ರೂ 15.95 ಲಕ್ಷ ಹೆಚ್ಚುವರಿ ಶುಲ್ಕ ಸಂಗ್ರಹಣೆ

ಶನಿವಾರ, ಜೂಲೈ 20, 2019
28 °C
ರಾಷ್ಟ್ರೀಯ ಹೆದ್ದಾರಿಯ ಹತ್ತರಗಿ ಟೋಲ್‌ನಾಕಾದಲ್ಲಿ ಭಾರಿ ಅಕ್ರಮ ಬೆಳಕಿಗೆ

ರೂ 15.95 ಲಕ್ಷ ಹೆಚ್ಚುವರಿ ಶುಲ್ಕ ಸಂಗ್ರಹಣೆ

Published:
Updated:

ಬೆಳಗಾವಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ. 4ರ ಹತ್ತರಗಿ ಟೋಲ್‌ನಾಕಾದಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿರುವ `ದಿ ಕೋನಾರ್ಕ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪೆ ನಿ'ಯು 15,95,825 ರೂಪಾಯಿ ಹೆಚ್ಚುವರಿ ಶುಲ್ಕವನ್ನು ವಾಹನಗಳಿಂದ ಅಕ್ರಮವಾಗಿ ಸಂಗ್ರಹಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಚಿಕ್ಕೋಡಿ ತಾಲ್ಲೂಕಿನ ಗಳತಗಾ ಗ್ರಾಮದ ಪ್ರಶಾಂತ ಅಶೋಕ ಬುರ್ಗೆ ಅವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ಹಕ್ಕಿ ನಡಿ ಪಡೆದುಕೊಂಡ ವಿವರಗಳಿಂದಾಗಿ ಹತ್ತರಗಿ ಟೋಲ್‌ನಾಕಾದಲ್ಲಿ 2012ರ ನವೆಂಬರ್ 16ರಿಂದ 2013ರ   ಮಾರ್ಚ್ 26ರವರೆಗೆ `ದಿ ಕೋನಾರ್ಕ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪೆನಿಯು ಪ್ರತಿ ವಾಹನಗಳಿಂದಲೂ ರೂ 5 ಹೆಚ್ಚುವರಿ ಶುಲ್ಕ ಸಂಗ್ರಹಿಸಿರುವ ಅಕ್ರಮ ಬಹಿರಂಗಗೊಂಡಿದೆ.2012ರ ಅಕ್ಟೋಬರ್ 26ರಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಶುಲ್ಕ ಪರಿಷ್ಕರಣೆ ಮಾಡಿ, ಸಂಗ್ರಹಣೆಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿತ್ತು. ನವೆಂಬರ್ 16ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳಿಗೆ 15 ರೂಪಾಯಿ (ಮರು ಸಂಚಾರಕ್ಕೆ ರೂ. 30) ಹಾಗೂ ಲಘು ವಾಣಿಜ್ಯ ವಾಹನ ಗಳಿಗೆ 25 ರೂಪಾಯಿ (ಮರು ಸಂಚಾ ರಕ್ಕೆ ರೂ. 35) ಶುಲ್ಕವನ್ನು ಸಂಗ್ರಹಿಸ ಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.ಆದರೆ, ಹತ್ತರಗಿ ಟೋಲ್‌ನಾಕಾ ದಲ್ಲಿ ಪರಿಷ್ಕರಣೆ ದರದ ಬದಲು, ಪ್ರತಿ ವಾಹನಗಳಿಗೂ ಹೆಚ್ಚುರಿಯಾಗಿ 5 ರೂಪಾಯಿ ಸಂಗ್ರಹಿಸಲಾಗುತ್ತಿತ್ತು. ಈ ಬಗ್ಗೆ ಧಾರವಾಡದಲ್ಲಿರುವ ಪ್ರಾಧಿ ಕಾರದ ಯೋಜನಾ ಅನುಷ್ಠಾನದ ಕೇಂದ್ರಕ್ಕೆ ಪ್ರಶಾಂತ ಬುರ್ಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹತ್ತರಗಿ ಯಲ್ಲಿ ವಾಹನ ಗಳಿಂದ ಸಂಗ್ರಹಿಸು ತ್ತಿರುವ ಶುಲ್ಕದ ವಿವರವನ್ನು 2013ರ ಮಾರ್ಚ್ 12ರಂದು ಮಾಹಿತಿ ಹಕ್ಕಿನಡಿ ಕೇಳಿದರು.ಪ್ರಾಧಿಕಾರದ ಅಧಿಕಾರಿಗಳು ಖಾಸಗಿಯಾಗಿ ಭೇಟಿ ಮಾಡಲು ಯತ್ನಿಸಿದರೂ, ಪ್ರಶಾಂತ ಅವರು ಒಪ್ಪದೇ, ಮಾಹಿತಿ ನೀಡುವಂತೆ ಒತ್ತಾ ಯಿಸಿದರು. ಇದರ ಆಧಾರದ ಮೇಲೆ ಪುನಃ ಮಾರ್ಚ್ 25ರಂದು ಮಾಹಿತಿ ಹಕ್ಕಿನಡಿ ಎಷ್ಟು ಹೆಚ್ಚುವರಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ವಿವರ ಕೇಳಿದರು. ಅಂದಿನಿಂದಲೇ ಹತ್ತರಗಿ ಯಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸುತ್ತಿದ್ದ ಶುಲ್ಕವನ್ನು ನಿಲ್ಲಿಸಲಾಯಿತು.ಆದರೆ, ಧಾರವಾಡ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾಗಿರುವ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಯೋಜನಾ ನಿರ್ದೇಶಕರಾದ ಸಮುಂದ್ರ ಸಿಂಗ್ ಅವರು, ಇದರ ಬಗ್ಗೆ ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದರು.ಇದರಿಂದ ಅಸಮಾಧಾನ ಗೊಂಡ ಪ್ರಶಾಂತ ಬುರ್ಗೆ ಅವರು ಹೆದ್ದಾರಿ ಪ್ರಾಧಿಕಾರದ ಬೆಂಗಳೂರಿ ನಲ್ಲಿರುವ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕರಿಗೆ ಮಾರ್ಚ್ 25ರಂದು ಮೇಲ್ಮನವಿ ಸಲ್ಲಿಸಿ ದರು. ಮಾರ್ಚ್ 28ರಂದು ವಿಚಾರಣೆ ನಡೆಸಿದ ಮೇಲ್ಮನವಿ ಪ್ರಾಧಿಕಾರವು, ಹೆಚ್ಚುವರಿಯಾಗಿ ಸಂಗ್ರಹಿಸಿರುವ ಶುಲ್ಕದ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಹೆಚ್ಚುವರಿಯಾಗಿ ಸಂಗ್ರಹಿಸಿ ರುವ ಶುಲ್ಕವನ್ನು ವಾಹನ ಮಾಲೀಕರಿಗೆ ಮರುಪಾವತಿಸಲು ಕ್ರಮ ಕೈಗೊಳ್ಳು ವಂತೆ ಸಮುಂದ್ರ ಸಿಂಗ್ ಅವರಿಗೆ ಸೂಚಿಸಿತು.ಹತ್ತರಗಿ ಟೋಲ್‌ನಾಕಾದಲ್ಲಿ 20 12ರ ನವೆಂಬರ್ 16ರಿಂದ 2013ರ ಮಾರ್ಚ್ 26ರವರೆಗೆ ಕಾರು, ಜೀಪು, ವ್ಯಾನ್‌ಗಳು ಸೇರಿದಂತೆ 2,49,680 ವಾಹನಗಳು ಹಾಗೂ ಹಾಗೂ 69,485 ಲಘು ವಾಣಿಜ್ಯ ವಾಹನಗಳು ಸಂಚರಿಸಿವೆ. ಕೋನಾರ್ಕ್ ಇನ್‌ಫ್ರಾಸ್ಟ್ರ ಕ್ಚರ್ ಕಂಪೆನಿಯು ಈ ಅವಧಿಯಲ್ಲಿ ಕಾರು, ಜೀಪುಗಳಿಂದ ಒಟ್ಟು 12,48, 400 ರೂಪಾಯಿ ಹಾಗೂ ಲಘು ವಾಣಿಜ್ಯ ವಾಹನಗಳಿಂದ 3,47,425 ರೂಪಾಯಿ ಸೇರಿದಂತೆ ಒಟ್ಟು 15,95,825 ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿದೆ ಎಂದು ಮೇಲ್ಮನವಿ ಪ್ರಾಧಿಕಾರವು ಮಾಹಿತಿ ನೀಡಿದೆ.ದಂಡ ವಿಧಿಸಲು ಹಿಂದೇಟು: `ಅಕ್ರಮ ವಾಗಿ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸಿ ದರೆ, ನಿಯಮದ ಪ್ರಕಾರ ಗುತ್ತಿಗೆ ಪಡೆದ ಕಂಪೆನಿಗೆ 30 ದಿನಗಳವರೆಗೆ ಲೆಕ್ಕ ಹಾಕಿ ಪ್ರತಿ ವಾಹನದ ನಿಗದಿತ ಶುಲ್ಕದ 50 ಪಟ್ಟು ದಂಡವನ್ನು ವಿಧಿಸ ಲಾಗುವುದು ಎಂದು ಹೆದ್ದಾರಿ ಪ್ರಾಧಿ ಕಾರವು ಮಾಹಿತಿ ಹಕ್ಕಿನಡಿ ತಿಳಿಸಿದೆ.ಇದರ ಪ್ರಕಾರ ಲೆಕ್ಕ ಹಾಕಿದರೆ ಕೋನಾರ್ಕ್ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಗೆ ಒಟ್ಟು ರೂ926.57 ಕೋಟಿ ದಂಡವನ್ನು ಹಾಕಬೇಕಾಗುತ್ತದೆ. ಆದರೆ, ಪ್ರಾಧಿಕಾರದ ಅಧಿಕಾರಿಗಳು ಇದುವರೆಗೂ ದಂಡವನ್ನು ವಿಧಿಸಲು ಮುಂದಾಗದೇ ಇರುವುದು, ಅಧಿಕಾರಿ ಗಳೂ ಈ ಅಕ್ರಮದಲ್ಲಿ ಭಾಗಿಯಾಗಿ ದ್ದಾರೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ' ಎಂದು ಪ್ರಶಾಂತ ಬುರ್ಗೆ ಆರೋಪಿಸುತ್ತಾರೆ.`ಈ ಅಕ್ರಮದ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ನೀಡುತ್ತೇನೆ. ಸಮರ್ಪಕವಾಗಿ ಮಾಹಿತಿ ನೀಡುವುದರ ಬದಲು ನನ್ನೊಂದಿಗೆ ಸಂಧಾನ ಮಾಡಿಕೊಳ್ಳಲು ಯತ್ನಿಸಿದ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕೇಂದ್ರ ಮಾಹಿತಿ ಆಯೋಗಕ್ಕೆ ದಾಖಲೆ ಸಮೇತ ದೂರು ಸಲ್ಲಿಸುತ್ತೇನೆ' ಎಂದು ಪ್ರಶಾಂತ ಬುರ್ಗೆ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry