ಮಂಗಳವಾರ, ಮೇ 24, 2022
30 °C

ರೂ ಅಪಮೌಲ್ಯ-ಹಣದುಬ್ಬರ ಒತ್ತಡ: ಸಿಎಂಐಇ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಇನ್ನಷ್ಟು ಕುಸಿದರೆ ತೈಲ ಆಮದು ದರ ಗಣನೀಯವಾಗಿ ಹೆಚ್ಚಲಿದ್ದು, ಇದರಿಂದ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.3ಕ್ಕೆ ಏರಲಿದೆ ಎಂದು ಆರ್ಥಿಕ ಚಿಂತಕರ ಚಾವಡಿ `ಸಿಎಂಐಇ~ ಅಭಿಪ್ರಾಯಪಟ್ಟಿದೆ.ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ `ಡಬ್ಲ್ಯುಪಿಐ~ ಶೇ 6.5ರಷ್ಟು ಇರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ, ರೂಪಾಯಿ ಅಪಮೌಲ್ಯದಿಂದ ಹಣದುಬ್ಬರ ಒತ್ತಡ ಹೆಚ್ಚಿದೆ. `ಆರ್‌ಬಿಐ~ ಇನ್ನು ಕೆಲವು ತಿಂಗಳ ಕಾಲ ಬಡ್ಡಿ ದರ ತಗ್ಗಿಸುವ ಸೂಚನೆಗಳೂ ಕಾಣುತ್ತಿಲ್ಲ. ಇದರ ಬದಲು ಬ್ಯಾಂಕ್ ನಗದು ಮೀಸಲು ಅನುಪಾತ(ಸಿಆರ್‌ಆರ್) ಇನ್ನಷ್ಟು ತಗ್ಗಿದರೆ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರುತ್ತದೆ. ಇದು ಹೆಚ್ಚು ಪರಿಣಾಮಕಾರಿ ಕ್ರಮ ಎಂದು ಸಂಸ್ಥೆ ಹೇಳಿದೆ.ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ರೂಪಾಯಿ ಮೌಲ್ಯ ಶೇ 30ರಷ್ಟು ಕುಸಿತ ಕಂಡಿದೆ. ಆದರೆ, ರೂಪಾಯಿ ಮೌಲ್ಯ ಜುಲೈ ಮೊದಲ ಪಾಕ್ಷಿಕದಲ್ಲಿ ರೂ55ರಿಂದ ರೂ56ರ ನಡುವೆ ಸ್ಥಿರಗೊಳ್ಳಲಿದೆ ಎಂದು `ಸಿಎಂಐಇ~ ಹೇಳಿದೆ.ಪೆಟ್ರೋಲಿಯಂ ಉತ್ಪನ್ನಗಳಿಗಾಗಿ  ಬಜೆಟ್‌ನಲ್ಲಿ ರೂ43,580 ಸಬ್ಸಿಡಿ ಮೀಸಲಿಡಲಾಗಿತ್ತು. ಆದರೆ, ಇದು ರೂ65,000 ಕೋಟಿಗೆ ಏರಿಕೆ ಕಂಡಿದ್ದು, ವಿತ್ತೀಯ ಕೊರತೆ ಅಂತರ ಹೆಚ್ಚುವಂತೆ ಮಾಡಿದೆ. ಡೀಸೆಲ್ ಮತ್ತು ಇತರೆ ಪೆಟ್ರೋಲ್ ಉಪ ಉತ್ಪನ್ನಗಳನ್ನು ಸಂಪೂರ್ಣವಾಗಿ ಸರ್ಕಾರಿ ನಿಯಂತ್ರಣ ಮುಕ್ತಗೊಳಿಸಿದಾಗ ಸಬ್ಸಿಡಿ ಹೊರೆ ತಗ್ಗಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.