ ಸಾಲ ಮರುಪಾವತಿ ಆರಂಭವಾಗಲಿದೆ. ಯೋಜನೆಗೆ ಪಡೆದಿರುವ ಸಾಲದ ಮೇಲಿನ ಬಡ್ಡಿಯು ಯೋಜನಾ ವೆಚ್ಚದ ಭಾಗವೇ ಆಗಿದೆ~ ಎಂದು ಅವರು ತಿಳಿಸಿದರು.ನಿಗಮದ ನಿರ್ದೇಶಕರಾದ ಡಿ.ಡಿ.ಪಹುಜ (ಕಾರ್ಯಾಚರಣೆ ಮತ್ತು ನಿರ್ವಹಣೆ), ಬಿ.ಎಸ್. ಸುಧೀರ್ ಚಂದ್ರ (ಯೋಜನೆ), ನರಸಿಂಹ (ಹಣಕಾಸು), ವಕ್ತಾರ ಬಿ.ಎಲ್.ವೈ.ಚವಾಣ್ ಮೊದಲಾದವರು ಹಾಜರಿದ್ದರು.2ನೇ ಹಂತಕ್ಕೆ 3 ತಿಂಗಳಲ್ಲಿ ಕೇಂದ್ರದ ಒಪ್ಪಿಗೆ

`ನಮ್ಮ ಮೆಟ್ರೊ~ದ ಎರಡನೇ ಹಂತದ ಯೋಜನೆಗೆ ಇನ್ನು ಎರಡು ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಅಂತಿಮ ಒಪ್ಪಿಗೆ ದೊರಕುವ ನಿರೀಕ್ಷೆ ಇದೆ.

ಈ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಿವರ ಇಲ್ಲಿದೆ.`ದೆಹಲಿ ಮೆಟ್ರೊದ ಮೂರನೇ ಹಂತದ ಯೋಜನೆಗೆ ಬಂಡವಾಳ ಕ್ರೋಡೀಕರಿಸಿರುವ ಮಾದರಿಯಲ್ಲಿಯೇ ಬೆಂಗಳೂರಿನ ಮೆಟ್ರೊ ಎರಡನೇ ಹಂತಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಉದ್ದೇಶಿಸಲಾಗಿದೆ. `20 (ಕೇಂದ್ರದ ಪಾಲು): 30 (ರಾಜ್ಯ): 50 (ದೀರ್ಘಾವಧಿ ಸಾಲ)- ಈ ಅನುಪಾತದಲ್ಲಿ ದೆಹಲಿ ಮೆಟ್ರೊದ ಮೂರನೇ ಹಂತಕ್ಕೆ ಹಣಕಾಸು ಕ್ರೋಡೀಕರಿಸಲಾಗಿದೆ~.`ರೂ. 26405.14 ಕೋಟಿ ವೆಚ್ಚದ 72.09 ಕಿ.ಮೀ. ಉದ್ದದ ಎರಡನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಕೇಂದ್ರದ ವಿವಿಧ ಸಚಿವಾಲಯಗಳು ಯೋಜನಾ ವರದಿಯನ್ನು ಪರಿಶೀಲಿಸಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿವೆ.

 

ಕೇಂದ್ರದ ಸೂಚನೆ ಮೇರೆಗೆ ನಿಗಮದ ಆಡಳಿತ ಮಂಡಳಿ ಹಾಗೂ ಉನ್ನತಾಧಿಕಾರ ಸಮಿತಿ ಸಭೆಗಳಲ್ಲಿ ಎರಡನೇ ಹಂತದ ಯೋಜನೆಗೆ ಒಪ್ಪಿಗೆ ಪಡೆದುಕೊಂಡಿದ್ದೇವೆ~ `ಎರಡನೇ ಹಂತದ ಯೋಜನೆಯ ಪ್ರಸ್ತಾವವನ್ನು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಮುಂದೆ ಇನ್ನು ಹತ್ತು ದಿನಗಳ ಒಳಗೆ ಸಲ್ಲಿಸಲಿದ್ದೇವೆ. ಪಿಐಬಿ ಒಪ್ಪಿಗೆ ದೊರೆತರೆ ಕೇಂದ್ರ ಸರ್ಕಾರದ ಒಪ್ಪಿಗೆದೊರೆತಂತೆ~.`ಎರಡನೇ ಹಂತದ ಎರಡು ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಿಸ್ಟಮ್ಸ, ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ. ಖಾಸಗಿ ಹೂಡಿಕೆ ಆದರೆ ಒಟ್ಟು ವೆಚ್ಚದಲ್ಲಿ ಆರು ಸಾವಿರ ಕೋಟಿ ರೂಪಾಯಿಗಳಷ್ಟು ಹೊರೆತಗ್ಗಲಿದೆ~.ಮಲ್ಲೇಶ್ವರ- ಪೀಣ್ಯ ಮಾರ್ಗ: ಮಾರ್ಚ್‌ಗೆ ರೈಲು

`ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಿಂದ ಪೀಣ್ಯವರೆಗಿನ 10.5 ಕಿ.ಮೀ. ಉದ್ದದ ರೀಚ್- 3 ಮತ್ತು 3ಎ ಮಾರ್ಗದಲ್ಲಿ ಮುಂದಿನ   ಮಾರ್ಚ್ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲು ಸಿದ್ಧತೆಗಳು ನಡೆದಿವೆ. ಕೋರ್ಟ್‌ನಲ್ಲಿದ್ದ ಭೂ ಸ್ವಾಧೀನ ಪ್ರಕರಣಗಳು ಇತ್ಯರ್ಥವಾಗಿರುವುದರಿಂದ ಪೀಣ್ಯದಿಂದ ಹೆಸರಘಟ್ಟವರೆಗಿನ ರೀಚ್ 3ಬಿ ಮಾರ್ಗದಲ್ಲಿ 2013ರ ಜುಲೈ ವೇಳೆಗೆ ರೈಲು ಸಂಚಾರವನ್ನು ವಿಸ್ತರಿಸಲಾಗುವುದು~ ಎಂದು ಶಿವಶೈಲಂ ತಿಳಿಸಿದರು.`ಪೀಣ್ಯ ಡಿಪೋದ ಹಳಿಗಳ ಮೇಲೆ ಈಗಾಗಲೇ ರೈಲು ಗಾಡಿಗಳ  ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಜನವರಿ ಅಥವಾ ಫೆಬ್ರುವರಿಯಲ್ಲಿ ರೀಚ್- 3, 3ಎ ಮಾರ್ಗದಲ್ಲಿ ರೈಲು ಗಾಡಿಗಳ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು~ ಎಂದು ಅವರು ಹೇಳಿದರು.`ಕೆ.ಆರ್.ರಸ್ತೆಯಿಂದ ಪುಟ್ಟೇನಹಳ್ಳಿ ಕ್ರಾಸ್‌ವರೆಗಿನ ರೀಚ್- 4 ಮಾರ್ಗವು ಇನ್ನು 10 ತಿಂಗಳಲ್ಲಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ. ಆ ಮಾರ್ಗದಲ್ಲಿ ಡಿಪೋ ಇಲ್ಲ. ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದರೆ ಆ ಮಾರ್ಗದ ಕೆ.ಆರ್. ರಸ್ತೆಯಲ್ಲಿ ತಾತ್ಕಾಲಿಕ ಡಿಪೋ ನಿರ್ಮಿಸಿ ರೈಲು ಓಡಿಸಲಾಗುವುದು. ಈ ಸಂಬಂಧ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದಿದ್ದೇನೆ~ ಎಂದು ಅವರು ವಿವರಿಸಿದರು.ವರ್ಷದ ಹರ್ಷ: ಸರಳ ಆಚರಣೆ

ಮೆಟ್ರೊ ರೈಲು ಸಂಚಾರಕ್ಕೆ ವರ್ಷ ತುಂಬಿದ ಸಂದರ್ಭವನ್ನು ಸರಳವಾಗಿ ಆಚರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿರ್ಧರಿಸಿದೆ.   ಶನಿವಾರ (ಅ. 20) ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಡೆಯುವ ಆ ಕಾರ್ಯಕ್ರಮದಲ್ಲಿ 26 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾ  ಗುವುದು ಎಂದು ನಿಗಮದ ವಕ್ತಾರ ಬಿ.ಎಲ್.ವೈ. ಚವಾಣ್ ತಿಳಿಸಿದರು.2014ರ ಜುಲೈಗೆ ಮೆಜೆಸ್ಟಿಕ್ ನಿಲ್ದಾಣ ಸಿದ್ಧ

ಮೆಜೆಸ್ಟಿಕ್‌ನಲ್ಲಿ ಉತ್ತರ- ದಕ್ಷಿಣ ಕಾರಿಡಾರ್ ಮತ್ತು ಪೂರ್ವ- ಪಶ್ಚಿಮ ಕಾರಿಡಾರ್‌ಗಳ ಎರಡೂ ನಿಲ್ದಾಣಗಳು ಒಂದರ ಮೇಲೊಂದರಂತೆ ಎರಡು ಹಂತದ ಇಂಟರ್‌ಚೇಂಜ್ ನಿಲ್ದಾಣವು 2014ರ ಜುಲೈ ವೇಳೆಗೆ ಸಿದ್ಧವಾಗಲಿದೆ ಎಂದು ಶಿವಶೈಲಂ ವಿಶ್ವಾಸ ವ್ಯಕ್ತಪಡಿಸಿದರು.ಅಲ್ಲಿ ಯೋಜನೆಗೆ ಅಗತ್ಯವಿರುವ ಜಮೀನಿನ ಶೇಕಡಾ 80 ಭಾಗ ನಿಗಮದ ವಶಕ್ಕೆ ಬಂದಿದೆ. ಉಳಿದ ಶೇ 20ರ ಭಾಗದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಇದೆ. ಬದಲಿ ಬಸ್ ನಿಲ್ದಾಣ ಕಾರ್ಯ ಪ್ರಗತಿಯಲ್ಲಿದ್ದು, ಅದು ಮುಗಿದ ಕೂಡಲೇ ನಿಗಮದ ವಶಕ್ಕೆ ಉಳಿದ ಜಾಗ ಸಿಗಲಿದೆ. ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.ನಾಗವಾರದಿಂದ ಬಿಐಎಎಲ್‌ಗೆ ಮೆಟ್ರೊ

`ನಾಗವಾರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ಗೆ ಮೆಟ್ರೊ ಸಂಪರ್ಕ ಕಲ್ಪಿಸುವ ಸಾಧ್ಯಾಸಾಧ್ಯತೆ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ ತಯಾರಿಸುತ್ತಿರುವ ವರದಿ ಅಂತಿಮ ಹಂತದಲ್ಲಿದೆ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ವರದಿ ಸಿದ್ಧಪಡಿಸಲಾಗುತ್ತಿದೆ~ ಎಂದು ಶಿವಶೈಲಂ ಹೇಳಿದರು.`6,500 ಕೋಟಿ ವೆಚ್ಚದ ಅತಿ ವೇಗದ ರೈಲು ಯೋಜನೆಗೆ ಪರ್ಯಾಯವಾಗಿ ಮೆಟ್ರೊ ಸಂಪರ್ಕ ಯೋಜನೆ ರೂಪಿಸಲಾಗುತ್ತಿದೆ. ನಾಗವಾರದಿಂದ ಬಿಐಎಎಲ್‌ವರೆಗಿನ 21 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಐದು ಸಾವಿರ ಕೋಟಿ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ~ ಎಂದು ಅವರು ವಿವರಿಸಿದರು.`ಅತಿ ವೇಗದ ರೈಲಿನಲ್ಲಿ ಬಿಆರ್‌ವಿ ಪೊಲೀಸ್ ಕವಾಯತು ಮೈದಾನದಿಂದ ಹೆಬ್ಬಾಳ ಮಾರ್ಗವಾಗಿ 25 ನಿಮಿಷಗಳಲ್ಲಿ ಬಿಐಎಎಲ್ ತಲುಪುವ ಗುರಿ ಇರಿಸಿಕೊಳ್ಳಲಾಗಿತ್ತು. ಮೆಟ್ರೊದಲ್ಲಿ ಕಾಮರಾಜ್ ರಸ್ತೆಯ ನೆಲದಡಿಯ ನಿಲ್ದಾಣದಿಂದ ಬಿಐಎಎಲ್‌ಗೆ 44 ನಿಮಿಷಗಳಲ್ಲಿ ತಲುಪಬಹುದು. ನಾಗವಾರದಿಂದ ಬಿಐಎಎಲ್ ನಡುವೆ ನಿಲ್ದಾಣಗಳ ಸಂಖ್ಯೆ ಹೆಚ್ಚಾದರೆ ಸಂಚಾರ ಸಮಯವು 11 ನಿಮಿಷಗಳಷ್ಟು ಹೆಚ್ಚಾಗಬಹುದು~ ಎಂದು ಅವರು ತಿಳಿಸಿದರು.ಮಳೆ ನಿಂತ ಮೇಲೆ ರಸ್ತೆಅಭಿವೃದ್ಧಿ

ಮೆಟ್ರೊ ಕಾಮಗಾರಿ ನಡೆದಿರುವ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಮಳೆ ನಿಂತ ಮೇಲೆ ಕೈಗೊಳ್ಳಲಾಗುವುದು ಎಂದು ಶಿವಶೈಲಂ ತಿಳಿಸಿದರು.`ಮೆಟ್ರೊ ಎರಡನೇ ಹಂತದ   ಯೋಜನೆಗೆ ಒಳಪಡುವ ರಸ್ತೆಗಳಲ್ಲಿ ಯೋಜನೆ ನೆಪ ಹೇಳಿ ರಸ್ತೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿಲ್ಲಿಸಲಾಗಿದೆ. ಹಾಳಾದ ರಸ್ತೆಯನ್ನು ನಿಗಮವು ಅಭಿವೃದ್ಧಿ ಪಡಿಸಿಕೊಡಬೇಕೆ?~ ಎಂದು ಅವರು ಪ್ರಶ್ನಿಸಿದರು.ಟೋಕನ್ ಹಾಕದಿದ್ದರೆ ದಂಡ

ಮೆಟ್ರೊ ರೈಲಿನಲ್ಲಿ ಸಂಚರಿಸಲು ಪಡೆದ ಟೋಕನ್‌ಗಳನ್ನು ಪ್ರಯಾಣಿಕರು ನಿರ್ಗಮಿಸುವಾಗ ನಿಲ್ದಾಣಗಳಲ್ಲಿ ಸೂಚಿಸಿದ ಸ್ಥಳದಲ್ಲಿ ಹಾಕಬೇಕು. ಹಾಕದೇ ಇದ್ದರೆ ಒಂದು ಟೋಕನ್‌ಗೆ ರೂ 200 ದಂಡ ವಿಧಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಡಿ.ಡಿ.ಪಹುಜ ಹೇಳಿದರು.`ಅಂತಹ ಪ್ರಕರಣ ಕಂಡು ಬಂದಾಗ ಮೊದಲಿಗೆ ಎಚ್ಚರಿಕೆ ನೀಡುತ್ತೇವೆ. ಮತ್ತೆ ಅದೇ ತಪ್ಪು ಮಾಡಿದರೆ ದಂಡ ಹಾಕಲಾಗುವುದು. ಆರಂಭದಲ್ಲಿ ಇಂತಹ 25ರಿಂದ 30 ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 7ರಿಂದ 8ಕ್ಕೆ ಇಳಿದಿದೆ~ ಎಂದು ಅವರು  ಹೇಳಿದರು.`ಮೆಟ್ರೊ ನಿಲ್ದಾಣಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ವಿವಿಧ ಪ್ರಕರಣಗಳಲ್ಲಿ ಇದುವರೆಗೆ 15,000 ರೂಪಾಯಿಗೂ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ~ ಎಂದು ಅವರು ಹೇಳಿದರು.

 
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry