ರೂಪಾಯಿಗೊಂದು ರೋಟಿ!

7

ರೂಪಾಯಿಗೊಂದು ರೋಟಿ!

Published:
Updated:

`ಏನೇ ಮೈತ್ರೇಯಿ ವ್ಯಾಲೆಂಟೇನ್ಸ್ ಡೇ ಜೋರಾ? ನಿನ್ನ ಲವರ್ ಏನ್ ಗಿಫ್ಟ್ ಕೊಡಿಸಿದ್ರು, ಎಲ್ಲಿ ಟ್ರೀಟ್ ಕೊಡ್ಸಿದ್ರು?

ಊ ಕಣೆ ಶ್ವೇತಾ. ಆ ದಿನ ಸಖತ್ ಎಂಜಾಯ್ ಮಾಡಿದ್ವಿ. ಆಕಾಶ್ ನಂಗೆ ಡ್ರೆಸ್ ಕೊಡ್ಸಿದ್ರು, ಅಷ್ಟೇ ಅಲ್ಲ ಇಬ್ಬರೂ ಒಟ್ಟಿಗೆ ಸಿನಿಮಾಗೆ ಹೋಗಿದ್ವಿ, ಸಂಜೆ ಕಾರ್ನ್‌ಬೇಲ್ ತಿಂದು; ಒಂದು ಸ್ಟ್ರಾಂಗ್ ಕಾಫಿ ಕುಡಿದ್ವಿ.

ಯಾಕೆ ನೀನು ಕಾಫಿ ಕುಡಿಲಿಲ್ವ?~ ಅಂದಳು ಶ್ವೇತಾ.

ಅದಕ್ಕೆ ಮೈತ್ರೇಯಿ, `ನಾನು ಕುಡಿದೆ ಕಣೇ, ಬುದ್ಧು~ ಅಂದಳು. 

`ಮತ್ತೇ ಒಂದೇ ಕಾಫಿ ಅಂದೆ.~

`ಒಂದೇ ಕಾಫಿ ತಗೊಂಡಿದ್ದು. ಆದರೆ ಇಬ್ಬರು ಕುಡಿದ್ವಿ.~

`ಹೇಗೆ?~

`ಒಂದು ಸಿಪ್ ನಾನು; ಇನ್ನೊಂದು ಸಿಪ್ ಆಕಾಶ್. ವಾಹ್ ಕಾಫಿ  ಸಖತ್ ಟೇಸ್ಟ್ ಆಗಿತ್ತು ಕಣೆ~.

`ನನ್ನ ಹೊಟ್ಟೆ ಉರಿಸಬೇಡ ಸುಮ್ನಿರು ನೀನು. ಹೋಗ್ಲಿ ಡಿನ್ನರ್‌ಗೆ ಎಲ್ಲಿ ಹೋಗಿದ್ರಿ~.

`ಡಿನ್ನರ್‌ಗೆ ಅವತ್ತು ಹೋಗ್ಲಿಕ್ಕೆ ಆಗ್ಲಿಲ್ಲ ಕಣೆ. ಮಾರನೇ ದಿನ ಒಂದು ಹೋಟೆಲ್‌ಗೆ ಹೋಗಿದ್ವಿ. ನಿಂಗೆ ಗೊತ್ತಲ್ವಾ ನಂಗೆ ನಾರ್ತ್ ಇಂಡಿಯನ್ ಡಿಶ್ ಅಂದ್ರೆ ತುಂಬಾ ಇಷ್ಟ ಅಂತಾ. ಅದಕ್ಕೆ ನಾನು ಹೋಟೆಲ್‌ಗೆ ಹೋದ ತಕ್ಷಣ ಆಕಾಶ್‌ಗೆ ಆರ್ಡರ್ ಮಾಡೋ ಚಾನ್ಸ್ ಕೊಡದೇ ನಾನೇ ಮೆನು ಕೈಗೆತ್ತಿಕೊಂಡು, ಬೈಟೂ ಹಾಟ್ ಅಂಡ್ ಸೋರ್ ಸೂಪ್, ಒಂದು ಮಶ್ರೂಮ್ ಮಂಚೂರಿ, 2+2 ಬಟರ್ ನಾನ್, ವೆಜ್ ಕಡಾಯ್, ಪನ್ನೀರ್ ಬಟರ್ ಮಸಾಲ ಜತೆಗೆ ಒಂದು ಗ್ರೀನ್ ಸಲಾಡ್ ಆರ್ಡರ್ ಮಾಡ್ದೆ ಕಣೆ~.

`ಉಶ್... ಅಷ್ಟೊಂದು ಆರ್ಡರ್ ಮಾಡಿದ್ಯಾ. ಹೋಗ್ಲಿ ಆಮೇಲೇನಾಯ್ತು ಹೇಳು~ ಅಂದಳು ಶ್ವೇತಾ.

`ಹೇಳ್ತಿನಿ ಇರಮ್ಮಾ~.

`ಊಟದ ರುಚಿ ಅಷ್ಟಕ್ಕಷ್ಟೆ. ಆದ್ರೆ, ಊಟ ಮುಗಿದ ನಂತರ ಬಿಲ್ ನೋಡಿ ನನ್ನ ಹೃದಯ ಒಡೆದು ಹೋದಂಗಾಯ್ತು ಕಣೆ~.

`ಯಾಕೆ ಮೈತ್ರಿ, ಏನಾಯ್ತು.~

`ಅಯ್ಯೋ ಏನ್ಹೇಳ್ಲಿ ನಾನು. ನಿಂಗೇ ಗೊತ್ತಲ್ವಾ ನಾನು ಎಷ್ಟೊಂದು ಕಂಜೂಸ್ ಅಂತ. ಅಂತಾದ್ರಲ್ಲಿ ಇಷ್ಟೇ ಇಷ್ಟು ತಿಂದು ಎರಡೂವರೆ ಸಾವಿರ ಬಿಲ್ ಕೊಡೋದು ಅಂದ್ರೆ ಹೊಟ್ಟೆ ಉರಿಯಲ್ವೇನೆ~ ಅಂದಳು ಮೈತ್ರೇಯಿ.

`ಹೋಗ್ಲಿ ಬಿಡು ನೀನೇನು ಬಿಲ್ ಕೊಟ್ಟಿಲ್ವಲ್ಲಾ~ ಅಂದಳು ಶ್ವೇತಾ.

`ಬಿಲ್ ಯಾರು ಕೊಟ್ರೇನು. ಆಕಾಶ್ ಏನು ಬೇರೆಯವರಾ?~

`ಅದೂ ಸರಿ ಬಿಡು. ನೀನು ಊಟಕ್ಕೆ ಹೋಗ್ತೀನಿ ಅಂದಿದ್ರೆ, ನಾನು ಒಂದು ಒಳ್ಳೆ ಹೋಟೆಲ್ ಸಜೆಸ್ಟ್ ಮಾಡ್ತಿದ್ದೆ ಕಣೆ. ತುಂಬಾ ಕಡಿಮೆ ಬೆಲೆಯಲ್ಲಿ ಸಖತ್ ಟೇಸ್ಟಿ ಆಗಿರೋ ಊಟ ಮಾಡಬಹುದಿತ್ತು~ ಅಂದಳು ಶ್ವೇತಾ.

ಮೈತ್ರಿ ಕೇಳಿದ್ಲು, `ಯಾವ ಹೋಟೆಲ್ ಅದು?~

`ಜೆ.ಪಿ.ನಗರದಲ್ಲಿ ರಂಗಶಂಕರದ ಹತ್ತಿರ `ಕಡಾಯ್ ಕಾ ಖಾನಾ~ ಅಂತ ಒಂದು ಹೋಟೆಲ್ ಇದೆ ಕಣೆ. ಅಲ್ಲಿ ಒಂದು ರೂಪಾಯಿಗೆ ತಂದೂರು ರೋಟಿ, ನಾನ್, ಬಟರ್ ನಾನ್, ಕುಲ್ಚ, ಕೋರಿಯಂಡರ್ ಕುಲ್ಚ, ಲಚ್ಚಾ ಪರೋಟ, ಪುದೀನ ಕುಲ್ಚ, ಮೇಥಿ ಕುಲ್ಚ, ಆನಿಯನ್ ಕುಲ್ಚ, ಗೋಬಿ ಕಾ ಪರೋಟ ಸಿಗುತ್ತೆ ಕಣೆ~ಅಂದಳು.

`ಏನೆಂದೇ!~ ಬಿಟ್ಟಬಾಯಿ ಬಿಟ್ಟಂಗೆ ಆಶ್ಚರ್ಯದಿಂದ ಉದ್ಗರಿಸಿದಳು ಮೈತ್ರಿ.

`ನಿಜಾ ಕಣೆ. ಮೊದ್ಲು ಬಾಯಿ ಮುಚ್ಕೋ ಮಾರಾಯ್ತಿ, ಸೊಳ್ಳೆ ಒಳಕ್ಕೆ ಹೋದಾವು ಅಮೇಲೆ~ ಅಂದಳು ಶ್ವೇತಾ.

`ಮತ್ತಿನ್ನೇನೆ. ಈ ಉದ್ಯಾನ ನಗರಿಯಲ್ಲಿ ಎಲ್ಲವೂ ದುಬಾರಿ. ಒಂದು ಟೀ ಹತ್ತು ರೂಪಾಯಿ ತಗೋತಾರೆ. ಹೀಗಿರುವಾಗ ಒಂದು ರೂಗೆ ರೋಟಿ ಕೊಡ್ತಾರೆ ಎಂದರೆ ಅಚ್ಚರಿಯಲ್ಲವೇ?~ ಅಂದಳು ಮೈತ್ರಿ.

`ನಿಜಾನಮ್ಮ. ನಿಂಗೆ ನಾನ್ಯಾಕೆ ಸುಳ್ಳು ಹೇಳ್ಲಿ. ನೀನು ಈ ಹೋಟೆಲ್‌ಗೆ ಹೋಗಿ ರೋಟಿ, ನಾನ್, ಕುಲ್ಚಾ ಯಾವುದೇ ಆರ್ಡರ್ ಮಾಡು. ಬರೀ ಒಂದು ರೂಪಾಯಿ ಅಷ್ಟೆ. ಹೋಟೆಲ್‌ನವರು ಫೆಬ್ರುವರಿ 15ರಿಂದ 100 ದಿನಗಳ ಕಾಲ ಗ್ರಾಹಕರಿಗೆ ಕೇವಲ ಒಂದು ರೂಪಾಯಿಗೆ ರೋಟಿ ಕೊಡ್ತಾರೆ. ಇಲ್ಲಿ ವೆಜ್, ನಾನ್‌ವೆಜ್ ಎರಡೂ ಇದೆ. ಹೋಟೆಲ್‌ನ ಒಳಾಂಗಣ ವಿನ್ಯಾಸ ಕೂಡ ಸಖತ್ ಆಗಿದೆ~.

`ಸರೀನಮ್ಮಾ. ರೋಟಿ, ನಾನ್ ಏನೋ ಒಂದು ರೂಪಾಯಿಗೆ ಕೊಡ್ತಾರೆ ಸರಿ. ಯಾವ್ಯಾವ ಗ್ರೇವಿ ಇದೆ. ಅದರ ಬೆಲೆ ಎಷ್ಟು?~ ಅಂದಳು ಮೈತ್ರಿ.

`ಗ್ರೇವಿಯಲ್ಲಿ ವೆಜ್ ಕಡಾಯ್, ವೆಜ್ ಕೊಲ್ಲಾಪುರಿ, ಪನ್ನೀರ್ ಮಖ್ನಿ, ಪಾಲಕ್ ಪನ್ನೀರ್, ಬಿಂಡಿ ಚೆನ್ನಾ, ದಾಲ್, ಯೆಲ್ಲೋ ದಾಲ್, ಪಾಲಕ್ ಟಿಕ್ಕಿ, ರಾಯಲ್ ಆಲೂ ಗೋಬಿ, ಸಬ್ಜಿ ಮೆಲ್ ಮಸಾಲಾ ಹೀಗೆ ಸುಮಾರು ಒಂದು 40ಕ್ಕೂ ಅಧಿಕ ಬಗೆಯ ಗ್ರೇವಿ ಇದೆ. ನಾನ್ ವೆಜ್‌ನಲ್ಲಿ ಫಿಷ್ ಮಲಾಯ್ ಕರಿ, ಪಟಿಯಾಲ ದಾಲ್ ಮುರ್ಗ್, ಚಿಕನ್ ಪಿಂಟಿ ಮಸಾಲಾ ಬಾಯಲ್ಲಿ ನೀರೂರಿಸುತ್ತೆ ಕಣೆ. ಟೇಸ್ಟ್ ಕೂಡ ಬೊಂಬಾಟ್. ನಿಂಗೊತ್ತಾ ಬೇರೆ ಹೋಟೆಲ್‌ಗಿಂದ ಇಲ್ಲಿ ಗ್ರೇವಿ ತುಂಬಾ ಕಡಿಮೆ ಬೆಲೆಗೆ ಕೊಡ್ತಾರೆ~ ಶ್ವೇತಾ ಉತ್ತರ ಕೊಟ್ಟಳು.

`ಹೌದಾ. ಪರ‌್ವಾಗಿಲ್ಲ. ನಾನು ಆಕಾಶ್ ಹೋಗಿದ್ದ ಹೋಟೆಲ್‌ಗಿಂತ ಇದೇ ಎಷ್ಟೋ ಬೆಟರ್ ಅನಿಸ್ತಿದೆ. ಅರ್ಧ ದುಡ್ಡನ್ನಾದರೂ ಉಳಿಸಬಹುದಿತ್ತು~ ಎಂದು ಮೈತ್ರಿ ಕೈಬೆರಳ ಲಟಿಕೆ ತೆಗೆಯುತ್ತಾ ಅಲವತ್ತುಕೊಂಡಳು.

`ಈ ಹೋಟೆಲ್‌ನ ಮಾಲೀಕ ಪುಟ್ಟರಾಜು. ಕಳೆದ ವರ್ಷ ಕೂಡ ಅವರು ಇದೇ ರೀತಿ ಒಂದು ಪ್ರಯೋಗ ಮಾಡಿದ್ರು. ಒಂದು ರೂಪಾಯಿಗೆ ದೋಸೆ, ಇಡ್ಲಿಯನ್ನು ಆರು ತಿಂಗಳು ಕೊಟ್ರು. ಆವಾಗ ನೋಡಬೇಕಿತ್ತು ನೀನು ಆ ಹೋಟೆಲ್ ಮುಂದೆ ಜನ ಜಮಾಯಿಸಿದ್ದನ್ನ. ಗುಳೆ ಬಂದವರು, ಓದಲಿಕ್ಕೆಂದು ದೂರದ ಊರಿನಿಂದ ಬಂದು ರೂಂ ಮಾಡಿಕೊಂಡು ಇರುವವರು, ಹಾಸ್ಟೆಲ್‌ನಲ್ಲಿರೋ ವಿದ್ಯಾರ್ಥಿಗಳೆಲ್ಲಾ ಕ್ಯಾರಿಯರ್ ತಂದು ತುಂಬಿಸಿಕೊಂಡು ಹೋಗ್ತಿದ್ರಂತೆ ಕಣೆ. ಹಣದ ಕೊರತೆ ಇರುವವರ ಹೊಟ್ಟೆಯನ್ನು ಇವರು ಆರು ತಿಂಗಳು ತುಂಬಿಸಿದ್ರಂತೆ. ಮಾಲೀಕರಿಗೆ ಆ ಖುಷಿನೇ ಸಾಕಂತೆ. ಅದೇ ಉಮ್ಮಸ್ಸಿನಲ್ಲಿ ಈಗ ಆತ ಒಂದು ರೂಪಾಯಿಗೆ ರೋಟಿ, ಕುಲ್ಚಾ ನೀಡುವ ಸಾಹಸಕ್ಕೆ ಮುಂದಾಗಿದ್ದಾರೆ. ರೋಟಿ ಜತೆಗೆ ನೀಡುವ ಸಬ್ಜಿಗೆ ಮಾತ್ರ ಇತರೆಡೆ ಇರುವಂತೆ ಸಾಮಾನ್ಯ ದರ ಇರುತ್ತದೆ~ ಶ್ವೇತಾ ನೆನಪಿಸಿಕೊಂಡಳು. 

`ಅದು ಸರಿ, ನಿಂಗೆ ಈ ವಿಚಾರ ಯಾರು ಹೇಳಿದ್ದು~ ಅಂದಳು ಮೈತ್ರಿ.

`ನೀನು ಕೋಪ ಮಾಡಿಕೊಳ್ಳಲ್ಲ ಅಂದ್ರೆ ಮಾತ್ರ ಹೇಳ್ತೀನಿ ಮೈತ್ರಿ. ನೆನ್ನೆ ನಾನು ನನ್ನ ಬಾಯ್‌ಫ್ರೆಂಡ್ ರಘು ಜತೆ ಹೋಗಿದ್ದೆ~ ಶ್ವೇತಾ ಮುಖವನ್ನು ಕೆಂಪಾಗಿಸಿಕೊಂಡು ಹೇಳಿದಳು.

ಮೈತ್ರಿ ಅವಳ ತಲೆಯ ಮೇಲೆ ಮೊಟಕುತ್ತಾ, `ಅಯ್ಯೋ ನಿನ್ನಾ ಮಳ್ಳಿ ಕಣೆ ನೀನು! ಇಷ್ಟು ದಿನ ನಿಂಗೆ ಲವರ್ ಇದಾನೆ ಅಂತಾ ಹೇಳಿರ್ಲ್ಲಿಲ~ ಅಂದಳು ಹುಸಿ ಮುನಿಸು ತೋರುತ್ತಾ. ರಘು ನೋಟಕ್ಕೆ ಬೆರಗಾದ ಪರಿಯನ್ನು ಶ್ವೇತಾ ವಿವರಿಸಿದ್ದೇ, `ಹೋಗ್ಲಿ ಬಿಡು ಒಳ್ಳೆದಾಯ್ತು. ನಂಗೂ ಪರಿಚಯ ಮಾಡ್ಸು ನಿನ್ನ ಹೃದಯ ಕದ್ದವನನ್ನು. ಅದಕ್ಕೂ ಮೊದ್ಲು ನಂಗೆ ಆ ಹೋಟೆಲ್ ವಿಳಾಸ ಇದ್ರೆ ಕೊಡು. ನಾಳೇ ನಾನು ಮತ್ತು ಆಕಾಶ್ ಅಲ್ಲಿಗೆ ಹೋಗ್ತೀವಿ. ನಾನೇ ಆಕಾಶ್‌ಗೆ ಟ್ರೀಟ್ ಕೊಡಿಸ್ತೀನಿ~ ಎಂದಳು ಮೈತ್ರೇಯಿ.

`ಅಬ್ಬಾ! ನೀನು ಆಕಾಶ್‌ಗೆ ಟ್ರೀಟ್ ಕೊಡಿಸ್ತೀಯಾ, ಹೋಗೆ ಕಂಜೂಸ್. ನಂಗೇನೋ ನಂಬಿಕೆ ಬರ‌್ತಿಲ್ಲಾ ಬಿಡಮ್ಮಾ. ಆದ್ರೂ ವಿಳಾಸ ಹೇಳ್ತೀನಿ ಕೇಳ್ಕೊ ಕಡಾಯ್ ಕಾ ಖಾನಾ, ನಂ 40, 2ನೇ ಹಂತ, ಜಿಪಿ ನಗರ, 7ನೇ ಮುಖ್ಯರಸ್ತೆ, ಆರ್.ವಿ.ಡೆಂಟಲ್ ಕಾಲೇಜು ಎದುರು, ರಂಗಶಂಕರ ಹತ್ತಿರ. ಅಡ್ರೆಸ್ ಸಿಕ್ಕಿಲ್ಲಾ ಅಂದ್ರೆ ಈ ನಂಬರ್‌ಗೆ ಕಾಲ್ ಮಾಡು 72596 81188~- ಶ್ವೇತಾ ಕೊಟ್ಟ ನಂಬರನ್ನು ಮೈತ್ರೇಯಿ ಬರೆದುಕೊಂಡಳು.

ಇಷ್ಟರವರೆಗೆ ನೀವು ಕೇಳಿದ್ದು ಕಟ್ಟುಕತೆಯಲ್ಲ. ನಿಜಕ್ಕೂ ಇನ್ನು ನೂರು ದಿನ ಕಡಾಯ್ ಕಾ ಖಾನಾದಲ್ಲಿ ರೂಪಾಯಿಗೊಂದು ರೋಟಿ. ಎಂದು ನಿಮ್ಮ ಭೇಟಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry