ಭಾನುವಾರ, ಆಗಸ್ಟ್ 25, 2019
28 °C

ರೂಢಿಸಿಕೊಳ್ಳಿ ಏಕಾಗ್ರತೆ

Published:
Updated:

ಬೆಂಗಳೂರಿನ ಒಂದು ಪ್ರಸಿದ್ಧ ಕೋಚಿಂಗ್ ಸೆಂಟರ್‌ಗೆ ಶೈಕ್ಷಣಿಕ ಯಶಸ್ಸಿಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಲು ಹೋಗಿದ್ದೆ. ವಿವಿಧ ಕಾಲೇಜುಗಳಿಗೆ ಸೇರಿದ 130 ವಿದ್ಯಾರ್ಥಿಗಳು ಅಲ್ಲಿದ್ದರು. ಹಿಂದಿನ ತಿಂಗಳಷ್ಟೇ ಮುಗಿದಿದ್ದ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಭೌತಶಾಸ್ತ್ರದಲ್ಲಿ (ಫಿಸಿಕ್ಸ್) ಯಾರು ಯಾರು ಎಷ್ಟೆಷ್ಟು ಅಂಕ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಒಂದು ಸಮೀಕ್ಷೆ ಮಾಡಿದೆ. ಅದರಲ್ಲಿ 91-  100 ಅಂಕ ಗಳಿಸಿದ ವಿದ್ಯಾರ್ಥಿಗಳು ನಾಲ್ವರಿದ್ದರು. 71- 90 ಅಂಕ ಗಳಿಸಿದವರು 46 ಮಂದಿ, 51- 70 ಅಂಕಗಳ ವ್ಯಾಪ್ತಿಯಲ್ಲಿ 54 ಮತ್ತು ಕೊನೆಯದಾಗಿ 0- 50ರ ಒಳಗೆ ಅಂಕ ತೆಗೆದುಕೊಂಡ 26 ವಿದ್ಯಾರ್ಥಿಗಳಿದ್ದರು.ಒಂದೇ ಕೇಂದ್ರದಲ್ಲಿ ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳು ಹೀಗೆ ಬೇರೆ ಬೇರೆ ಸಾಧನೆ ತೋರುವುದಕ್ಕೆ ಕಾರಣವೇನು? ಹೆಚ್ಚುವರಿ ಪಾಠ, ಓದು, ಬರವಣಿಗೆಯು ಫಲಿತಾಂಶದ ಮಟ್ಟವನ್ನೇನೂ ಹೆಚ್ಚಿಸಿಲ್ಲ ಎಂಬುದು ಈ ಸಮೀಕ್ಷೆಯಿಂದ ಸಾಬೀತಾಯಿತು. ಹಾಗಿದ್ದರೆ 0-90ರ ನಡುವೆ ಇರುವ ವಿದ್ಯಾರ್ಥಿಗಳನ್ನು 91- 100ಕ್ಕೆ ಕೊಂಡೊಯ್ಯುವುದು ಹೇಗೆ?ಶೈಕ್ಷಣಿಕ ಯಶಸ್ಸಿಗೆ ಒಳ್ಳೆಯ ಶಾಲೆ, ಕಾಲೇಜು, ಇಂಗ್ಲಿಷ್ ಮಾಧ್ಯಮ, ಟ್ಯೂಷನ್, ದಿನಕ್ಕೆ 10-20 ಗಂಟೆಯ ಓದು, ನಗರಗಳ ಶಾಲೆ-  ಕಾಲೇಜು, ಸಿರಿವಂತಿಕೆ, ವಿದ್ಯಾವಂತ ತಂದೆ-ತಾಯಿ ಮತ್ತು ಒಳ್ಳೆಯ ಅನುಕೂಲಗಳು ಬೇಕು ಎಂಬುದು ಜನಪ್ರಿಯ ಅಭಿಪ್ರಾಯ. ಆದರೆ, ಇದು ನಿಜವೇ?ಹೇಗಿದ್ದರೂ ಓದುತ್ತಾರೆ

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾಗುತ್ತಿರುತ್ತವೆ. ಅವುಗಳನ್ನು ನಾವು ಸ್ವಲ್ಪ ಚಿಕಿತ್ಸಕ ದೃಷ್ಟಿಯಿಂದ ನೋಡಿದರೆ ಸಾಕು, ಜನಪ್ರಿಯತೆಯ ಮುಸುಕಿನಲ್ಲಿ ಬಚ್ಚಿಟ್ಟುಕೊಂಡಿರುವ ಸತ್ಯ ಬಿಚ್ಚಿಕೊಳ್ಳುತ್ತದೆ.ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ಮಾಧ್ಯಮದಲ್ಲಿ ಓದಿದವರು, ಖಾಸಗಿ ಪಾಠಕ್ಕೆ ಹೋಗದೆ ಯಶಸ್ಸು ಗಳಿಸಿದ ಧೀರರು, ಹಳ್ಳಿಗಾಡಿನ ವಿದ್ಯಾರ್ಥಿಗಳು, ಕಿತ್ತು ತಿನ್ನುವ ಬಡತನದ ನಡುವೆಯೂ ಯಶಸ್ಸು ದಾಖಲಿಸಿರುವ ವಿದ್ಯಾರ್ಥಿಗಳು, ಅವಿದ್ಯಾವಂತರ ಮಕ್ಕಳು, ಎಲ್ಲ ಅನನುಕೂಲಗಳ ಮಧ್ಯೆಯೂ ಸಾಧನೆ ಮಾಡಿದ ಸಾಧಕರು ಇದ್ದಾರೆ ಎಂಬುದು ತಿಳಿಯುತ್ತದೆ. ಜೊತೆಗೆ, ಎಲ್ಲ ಅನುಕೂಲಗಳಿದ್ದೂ ಸೋತಿರುವ ವಿದ್ಯಾರ್ಥಿಗಳೂ ಇದ್ದಾರೆ. ಈ ಎಲ್ಲದರ ಅರ್ಥವೇನು?- ಓದುವವರು ಎಲ್ಲಿದ್ದರೂ, ಹೇಗಿದ್ದರೂ ಓದುತ್ತಾರೆ. ಶೈಕ್ಷಣಿಕ ಯಶಸ್ಸಿಗೆ ಬಾಹ್ಯಾನುಕೂಲಗಳು ಮುಖ್ಯವಲ್ಲ. ಅದಕ್ಕೆ ಮುಖ್ಯವಾದುದು ಯಶಸ್ಸಿನ ದ್ರವ್ಯ. ಉಳಿದದ್ದೆಲ್ಲ ಗೌಣ.ಏಕಾಗ್ರತೆಯೇ ಎಲ್ಲ

ಯಶಸ್ಸಿನ ದ್ರವ್ಯ ಏಕಾಗ್ರತೆಯಲ್ಲದೆ ಬೇರೇನೂ ಅಲ್ಲ. ಏಕಾಗ್ರತೆ ಇದ್ದವನು ಗೆಲ್ಲುತ್ತಾನೆ; ಇಲ್ಲದವನು ಸೋಲುತ್ತಾನೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಕಾಣುವ ವ್ಯತ್ಯಾಸಕ್ಕೆ ಇದೇ ಮುಖ್ಯ ಕಾರಣ. ಜೊತೆಗೆ, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಕಾಡುವ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಕೂಡ ಏಕಾಗ್ರತೆಯ ಕೊರತೆಯೇ.ಸಮೀಕ್ಷೆಯಲ್ಲಿ 0- 90ರ ನಡುವೆ ಇರುವ ವಿದ್ಯಾರ್ಥಿಗಳು ಕಳೆದುಕೊಂಡಿರುವ ಅಂಕಗಳಿಗೆ ಅನುಸಾರವಾಗಿ ಅವರಲ್ಲಿ ಏಕಾಗ್ರತೆಯ ಕೊರತೆ ಇರುತ್ತದೆ. ಈ ವಿದ್ಯಾರ್ಥಿಗಳು 91- 100ರ ವ್ಯಾಪ್ತಿಗೆ ದೈತ್ಯ ಜಿಗಿತ ಸಾಧಿಸಬೇಕಾದರೆ ಅವರು ತಮ್ಮಲ್ಲಿರುವ ಏಕಾಗ್ರತೆಯ ಕೊರತೆಯನ್ನು ಮೊದಲು ನೀಗಿಸಿಕೊಳ್ಳಬೇಕು. ಇದಲ್ಲದೆ ಬೇರೇನು ಮಾಡಿದರೂ ಅದು ತೂತು ತೊಟ್ಟಿಗೆ ನೀರು ಸುರಿದಂತೆ ಆಗುತ್ತದೆ.

ನಾನೊಮ್ಮೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಚಂದನ ವಾಹಿನಿಯಲ್ಲಿ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ.ಆ ಕಾರ್ಯಕ್ರಮದ ಉದ್ದೇಶ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ ಇರುವ ಅನುಮಾನಗಳನ್ನು ಪರಿಹರಿಸುವುದು. ಒಂದು ಗಂಟೆ ಅವಧಿಯಲ್ಲಿ 12 ಪ್ರಶ್ನೆಗಳು ಬಂದವು.ಆದರೆ ಅವುಗಳಲ್ಲಿ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕೇವಲ ನಾಲ್ಕು. ಉಳಿದ ಎಂಟು ಪ್ರಶ್ನೆಗಳು `ಓದಿದ್ದೆಲ್ಲ ಮರೆತು ಹೋಗುತ್ತದೆ' `ಪರೀಕ್ಷೆ ಭಯ ಕಾಡುತ್ತಿದೆ' `ಕನ್‌ಫ್ಯೂಷನ್ ಆಗುತ್ತದೆ' ಇಂಥವುಗಳನ್ನು ಕುರಿತೇ ಇದ್ದವು. ಇದು ಬಹುತೇಕ ವಿದ್ಯಾರ್ಥಿಗಳನ್ನು ಕಾಡುವ ನಿಜವಾದ ಸಮಸ್ಯೆಯೇ ಹೊರತು ಪಠ್ಯ ವಿಷಯ ಅಲ್ಲ.ಇಂತಹ ಪರಿಸ್ಥಿತಿಗೆ ಮೂಲ ಕಾರಣ ಏಕಾಗ್ರತೆಯ ಕೊರತೆ. ಇದರಿಂದ ಓದಿದ್ದು ತಲೆಯಲ್ಲಿ ಸರಿಯಾಗಿ ದಾಖಲಾಗುವುದಿಲ್ಲ. ಆಗ ಇದರ ಜೊತೆಗೆ ಇತರೆಲ್ಲ ಸಮಸ್ಯೆಗಳೂ ದಾಂಗುಡಿ ಇಡುತ್ತವೆ.ಏನು ಮಾಡಬೇಕು?

ಏಕಾಗ್ರತೆ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಸಿದ್ಧತೆಯ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆ ಭಯ ಹುಟ್ಟಲು ಕಾರಣ ವಿದ್ಯಾರ್ಥಿಗಳು ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮತ್ತು ಸಿದ್ಧತೆಯನ್ನು ಹಗುರವಾಗಿ ತೆಗೆದುಕೊಳ್ಳುವುದು. ಇದು ಅದಲು ಬದಲಾಗಬೇಕು. ಸಿದ್ಧತೆಯನ್ನು ಗಂಭೀರವಾಗಿ ಹಾಗೂ ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಳ್ಳಬೇಕು. ಸಿದ್ಧತೆ ತೃಪ್ತಿದಾಯಕ ಆಗಿದ್ದರೆ, ಉತ್ತರಗಳೂ ತೃಪ್ತಿದಾಯಕ ಆಗಿರುತ್ತವೆ. ಇದರಿಂದ ಒಳ್ಳೆಯ ಅಂಕಗಳು ಬಂದೇ ಬರುತ್ತವೆ.ಅಂದಿನದನ್ನು ಅಂದೇ ಅಧ್ಯಯನ ಮಾಡಬೇಕು. ಅಧ್ಯಯನ ಎನ್ನುವುದು ಓದು, ಗ್ರಹಿಕೆ, ಮನನ ಮತ್ತು ಸ್ವತಂತ್ರವಾಗಿ ತಪ್ಪಿಲ್ಲದೇ ಬರೆಯಲು ಬರುವವರೆಗೆ ಬರೆಯುವುದನ್ನು ಒಳಗೊಂಡಿರುತ್ತದೆ. ಪ್ರತಿ ಸಲ ಅಧ್ಯಯನ ಪ್ರಾರಂಭಿಸುವುದಕ್ಕೆ ಮುನ್ನ `ತ್ರೀ ಮಿನಿಟ್ ಮ್ಯೋಜಿಕ್'  ಮಾಡಬೇಕು. ಇದು ಮೊದಲ ಪುಟದ ಬಾಕ್ಸ್‌ನಲ್ಲಿ ವಿವರಿಸಿರುವ ಮಾನಸಿಕ ವ್ಯಾಯಾಮ ಅಲ್ಲದೆ ಬೇರೇನೂ ಅಲ್ಲ. ಇದರಿಂದ ಮನಸ್ಸಿನಲ್ಲಿ ಇರಬಹುದಾದ ರಾಡಿಯೆಲ್ಲ ತಿಳಿಯಾಗಿ, ಮನಸ್ಸು ಜ್ಞಾನ ಸ್ವೀಕಾರಕ್ಕೆ ಸಜ್ಜಾಗುತ್ತದೆ.ಯಾವ ಕಾರಣಕ್ಕೂ ನಿದ್ದೆ ಕಡಿಮೆಯಾಗಬಾರದು (0-2 ವರ್ಷದ ಮಗು: 18-20 ಗಂಟೆ; 2-10 ವರ್ಷ: 9-10 ಗಂಟೆ; 10-16 ವರ್ಷ: 8-10 ಗಂಟೆ; 16-65: 7-9 ಗಂಟೆ). ನಿದ್ದೆಯ ಸಮಯವನ್ನು ಬದಲಿಸಬಾರದು. ಪ್ರತಿ ಒಂದು ಗಂಟೆಯ ಅಧ್ಯಯನದ ನಂತರ 5 ನಿಮಿಷ ವಿಶ್ರಾಂತಿ ಪಡೆಯಬೇಕು.ಇಷ್ಟನ್ನು ಪೋಷಕರು ಮತ್ತು ಶಿಕ್ಷಕರು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಿದರೆ, ಮುಂದೆ ಮಗುವಿನ ವಿದ್ಯಾರ್ಥಿ ಜೀವನ ಉತ್ತುಂಗಕ್ಕೆ ಏರಬಲ್ಲದು.ಇಲ್ಲಿದೆ ಮಾರ್ಗ

ಏಕಾಗ್ರತೆ ವೃದ್ಧಿಗೆ ಅನೇಕ ಮಾರ್ಗಗಳಿವೆ. ಇಲ್ಲೊಂದು ಹೆಚ್ಚು ಪರಿಣಾಕಾರಿಯಾದ ಮಾರ್ಗವನ್ನು ಸೂಚಿಸಲಾಗಿದೆ. ಇದನ್ನು ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು. 10 ನಿಮಿಷ ಬೆಳಗಿನ ನಡಿಗೆ. 10 ನಿಮಿಷ ಮಾನಸಿಕ ವ್ಯಾಯಾಮ. ಅನಂತರವೇ ಉಳಿದದ್ದು.ಹೀಗಿರಲಿ ಮಾನಸಿಕ ವ್ಯಾಯಾಮ: ಕಣ್ಣು ಮುಚ್ಚಿ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಮುಖದಲ್ಲಿ ಮಂದಹಾಸ ಇರಬೇಕು. ದೀರ್ಘವಾಗಿ ಉಸಿರಾಡುತ್ತಾ, 200ರಿಂದ 0ವರೆಗೆ ಇಳಿಕೆ ಕ್ರಮದಲ್ಲಿ ತಪ್ಪಿಲ್ಲದೇ ಎಣಿಸಬೇಕು. ವಿದ್ಯಾರ್ಥಿಯ ವಯಸ್ಸು ಮತ್ತು ಕಲಿಕೆಯನ್ನು ಆಧರಿಸಿ ಅಂಕಿಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಹೀಗೆ ಎಣಿಸುವಾಗ ಅಂಕಿಗಳಲ್ಲದೆ ಬೇರೇನೂ ಮನಸ್ಸಿನಲ್ಲಿ ಸುಳಿಯಬಾರದು. ಅಂಥ ಸ್ಥಿತಿಯನ್ನು ಸಾಧಿಸಬೇಕು. ಈ ದಿನಚರಿಯನ್ನು ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಿದ್ದಂತೆ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ದಿನದಲ್ಲಿ ಒಮ್ಮೆ ಮಾಡಿಸಿದರೆ ಸಾಕು. ಶಾಲೆ ಆರಂಭವಾಗಿ ಎಷ್ಟೋ ದಿನಗಳಾದ ಮೇಲೆ ಪ್ರಾರಂಭಿಸಿದರೆ, ಆವರೆಗಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ದಿನಕ್ಕೆ ಎರಡು ಅಥವಾ ಮೂರು ಸಲ ಮಾಡಿಸಬೇಕು. ಅಂಕಗಳು 60- 80 ಇದ್ದರೆ ಎರಡು ಸಲ, 60ಕ್ಕೂ ಕಡಿಮೆ ಇದ್ದರೆ ಮೂರು ಸಲ ಮಾಡಿಸಬೇಕು. ಇದು ತಲೆ ತಿದ್ದುವ ಕೆಲಸ. ಬದಲಾವಣೆ ಕಾಣಿಸಿಕೊಳ್ಳಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ಆವರೆಗೂ ತಾಳ್ಮೆ ಇರಲಿ.

Post Comments (+)