ಶನಿವಾರ, ಡಿಸೆಂಬರ್ 7, 2019
16 °C

ರೂ 1500 ಕೋಟಿ ಬಂಡವಾಳ ನಿರೀಕ್ಷೆ

Published:
Updated:
ರೂ 1500 ಕೋಟಿ ಬಂಡವಾಳ ನಿರೀಕ್ಷೆ

ಮಂಗಳೂರು: ರಾಜ್ಯದ ಕರಾವಳಿ ಭಾಗದ ವಾಣಿಜ್ಯೋದ್ಯಮ ಅಭಿವೃದ್ಧಿಗಾಗಿ ಇಲ್ಲಿ ಬುಧವಾರ ಆರಂಭವಾದ ಬಹು ನಿರೀಕ್ಷೆಯ ಸಮಾವೇಶದಲ್ಲಿ ಒಟ್ಟು 38 ಉದ್ದಿಮೆಗಳು ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಕರಾವಳಿ ಭಾಗಕ್ಕೆ ರೂ 1,506 ಕೋಟಿಗಳಷ್ಟು ಬಂಡವಾಳ ಹರಿದುಬರುವ ವಿಶ್ವಾಸ ವ್ಯಕ್ತವಾಗಿದೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸಮ್ಮುಖದಲ್ಲಿ ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಸಾಂಕೇತಿಕವಾಗಿ ಮೂರು ಪ್ರಮುಖ ಉದ್ಯಮಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಸಹಿ ಹಾಕಿದರು. ಬಳಿಕ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಉಳಿದ ಹಲವು ಉದ್ಯಮಿಗಳು ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಿದರು. ಈ ಉದ್ಯಮಗಳು ಸ್ಥಾಪನೆಗೊಂಡರೆ 4,655 ಮಂದಿಗೆ ಉದ್ಯೋಗ ಲಭಿಸಲಿದೆ.ಕೈಗಾರಿಕೆಗೆ ಉತ್ತೇಜನ: ಶೃಂಗಸಭೆ ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕಳೆದ ಮೂರೂವರೆ ವರ್ಷದಲ್ಲಿ ರಾಜ್ಯ ಸರ್ಕಾರ ಕೈಗಾರಿಕಾ ಅಭಿವೃದ್ಧಿಗೆ ಬಹಳ ಆದ್ಯತೆ ನೀಡಿದೆ. 2010ರ ಜೂನ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಬಳಿಕ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದುಬರುತ್ತಿದೆ. ಅಂದು ರೂ 5 ಲಕ್ಷ ಕೋಟಿ   ಬಂಡವಾಳ ಹೂಡಿಕೆ ಸಂಬಂಧ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿತ್ತು. ಡಿಸೆಂಬರ್‌ನಲ್ಲಿ ನಡೆದ ಕೃಷಿ ಬಂಡವಾಳ ಹೂಡಿಕೆ ಸಮಾವೇಶದಲ್ಲೂ ರೂ 1.1 ಲಕ್ಷ ಕೋಟಿ ಬಂಡವಾಳ ಹರಿದುಬರುವ ನಿಟ್ಟಿನಲ್ಲಿ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದರು.ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ರಾಜ್ಯದಲ್ಲಿ 1.19 ಲಕ್ಷ ಎಕರೆ ಭೂಮಿಯನ್ನು ಭೂಬ್ಯಾಂಕಿಗಾಗಿ ಗುರುತಿಸಲಾಗಿದ್ದು, 89 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಹಂತದ ಕ್ರಮ ಆರಂಭವಾಗಿದೆ ಎಂದರು.ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಮಾತನಾಡಿದರು.ಗುರುವಾರ ಸಂಜೆ ಸಮಾವೇಶ ಕೊನೆಗೊಳ್ಳಲಿದ್ದು, ಹಲವು ಹಿರಿಯ ಅಧಿಕಾರಿಗಳು ಕರಾವಳಿಯಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್.ಬಂಗೇರ ನೇತೃತ್ವದಲ್ಲಿ ಹೂಡಿಕೆದಾರರ ಈ ಸಮಾವೇಶ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)