ಮಂಗಳವಾರ, ಮೇ 24, 2022
27 °C

ರೀಟಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಹತ್ತನೆಯ ದಿನ. ಹೊರಜಗತ್ತಿನಲ್ಲಿ ಹತ್ತು ಸಲ ಸೂರ್ಯ ಮೂಡಿದ ಮತ್ತು ಮುಳುಗಿದ. ಹತ್ತು ಸಲ ಮಾಖಿಜಾನಿಯ ಮನೆಸೇವಕಿ ಮಾಯಾ ಕಣ್ಣು ಒರೆಸಿಕೊಂಡು, ದೀರ್ಘವಾಗಿ ಆಕಳಿಸುತ್ತಾ ಹಾಲಿನ ಸರದಿಯಲ್ಲಿ ನಿಂತಳು.ಈಗ ಸ್ವಲ್ಪ ಸಮಾಧಾನವೆನಿಸುತ್ತದೆ. ತಂಪು ಮತ್ತು ಶಾಂತ ಉಸಿರಾಟ ತೀರಾ ನಿಯಮಿತ. ಎಳೆದುಕೊಳ್ಳುವಾಗ ಮೂರು, ಬಿಡುವಾಗ ನಾಲ್ಕು ಅಂಕೆ ಎಣಿಸಬಹುದು. ಯೋಚಿಸಿದರೆ ವಿಚಿತ್ರವೆನಿಸುತ್ತದೆ. ನಾವು ಒಳಗೆ ಎಳೆದುಕೊಂಡಷ್ಟೇ ಉಸಿರು ಹೊರಗೆ ಬಿಡುತ್ತೇವೆ. ಹೀಗಿರುವಾಗ ಬಿಡುವಾಗ ಹೆಚ್ಚು ಸಮಯವೇಕೆ ಬೇಕು? ಆದರೆ ಬೇಕು ಎನ್ನುವುದು ಮಾತ್ರ ಸತ್ಯ.ನೀವು ಉಸಿರು ಎಳೆದುಕೊಳ್ಳುವಾಗ ಮೂರು, ಬಿಡುವಾಗ ನಾಲ್ಕು ಎಣಿಸಲು ಬರುವಂತಿದ್ದರೆ, ಹೀಗೆ ವರುಷಗಟ್ಟಲೆ ಮಾಡಲು ಬರುವಂತಿದ್ದರೆ, ಮಾಡುತ್ತಲೇ ಉಳಿದರೆ, ಇದಕ್ಕಿಂತ ಹೆಚ್ಚಿಗೆ ಮತ್ತೇನು ಬೇಕು? ನಿಮಗೆ ಇಡೀ ಜನ್ಮ ಶಾಂತಿ ಲಭಿಸುತ್ತದೆ. ನಿಮ್ಮ ಆಯುಷ್ಯ ಮತ್ತು ಕೂದಲು ಉದ್ದವಾಗಬಲ್ಲದು, ನಿಮ್ಮ ದೇಹದ ನೆಣ ಹಿಡಿತದಲ್ಲಿರಬಲ್ಲದು. ಕಟ್ಟಕಡೆಗೆ ನೀವೆಲ್ಲ ಮೋಹದಿಂದ ಮೋಕ್ಷ ಪಡೆಯುತ್ತೀರಿ. ಮೋಹ ಸಾಧನೆಯ ಚಮತ್ಕಾರ.ನೆಣ, ಅದು ಮೊದಲು ಬೆಳೆಯುತ್ತದೆ. ಅದರ ರಕ್ಷಣೆಗೆ ಆಹಾರ ಬೇಕು. ಸೇವಿಸಿದ ಆಹಾರದಿಂದ ಅಧಿಕ ನೆಣ ಬೆಳೆಯುತ್ತದೆ. ಕ್ರಮೇಣ ಜನರು ನಿಮಗೆ `ಫ್ಯಾಟ್ ಎಂಡ್ ಜಾಲಿ~ ಎಂದು ಕರೆಯಲಾರಂಭಿಸುತ್ತಾರೆ.`ನೀನು ತೀರಾ ಸೊರಗಿದ್ದಿ, ಅಕ್ಕ~ ಎಂದು ನಿನ್ನೆ ಸಂಗೀತ ಹೇಳಿದಳು. ಇದ್ದಿರಲೂಬಹುದು. ನೋಡಲೇ? ನರ್ಸ್ ಕನ್ನಡಿ ತಂದು ಕೊಡಬಹುದೇ? ನರ್ಸ್! ನರ್ಸ್! ಇವತ್ತು ಹೇಳಿದರೆ ನಾಳೆ ಕನ್ನಡಿ ಸಿಗಬಹುದು. ಅದಕ್ಕಿಂತ ಮೊದಲು ಅವಳು `ಕನ್ನಡಿ ಬೇಕೆ?~ ಎಂದು ಕೇಳಬಹುದು. ಹಣೆತುಂಬ ಗಂಟು ಕಾಣಿಸಬಹುದು. ನಾಲಿಗೆಯನ್ನು ಚಪ್ಪರಿಸಿ ಲೊಚಗುಡಬಹುದು.ಬಡಪಾಯಿ ಸಿಸ್ಟರ್. ಅವಳಿಗೆ ಹೆಸರಿಲ್ಲ, ಅವಳು ಬರೇ ಸಿಸ್ಟರ್, ಸಂಪೂರ್ಣ ಜಗತ್ತಿನ ಸೋದರಿ. `ಜನ-ಭಗಿನಿ, ಜಗ-ಜಗ-ಜಗ-ಭಗಿನಿ! ನಿನ್ನ ದುರಂತವನ್ನು ನಾವು ಅರಿತೆವು~, ನಿನ್ನತ್ತ ನೋಡುವವನು ನಿನ್ನ ಕೈಯಲ್ಲಿ ಮಂದವಾಗಿ ಉರಿಯುವ ಮೇಣಬತ್ತಿಯನ್ನು ಅಪೇಕ್ಷಿಸುತ್ತಾನೆ. ನಿನ್ನ ಹಣೆಗಂಟು ನೋಡಿ ಹೇಳುತ್ತಾನೆ- `ಇದೆಂಥ ಅಧಃಪಾತ! ಫ್ಲಾರೆನ್ಸಳನ್ನು ಮರೆತೆಯಲ್ಲ? ಎಲ್ಲಿ ಹೋಯಿತು ನಿನ್ನ ನಿಷ್ಠೆ? ಎಲ್ಲಿ ಹೋಯಿತು ಮಲ-ಮೂತ್ರ-ವಾಂತಿ ಬಳಿಯುವ ನಿಮ್ಮ ಪ್ರೇಮ? ಫ್ಲಾರೆನ್ಸ್, ನಿನ್ನ ಮೇಣಬತ್ತಿಯು ಶಾಶ್ವತವಾಗಿ ನಂದಿಹೋಯಿತೇ, ನಂದಿ ಹೋಯಿತು~.`ಸಿಸ್ಟರ್, ನನಗೆ ಕನ್ನಡಿ ತಂದು ಕೊಡ್ತೀರಾ? ಮುಖ ನೋಡಿ ಹತ್ತು ದಿನವಾಯಿತು~.

`ಕನ್ನಡಿ ಬೇಕಿದ್ದರೆ ಮನೆಯಿಂದ ತರಿಸಿಕೊಳ್ಳಿ~.`ಮನೆಯಿಂದಂತೂ ತರಿಸುತ್ತೇನೆ. ಈಗ ಸಿಕ್ಕರೆ ಚೆನ್ನಾಗಿತ್ತು~.

ಸಿಸ್ಟರ್ ಕಾಲೆಳೆಯುತ್ತ ಹೋಗುತ್ತಾಳೆ. ಹಾಂ. ಹೋಗಿ ಹೇಳು ಮೇಟ್ರನ್‌ಗೆ ಏಳು ನಂಬರ್‌ಗೆ ಕನ್ನಡಿ ಬೇಕಾಗಿದೆ. ಅನಂತರ ನಕ್ಕು ಬಿಡಿ ಕಿಸಿಕಿಸಿ. ಅದೇ ನಿಮಗೆ ಸಿಗುವ ಮನರಂಜನೆ. ಹನ್ನೆರಡು ಗಂಟೆ ಆ ಬಿಳಿಬಟ್ಟೆ ತೊಡುವುದು ಜನರ ಮಾತುಕತೆ ಆಲಿಸುವುದು. ಗಂಡಸರ ವಾರ್ಡಿನಲ್ಲಿ ಸಮಾಧಾನ ನೀಡುವ ಕೈಯನ್ನು ಹುಡುಕುವುದು.ಖರೆಯೆಂದರೆ ನೀವೆಲ್ಲಾ ತೀರಾ ಮುದುಡಿದ್ದೀರಿ. ನಿಮ್ಮ ಮುದಿ ತಾಯ್ತಂದೆಗಳಿರುವುದು ತ್ರಿಶೂರಿನಲ್ಲೋ ಅಮರಾವತಿಯಲ್ಲೋ? ಅವರ ಕಾಳಜಿಯಿಂದ ನಿಮ್ಮ ಮನಸ್ಸು ಮೊದಲೇ ದಣಿದಿರುತ್ತದೆ. ಅಂಥದರಲ್ಲಿ ನಮ್ಮ ಬೇಡಿಕೆ. ನರ್ಸ್, ಬೇಕಾಗಿಲ್ಲ ಕನ್ನಡಿ. ನಾನು ಮತ್ತೂ ಒಂದು ದಿನ ತಾಳಿಕೊಳ್ಳಬಲ್ಲೆ. ಆದರೆ ಉಬ್ಬಿದ ನನ್ನ ಗಲ್ಲ ನಿಜವಾಗಿಯೂ ಗುಳಿ ಬಿದ್ದಿದೆಯೋ? ಹಾಗಾಗಿದ್ದರೆ ನನ್ನ ಅರ್ಧ ಅನಾರೋಗ್ಯ ಗುಣಮುಖಗೊಳ್ಳುತ್ತದೆ. ಗೊತ್ತಿದೆಯೋ? ನೀವೀಗ ನನಗೆ ಔಷಧಿಯ ಗುಳಿಗೆ ತಂದುಕೊಡುತ್ತೀರಿ. ಅದಂತೂ ನಿಮ್ಮ ಕೆಲಸವೇ. ಅದನ್ನು ಸೇವಿಸುವುದರಿಂದ ನನ್ನ ಆರೋಗ್ಯ ಸುಧಾರಿಸುತ್ತದೆಂದು ನೀವು ನನಗದನ್ನು ನೀಡುತ್ತೀರಿ. ಕನ್ನಡಿ ನೀಡಿದರೆ ನಾನು ಮತ್ತೂ ಸುಧಾರಿಸಬಲ್ಲೆ.ನನ್ನ ಉಬ್ಬಿದ ದೇಹ ಕಂಡು ನನಗೇ ಎಂಥ ಹೇಸಿಗೆ ಮೂಡುತ್ತಿತ್ತು ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲ! ಲಠ್ಠಜನ `ಜಾಲಿ~ಯಾಗಿರುತ್ತಾರೆಂದು ಜನ ಅಂದುಕೊಳ್ಳುತ್ತಾರೆ. ನೀವೂ ಇಂಥ ದೇಹವನ್ನು ಹೊತ್ತು ನೋಡಿ, ಆಗ ನಿಮಗೂ ಗೊತ್ತಾಗಬಹುದು. ನನ್ನ ದೇಹದ ನೆನಪು ಮಾಡಿಕೊಡುವ ಜನರ ಬಗೆಗೆ ನಾನು ಅದೆಷ್ಟು ಕೆರಳುತ್ತಿದ್ದೆ ಗೊತ್ತೆ.ತಂದೂರಿ ಚಿಕನ್‌ನಿಂದಲೇ ಅವರನ್ನು ಹೊಡೆಯಬೇಕೆಂದಿದ್ದೆ. ಸಾಳವಿ ಬಂದು ತಡೆಗಟ್ಟದಿದ್ದರೆ ಏನೆಲ್ಲ ನಡೆದುಹೋಗುತ್ತಿತ್ತು. ಇಬ್ಬರು ತರುಣರು, ಇಬ್ಬರು ತರುಣಿಯರು ಒಂದು ಹೋಟೇಲಿನಲ್ಲಿ, ಎಲ್ಲಾ ಕಾಲೇಜ್ ಟೈಪ್. ಒಬ್ಬರು ಮತ್ತೊಬ್ಬರನ್ನು ತುಂಬಾ ಇಂಪ್ರೆಸ್ ಮಾಡುವುದರಲ್ಲಿ ತೊಡಗಿದ್ದರು. ಚುಯಿಂಗ್ ಗಮ್ ಜಗಿಯುತ್ತಿದ್ದರು. ನನ್ನನ್ನು ಕಂಡು ಪರಸ್ಪರರು ಮೊಣಕೈಯಿಂದ ತಿವಿದು ಏನೋ ಪಿಸುಗುಟ್ಟಿ ನಗಲಾರಂಭಿಸಿದರು. ಖ್ಯಾ ಖ್ಯಾ ಖ್ಯಾ! ನನ್ನ ತಲೆ ಗಿರಕ್ಕೆಂದಿತು! ಪ್ಲೇಟಿನಲ್ಲಿದ್ದ ಕೆಂಪು ತಂದೂರಿಯನ್ನು ಕೈಗೆತ್ತಿಕೊಂಡೆ. ಅಷ್ಟರಲ್ಲಿ ಸಾಳವಿ ಬಂದು ಕೈಹಿಡಿದ. ಅವನ ಮುಖ ತಂದೂರಿಯಂತೆ ಕೆಂಪು. ಪೂರ್ ಫೆಲೋ!ಕಳೆದ ಐದು ವರುಷಗಳಿಂದ ಅವನು ನನ್ನನ್ನು ತುಂಬಾ ಸಂಭಾಳಿಸಿದ. ಬಡಪಾಯಿಯದು ತೀರಾ ಸಂಕೋಚದ ಸ್ವಭಾವ! ನನ್ನ ಜತೆ ಹೊರಬೀಳುವುದೆಂದರೆ ಅವನಿಗೆ ಧರ್ಮಸಂಕಟ. ಯಾರಾದರೂ ನೋಡಿದರೆ? ಬುರ್ಖಾ ಹಾಕಿಕೊಂಡು ಬಾ-ಎಂದು ನಾನು ಹೇಳುತ್ತಿದ್ದೆ. ಅದರಿಂದ ತುಂಬ ಸಿಟ್ಟಿಗೇಳುತ್ತಿದ್ದ. ಆದರೆ ನಾನು ಸಿಟ್ಟಿಗೆದ್ದೆನೆಂದರೆ ಬರುತ್ತಿದ್ದ. ಆದರೆ ಈ ಹತ್ತು ದಿನಗಳಲ್ಲಿ ಅವನು ಮುಖವನ್ನೇ ತೋರಿಸಲಿಲ್ಲ. ಸಾಳವಿ.... ಸಾಳವಿ-ಕೊನೆಗೂ ನನ್ನೆದುರಿಗೆ ಸೋತಿದ್ದೀಯಾ ನೀನು.

ಹೋಗಲಿ, ನನಗಂತೂ ತೀರಾ-ತೀರಾ ಹಗುರವೆನಿಸುತ್ತಿದೆ. ಖಂಡಿತ ನನ್ನ ತೂಕ ಕಡಿಮೆಯಾಗಿರಬೇಕು.`ಸಿಸ್ಟರ್, ಕನ್ನಡಿ ಕೊಡ್ತೀರಲ್ಲಾ?~ ಸಿಸ್ಟರ್‌ಗೆ ಕಿವಿ ಕಿವುಡಾಗಿರಬೇಕು.

ಖರೆಯೆಂದರೆ ನರ್ವಸ್ ಬ್ರೇಕ್‌ಡೌನ್ ಉಪಚಾರದಲ್ಲೇ ಕನ್ನಡಿಯ ಸಮಾವೇಶ ಮಾಡಬೇಕು. ನನ್ನನ್ನು ತಾನೇ ದಿಟ್ಟಿಸಿ ನೋಡಿ ಮತ್ತೆ ನನ್ನ ಪರಿಚಯ ಮಾಡಿಕೊಳ್ಳಬೇಡವೇ? ಮುಂದಿನ ಆಯುಷ್ಯವನ್ನು ಸ್ವಂತದ ಜತೆಗೇ ಕಳೆಯಬೇಕಾಗಿದೆ. ನಾನೇ ಇವಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.ನಾನು ಇವಳು. ನಾನೇ ಇವಳು. ನಾನು ಇವಳೇ. ಅಮ್ಮನ ಬಳಿಯ ಒಂದು ಕನ್ನಡಿಯನ್ನು ಸಂಗೀತಾಳಿಗೆ ಕದ್ದು ತರುವಂತೆ ಹೇಳಬೇಕು. ಮಲಬಾರ್ ಹಿಲ್‌ನ ದೊಡ್ಡ ಮನೆಯಲ್ಲಿ ಎಂತೆಂಥ ಕನ್ನಡಿಗಳಿದ್ದವು. ಇಂಗಿಷ್, ಜರ್ಮನ್.... ಮಮ್ಮಿ ಡ್ಯಾಡಿಯ ಬೆಡ್‌ರೂಮಿನ ಚೊಕ್ಕ ಏಳಡಿ ಎತ್ತರದ ಕನ್ನಡಿ. ಸುತ್ತಲೂ ಚಿನ್ನದ ಚೌಕಟ್ಟು. ತನ್ನ ಮತ್ತು ತನ್ನ ಪ್ರತಿಬಿಂಬದಲ್ಲಿ ಯಾವುದೇ ಸ್ಪೃಶ್ಯ ಪದಾರ್ಥ ಇರುವುದೇ ಸಾಧ್ಯವಿಲ್ಲೆಂದು ಅನಿಸುತ್ತಿತ್ತು. ಇರಲೇಬೇಕು, ಇಲ್ಲದಿದ್ದರೆ ಅದರಾಚೆಯ ನಾನು ಇಷ್ಟೆಲ್ಲ ತೇಜಸ್ವಿಯಾಗಿ ಕಾಣುವುದು ಹೇಗೆ ಸಾಧ್ಯ?ನನ್ನ ಕೋಣೆಯಲ್ಲಿ ಒಂದು ನಿಲುವುಗನ್ನಡಿಯಿತ್ತು. ಅದರ ಚೌಕಟ್ಟಿಗೆ ಗುಲಾಬಿ ನೀಲಿ ಉಬ್ಬು ಇತ್ತು. ಮಮ್ಮಿಯ ಪರ್ಸಿನಲ್ಲಿ ಪ್ರತಿದಿನ ಹೊಸದೊಂದು ಕಾಂಪಾಕ್ಟ್. ನಾನು ನೌಕರಿ ಸೇರಿದಾಗ ಅದರಲ್ಲಿ ಒಂದನ್ನು ಬೇಡಿದೆ. ಎಲ್ಲ ಹಳೆಯ ಸಾಮಾನಿನ ಟ್ರಂಕಿನಲ್ಲಿತ್ತು. ಆದರವಳು ಒಂದೂ ಕಾಂಪಾಕ್ಟ್ ಕೊಡಲಿಲ್ಲ. ಇನ್ನು ಪೌಡರನ್ನೇ ಹಚ್ಚಿಕೊಳ್ಳಬಾರದೆಂದು ನಿರ್ಧರಿಸಿದೆ. ಇದೇ ನನ್ನ ಸೌಂದರ್ಯದ ಗುಟ್ಟು! ಕೋಮಲ, ನುಣುಪು, ತೇಜಸ್ವಿಯಾದ ಕಾಂತಿ ಬೇಕೆ? ಹಾಗಾದರೆ ಪ್ರತಿದಿನ ಬೆಳಿಗ್ಗೆ ಆರೂವರೆಗೆ ಶೌಚಕ್ಕೆ ಹೋಗಿ, ಎಣ್ಣೆ-ತುಪ್ಪ ತಿನ್ನಬೇಡಿ, ನಿಯಮಿತ ವ್ಯಾಯಾಮ ಮಾಡಿ, ಆಗಸ ಕುಸಿದು ಬಿದ್ದರೂ ಚಿಂತಿಸಬೇಡಿ. ಪೌಡರ್ ಹಚ್ಚಿಕೊಳ್ಳಬೇಡಿ-ಎಂದು ಬೆಳ್ಳಿ ಪರದೆಯಲ್ಲಿ ಮಿಂಚಿದ ರೀಟಾ ವೇಲಿಣಕರ ಹೇಳುತ್ತಾರೆ.ಅದೆಂಥ ಹೆಸರೋ ದರಿದ್ರದ್ದು; ರೀಟಾ ಅಂತೆ. ಆ ಹೆಸರಿಗೆ ಏನಾದರೂ ವ್ಯಕ್ತಿತ್ವ ಎನ್ನುವುದು ಇದೆಯೇ? ಏನಾದರೂ ವರ್ಚಸ್ಸು? ರೀಟಾ-ಟಾಟಾ, ಕಾಟಾ, ಬಾಟಾ, ಪಾಟಾ, ಒಂದು ಸ್ವಾಭಿಮಾನದ ಶಬ್ದವೂ ಹೊಂದುವುದಿಲ್ಲ. ಏರಿಕ ಹೇಳುತ್ತಿದ್ದ. ಈ ಹೆಸರು ಬದಲಾಯಿಸಿ ಬಿಡು, ಏಕೆ ಬೇಕು ಗುಲಾಮಗಿರಿಯ ಗುರುತು? ಒಟ್ಟಿನಲ್ಲಿ ಇರುವದೆಲ್ಲ ಉರ್ಧ್ವಸ್ತಗೊಳಿಸಿ, ಮತ್ತೆ ಹೊಸದಾಗಿ ಬದುಕು ಆರಂಭಿಸಿ.

 

ಅಂದರೆ ಸ್ವಂತದ, ದೇಶದ ಇತಿಹಾಸವನ್ನು ಅಲ್ಲಗಳೆಯಿರಿ. ಅದು ಜರುಗಲೇ ಇಲ್ಲ ಎಂದು ಆಭಾಸ ನಿರ್ಮಾಣ ಮಾಡಿ. ಇದಕ್ಕೆ ನನ್ನ ಒಪ್ಪಿಗೆಯಿಲ್ಲ. ನನ್ನ ಹೆಸರು `ರೀಟಾ~ ಎಂಬುದರಲ್ಲಿ ದೇಶದ ಚರಿತ್ರೆ ತುಂಬಿದೆ. ನಾನು ಈ ಚರಿತ್ರೆಗೆ ಒಪ್ಪಿಗೆ ನೀಡುತ್ತ ಆಯುಷ್ಯವಿಡೀ ಈ ಹೆಸರಿನ ಶಿಲುಬೆಯನ್ನು ಹೊರುತ್ತೇನೆ.ಅಂಡ್ ವ್ಹಾಟ್ ಅಟ್ ಎ ಕ್ರಾಸ್! ಜನರ ಮೊದಲ ಭೇಟಿಯಲ್ಲೇ ಪ್ರಶ್ನೆ! `ರೀಟಾ?~

`ಹೌದು~.

ಅನಂತರ ನೇರವಾಗಿ ಮತ್ತೊಂದು ಪ್ರಶ್ನೆ: `ಕ್ರಿಶ್ಚಿಯನ್ ಜಾತಿಯವರೇನು?~~

`ಅಲ್ಲ~.

`ಹಾಗಾದರೆ ಇದೆಂಥ ಹೆಸರು?~

ಅಪ್ಪನ ಮನದಿಚ್ಛೆ. ಅವನು ಮೊದಲು ವೆಸ್ಟ್‌ಕೋಟ್ ಧರಿಸುತ್ತಿದ್ದ, ಬೋ-ಟೈ ತೊಡುತ್ತಿದ್ದ. ಪೈಪ್ ಸೇದುತ್ತಿದ್ದ (ಈಗಲೂ ಕೈಯಲ್ಲಿ ಪೈಪ್ ಇರುತ್ತದೆ. ಆದರೆ ಅದರಲ್ಲಿ ತಂಬಾಕು ಇರುವುದಿಲ್ಲ. ಅದರ ಬದಲಿಗೆ ಹಳೆಯ ಬ್ರೊಕೇಡಿನ ಹೌಸ್ ಕೋಟ್ ಬಂದಿದೆ). ಎಂದರೆ ಇದೇನು ಉತ್ತರವೇ?ಹೀಗಾಗಿ ಪ್ರಶ್ನೆ ಕ್ರಮಾಂಕ ಮೂರು: `ಅಂದರೆ ನೀವು ಹಿಂದೂ ಅಲ್ಲವೇ?~

ಈಗ ಬಂತು ಫಜೀತಿ. ಏಕೆಂದರೆ ಈ ಪ್ರಶ್ನೆಗೆ ನನ್ನ ಹತ್ತಿರವಿಲ್ಲ ಉತ್ತರ. ಅವರು ಹಿಂದುತ್ವದ ಬಗೆಗೆ ಆತ್ಮವಿಶ್ವಾಸದಿಂದ ಬಹಳ ಮಾತನಾಡುತ್ತಿದ್ದರು. ಅಲ್ಲದೇ ಬಾಲ್ಯದಲ್ಲಿ ಹುಡುಗಿಯರಾದ ನಮಗೆ ಹಬ್ಬ-ಹುಣ್ಣಿಮೆಗಳಲ್ಲಿ ಎರಡನೇ ಪಂಕ್ತಿಗೆ ಕೂರಿಸುತ್ತಿದ್ದರು. ನಮ್ಮನ್ನು ನೋಡುವಾಗ ಅವರ ನೋಟದಲ್ಲಿ ಕರುಣ ಮಿಶ್ರಿತ ತುಚ್ಛತೆಯಿರುತ್ತಿತ್ತು. ಹೀಗಾಗಿ ಅವರಂತೂ ಖಂಡಿತಕ್ಕೂ ಹಿಂದೂಗಳಾಗಿದ್ದರು -ಪರ್ಯಾಯವಾಗಿ ನಾವೆಂದೂ ಹಿಂದೂಗಳಾಗಿರಲಿಲ್ಲ.ಹಿಂದುತ್ವದ ಬಗೆಗೆ ನಮ್ಮ ಮನದಲ್ಲಿ ಇಂಥ ಗೋಜಲು ಇದ್ದುದರಿಂದ ಮೂರನೆಯ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿರಲಿಲ್ಲ. ಹೀಗಾಗಿ ನುಣುಚಿಕೊಳ್ಳುವ ಪ್ರಯತ್ನ, ನಾನು ಹಿಂದೂವೇ ಅಲ್ಲವೇ ಅನ್ನುವುದು ಮಾಮೂಲಿ ವಿಷಯ. ಆದರೆ ನಾನು ಹಿಂದೂಸ್ತಾನದ ಇತಿಹಾಸದ ಪ್ರತೀಕ.ಹಿಂದೂಸ್ತಾನ ಬಿಟ್ಟು ಜಗದ ಯಾವುದೇ ಮೂಲೆಯಲ್ಲಿ, ಜಗತ್ತಿನ ಹೊಟ್ಟೆಯಲ್ಲಿ, ನೇರವಾಗಿ ಗರ್ಭಾಶಯದಲ್ಲೂ ಸಹ, ಎಲ್ಲಿಯೂ ನನ್ನಂತಹ ಪ್ರತೀಕ ನಿಮಗೆ ಸಿಗುವುದು ಸಾಧ್ಯವಿಲ್ಲ. ನನ್ನಮ್ಮ ಬ್ರಾಹ್ಮಣ ಮತ್ತು ಅಪ್ಪ ಜಾತಿರಹಿತ, ಅಂದರೆ ದೇವದಾಸಿ ಪುತ್ರ. `ನಲಿನಿ ಆ ಉಂಡಾಡಿಯ ಜತೆ ಲಗ್ನವಾಗಲು, ದೇಶದ ಬ್ರಾಹ್ಮಣರೆಲ್ಲ ಸತ್ತಿದ್ದರೇನು?~ ಎಂಬ ಮಾವನ ಪ್ರಶ್ನೆಗೆ ಉತ್ತರ ನೀಡುವ ಗೋಜಿಗೆ ಹೋಗದೆ, ನೀಲಿಕಂಗಳ ನಲಿನಿ ಸಾಠೆಯು, ತನಗಿಂತ ಹತ್ತು ವರುಷ ಹಿರಿಯನಾದ, ಆದರೆ ಬೋ-ಟೈ ತೊಡುವ ಶಂಕರ ವೇಲಿಣಕರ ಎಂಬುವನ ಜತೆ ಓಡಿಹೋದಳು. ಅವನ ಜತೆ ಲಗ್ನ ಮಾಡಿಕೊಂಡಳು. ಬಳಿಕ ಮಲಬಾರ್ ಹಿಲ್‌ನಲ್ಲಿದ್ದ ಕಂಪನಿಯ ಫ್ಲ್ಯಾಟ್‌ನಲ್ಲಿ ಅವರಿಬ್ಬರು ನೆಲಿ ಎಂಡ್ ಶಂಕ್ಸ್ ವೇಲಿಣಕರರೆಂದು ವಾಸಿಸಲಾರಂಭಿಸಿದರು.ನಲಿಯು ನೆಲಿಯಾಗುವಾಗ ಬದುಕಿನ ರೀತಿಯಲ್ಲಿ ಸಾಕಷ್ಟು ಬದಲಾವಣೆಯಾಯಿತು. ನಲಿನಿಯ ನೀಳವಾದ ಕೇಶರಾಶಿಯನ್ನು ತಾಜ್ ಬ್ಯೂಟಿ ಪಾರ್ಲರ್‌ನಲ್ಲಿ ಕತ್ತರಿಸಲಾಯಿತು. ಮುಖದ ಬಣ್ಣ ಕೆಂಪಾಯಿತು. ದೇಹದ ಮೇಲೆ `ಇಂಗ್ಲಿಷ್~ ಕಲರ್‌ನ ಜಾರ್ಜೆಟ್ ಮತ್ತು ಶಿಫಾನ್ ಸೀರೆ ಬಂತು. ಫಾರ್ಸಿ ಹೆಂಗಸರಂತೆ.ಇದೆಲ್ಲ ನಡೆದದ್ದರಿಂದ ನಾವು ಕುಟುಂಬದಿಂದ ವಂಚಿತರಾಗಬೇಕಾಯಿತು-ಡ್ಯಾಡಿಗೆ ಕುಟುಂಬವಿಲ್ಲೆಂದು, ಮಮ್ಮಿಯು ಆಕೆಯ ಕುಟುಂಬದವರಿಗೆ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ್ದರಿಂದ, ಮಾವ ಇರುವವರೆಗೆ ಆಕೆಯ ಪಾಲಿಗೆ ನಾವು ಸತ್ತರೂ, ನಮ್ಮ ಪಾಲಿಗೆ ಅವಳು ಸತ್ತಿಲ್ಲ ಎಂಬ ಔದಾರ್ಯದಿಂದ. `ಸಂಸ್ಕೃತಿಗೆ ತಬ್ಬಲಿಯಾದ ಬಡಪಾಯಿ~ ಹುಡುಗಿಯರಿಗೆ ಹಬ್ಬ-ಹುಣ್ಣಿಮೆಗಳಲ್ಲಿ ಆಮಂತ್ರಣ ಬರುತ್ತಿತ್ತು ಮತ್ತು ಅವರನ್ನು ಎರಡನೇ ಪಂಕ್ತಿಗೆ ಕೂರಿಸಲಾಗುತ್ತಿತ್ತು. ಆದರೆ ನಾವು ಈ ಸಂಗತಿಯನ್ನು ಡ್ಯಾಡಿಗೆಂದೂ ಹೇಳಲೇ ಇಲ್ಲ. ಇಲ್ಲದಿದ್ದರೆ ಅವನು ನರಸಿಂಹನಾಗುತ್ತಿದ್ದ ಮತ್ತು ನಮ್ಮ ಹಬ್ಬ ನುಚ್ಚುನೂರಾಗಿ ಹೋಗುತ್ತಿತ್ತು. ಬಳಿಕ ಮಾವನೂ ಹೋದ, ಹಬ್ಬವೂ ಹೋಯಿತು.ಗಿರಗಿರ ಸುತ್ತುವ ಸೀಲಿಂಗ್ ಫ್ಯಾನಿನ ಮೇಲಿನ ನೆಟ್ಟ ನೋಟವನ್ನು ರೀಟಾ ಹೊರಳಿಸುತ್ತಾಳೆ. ಅದು ವಾರ್ಡಿನ ತುದಿಯಲ್ಲಿ ಕೂತಿದ್ದ ಡ್ಯೂಟಿ ನರ್ಸ್ ಮೇಲೆ ನಿಲ್ಲುತ್ತದೆ. ಕನ್ನಡಿ ಬೇಡಿದಾಗಿನಿಂದ ಅವಳು ಕುರ್ಚಿ ಬಿಟ್ಟು ಅಲುಗಾಡಲಿಲ್ಲ. ಇಲ್ಲಿ ಅವಳಿಗೊಂದು ಒಡಕು ಕನ್ನಡಿಯೂ ಸಿಗಲಿಲ್ಲವೆಂದರೆ? ಹಾಗಿದು ಖಾಸಗಿ ಆಸ್ಪತ್ರೆ. ಸಾಳವಿಯೇ ನನ್ನನ್ನು ಇಲ್ಲಿ ತಂದು ಸೇರಿಸಿರಬೇಕು. ಇದನ್ನೂ ಕೇಳಬೇಕು.

`ರೀ ಸಿಸ್ಟರ್. ಕನ್ನಡಿ ಕೊಡ್ತೀರಲ್ಲಾ?~ಕನ್ನಡಿ ಸಿಗದಿದ್ದರೆ ಪ್ರಾಣ ಹೋಗುತ್ತದೆಯೇನು ಎಂದು ಕೇಳಿದೆಯಲ್ಲವೇ? ಮೊದಲು ಒಪ್ಪಿಕೋ. ಪ್ರಾಣ ಹೋಗುವ ಹಾಗಿದ್ದರೆ ಕನ್ನಡಿಯಿಂದ ಪ್ರಯೋಜನವಾದರೂ ಏನು? ಜೀವಂತವಾಗಿರುವುದರಿಂದ ಕನ್ನಡಿ. ನಾಗಿನಿಯಂತೆ ಹೇಗೆ ಫೂತ್ಕರಿಸುತ್ತ ಏಳುತ್ತಾಳೆ ನೋಡು. ತನ್ನ ಸಹಚರಿಯ ಮೇಲೆ ಕಿರುಚಿದಳು: `ಏಳು ನಂಬರಿನ ಪೇಶಂಟು ಯಾವಾಗಿನಿಂದ ಕನ್ನಡಿ ಬೇಡುತ್ತಿರುವುದು ಕೇಳುತ್ತಿಲ್ಲವೇ?~ಕೊನೆಗೂ ನನ್ನ ಕೈಗೆ ಕನ್ನಡಿ ಬಂತು. ಅದರಲ್ಲಿ ಜಗದ ಆಕಾರ ಬದಲಾಯಿಸುವ ಗುಳ್ಳೆಗಳು ಹುದುಗಿವೆ. ಅದರ ನಡು-ನಡುವೆ ಸತ್ಯ ಗೋಚರಿಸುತ್ತದೆ. `ಥ್ಯಾಂಕ್ಯು, ಥ್ಯಾಂಕ್ಯೂ, ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ, ಅದರ ಅಗತ್ಯವಿತ್ತು~.

ಹಾಂ. ರೀಟಾಬಾಯಿ ಈಗ ನೋಡಿ ನಿಮ್ಮ ಹೊಸ ರೂಪ. ಹೌದು, ಹೌದು, ಹೌದಲ್ಲ. ಉಬ್ಬಿದ ಗಲ್ಲ ಚಪ್ಪಟೆಯಾಗಿದೆ! ಮತ್ತೆ? ಮತ್ತೆ? ಸರಿಯಾಗಿ ನೋಡಿ, ಸ್ವಲ್ಪ ಬಿಳುಚಿಕೊಂಡಿದ್ದಿ, ತೊಗಲೂ ಸಡಿಲಾಗಿದೆ. ಮುಂದೇನು? ನಾಲ್ವತ್ತು ಸಮೀಪಿಸಿರಬಹುದೆ? ಆದರೂ ಕಣ್ಣು ಅಡ್ಡಿಯಿಲ್ಲ, ಆಕರ್ಷಕವಾಗಿದೆ, ಸುಂದರವಾಗಿದೆ, ಸುರಗಿ ಹೂವಿನ ಬಣ್ಣ~.ಕಣ್ಣು ಮಮ್ಮಿಯಿಂದ ಬಂದ ಕೊಡುಗೆ-ಬಣ್ಣವಲ್ಲ, ಆಕಾರ ಮತ್ತು ಹೊಳಪು, ಮಲಬಾರ್ ಹಿಲ್ಲಿನ ಮನೆಯಲ್ಲಿ ಹಲವು ಸಲ ಬಳಿಗೆ ನಿಲ್ಲಿಸಿಕೊಂಡು ಏಳಡಿ ಎತ್ತರದ ಕನ್ನಡಿಯಲ್ಲಿ ನಮ್ಮ ಜೋಡಿ ಪ್ರತಿಬಿಂಬವನ್ನು ದಿಟ್ಟಿಸುತ್ತಿದ್ದಳು ಮಮ್ಮಿ. ಆಗವಳ ವಯಸ್ಸು ನಾಲ್ವತ್ತು, ನನ್ನದು ಹದಿಮೂರೊ, ಹದಿನಾಲ್ಕು, ಗೋಣು ಆಚೆ-ಈಚೆ ಹೊರಳಿಸಿ ಸ್ವಂತ ಪ್ರತಿಬಿಂಬವನ್ನು ಚಿಕಿತ್ಸಕ ದೃಷ್ಟಿಯಿಂದ ದಿಟ್ಟಿಸುತ್ತಿದ್ದಳು. ಕನ್ನಡಿಯ ದೀಪದ ಬೆಳಕಿನಲ್ಲಿ ಬೆಳ್ಳಿಗೂದಲು ತಾರೆಯಂತೆ ಹೊಳೆದರೆ, ತಟ್ಟನೆ ಅಡಗಿಸಿಬಿಡುತ್ತಿದ್ದಳು.ಅವಳ ಸಮಾಧಾನಕ್ಕಾಗಿ ನಾನು ಹೇಳುತ್ತಿದ್ದೆ, `ಮಮ್ಮಿ, ನೀನು ನನಗಿಂತಲೂ ಯಂಗ್ ಕಾಣ್ತೀಯ~. ಆಗವಳು ಸಂತೋಷದಿಂದ ನನ್ನ ತಲೆಗೂದಲಲ್ಲಿ ಕೈಯಾಡಿಸುತ್ತಿದ್ದಳು. `ಸಿಲ್ಲಿಗರ್ಲ್~ ಎಂದು ಸುಮ್ಮನೆ ಬೆನ್ನಿಗೆ ಹೊಡೆದಂತೆ ಮಾಡುತ್ತಿದ್ದಳು. ಅಷ್ಟೇ ಮಮ್ಮಿಯ ಕೈ ಸ್ಪರ್ಶ.ಆದರೆ ಮಮ್ಮಿಯ ಕೂದಲು ಮಾವನಂತೆ ಬೇಗ ಬೆಳ್ಳಗಾಯಿತು. ಹೆದರಿ ಅವಳು ಬಣ್ಣ ಹಚ್ಚಿಕೊಳ್ಳಲಾರಂಭಿಸಿದಳು.(ಚಂದ್ರಕಾಂತ ಪೋಕಳೆ ಮಾಡಿರುವ `ರೀಟಾ~ ಕಾದಂಬರಿಯ ಕನ್ನಡ ಅನುವಾದ ಬೆಂಗಳೂರಿನ `ಜಯಂತ್ ಬುಕ್ ಏಜೆನ್ಸಿ~ ಯಿಂದ ಪ್ರಕಟಣೆಗೆ ಸಿದ್ಧವಾಗಿದೆ.)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.