ಗುರುವಾರ , ಮೇ 19, 2022
22 °C

ರುದ್ರಾಣಿ ವಿರುದ್ಧ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರಸಭಾ ಸದಸ್ಯೆ ರುದ್ರಾಣಿ ಗಂಗಾಧರ್ ಅವರಿಂದ ತಾವು ಹಣ ಪಡೆದಿಲ್ಲ. ತಮಗೆ ಹಣ ಕೊಟ್ಟಿದ್ದೇವೆ ಎಂದು ಆರೋಪಿಸಿರುವುದು ಶುದ್ಧ ಸುಳ್ಳು. ಮೋಸ ಮಾಡುವ ವ್ಯಕ್ತಿ ನಾನಲ್ಲ. ಆ ಜಾಯಮಾನ ನನ್ನದಲ್ಲ ಎಂದು ಸದಸ್ಯ ರಘುರಾಮ ರೆಡ್ಡಿ ಸ್ಪಷ್ಟಪಡಿಸಿದರು.ತಮ್ಮ ವ್ಯಕ್ತಿತ್ವ ತೇಜೋವಧೆ ಮಾಡಲು ಬುಧವಾರ ತಮ್ಮ ಮನೆಗೆ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಯಾರಿಗೋ ಹಣ ಕೊಟ್ಟು ನನಗೆ ಕೆಟ್ಟ ಹೆಸರು ತರಲು ಈ ರೀತಿ ವರ್ತಿಸಿದ್ದಾರೆ. ಈ ಘಟನೆ ನನ್ನ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದ್ದು, ರುದ್ರಾಣಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಶೀಘ್ರ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಯಾರಿಗೋ~ ಎಂದರೆ `ಯಾರು~ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಘುರಾಮರೆಡ್ಡಿ, ನಗರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವ ವಿಷಯಕ್ಕೆ ಸಂಬಂಧಿಸಿದಂತೆ 9 ಸದಸ್ಯರಿಗೆ ್ಙ 50 ಲಕ್ಷನೀಡಿರುವುದಾಗಿ ರುದ್ರಾಣಿ ಆರೋಪಿಸಿದ್ದಾರೆ. ಆದರೆ, ಮಧ್ಯಮ ವರ್ಗದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿರುವ ರುದ್ರಾಣಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಮತ್ತು ಉಳಿದ 26 ಸದಸ್ಯರಿಗೆ ಹಣ ನೀಡಲು ಇವರ ಬಳಿ ಕೋಟ್ಯಂತರ ರೂಪಾಯಿ ಇದೆಯೇ? ಅಥವಾ ಕಪ್ಪು ಹಣ ಇವರಲ್ಲಿದೆಯೇ ಎಂದು ಪ್ರಶ್ನಿಸಿದರು.ನಗರಸಭೆ ಅಧ್ಯಕ್ಷರಾಗುವುದು ಕಷ್ಟ. ಹಣ ಖರ್ಚು ಮಾಡಬೇಡ ಎಂದು ರುದ್ರಾಣಿ ಅವರಿಗೆ ಹೇಳಿದ್ದೆ. ನಮ್ಮನ್ನು ಸಹ ನಂಬಬೇಡ. ಸುನಿತಾ  ಮಲ್ಲಿಕಾರ್ಜುನ್  ಅವರಿಗೆ ಬೆಂಬಲ  ನೀಡುತ್ತೇವೆ.  ರಾಜಕೀಯವಾಗಿ  ತಾವು ನೋವು ಮಾಡಿರಬಹುದು. ಆದರೆ, ಇನ್ನೊಂದು ಗುಂಪಿನ ಮುಖಂಡರಿಗೆ ನೀಡಿರುವ ಹಣವನ್ನು ವಾಪಸ್ ಕೊಡಿಸಲು ಪ್ರಯತ್ನಿಸುತ್ತೇನೆ.ಒಟ್ಟಿನಲ್ಲಿ ಹಣಕಾಸಿನಲ್ಲಿ ನಷ್ಟವಾಗದ ರೀತಿಯಲ್ಲಿ ಹಣ ಕೊಡಿಸುತ್ತೇವೆ ಎಂದು ರುದ್ರಾಣಿ ಅವರಿಗೆ ಭರವಸೆ ನೀಡಿದ್ದೆ. ನಾನು ರುದ್ರಾಣಿ ಅವರಿಗೆ ಸಹಾಯ ಮಾಡಲು ಮುಂದಾದರೆ ಅವರೇ ಊಸರವಳ್ಳಿ ರೀತಿ ಬಣ್ಣ ಬದಲಾಯಿಸಿದರು ಎಂದು ಕಿಡಿಕಾರಿದರು.ಕಳೆದ ಫೆಬ್ರುವರಿಯಲ್ಲಿ ಸುನೀತಾ ಮಲ್ಲಿಕಾರ್ಜುನ್ ಅವರನ್ನು ಬದಲಾಯಿಸುವಂತೆ ಶಾಸಕ ಹಾಗೂ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ. ಬಸವರಾಜನ್ ಅವರಿಗೆ ಕೋರಿದ್ದು ನಿಜ. ಆದರೆ, ಶಾಸಕರು ಷರತ್ತು ವಿಧಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಸಂಪೂರ್ಣ ಬೆಂಬಲ ನೀಡುವುದಾದರೆ ಮಾತ್ರ ಸುನೀತಾ ಅವರನ್ನು ಬದಲಾಯಿಸುವುದಾಗಿ ಪಟ್ಟು ಹಿಡಿದರು.ಇದೇ ವೇಳೆ ರುದ್ರಾಣಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಇನ್ನೊಬ್ಬರ ಕೈಗೊಂಬೆಯಾಗುತ್ತಾರೆ ಎನ್ನುವ ಅಭಿಪ್ರಾಯ ಮೂಡಿತು. ಈ ಬಗ್ಗೆ 15 ದಿನಗಳ ಕಾಲ ಸಂಪೂರ್ಣ ಅಧ್ಯಯನ ಮಾಡಿ ಸುನೀತಾ ಅವರಿಗೆ ಬೆಂಬಲ ನೀಡಲು ನಿರ್ಣಯ ಕೈಗೊಳ್ಳಲಾಯಿತು ಎಂದು ವಿವರಿಸಿದರು.ರುದ್ರಾಣಿ ತಮಗೆ ಒಂದು ಪೈಸೆ ಸಹ ಕೊಟ್ಟಿಲ್ಲ. ನನ್ನ ಬಳಿಯೇ ಅವರು ಸಾಲ ಕೇಳಿರುವಾಗ ನನಗೆ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶಾಸಕ ಎಸ್.ಕೆ. ಬಸವರಾಜನ್ ಅವರು ರುದ್ರಾಣಿ ಅವರಿಂದ ಚೆಕ್ ಪಡೆದು ಸಾಲ ನೀಡು ಎಂದು ಸೂಚಿಸಿದ್ದರು. ಪರಿಸ್ಥಿತಿ ಹೀಗಿರುವಾಗ ಮತ್ತು ನಗರಸಭೆಗೆ ಇಷ್ಟೊಂದು ಸದಸ್ಯರಿರುವಾಗ ನನ್ನನ್ನೇ ಏಕೆ ಗುರಿಯಾಗಿಸಿಕೊಂಡರು ಎನ್ನುವುದು ಅರ್ಥವಾಗಿಲ್ಲ ಎಂದು ನುಡಿದರು.ಶಾಸಕರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರಿಯಾಗಿ ರಾಜಕೀಯ ಮಾಡಿ ಸಮತೋಲನ ಕಾಪಾಡಿದ್ದರೆ ಇಂದಿನ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯ ಡಿ. ಪ್ರಕಾಶ್ ಮಾತನಾಡಿ, ರುದ್ರಾಣಿ ಅವರು ಕಳೆದ 15 ದಿನಗಳ ಹಿಂದೆ ನಾಲ್ಕು ಲಕ್ಷ ರೂಪಾಯಿ `ಸಾಲ~ ನೀಡಿದ್ದರು. `ಸಾಲ~ ವಾಪಸ್ ಕೇಳಿದ್ದರಿಂದ ಈ ಮೊತ್ತಕ್ಕೆ ಬಡ್ಡಿ ಹಣ ಸೇರಿಸಿ ್ಙ 4.10 ಲಕ್ಷ ಹಿಂತಿರುಗಿಸಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಗರಸಭೆ ಸದಸ್ಯರಾದ ರವಿಶಂಕರ್ ಬಾಬು, ಮಾಜಿ ಅಧ್ಯಕ್ಷರಾದ ಎಚ್. ಮಂಜಪ್ಪ, ಓಬಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ಕಾಂತರಾಜ್ ವಿರುದ್ಧ ಕಿಡಿ

ನಗರಸಭೆ ಆಡಳಿತದಲ್ಲಿ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಹಸ್ತಕ್ಷೇಪ ಮಾಡುತ್ತಿದ್ದು, ಪ್ರತಿಯೊಂದಕ್ಕೂ ಅವರ ಮನೆ ಬಾಗಿಲಿಗೆ ಸದಸ್ಯರು ಹೋಗಬೇಕಾದ ಸನ್ನಿವೇಶ ಸೃಷ್ಟಿಸಲಾಗಿದೆ ಎಂದು ಸದಸ್ಯ ಗಾಡಿ ಮಂಜುನಾಥ್ ಕಿಡಿಕಾರಿದರು.ಸದಸ್ಯರು ಕಾಂತರಾಜ್ ಕೈಗೊಂಬೆಯಾಗಬೇಕೆ?. ಅವರು ಹೊರಗಿನವರು. ಒಬ್ಬ ಸದಸ್ಯ ಮೂರನೇ ವ್ಯಕ್ತಿಯ ಮನೆಗೆ ಬಾಗಿಲಿಗೆ ಏಕೆ ಹೋಗಬೇಕು? ಎಂದು ಪ್ರಶ್ನಿಸಿದ ಅವರು, ನಗರಸಭೆಗೆ ದೊರೆತ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಬಳಸಲು ನಾವು ಮತ್ತೊಬ್ಬರ ಮನೆ ಬಾಗಿಲಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ಬಂದ ಹಣವನ್ನು ಜನರ ಸಮಸ್ಯೆಗಳಿಗೆ ಬಳಕೆ ಮಾಡಲು ಅವರ ಅಪ್ಪಣೆ ಕೇಳಬೇಕಾದ ಪರಿಸ್ಥಿತಿ ಸರಿ ಅಲ್ಲ ಎಂದರು.

ವಿಪ್‌ಗೂ ಹಣ!

ತಮ್ಮ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಪರವಾಗಿ ಕೈಎತ್ತಲು ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡುವಂತೆ ಜೆಡಿಎಸ್‌ನವರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ್ಙ 2.5 ಲಕ್ಷ ನೀಡಿದ್ದರು ಎಂದು ಸುನಿತಾ ಮಲ್ಲಿಕಾರ್ಜುನ್ ಆರೋಪಿಸಿದರು.ಈ ಬಗ್ಗೆ ಹೆಚ್ಚಿನ ವಿವರ ನೀಡದ ಅವರು, ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಸದಸ್ಯರಿಗೆ ಒಂದು ಪೈಸೆ ನೀಡಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಸದಸ್ಯರು ಬೆಂಬಲ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.