ರೂ 1.5 ಕೋಟಿ ನಗ-ನಾಣ್ಯ ಲೂಟಿ

7

ರೂ 1.5 ಕೋಟಿ ನಗ-ನಾಣ್ಯ ಲೂಟಿ

Published:
Updated:

ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಬಸ್ ನಿಲ್ದಾಣ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಚೇರಿಯ ಬಾಗಿಲನ್ನು ಮುರಿದು ದುಷ್ಕರ್ಮಿಗಳು ಒಳನುಗ್ಗಿ, ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ನಗ-ನಾಣ್ಯ ಲೂಟಿ ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಗ್ರಾಮದ ಮುಖ್ಯರಸ್ತೆ ಹತ್ತಿರವಿರುವ ಬ್ಯಾಂಕಿನ ಹಿಂಭಾಗದ ಗೇಟ್ ಮತ್ತು ಬಾಗಿಲು ಮುರಿದು ಒಳಗಿನ ಕೋಣೆಗಳಿಗೆ ನುಗ್ಗಿದ ದುಷ್ಕರ್ಮಿಗಳ ತಂಡ, ಒಳಗಿರುವ ಲಾಕರ್‌ಗಳಿಗೆ ರಂಧ್ರ ಹಾಕಿ ಒಳಗಿರುವ ರೂ. 46 ಲಕ್ಷ ನಗದು ಮತ್ತು ಇನ್ನೊಂದು ಲಾಕರ್‌ನಲ್ಲಿದ್ದ 4 ಕೆ.ಜಿ. ಬಂಗಾರ ದೋಚಿದ್ದಾರೆ.ಬ್ಯಾಂಕ್ ಕಚೇರಿಯಲ್ಲಿ 5 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದನ್ನು ಅರಿತ ದುಷ್ಕರ್ಮಿಗಳು ವಿದ್ಯುತ್ ಸಂಪರ್ಕ ಕತ್ತರಿಸಿ ಮೂರು ಕ್ಯಾಮರಾಗಳನ್ನು ಒಡೆದುಹಾಕಿದ್ದಾರೆ ಎನ್ನಲಾಗಿದೆ. ಇದಲ್ಲದೇ ಕಚೇರಿಯ ಕಂಪ್ಯೂಟರ್ ಮತ್ತಿತರ ಸಾಮಗ್ರಿಗಳನ್ನು ನಾಶ     ಪಡಿಸಿದ್ದಾರೆ.ಬೆಳಿಗ್ಗೆ ಕಾವಲುಗಾರ ಕಚೇರಿ ಬೀಗ ತೆರೆದಾಗ ದರೋಡೆ ನಡೆದಿರುವುದನ್ನು ಖಚಿತಪಡಿಸಿಕೊಂಡು ವ್ಯವಸ್ಥಾಪಕ ಪ್ರಹ್ಲಾದ ಪಾಟೀಲ್ ಅವರಿಗೆ ಮಾಹಿತಿ ನೀಡಿದ. ನರೋಣಾ ಪೊಲೀಸ್ ಠಾಣೆಯಲ್ಲಿ ವ್ಯವಸ್ಥಾಪಕರು ಈ ಕುರಿತು ದೂರು ನೀಡಿದ್ದಾರೆ.ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಐಜಿಪಿ ವಜೀರ ಅಹ್ಮದ್, ಹೆಚ್ಚುವರಿ ಎಸ್‌ಪಿ ಕಾಶಿನಾಥ ತಳಕೇರಿ, ಡಿವೈಎಸ್‌ಪಿ ಎಸ್.ಬಿ.ಸಾಂಬಾ, ಸಿಪಿಐ ಜಿ.ಎಸ್.ಉಡುಗಿ, ಪಿಎಸ್‌ಐ ವಿನಾಯಕ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸುಳಿವು: ಘಟನೆಗೆ ಸಂಬಂಧಿಸಿದಂತೆ ಉಳಿದ ಎರಡು ಸಿಸಿ ಕ್ಯಾಮರಾಗಳಲ್ಲಿ ಸುಳಿವು ದೊರಕಿದ್ದು ಅದರ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಈ ಸಂಬಂಧ ತಂಡ ರಚಿಸಿ ಪ್ರಕರಣ ಭೇದಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬೆಚ್ಚಿಬಿದ್ದ ಜನತೆ: ಬಂಗಾರದ ಬೆಲೆ ಗಗನಕ್ಕೆ ಏರುತ್ತಿರುವ ದಿನಗಳಲ್ಲಿ ಸುರಕ್ಷಿತ ತಾಣವಾಗಿರುವ ಮುಖ್ಯರಸ್ತೆಯ ಜನ ವಸತಿಯಲ್ಲಿನ ಬ್ಯಾಂಕ್ ದರೋಡೆ ಗಾಬರಿ ಮೂಡಿಸಿದೆ. ಹಿಂದೆಂದೂ ನಡೆಯದ ಇಂಥ ದೊಡ್ಡ ಲೂಟಿಯ ಸುದ್ದಿ ತಿಳಿದ ಸುತ್ತಲಿನ ಗ್ರಾಮಸ್ಥರು ಬೆಳಿಗ್ಗೆಯಿಂದಲೇ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶನಿವಾರ ಕಚೇರಿಯ ವ್ಯವಹಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಬ್ಯಾಂಕ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry