ರೂ 15 ಲಕ್ಷದ ಚಿನ್ನಾಭರಣ ಕಳವು

7

ರೂ 15 ಲಕ್ಷದ ಚಿನ್ನಾಭರಣ ಕಳವು

Published:
Updated:

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ಮಾಲೀಕನನ್ನು ಬೆದರಿಸಿ ಸುಮಾರು ಹದಿನೈದು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಪರಪ್ಪನ ಅಗ್ರಹಾರದ ನಾಗನಾಥಪುರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಸರ್ಜಾಪುರ ಮುಖ್ಯರಸ್ತೆ ಪಕ್ಕದಲ್ಲಿ ತಾರಾರಾಮ್ ಎಂಬುವರು ‘ಸೂರ್ಯ ಜ್ಯುವೆಲರ್ಸ್‌’ ಎಂಬ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಳಿಗ್ಗೆ ಎಂಟು ಗಂಟೆಗೆ ಅಂಗಡಿಗೆ ಬಂದ ತಾರಾರಾಮ್ ಲಾಕರ್ ತೆರೆದು ಅದರೊಳಗಿದ್ದ ಆಭರಣಗಳನ್ನು ಜೋಡಿಸುತ್ತಿದ್ದರು. 8.15ರ ಸುಮಾರಿಗೆ ಅಂಗಡಿಗೆ ಬಂದ ಮೂವರು ಯುವಕರು ಸರ, ಉಂಗುರ ತೋರಿಸುವಂತೆ ಕೇಳಿದರು.

ಹತ್ತು ನಿಮಿಷಗಳ ಕಾಲ ಆಭರಣ ನೋಡಿದ ಆ ಯುವಕರು ನಂತರ ಬೇರೆ ಮಾದರಿಯ ಆಭರಣಗಳನ್ನು ತೋರಿಸುವಂತೆ ಕೇಳಿದರು. ಆಭರಣಗಳನ್ನು ತರಲು ತಾರಾರಾಮ್ ಅವರು ಅಂಗಡಿಯೊಳಗಿನ ಇನ್ನೊಂದು ಕೊಠಡಿಗೆ ಹೋಗುತ್ತಿದ್ದ ವೇಳೆ ಯುವಕರು ಹಿಂದಿನಿಂದ ಅವರ ಕೊರಳಿಗೆ ಹಗ್ಗ ಹಾಕಿ ಹಿಡಿದುಕೊಂಡರು. ಕೂಗಾಡಿದರೆ ಕೊಲೆ ಮಾಡುವುದಾಗಿ ಬೆದರಿಸಿದ ಅವರು ಆಭರಣಗಳನ್ನು ಕೈ ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಮೂವರು ದರೋಡೆಕೋರರ ವಯಸ್ಸು ಸುಮಾರು 22ರಿಂದ 25 ವರ್ಷ ಇದೆ. ಅವರೆಲ್ಲ ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ತಾರಾರಾಮ್ ಮಾಹಿತಿ ನೀಡಿದ್ದಾರೆ. ಗುರುವಾರ ಮತ್ತು ಶುಕ್ರವಾರ ಅಂಗಡಿಗೆ ಬಂದಿದ್ದ ಆ ಯುವಕರು ಆಭರಣಗಳನ್ನು ನೋಡಿಕೊಂಡು ಹೋಗಿದ್ದರು. ಶನಿವಾರ ಬಂದು ಖರೀದಿಸುವುದಾಗಿ ಹೇಳಿ ಹೋಗಿದ್ದ ಅವರು ಈ ಕೃತ್ಯ ಎಸಗಿದ್ದಾರೆ’ ಎಂದು ಇನ್‌ಸ್ಪೆಕ್ಟರ್ ವಿ.ಕೆ. ವಾಸುದೇವ ತಿಳಿಸಿದ್ದಾರೆ. ಅಂಗಡಿಯಲ್ಲಿ ಸುಮಾರು ಒಂದೂವರೆ ಕೆ.ಜಿ ಚಿನ್ನಾಭರಣ ಇತ್ತು. ಆದರೆ ಆತುರದಲ್ಲಿ ಅವರು ಎಲ್ಲ ಆಭರಣಗಳನ್ನು ದೋಚಿಲ್ಲ. ಅಂಗಡಿಯ ವಹಿವಾಟಿನ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿದ್ದಾರೆ. ತಾರಾರಾಮ್ ಸಹೋದರ ಪ್ರತಿ ದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಅಂಗಡಿಗೆ ಬರುತ್ತಿದ್ದರು. ಆ ಬಗ್ಗೆ ಸಹ ಮಾಹಿತಿ ಕಲೆ ಹಾಕಿದ್ದ ದರೋಡೆಕೋರರು ಒಂಬತ್ತು ಗಂಟೆಗೂ ಮೊದಲೇ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry