ರೂಪನಗುಡಿಯಲ್ಲಿ 75 ಮಿಮೀ ಮಳೆ

7

ರೂಪನಗುಡಿಯಲ್ಲಿ 75 ಮಿಮೀ ಮಳೆ

Published:
Updated:
ರೂಪನಗುಡಿಯಲ್ಲಿ 75 ಮಿಮೀ ಮಳೆ

ಬಳ್ಳಾರಿ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಭಾರಿ ಮಳೆ ಸುರಿದಿದ್ದು, ತಾಲ್ಲೂಕಿನ ರೂಪನಗುಡಿ, ಕಮ್ಮರಚೇಡು ಗ್ರಾಮಗಳಲ್ಲಿ ದಾಖಲೆಯ 75 ಮಿ.ಮೀ. ಮಳೆಯಾಗಿರುವ ಕುರಿತು ವರದಿಯಾಗಿದೆ.ಬಳ್ಳಾರಿ ನಗರದಲ್ಲಿ 23 ಮಿಮೀ, ಸಿರುಗುಪ್ಪದಲ್ಲಿ 24.2 ಮಿಮೀ, ಹಗರಿ ಬೊಮ್ಮನಹಳ್ಳಿಯಲ್ಲಿ 4.6 ಮಿಮೀ ಮಳೆ ಸುರಿದಿದೆ ಎಂದು ಅಂಕಿಸಂಖ್ಯೆ ಇಲಾಖೆಯ ವಾಗೀಶ್ ತಿಳಿಸಿದ್ದಾರೆ.ರೂಪನಗುಡಿ, ಶಂಕರಬಂಡೆ, ಕಮ್ಮರಚೇಡು, ಗ್ರಾಮಗಳ ಸುತ್ತಮುತ್ತ ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಹಳ್ಳ- ಕೊಳ್ಳಗಳು ತುಂಬಿ ಹರಿದವು. ಹಗರಿ ನದಿಗೂ ಪ್ರವಾಹ ಬಂದ ಹಿನ್ನೆಲೆಯಲ್ಲಿ ರೂಪನಗುಡಿ, ಕಮ್ಮರಚೇಡು ಗ್ರಾಮಗಳ ನಡುವಿನ ತಾತ್ಕಾಲಿನ ಸೇತುವೆ ಕುಸಿದಿದೆ.ಇದರಿಂದಾಗಿ ಬೊಮ್ಮನಾಳ್, ಕಣೇಕಲ್ ಮತ್ತಿತರ ಗ್ರಾಮಗಳಿಂದ ಆಂಧ್ರದ ಗುಂತಕಲ್ ಬಳಿಯ ಕಸಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ನೂರಾರು ಭಕ್ತರಿಗೆ ತೀವ್ರ ತೊಂದರೆಯಾಯಿತು. ಅನೇಕ ವಾಹನಗಳು ಅನಿವಾರ್ಯವಾಗಿ ಬಳ್ಳಾರಿ ಬೈಪಾಸ್ ಮೂಲಕ ಸುತ್ತಿ- ಬಳಿಸಿ, ಚೇಳ್ಳಗುರ್ಕಿ ಮಾರ್ಗವಾಗಿಯೇ ಕಸಾಪುರದತ್ತ ತೆರಳಿದವು.ಸೇತುವೆ ದುರಸ್ತಿಗೆ ಆಗ್ರಹ: ರೂಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿದ್ದು, ಗ್ರಾಮಸ್ಥರಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಎರಡೂವರೆ ವರ್ಷದ ಹಿಂದೆಯೇ ಅಡಿಗಲ್ಲು ಇರಿಸಿದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ರೂಪನಗುಡಿ ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೋಕಾ ಗ್ರಾಮದ ಬಳಿಯೂ ಹಗರಿ ನದಿಗೆ ಅಡ್ಡ ನಿರ್ಮಿಸುತ್ತಿರುವ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಹಳೆ ಸೇತುವೆಯೂ ಕುಸಿದಿದ್ದು, 10ರಿಂದ 12 ಗ್ರಾಮಗಳ ಜನತೆಗೆ ತೀವ್ರ ಸಮಸ್ಯೆ ಎದುರಾಗಲಿದೆ. ಆಂಧ್ರಪ್ರದೇಶದತ್ತ ತೆರಳುವವರ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ಆದಷ್ಟು ಶೀಘ್ರದಲ್ಲೇ ಹಳೆಯ ಸೇತುವೆಯ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.ಪರಿಶೀಲನೆ: ಶಾಸಕ ಬಿ.ಶ್ರೀರಾಮುಲು, ಜಿ.ಪಂ. ಸದಸ್ಯರಾದ ಗೋನಾಳ್ ರಾಜಶೇಖರಗೌಡ, ರಾಮುಡು ಮತ್ತಿತರರು ಮಂಗಳವಾರ ಮೋಕಾ ಗ್ರಾಮದ ಹೊರ ವಲಯದಲ್ಲಿರುವ ಹಗರಿ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರ ದುರಸ್ತಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry