ಸೋಮವಾರ, ಡಿಸೆಂಬರ್ 9, 2019
25 °C

ರೀಮೇಕ್ ಚಿತ್ರಗಳಲ್ಲಿ ನಟಿಸೊಲ್ಲ...

Published:
Updated:
ರೀಮೇಕ್ ಚಿತ್ರಗಳಲ್ಲಿ ನಟಿಸೊಲ್ಲ...

ರಮ್ಯಾ ಮತ್ತೆ ತಮಿಳಿನಲ್ಲಿ ನಟಿಸುತ್ತಿದ್ದಾರೆ. ವೆಟ್ರಿ ಮಾರನ್ ನಿರ್ದೇಶನದ ಸಿಂಬು ಮತ್ತು ರಾಣಾ ರಘುಪತಿ ನಾಯಕರಾಗಿರುವ ಚಿತ್ರಕ್ಕೆ ಅವರು ನಾಯಕಿ. ಜೊತೆಗೆ ರಾಜಕಾರಣಿ ಡಿ.ಕೆ.ಶಿವಕುಮಾರ್ ನಿರ್ಮಾಣದ ಹೊಸ ಚಿತ್ರವೊಂದರಲ್ಲೂ ನಟಿಸಲಿದ್ದಾರೆ.

 

ರಾಧಿಕಾ ಕುಮಾರಸ್ವಾಮಿ ನಿರ್ಮಾಣದಲ್ಲಿ ಯಶ್ ಜೊತೆ ನಟಿಸಿದ `ಲಕ್ಕಿ~ ಫೆಬ್ರುವರಿಯಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಉಪೇಂದ್ರ ಜೊತೆಗಿನ `ಕಠಾರಿ ವೀರ ಸುರಸುಂದರಾಂಗಿ~ಯಲ್ಲಿ ಪೌರಾಣಿಕ ಪಾತ್ರದ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿಗುತ್ತಿರುವ ಎಲ್ಲಾ ಪಾತ್ರಗಳೂ ಒಂದೊಂದು ರೀತಿಯಲ್ಲಿ ವಿಭಿನ್ನ ಅನುಭವ ನೀಡುತ್ತಿವೆ ಎನ್ನುವ ರಮ್ಯಾ, `ಸಿನಿಮಾ ರಂಜನೆ~ ಜೊತೆ ಹಂಚಿಕೊಂಡ ಮಾತುಗಳಿವು.

ಮತ್ತೆ ತಮಿಳಿನತ್ತ ಮುಖಮಾಡಲು ಕಾರಣ?

ನನಗೆ ನನ್ನ ರೆಕ್ಕೆ ತೆರೆದು ಹಾರುವ ಆಸೆ. ಎಲ್ಲಾ ಭಾಷೆಗಳಲ್ಲೂ ನಟಿಸಬೇಕು. ಒಂದೇ ಕಡೆ ಸೀಮಿತವಾಗುವ ಜಾಯಮಾನ ನನ್ನದಲ್ಲ. ಪ್ರತಿಭೆ ತೋರಲು ಯಾವ ಭಾಷೆಯಾದರೇನು? ಕನ್ನಡಕ್ಕೆ ಮೊದಲ ಆದ್ಯತೆ ಇದ್ದೇ ಇರುತ್ತದೆ. ನನ್ನ ಕೈಯಲ್ಲಿರುವ ಕನ್ನಡ ಚಿತ್ರಗಳನ್ನು ಮುಗಿಸಿದ ಬಳಿಕ ಮಾರ್ಚ್‌ನಲ್ಲಿ ನಾನು ತಮಿಳು ಚಿತ್ರದಲ್ಲಿ ನಟಿಸುವುದು.

ರಾಧಿಕಾ ನಿರ್ಮಾಣದ ಚಿತ್ರವೆಂದಾಕ್ಷಣ ಒಪ್ಪಿಕೊಂಡ ಕಾರಣ?

`ಲಕ್ಕಿ~ ಚಿತ್ರ ಒಪ್ಪಿಕೊಳ್ಳಲು ಎರಡು ಮುಖ್ಯ ಕಾರಣ. ಒಂದು ಚಿತ್ರದ ನಿರ್ಮಾಪಕಿ ರಾಧಿಕಾ ಎಂದು. ಮತ್ತೊಂದು ಆಕೆ ಮಹಿಳೆ ಎಂದು. ರಾಧಿಕಾ ನನ್ನ ಆತ್ಮೀಯ ಗೆಳತಿ. ನಟಿಯಾಗಿ ಹೆಸರು ಮಾಡಿದವರು. ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಒಬ್ಬ ಮಹಿಳೆ ಕಾಲಿಟ್ಟಾಗ ಆಕೆ ಜೊತೆಗಿರುವುದು ನನ್ನ ಕರ್ತವ್ಯ.

ಒಂದು ಕಾಲದಲ್ಲಿ ರಮ್ಯಾ, ರಾಧಿಕಾ ಮತ್ತು ರಕ್ಷಿತಾ ನಡುವೆ ಪೈಪೋಟಿ ಇತ್ತಲ್ಲವೆ?

ನಿಜ. ಆದರೆ ಎಲ್ಲರೂ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದೆವು. ನಾವು ಮೂವರಲ್ಲಿಯೇ ಅತ್ಯಂತ ಪ್ರತಿಭಾನ್ವಿತೆ ರಾಧಿಕಾ. ಕಡಿಮೆ ಅವಧಿಯಲ್ಲಿಯೇ ವೈವಿಧ್ಯಮಯ ಮತ್ತು ಸವಾಲಿನ ಪಾತ್ರಗಳನ್ನು ಮಾಡಿದ್ದರು. ನಟನೆ ಮತ್ತು ನೃತ್ಯ ಎಲ್ಲದರಲ್ಲೂ ಒಂದು ಕೈ ಮೇಲೆಯೇ. ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ.

ನಿರ್ಮಾಪಕಿಯಾಗಿ ರಾಧಿಕಾ ಹೇಗೆನ್ನಿಸುತ್ತಾರೆ?

ಚಿತ್ರನಿರ್ಮಾಣದ ಸಮಸ್ಯೆಗಳ ಅರಿವು ಅವರಿಗೆ ಚೆನ್ನಾಗಿದೆ. ನಿರ್ದೇಶಕರು ಕೇಳಿದ ಯಾವುದಕ್ಕೂ ಇಲ್ಲ ಎನ್ನುವುದಿಲ್ಲ. ನಾನು ನೋಡಿದ ನಿರ್ಮಾಪಕರಲ್ಲೇ ಅತ್ಯಂತ ಲಿಬರಲ್. ಸೆಟ್‌ಗೆ ಬಂದು ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿದ್ದರು. ಚಿತ್ರೀಕರಣದ ವೇಳೆ ಅವರಿಂದ ಡ್ಯಾನ್ಸ್ ಕೂಡ ಮಾಡಿಸಿದ್ದೇವೆ. ಆಕೆ ನಟನೆಯನ್ನು ಈಗ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರು ಮತ್ತೆ ನಟಿಸಬೇಕು ಎನ್ನುವುದು ನನ್ನಾಸೆ. ನಟಿಸುವುದಾದರೆ ಅದಕ್ಕೆ ನಾನು ಬೆಂಬಲ ಕೊಡುತ್ತೇನೆ.

ಸಿದ್ಲಿಂಗು ಚಿತ್ರದಲ್ಲಿ ದ್ವಂದಾರ್ಥ ಸಂಭಾಷಣೆಗಳೇ ಹೆಚ್ಚಿದ್ದವು?

ನಿಜ ಹೇಳಬೇಕೆಂದರೆ ನನಗೆ ಹೆಚ್ಚಿನ ಸಂಭಾಷಣೆಗಳಲ್ಲಿ ಒಂದೇ ಅರ್ಥ ಗೊತ್ತಿದ್ದದ್ದು. ಅವುಗಳ ಮತ್ತೊಂದು ಅರ್ಥವನ್ನು ನಾನು ಕೇಳಿದ್ದರಲ್ಲವೇ ನನಗೆ ಗೊತ್ತಾಗುವುದು. ಹೀಗಾಗಿ ಅಂತಹ ಸಂಭಾಷಣೆಗಳನ್ನಾಡುವಾಗ ಏನೂ ಅನಿಸಲಿಲ್ಲ. ಆದರೆ ಯೋಗಿಗೆ ಎಲ್ಲದರ ಅರ್ಥವೂ ಗೊತ್ತಿತ್ತು. ಆದರೂ ಏನೂ ಗೊತ್ತಿಲ್ಲದ ಮುಗ್ಧನಂತೆ ವರ್ತಿಸುತ್ತಿದ್ದರು.

ಯಶ್ ಮತ್ತು ಯೋಗಿ ರೀತಿಯ ಕಿರಿಯ ನಟರ ಜೊತೆ ನಟಿಸಿದ ಅನುಭವ ಹೇಗಿತ್ತು?

`ಸಿದ್ಲಿಂಗು~ ಯೋಗಿ ಅಥವಾ `ಲಕ್ಕಿ~ಯ ಯಶ್ ಆಗಲೀ ಕಿರಿಯರು ಎನಿಸಲಿಲ್ಲ. ಅಭಿನಯದಲ್ಲಿ ಇಬ್ಬರೂ ಮಾಗಿದವರು. ಇಬ್ಬರೂ  ಪ್ರತಿಭಾನ್ವಿತರು. ಒಂದೇ ದೃಶ್ಯವನ್ನು ಹತ್ತಾರು ರೀತಿಯಲ್ಲಿ ಅಭಿನಯಿಸುವ ಛಾತಿಯುಳ್ಳವರು. ಅಂಥ ನಟರ ಜೊತೆ ನಟಿಸುವುದು ನನಗೂ ಖುಷಿ.ನಿಮ್ಮ ಪಾತ್ರಕ್ಕೆ ನೀವೇ ಡಬ್ಬಿಂಗ್ ಮಾಡುವುದು ಸೂಕ್ತವೆನಿಸಿತೆ?

ಕೆಲವು ಸನ್ನಿವೇಶಗಳಲ್ಲಿ ಅಭಿನಯದಿಂದ ತುಂಬಲಾಗದ ಭಾವವನ್ನು ಧ್ವನಿಯಲ್ಲಿ ನೀಡಲು ಸಾಧ್ಯ. ಬೇರೆಯವರು ಧ್ವನಿ ನೀಡಿದ್ದಾಗ ಈ ಕೊರತೆ ಕಂಡಿದ್ದೇನೆ. ಹೀಗಾಗಿಯೇ `ಕಿಚ್ಚ ಹುಚ್ಚ~ ಚಿತ್ರದಿಂದ ಎಲ್ಲಾ ಚಿತ್ರಗಳಿಗೂ ನಾನೇ ಧ್ವನಿ ನೀಡುತ್ತಿದ್ದೇನೆ.

ವಿಭಿನ್ನ ಪಾತ್ರಗಳಿಂದಾಗಿ ನಟನೆಯಲ್ಲಿ ಪ್ರಬುದ್ಧತೆ ಸಾಧ್ಯತೆಯಾಗಿದೆಯೇ?

ನಿಜ. ಇತ್ತೀಚಿನ ಚಿತ್ರಗಳಲ್ಲಿ ಸವಾಲಿನ ಪಾತ್ರಗಳು ಸಿಗುತ್ತಿವೆ. ಸಿದ್ಲಿಂಗು ಚಿತ್ರದಲ್ಲಿ ಮಾಡಿದ ಪಾತ್ರ ನನಗೆ ಹೊಸತು. ಇಲ್ಲಿ ನಟನೆ, ಮಾತು, ಭಾವನೆ ಎಲ್ಲದಕ್ಕೂ ಚೌಕಟ್ಟಿತ್ತು. ಇಂಥಹ ಪಾತ್ರಗಳಿಂದ ನಟನೆ ಮಾಗಲು ಸಾಧ್ಯವಾಗುತ್ತಿದೆ. ಅಲ್ಲದೆ ನಾನು ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ. ಈಗ ನನಗೆ ಉತ್ತಮ ಕಥೆಗಳೇ ಹೆಚ್ಚಾಗಿ ಸಿಗುತ್ತಿವೆ.

`ಕಠಾರಿ ವೀರ~ ಅನುಭವ ಹೇಗಿದೆ?

ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಇದು ನನ್ನ ಬಹುಕಾಲದ ಕನಸು ಕೂಡ. ಅದರಲ್ಲೂ ನನ್ನ ಅಚ್ಚುಮೆಚ್ಚಿನ ಇಂದ್ರಜಳ ಪಾತ್ರ ಸಿಕ್ಕಿದೆ. ಇಲ್ಲಿ ನಟನೆ, ದೇಹಭಾಷೆ, ಸಂಭಾಷಣೆ ಎಲ್ಲವೂ ವಿಭಿನ್ನ. ಅತಿ ಭಾರ ಎನಿಸುವ ಆಭರಣ, ಮೇಕಪ್ ಇವೆಲ್ಲವನ್ನೂ ತೊಟ್ಟು ನಡೆಯುವ ರೀತಿ ಎಲ್ಲವೂ ಅದ್ಭುತ ಅನುಭವ. ಇಲ್ಲಿನ ಸಂಭಾಷಣೆ ಸಹ ನನಗೆ ತೀರಾ ಹೊಸತು. `ಹಾಗಾದರೆ ನೀನು ನರಕದಿಂದ ಬಂದಿರುವ ಪಾಪಿಯೇ...~ ಹೀಗೆ ಉದ್ದುದ್ದದ ಸಾಲುಗಳನ್ನು ಹೇಳುವುದು ನಿಜಕ್ಕೂ ಕಷ್ಟ. ಕನ್ನಡದಲ್ಲಿ ಇದು ಮೊದಲ ಪರಿಪೂರ್ಣ ಥ್ರೀ ಡಿ ಚಿತ್ರ. ಇಲ್ಲಿ ಬಳಸಿರುವ ಸೆಟ್, ವೇಷಭೂಷಣ ಎಲ್ಲವೂ ಶ್ರೀಮಂತವಾಗಿದೆ. ನಾನಂತೂ ಈ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದೇನೆ.

ಕನ್ನಡ ಚಿತ್ರರಂಗಕ್ಕೆ ಪರಭಾಷೆ ಚಿತ್ರಗಳು ಸವಾಲಾಗಿವೆಯೇ?

ಈ ಹಿಂದೆ ಕನ್ನಡದ ಚಿತ್ರಗಳನ್ನು ಅನ್ಯಭಾಷೆ ಚಿತ್ರಗಳೊಂದಿಗೆ ಹೋಲಿಕೆ ಮಾಡಲಾಗುತ್ತಿತ್ತು. ತಮಿಳಿನಲ್ಲಿ ಅಲ್ಲಿನ ಪ್ರಾದೇಶಿಕತೆಗೆ ಒತ್ತು ನೀಡುವ ಕಥೆಗಳುಳ್ಳ ಚಿತ್ರಗಳು ಹೆಚ್ಚು. ಅದೇ ರೀತಿಯ ಪ್ರವೃತ್ತಿ ಕನ್ನಡದಲ್ಲೂ ಇದೆ. ಅದಿನ್ನೂ ಹೆಚ್ಚುತ್ತಿದೆ. ಅಲ್ಲದೆ ತಾಂತ್ರಿಕವಾಗಿಯೂ ನಾವು ಮುಂದೆ ಬಂದಿದ್ದೇವೆ. ತಮಿಳು ತೆಲುಗಿನ ಚಿತ್ರಗಳ ಗುಣಮಟ್ಟದ ಚಿತ್ರಗಳು ಸಾಕಷ್ಟು ಬರುತ್ತಿವೆ. ಆದರೆ ನಿಜವಾಗಿ ನಮ್ಮನ್ನು ಕಾಡುತ್ತಿರುವುದು ಥಿಯೇಟರ್ ಸಮಸ್ಯೆ. ಥಿಯೇಟರ್ ಸಮಸ್ಯೆಯಿಂದಾಗಿಯೇ ಚಿತ್ರರಂಗ ಬೆಳೆಯಲು ಸಾಧ್ಯವಾಗುತ್ತಿಲ್ಲ.

ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷವಾಯಿತು. ಹೇಗೆನ್ನಿಸುತ್ತಿದೆ ?

10 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ನಿನ್ನೆ ಮೊನ್ನೆ ಬಂದಂತಿದೆ. ಅಮಿತಾಬ್‌ರಂತಹ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಇಡೀ ಸಿನಿಮಾ ಬದುಕು ಸಾಕಷ್ಟು ಖುಷಿ ನೀಡಿದೆ.

ರಾಜಕೀಯದಲ್ಲಿ ಮುಂದಿನ ನಡೆ?

ಅದರ ಬಗ್ಗೆ ಏನೂ ಯೋಚಿಸಿಲ್ಲ. ಸದ್ಯಕ್ಕೆ ಸಿನಿಮಾವೇ ನನಗೆ ಬದುಕು. ಮುಂದಿನ ದಿನಗಳಲ್ಲಿ ರಾಜಕೀಯದ ಬಗ್ಗೆ ನೋಡುತ್ತೇನೆ. ವಾರ್ಡ್ ಕಾಪೋರೇಟರ್‌ಗೆ ಹೇಳಿ ನನ್ನ ಏರಿಯಾಕ್ಕೆ ರಸ್ತೆ ಮಾಡಿಸಿದ್ದೇನೆ. ಈಗ ಇಂಥಹದೇ ಕಾರ್ಯಗಳಲ್ಲಿ ತೃಪ್ತಿ ಸಿಗುತ್ತಿದೆ.

ಪ್ರತಿಕ್ರಿಯಿಸಿ (+)