ಮಂಗಳವಾರ, ಮೇ 11, 2021
20 °C

ರೂಪಾಯಿ ಅಪಮೌಲ್ಯ: ಕಂಪೆನಿಗಳಿಗೆ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿರುವುದರಿಂದ ರಸಗೊಬ್ಬರ, ಕಾಗದ ಮತ್ತು ರಾಸಾಯನಿಕ ಉದ್ಯಮಗಳು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ ಎಂದು ಫಿಚ್ ಅಂಡ್ ಇಂಡಿಯಾ ನಡೆಸಿದ ಸಮೀಕ್ಷೆ ತಿಳಿಸಿದೆ.ರೂಪಾಯಿ ಅಪಮೌಲ್ಯದಿಂದ ವಿವಿಧ ಉದ್ಯಮಗಳ ಮೇಲೆ ಆಗಿರುವ ಪರಿಣಾಮಗಳ ಕುರಿತು ಈ ಸಮೀಕ್ಷೆ ಗಮನ ಸೆಳೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರೂಪಾಯಿ ಅಪಮೌಲ್ಯದಿಂದ ಮಾಹಿತಿ ತಂತ್ರಜ್ಞಾನ, ಜೌಷಧ, ಜವಳಿ ಉದ್ಯಮಗಳಿಗೆ ದೊಡ್ಡ ಪ್ರಮಾಣದ ಲಾಭವೇನೂ ಆಗಿಲ್ಲ. ಆಮದುದಾರರು ಹೆಚ್ಚಿನ ರಿಯಾಯ್ತಿ ಕೇಳುತ್ತಿರುವುದರಿಂದ ಮತ್ತು ಹೆಚ್ಚಿನ ಆಮದು ದರ (ಐಐಪಿ) ವಿಧಿಸುತ್ತಿರುವುದರಿಂದ ರಫ್ತು ವಹಿವಾಟು ನಡೆಸುವ ಸಂಸ್ಥೆಗಳಿಗೆ ಹೆಚ್ಚುವರಿ ಲಾಭವೇನೂ ಲಭಿಸುತ್ತಿಲ್ಲ ಎಂದು ಈ ಅಧ್ಯಯನ ಹೇಳಿದೆ.ರಸಗೊಬ್ಬರ, ಕಾಗದ, ರಾಸಾಯನಿಕ ಮತ್ತು ಸಿಮೆಂಟ್ ಉದ್ಯಮಗಳು ಹೆಚ್ಚಿನ ಕಚ್ಚಾವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ.  ಕರೆನ್ಸಿ ವಿನಿಮಯ ಮೌಲ್ಯಕ್ಕೆ ತಕ್ಕಂತೆ ಬದಲಾಗುವ ಆಮದು ದರ (ಐಐಪಿ) ಒಪ್ಪಂದದಿಂದ ಈ ಕಂಪೆನಿಗಳು ನಷ್ಟ ಅನುಭವಿಸುತ್ತಿವೆ. ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಸೀಮಿತ ಅವಕಾಶಗಳು ಮಾತ್ರ ಇದೆ ಎಂದು ಸಂಸ್ಥೆ ವಿವರಿಸಿದೆ. ಆದರೆ, `ಐಐಪಿ' ನೀತಿಯಿಂದ ತೈಲ, ಅನಿಲ ಮತ್ತು ಲೋಹ ವಲಯದ ಕಂಪೆನಿಗಳಿಗೆ ಅನುಕೂಲವಾಗಿವೆ.ಈ ವಲಯದ ಸರಕುಗಳಿಗೆ ರಫ್ತು ಬೇಡಿಕೆ ಗರಿಷ್ಠ ಮಟ್ಟದಲ್ಲಿರುವುದರಿಂದ ಹೆಚ್ಚಿನ ಲಾಭವಾಗಿದೆ. ವಾಹನ ಉದ್ಯಮ ಸಂಸ್ಥೆಗಳು ಹೆಚ್ಚುವರಿ ಹೊರೆಯನ್ನು ಸ್ವಲ್ಪ ಮಟ್ಟಿಗೆ ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಗಳಿವೆ. ಮೇ 1ರಿಂದ ಜೂನ್ 22ರವರೆಗೆ ರೂಪಾಯಿ ಮೌಲ್ಯದಲ್ಲಿ ಶೇ 10ರಷ್ಟು ಕುಸಿತವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.