ಭಾನುವಾರ, ಜನವರಿ 19, 2020
23 °C

ರೂಪದರ್ಶಿಯರ ಮಂದಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂಪದರ್ಶಿಯರ ಮಂದಿರ

ಕಾಂಕ್ರೀಟ್‌ ಕಟ್ಟಡಗಳ ನಡುವಿನಿಂದ ಭರ್ರನೆ ಬೀಸುತ್ತಿದ್ದ ತಂಗಾಳಿ ಫ್ಯಾಷನ್‌ ಪ್ರಿಯರ ಮೈಗೆ ಕಚಗುಳಿ ಇಡುತ್ತಿತ್ತು. ಮೊದಲ ಎರಡು ದಿನ ಮಾಲ್‌ನ ಒಳಾಂಗಣದಲ್ಲಿ ರಂಗು ತುಂಬಿದ್ದ ಫ್ಯಾಷನ್‌ ಗುಂಗು ಮೂರನೇ ದಿನಕ್ಕೆ ಮಾಲ್‌ನ ಹೊರಾಂಗಣಕ್ಕೆ ವರ್ಗಾವಣೆಯಾಗಿತ್ತು.ವಾರಾಂತ್ಯದ ಮೊದಲ ದಿನವಾದ್ದರಿಂದ ಮಾಲ್‌ ತುಂಬೆಲ್ಲಾ ಜನಜಂಗುಳಿ. ಖರೀದಿ ಮುಗಿಸಿದವರೆಲ್ಲಾ ಕೈಯಲ್ಲಿ ಕುರುಕುಲು ತಿಂಡಿಗಳನ್ನು ಹಿಡಿದುಕೊಂಡು ಚಿಮ್ಮುವ ಕಾರಂಜಿ ಹಾಗೂ ವಿಶಾಲವಾದ ಕೃತಕ ಕೊಳದ ಪಕ್ಕದಲ್ಲಿ ಭವ್ಯವಾಗಿ ತಲೆ ಎತ್ತಿದ್ದ ವೇದಿಕೆಯ ಸುತ್ತ ಒಂದು ಸಣ್ಣ ಕುತೂಹಲವನ್ನಿಟ್ಟುಕೊಂಡು ಜಮೆಯಾಗುತ್ತಿದ್ದರು. ಅಂದಹಾಗೆ, ಅದು ಬೆಂಗಳೂರಿನ ಅತಿದೊಡ್ಡ ಹಾಗೂ ಜನಪ್ರಿಯ ಮಾಲ್‌ ಫ್ಯಾಷನ್‌ ಷೋನ ಗ್ರ್ಯಾಂಡ್‌ ಫಿನಾಲೆ ಸಮಾರಂಭ. ಬಾಲಿವುಡ್‌ ನಟಿ ಮಂದಿರಾ ಬೇಡಿ ಆವತ್ತಿನ ಸ್ಟಾರ್‌ ಆಕರ್ಷಣೆಯಾಗಿದ್ದರು.ವಿದೇಶದ ವಾತಾವರಣವನ್ನು ನೆನಪಿಸುವ ಬ್ರಿಗೇಡ್‌ ಗೇಟ್‌ನಲ್ಲಿರುವ ಒರಾಯನ್‌ ಮಾಲ್‌ನಲ್ಲಿ ಶನಿವಾರ ಹದಿನೈದು ಮಂದಿ ತೆಳ್ಳನೆ ದೇಹದ ರೂಪದರ್ಶಿಗಳು ವಯ್ಯಾರದಿಂದ ನಡೆಯುತ್ತಾ ಮಾಲ್‌ ಮೋಹಿಗಳು ಹಾಗೂ ಫ್ಯಾಷನ್‌ ಪ್ರಿಯರನ್ನು ರಂಜಿಸಿದರು. ಆ ರೂಪದರ್ಶಿಗಳೆಲ್ಲರೂ ಮೈತೋರುವ ಬಣ್ಣ ಬಣ್ಣದ ಚಳಿಗಾಲದ ಉಡುಪು ಪ್ರದರ್ಶಿಸಿ ಫ್ಯಾಷನ್‌ ಪ್ರಿಯರ ಮನಸ್ಸು ಬೆಚ್ಚಗಾಗಿಸಿದರು. ವ್ಯಾನ್‌ ಹ್ಯೂಸೆನ್‌, ಡೆಬೆನ್‌ಹ್ಯಾಮ್ಸ್‌, ವೆರೊ ಮೊಡ, ಜ್ಯಾಕ್‌ ಅಂಡ್‌ ಜೋನ್ಸ್‌, ಅಲೆನ್‌ ಸಾಲಿ, ಸೋಚ್‌ ಹಾಗೂ ಜಸು ಬ್ರ್ಯಾಂಡ್‌ನ ಆಕರ್ಷಕ ಚಳಿಗಾಲದ ಸಂಗ್ರಹಗಳು ರೂಪದರ್ಶಿಯರ ಮೈಮೇಲೆ ನಲಿದಾಡಿದವು.ಚಳಿಗಾಲದ ಉಡುಪುಗಳನ್ನು ಕಣ್ತುಂಬಿಕೊಂಡ ಫ್ಯಾಷನ್‌ ಪ್ರಿಯರು ಕಿವಿಗಡಚುವ ಕರತಾಡನ ಮಾಡುವ ಮೂಲಕ ತಮ್ಮ ಮೆಚ್ಚುಗೆಯ ಋಜು ಹಾಕಿದರು. ಅಂದಹಾಗೆ, ‘ದಿ ಒರಾಯನ್‌ ಫ್ಯಾಷನ್‌ ವೀಕ್‌’ನ್ನು ಕೋರಿಯೋಗ್ರಫಿ ಮಾಡಿದ್ದು ಪ್ರಸಾದ್‌ ಬಿದಪ್ಪ.ಶನಿವಾರ ನಡೆದ ಗ್ರ್ಯಾಂಡ್‌ ಫಿನಾಲೆಯ ಪ್ರಮುಖ ಆಕರ್ಷಣೆ ನಟಿ ಮಂದಿರಾ ಬೇಡಿ ಮತ್ತು ಮಿಸ್ಟರ್‌ ಇಂಡಿಯಾ ಆ್ಯರ್ರಿ ದಬಾಸ್‌ ಮತ್ತು ಅಂತರರಾಷ್ಟ್ರೀಯ ರೂಪದರ್ಶಿ ದಿಯಾ. ಚಳಿಗಾಲದ ಉಡುಪು ಧರಿಸಿ ಒನಪು ವಯ್ಯಾರ ತೋರುತ್ತಾ ಬಂದ ದಿಯಾಳನ್ನು ನೋಡಿದವರು ಖುಷಿಯಿಂದ ಕೇಕೆ ಹಾಕಿದರು.ಆನಂತರ ನಟಿ ಮಂದಿರಾ ಬೇಡಿ ಕಪ್ಪು ಬಣ್ಣದ ಪಾರದರ್ಶಕ ವಸ್ತ್ರದ ಮೇಲೆ ಸಣ್ಣ ಗಾಜಿನಿಂದ ವಿನ್ಯಾಸಗೊಂಡ ತುಂಡುಡುಗೆ ತೊಟ್ಟು ರ್‌ಯಾಂಪ್‌ ಮೇಲೆ ಕಾಣಿಸಿಕೊಂಡಾಗ ಸೇರಿದ್ದ ಜನರ ಕೂಗು, ಕೇಕೆ ಮತ್ತಷ್ಟು ಜೋರಾಯಿತು. ‘ಪ್ಲಸ್‌’ ಮಾದರಿಯಲ್ಲಿ ರೂಪುಗೊಂಡಿದ್ದ ರ್‌ಯಾಂಪ್‌ನ ನಾಲ್ಕೂ ಬದಿಯಲ್ಲೂ ಬಳುಕಿ ನಡೆದ ಮಂದಿರಾಗೆ ಅನೇಕರು ಹೂಮುತ್ತುಗಳನ್ನು ಪ್ರಶಂಸೆಯಾಗಿ ತೇಲಿಬಿಟ್ಟರು. ಕಪ್ಪು ಬಣ್ಣದ ಉದ್ದನೆಯ ದೊಗಳೆ ಬೂಟು ಧರಿಸಿದ್ದ ನಟಿ ಮಂದಿರಾ ಬೇಡಿ ಷೋ ಕೊನೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಅಂಗಳದಲ್ಲಿ ಫ್ಯಾಷನ್‌ ಷೋ ನೋಡಿ ಖುಷಿಯಾಗಿದ್ದ ಜನರು ಕಣ್ಣುಗಳಲ್ಲಿ ಬಣ್ಣಬಣ್ಣದ ಕನಸುಗಳ ಹೊತ್ತು ಚದುರಿದರು. 

 

ಪ್ರತಿಕ್ರಿಯಿಸಿ (+)