ರುದ್ರಪಟ್ಟಣ: 18ರಿಂದ ಸಂಗೀತೋತ್ಸವ

7

ರುದ್ರಪಟ್ಟಣ: 18ರಿಂದ ಸಂಗೀತೋತ್ಸವ

Published:
Updated:

ಅರಕಲಗೂಡು: ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಮೇ 18ರಿಂದ 20ರ ವರೆಗೆ ಸಂಗೀತೋತ್ಸವ ನಡೆಯಲಿದೆ ಎಂದು ಸಂಗೀತೋತ್ಸವ ಸಮಿತಿ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ಆರ್.ಕೆ. ಪದ್ಮನಾಭ್ ತಿಳಿಸಿದರು.

ಪ್ರಸಕ್ತ ವರ್ಷದ ಸಂಗೀತೋತ್ಸವ 11ನೇ ವರ್ಷದ್ದಾಗಿದ್ದು, ಕಾರ್ಯಕ್ರಮದಲ್ಲಿ ಹನ್ನೊಂದು ಸಂಗೀತ ಕಛೇರಿಗಳು ನಡೆಯಲಿವೆ ಎಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

 

ಗ್ರಾಮದ ಪುರಾತನ ರಾಮಮಂದಿರ ವನ್ನು ತಮ್ಮ ತಂದೆ ಕೃಷ್ಣ ದೀಕ್ಷಿತರ ನೆನಪಿಗಾಗಿ ಜೀರ್ಣೋದ್ಧಾರ ಮಾಡಿದ್ದು, ಇಲ್ಲಿ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಈ ಬಾರಿಯ ಸಂಗೀತೋತ್ಸವದಲ್ಲಿ ಯುವ ಪೀಳಿಗೆಗೆ ಪ್ರಾಮುಖ್ಯತೆ ನೀಡಲಾ ಗಿದ್ದು, ಎಲ್ಲ ಸಂಗೀತ ಕಚೇರಿಗಳನ್ನು ಯುವ ಗಾಯಕರು ನಡೆಸಲಿದ್ದಾರೆ.ಹಲವು ಮಂದಿಗೆ ಇದು ಪ್ರಥಮ ಸಂಗೀತ ಕಛೇರಿಯಾಗಿದೆ. ಈ ವರ್ಷ ಗಾಯನ ಕಾರ್ಯಕ್ರಮದಲ್ಲಿ ಗಾನ ರಸಾಯನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದ ಸಮ್ಮಿಶ್ರವಾಗಿದೆ. ಹಿಂದೂಸ್ಥಾನಿ ಸಂಗೀತವನ್ನು ಈ ಭಾಗದ ಕೇಳುಗರಿಗೆ ಪರಿಚಯಿಸುವ ದೃಷ್ಟಿ ಯಿಂದ ಇದನ್ನು ಅಳವಡಿಸಲಾಗಿದೆ.ಮುಂದಿನ ಸಂಗೀತೋತ್ಸವದಲ್ಲಿ ಹಿಂದೂಸ್ಥಾನಿ ಸಂಗೀತ ಕಛೇರಿಯನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು. ಮೇ18 ಶುಕ್ರವಾರ ಸಂಜೆ ಸಂಗೀತೋತ್ಸವದ ಉದ್ಘಾಟನೆ ನಡೆಯಲಿದೆ,  19ರಂದು ಸಂಜೆ ಕಾವೇರಿ ನದಿಯಲ್ಲಿ ತೆಪ್ಪೋತ್ಸವ, ಪಂಚರತ್ನ ಕೃತಿಗಳ ಗೋಷ್ಠಿಗಾಯನ ಭಾನುವಾರ ಸಂಜೆ ಮುಕ್ತಾಯ ಸಮಾರಂಭ ಏರ್ಪಡಿಸಿದ್ದು, ಅದ್ವಯಾನಂದೇಂದ್ರ ಸರಸ್ವತಿ ಸ್ವಾಮೀಜಿ, ಶಾಸಕ ಎ.ಮಂಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಕ್ಯಾಷ್ಟನ್ ಆರ್. ಗೋಪಿನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.  ಪ್ರಸಕ್ತ ವರ್ಷದ ಸಂಗೀತೋತ್ಸವದಲ್ಲಿ ಸಂಗೀತ ಕುರಿತು ರಸಪ್ರಶ್ನೆ ಹಾಗೂ ಎಂ.ಡಿ. ಕೌಶಿಕ್ ನಡೆಸಿಕೊಡುವ ಡಿ.ವಿ.ಜಿ.ಯವರ ಮಂಕು ತಿಮ್ಮನಕಗ್ಗ ಕುರಿತಾದ ಕಗ್ಗದ ಮಾಯಾಜಾಲ ಮ್ಯಾಜಿಕ್ ಶೋ ವಿಶೇಷ ಆಕರ್ಷಣೆಯಾಗಿದೆ ಎಂದರು.ನಾಚಾರಮ್ಮ ಪ್ರಶಸ್ತಿ: ಪ್ರತಿವರ್ಷ ನೀಡಲಾಗುವ ನಾಚಾರಮ್ಮ ಪ್ರಶಸ್ತಿಯನ್ನು ಈ ಭಾರಿ ಗಮಕ ವಿದ್ವಾಂಸ ವಿದ್ವಾನ್ ಬಿ.ಎಸ್.ಎಸ್. ಕೌಶಿಕ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು. ಹೊಯ್ಸಳ ಮಹೋತ್ಸವವನ್ನು ಬೇಲೂರು ಹಳೆಬೀಡಿಗಷ್ಟೆ ಸೀಮಿತಗೊಳಿಸದೆ ತಾಲ್ಲೂಕಿನಲ್ಲೂ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ   ಆರ್.ಕೆ. ಪದ್ಮನಾಭ್ ಒತ್ತಾಯಿಸಿದರು.ತಾಲ್ಲೂಕು ಸಾಹಿತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಬಡತನ ಅನುಭವಿಸುತ್ತಿರುವ ಇಲ್ಲಿ ಹೊಯ್ಸಳ ಮಹೋತ್ಸವದ ಕಾರ್ಯ ಕ್ರಮ ಹಮ್ಮಿಕೊಳ್ಳುವ ಮೂಲಕ ಹಿಂದಿನ ಸಾಂಸ್ಕೃತಿಕ ವೈಭವ ಮರಳಿ ಸ್ಥಾಪಿಸಲು ಯತ್ನಿಸುವಂತೆ ಸಲಹೆ ಮಾಡಿದರು.ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಗಮನ ಸೆಳೆಯುವ ತಂಬೂರಿ ಆಕಾರದ ಸಪ್ತಸ್ವರ ನಾದ ಮಂದಿರ ನಿರ್ಮಿಸಲಾಗಿದೆ. ಗ್ರಾಮದ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಬಾರಿ ಗ್ರಾಮ ದೇವತೆ ಅಮ್ಮನ ಗುಡಿಯ ದುರಸ್ತಿಕಾರ್ಯ ಕೈಗೊಳ್ಳುವುದಾಗಿ ಹೇಳಿದರು. ಪ್ರತಿವರ್ಷ ನಡೆಯುವ ಸಂಗೀತೋತ್ಸವಕ್ಕೆ ರಾಜ್ಯದ ಹಾಗೂ ಹೊರ ರಾಜ್ಯದಿಂದ ಸಂಗೀತ ವಿದ್ವಾಂಸರು ಆಗಮಿಸುತ್ತಾರೆ.ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ, ಕುಡಿಯುವ ನೀರಿಗಾಗಿ ಪರದಾಡ ಬೇಕಿದೆ. ಈ ಸಮಸ್ಯೆ ಬಗೆಹರಿಸಲು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry