ಶುಕ್ರವಾರ, ನವೆಂಬರ್ 15, 2019
21 °C

ರೂ 1.20 ಕೋಟಿ ಮೌಲ್ಯದ ಹಾವಿನ ವಿಷ ವಶ: ಇಬ್ಬರ ಸೆರೆ

Published:
Updated:

ಹುಬ್ಬಳ್ಳಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ರೂ 1.20 ಕೋಟಿ ಬೆಲೆಬಾಳುವ ಕಾಳಿಂಗ ಸರ್ಪದ ವಿಷವನ್ನು ಗುರುವಾರ ವಶಪಡಿಸಿಕೊಂಡಿರುವ ಹಳೇ ಹುಬ್ಬಳ್ಳಿ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.ಕಾರವಾರದ ಪ್ರಶಾಂತ ಜಿ. ಮಾಸೂರಕರ ಮತ್ತು ರಾಮೋ ಎಸ್. ಗುಡಿನೊ  ಅವರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯಿಂದ ಹೋಗುವ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಇಬ್ಬರನ್ನೂ ಬಂಧಿಸಿ 750 ಮಿ.ಲೀ. ವಿಷ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.`ವಶಪಡಿಸಿಕೊಳ್ಳಲಾದ ಹಾವಿನ ವಿಷವನ್ನು ಹೆಚ್ಚಿನ ತನಿಖೆಗಾಗಿ ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗುವುದು. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಒಂದು ತಂಡ ಕಾರವಾರಕ್ಕೆ ತೆರಳಿದೆ' ಎಂದು ಪೊಲೀಸ್     ಕಮಿಷನರ್ ಬಿ.ಎ.ಪದ್ಮನಯನ ತಿಳಿಸಿದರು.`ಮಾದಕದ್ರವ್ಯಗಳಲ್ಲಿ ಅಮಲು ಬರಿಸುವ ವಸ್ತುವಾಗಿ ಹಾವಿನ ವಿಷವನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ಈ ವಿಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ವಿಶೇಷ ಬಹುಮಾನ ನೀಡುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇನೆ' ಎಂದರು.

ಪ್ರತಿಕ್ರಿಯಿಸಿ (+)