ಭಾನುವಾರ, ಮೇ 16, 2021
28 °C

ರುದ್ರತಾಂಡವ ದರ್ಶನ: ಶೋಭಾ ವರ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರುದ್ರತಾಂಡವ ದರ್ಶನ: ಶೋಭಾ ವರ್ಣನೆ

ಬೆಂಗಳೂರು: `ಉತ್ತರಾಖಂಡದಲ್ಲಿನ ಪ್ರವಾಹ ನನಗೆ ಹಾಲಿವುಡ್ ಸಿನಿಮಾ `2012' ನೆನಪಿಸಿತ್ತು. ರುದ್ರದೇವ `ತಾಂಡವ ನೃತ್ಯ' ಮಾಡುತ್ತಿದ್ದಾನೇನೋ ಎನ್ನುವಂತಿತ್ತು ಅಲ್ಲಿಯ ವಾತಾವರಣ'. ಉತ್ತರಾಖಂಡದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಈ ರೀತಿ ವರ್ಣಿಸಿದ್ದು ಕೇದಾರನಾಥ ಯಾತ್ರೆಗೆ ತೆರಳಿ ರುದ್ರಪ್ರಯಾಗದಲ್ಲಿ ನಾಲ್ಕು ದಿನಗಳ ಕಾಲ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ.ರಾಜ್ಯದಿಂದ ಕೇದಾರನಾಥ ಯಾತ್ರೆ ಕೈಗೊಂಡು ಪ್ರವಾಹದ ನಡುವೆ ಸಿಲುಕಿಕೊಂಡಿದ್ದ 77 ಮಂದಿಯಲ್ಲಿ ಶೋಭಾ ಅವರೂ ಒಬ್ಬರು. ಶುಕ್ರವಾರ ನಗರಕ್ಕೆ ವಾಪಸಾದ ಅವರು ಮರುಜನ್ಮ ಪಡೆದ ಸಂತಸದಲ್ಲಿದ್ದರು. ಪ್ರವಾಹದ ನಡುವೆಯೇ ದಿನ ಕಳೆದಿದ್ದನ್ನು ನೆನಪಿಸಿಕೊಂಡು ಬೆದರುತ್ತಿದ್ದರು.ಪ್ರವಾಹಪೀಡಿತ ಪ್ರದೇಶದ ಪರಿಸ್ಥಿತಿ ಕುರಿತು `ಪ್ರಜಾವಾಣಿ' ಜೊತೆ ಮಾತನಾಡಿದ ಅವರು, `ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆಹಾರಕ್ಕಾಗಿ ಹಾಹಾಕಾರ ಇದೆ. ವೈದ್ಯರು, ಔಷಧಿಗಳ ಕೊರತೆಯೂ ತೀವ್ರವಾಗಿದೆ. ನಾನು ಹೋದ ಕಡೆಯಲ್ಲೆಲ್ಲಾ ಅನಾರೋಗ್ಯಕ್ಕೆ ಒಳಗಾಗಿರುವ ಯಾತ್ರಿಕರಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿಕೊಂಡೆ' ಎಂದರು.`ಒಂದು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ನಾವು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಗಂಗಾನದಿ ಮತ್ತು ದುರ್ಗಮ ಬೆಟ್ಟಗಳ ನಡುವಿನಲ್ಲಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೆವು. ಅದೊಂದು ಭೀಕರ ಅನುಭವ' ಎಂದು ತಮ್ಮಷ್ಟಕ್ಕೇ ನಡುಗಿದರು.ಹಾಲಿವುಡ್ ಸಿನೆಮಾ `2012' ಜಲ ಪ್ರಳಯದ ಕಲ್ಪನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರ. ಅದು ತಮ್ಮ ಕಣ್ಣೆದುರಿನಲ್ಲೆಯೇ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಯಿತು ಎಂದರು.`ನಾನು ಜೂನ್ 15ರಂದು ಗಂಗೋತ್ರಿಯಿಂದ ವಾಪಸಾಗಿದ್ದೆ. ಅದೇ ದಿನ ಭಾರಿ ಮಳೆಯಿಂದ ಭೂಕುಸಿತ ಆರಂಭವಾಯಿತು.

ಅದೃಷ್ಟ ಎಂಬಂತೆ ನಾನು ಇದ್ದ ಕಾರು ಸುರಕ್ಷಿತ ಸ್ಥಳವನ್ನು ತಲುಪಿತ್ತು. ನಮ್ಮ ಹಿಂದೆ ಬರುತ್ತಿದ್ದ ಕಾರಿನಲ್ಲಿ ಮೂವರು ಇದ್ದರು. ಕಾರು ಗುಂಡಿಯೊಂದಕ್ಕೆ ಉರುಳಿ ಮೂವರೂ ಸಾವನ್ನಪ್ಪಿದರು' ಎಂದು ಸಹ ಪ್ರಯಾಣಿಕರನ್ನು ಕಳೆದುಕೊಂಡ ದುಃಖಕ್ಕೆ ಜಾರಿದರು.`ಮೇಲುಗಡೆ ಇದ್ದ ಬೆಟ್ಟಗಳಿಂದ ನಿರಂತರವಾಗಿ ಭೂಕುಸಿತವಾಗಿತ್ತು. ಕೆಳಗೆ ಗಂಗಾನದಿ ಉಕ್ಕಿ ಹರಿಯುತ್ತಿತ್ತು. ಎರಡರ ನಡುವೆ ಸಿಲುಕಿ ಅಪ್ಪಚ್ಚಿಯಾದ ಅನುಭವ. ಒಂದು ಇಡೀ ರಾತ್ರಿ ನಾನು ಕಾರಿನಿಂದ ಹೊರಕ್ಕೆ ಬಂದೇ ಇರಲಿಲ್ಲ. ಅಲ್ಲಿಂದ ಮರಳಿ ಬರುವುದು ಸಾಧ್ಯ ಆಗುವುದಿಲ್ಲವೇನೋ ಎಂಬ ಭಾವನೆ ಮೂಡಿತ್ತು' ಎಂದು ದೇವರನ್ನು ನೆನಪಿಸಿಕೊಂಡರು.ಕಂದಿಯಾಖಂಡ್ ಎಂಬ ಪ್ರದೇಶದಲ್ಲಿ ಕಾರು ಸಿಲುಕಿಹಾಕಿಕೊಂಡಿತ್ತು. ಅಲ್ಲಿಂದ ಬೆಟ್ಟವನ್ನು ಏರಿಕೊಂಡು ಬುದ್ಲಾ ಎಂಬ ಪ್ರದೇಶ ತಲುಪಬೇಕಾಯಿತು. ಬುದ್ಲಾದಲ್ಲಿ ನಾಲ್ಕು ದಿನಗಳ ಕಾಲ ಅಕ್ಷರಶಃ ಬಂದಿಯಾಗಿ ಇರಬೇಕಾಯಿತು ಎಂದು ನೆನಪಿಸಿಕೊಂಡರು.ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ರಾಜಸ್ತಾನದಿಂದ ಬಂದ ಯಾತ್ರಿಕರೇ ತಮ್ಮ ಗುಂಪಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇದ್ದರು. ಅವರಲ್ಲಿ ಬಹುತೇಕರು ವಯಸ್ಸಾದ ಮಹಿಳೆಯರು ಮತ್ತು ಮಕ್ಕಳು. ಅವರ ಬಳಿ ಹೆಚ್ಚಿನ ಆಹಾರದ ಸಂಗ್ರಹವೂ ಇರಲಿಲ್ಲ. ಮಕ್ಕಳು ಅಲ್ಲಿಯೇ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಲು ಅಲ್ಲಿ ಒಬ್ಬ ವೈದ್ಯರೂ ಇರಲಿಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದರು.`ಒಂದು ಕಡೆಯಿಂದ ಮತ್ತಷ್ಟು ಭೂಕುಸಿತದ ಭೀತಿ. ಇನ್ನೊಂದೆಡೆ ಏರುತ್ತಿರುವ ನದಿ. ಇದರಿಂದಾಗಿ ನಿದ್ದೆ ಮಾಡುವುದೂ ಸಾಧ್ಯ ಇರಲಿಲ್ಲ. ನದಿಯಿಂದ ಕುಡಿಯುವ ನೀರು ತೆಗೆದುಕೊಳ್ಳುವುದಕ್ಕೂ ಸಾಧ್ಯ ಇರಲಿಲ್ಲ. ಸ್ಥಳೀಯ ಜನರು ತಮ್ಮ ಮೋಟಾರು ಬೈಕ್‌ಗಳಲ್ಲಿ ದೂರದ ಪ್ರದೇಶದಿಂದ ನೀರು ತಂದು ನಮಗೆ ನೀಡಿ ಉಪಕರಿಸಿದರು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.