ಶನಿವಾರ, ಏಪ್ರಿಲ್ 17, 2021
27 °C

ರೂಪದರ್ಶಿ ಜೊತೆ ಸಂಬಂಧ ಇಲ್ಲ - ರವೂಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್/ಮುಂಬೈ (ಪಿಟಿಐ): ಲೈಂಗಿಕ ದೌರ್ಜನ್ಯ ಆರೋಪಕ್ಕೆ ಒಳಗಾಗಿ ವಿವಾದಕ್ಕೆ ಸಿಲುಕಿರುವ ಪಾಕಿಸ್ತಾನದ ಅಂಪೈರ್ ಅಸದ್ ರವೂಫ್ ಮುಂಬೈನ ರೂಪದರ್ಶಿಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಆಕೆಯ ಜೊತೆಗೆ ಫೋಟೊದಲ್ಲಿ ಕಾಣಿಸಿಕೊಂಡಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ.`ನನ್ನ ಅಭಿಮಾನಿ ಎಂದು ಹೇಳಿ ಲೀನಾ ಕಪೂರ್ ನನ್ನೊಂದಿಗೆ ಫೋಟೊ ತೆಗೆಸಿಕೊಂಡಿದ್ದಳು. ಆದರೆ ನಾನು ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿರಲಿಲ್ಲ. ಆಕೆ ಹೇಳುವುದು ಶುದ್ಧ ಸುಳ್ಳು~ ಎಂದು ರವೂಫ್ ಬುಧವಾರ ನುಡಿದರು.`ಮದುವೆಯಾಗುವುದಾಗಿ ನಂಬಿಸಿ ರವೂಫ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ~ ಎಂದು ಮುಂಬೈನ ರೂಪದರ್ಶಿ ಲೀನಾ ಕಪೂರ್ ಐಸಿಸಿ ಎಲೈಟ್ ಪ್ಯಾನೆಲ್‌ನ ಅಂಪೈರ್ ಪಾಕಿಸ್ತಾನದ ರವೂಫ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳು. ಲೀನಾ ಮತ್ತು ರವೂಫ್ ಜೊತೆಯಾಗಿ ಕಾಣಿಸಿಕೊಂಡ ಫೋಟೊಗಳು ಇಂಟರ್‌ನೆಟ್ ಹಾಗೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.`ನನಗೆ ಈಗ 56 ವರ್ಷ ವಯಸ್ಸು. ಪತ್ನಿ, ಇಬ್ಬರು ಮಕ್ಕಳ ಸುಖ ಸಂಸಾರ ನನ್ನದು. ಈ ವಯಸ್ಸಿನಲ್ಲಿ ನಾನು ಯಾರಿಗಾದರೂ ಮದುವೆಯ ಮಾತು ಕೊಡಲು ಹೇಗೆ ಸಾಧ್ಯ? ಆಕೆ ಈ ಆರೋಪ ಏಕೆ ಮಾಡಿದಳು ಎಂಬುದು ತಿಳಿಯುತ್ತಿಲ್ಲ. ಮತ್ತೆ ಆರೋಪ ಮಾಡಿ ನನ್ನ ಹಾಗೂ ಕುಟುಂಬದ ಮಾನಹಾನಿಗೆ ಪ್ರಯತ್ನಿಸಿದರೆ ಕಾನೂನು ಕ್ರಮಕ್ಕೆ ಮುಂದಾಗುವೆ~ ಎಂದು ರವೂಫ್ ಹೇಳಿದ್ದಾರೆ.ಲೀನಾ ಸೋಮವಾರ ಬಾಂದ್ರಾ ಡಿಸಿಪಿ ಪ್ರತಾಪ್ ದಿಗಾವ್ಕರ್ ಕಚೇರಿಯಲ್ಲಿ ರವೂಫ್ ವಿರುದ್ಧ ಲಿಖಿತ ದೂರು ನೀಡಿದ್ದಳು. `ರವೂಫ್ ಮದುವೆಯಾಗುವುದಾಗಿ ಮಾತುಕೊಟ್ಟು ಲೈಂಗಿಕ ಶೋಷಣೆ ನಡೆಸಿದ್ದಾನೆ. ಶ್ರೀಲಂಕಾದಲ್ಲಿ ಹಾಗೂ ಭಾರತದಲ್ಲಿ ನನ್ನ ಮೇಲೆ ದೌರ್ಜನ್ಯ ನಡೆದಿದೆ~ ಎಂದು ದೂರಿನಲ್ಲಿ ತಿಳಿಸಿದ್ದಳು. ಲೀನಾ ಹಾಗೂ ರವೂಫ್ ಮೊದಲ ಬಾರಿ ಶ್ರೀಲಂಕಾದಲ್ಲಿ ಭೇಟಿಯಾಗಿದ್ದರು.

 

`ಮಹಿಳೆಯರೂ ಒಳಗೊಂಡಂತೆ ಹಲವು ಕ್ರಿಕೆಟ್ ಅಭಿಮಾನಿಗಳು ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಆದ್ದರಿಂದ ನಾವಿಬ್ಬರು ಜೊತೆಯಾಗಿರುವ ಫೋಟೊ ಇದೆ ಎಂಬ ಕಾರಣಕ್ಕೆ ನಮ್ಮ ನಡುವೆ ಸಂಬಂಧ ಇರಬೇಕೆಂದೇನೂ ಇಲ್ಲ~ ಎಂಬುದು ರವೂಫ್ ಅವರ ಸ್ಪಷ್ಟನೆ.`ಲೈಂಗಿಕ ಸಂಬಂಧ ಹೊಂದಿದ್ದೆ ಎಂಬುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಗಳಿದ್ದರೆ ಆಕೆ ಅವುಗಳೊಂದಿಗೆ ನ್ಯಾಯಾಲಯಕ್ಕೆ ಹೋಗಲಿ. ಕಾನೂನು ಹೋರಾಟಕ್ಕೆ ನಾನೂ ಸಿದ್ಧ~ ಎಂದಿದ್ದಾರೆ. `ನನ್ನ ವಿರುದ್ಧ ಪ್ರಕರಣ ದಾಖಲಾದರೆ ಭಾರತಕ್ಕೆ ತೆರಳಿ ವಿಚಾರಣೆ ಎದುರಿಸಲು ಸಿದ್ಧ~ ಎಂದೂ ತಿಳಿಸಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ಘಟನೆಗೆ ಸಂಬಂಧಿಸಿದಂತೆ ರವೂಫ್ ಅವರಿಂದ ವಿವರಣೆ ಕೋರಿದೆ ಎಂದು ಪಾಕಿಸ್ತಾನದ ಚಾನೆಲ್‌ಗಳು ವರದಿ ಮಾಡಿವೆ. ಅದೇ ರೀತಿ ವಿವಾದ ಬಗೆಹರಿಯುವವರೆಗೆ ಐಸಿಸಿ ಎಲೈಟ್ ಪ್ಯಾನೆಲ್‌ನಿಂದ ಅವರನ್ನು ಅಮಾನತು ಮಾಡುವ ಬಗ್ಗೆಯೂ ಚರ್ಚೆ ನಡೆಸಿದೆ ಎನ್ನಲಾಗಿದೆ.`ಪತ್ನಿ ಎಂದು ಪರಿಚಯಿಸಿದ್ದ~

ಮುಂಬೈ (ಪಿಟಿಐ):
ತಮ್ಮಿಬ್ಬರ ನಡುವೆ ಗಾಢ ಸಂಬಂಧ ಇತ್ತೆಂಬುದನ್ನು ಪುನರುಚ್ಚರಿಸಿರುವ ಲೀನಾ, `ಅನಾರೋಗ್ಯಕ್ಕೆ ಒಳಗಾಗಿದ್ದ ಸಂಬಂಧ ನನ್ನನ್ನು ಭೇಟಿಯಾಗಲು ರವೂಫ್ ಮುಂಬೈಗೆ ಬಂದಿದ್ದ~ ಎಂದಿದ್ದಾಳೆ. ಅದೇ ರೀತಿ ನವದೆಹಲಿಯಲ್ಲಿ ರವೂಫ್ ನನ್ನನ್ನು ಹಲವರಿಗೆ `ಇವರು ನನ್ನ ಪತ್ನಿ~ ಎಂಬುದಾಗಿ ಪರಿಚಯಿಸಿದ್ದ ಎಂದೂ ಲೀನಾ ಹೇಳಿದ್ದಾಳೆ.ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಫೋಟೊಗಳ ಬಗ್ಗೆ ಕೇಳಿದಾಗ, `ನಾವಿಬ್ಬರು ಜೊತೆಯಾಗಿ ತೆಗೆಸಿರುವ ಇನ್ನೂ ಹಲವು ಫೋಟೊಗಳಿವೆ. ನಮ್ಮ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ರವೂಫ್ ಹೇಳುವುದಾದರೂ ಹೇಗೆ? ಫೋಟೊಗಳು ಎಲ್ಲವನ್ನೂ ತಿಳಿಸುತ್ತವೆ. ಆತ ಸುಳ್ಳು ಹೇಳುವುದು ಏಕೆ ಎಂಬುದು ತಿಳಿಯುತ್ತಿಲ್ಲ~ ಎಂದಿದ್ದಾಳೆ. `ನನ್ನ ಹೆತ್ತವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಲು ರವೂಫ್ ಬಯಸಿದ್ದ~ ಎಂಬುದನ್ನೂ ಆಕೆ ಬಹಿರಂಗಪಡಿಸಿದ್ದಾಳೆ.ರವೂಫ್ ವಿರುದ್ಧ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಲೀನಾ, `ಆತನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದೇನೆ. ನನ್ನ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಎಸಗಲಾಗಿದೆ. ನನಗೆ ನ್ಯಾಯ ಲಭಿಸುವ ವಿಶ್ವಾಸವಿದೆ. ರವೂಫ್ ಒಬ್ಬ ಹೇಡಿ. ನಾನು ಆತನನ್ನು ಪತಿಯ ಹಾಗೆ ನಡೆಸಿಕೊಂಡಿದ್ದೆ~ ಎಂದು ನುಡಿದಿದ್ದಾಳೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.