ರೂ 17.29 ಲಕ್ಷ ದುರ್ಬಳಕೆ ಆರೋಪ

7

ರೂ 17.29 ಲಕ್ಷ ದುರ್ಬಳಕೆ ಆರೋಪ

Published:
Updated:

ಧಾರವಾಡ: `ತಾಲ್ಲೂಕಿನ ಕೊಟಬಾಗಿ ಗ್ರಾಮ ಪಂಚಾಯಿತಿಯ ಜಲಾನಯನ ಉಪಸಮಿತಿಯ ಆಡಳಿತಾಧಿಕಾರಿಯಾಗಿ 2008ರಲ್ಲಿ ಕೆಲಸ ನಿರ್ವಹಿಸಿದ್ದ ತಾಲ್ಲೂಕು ಜಲಾನಯನ ಅಧಿಕಾರಿ ಸಿ.ಜಿ.ಮೇತ್ರಿ ಅವರು ಗ್ರಾ.ಪಂ.ಆಡಳಿತಾಧಿಕಾರಿಗಳ ಗಮನಕ್ಕೆ ತರದೇ ಸುಮಾರು 17.29 ಲಕ್ಷ ರೂಪಾಯಿ ಹಣಕಾಸು ವ್ಯವಹಾರ ಮಾಡಿದ್ದಾರೆ.ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು~ ಎಂದು ಅಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎಸ್.ಜಿ.ವೀರನಗೌಡ್ರ ಅವರು ರಾಜ್ಯ ಜಲಾಯನ ಅಭಿವೃದ್ಧಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಿರುವ ವೀರನಗೌಡ್ರ, `ಕೊಟಬಾಗಿ ಗ್ರಾ.ಪಂ.ಗೆ ಅಧ್ಯಕ್ಷರು ಇಲ್ಲದಿದ್ದಾಗ ಆಡಳಿತಾಧಿಕಾರಿಯನ್ನಾಗಿ ಮೇತ್ರಿ ಅವರನ್ನು ಜಿಲ್ಲಾ ಜಲಾನಯನ ಅಧಿಕಾರಿ ಎಸ್.ಬಿ.ಬಿರಾದಾರ ಅವರು ನೇಮಕ ಮಾಡಿದ್ದರು. ಆದರೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡುವ ಅಧಿಕಾರ ಅವರಿಗಿಲ್ಲ. ಆದ್ದರಿಂದ ಬಿರಾದಾರ ಅಧಿಕಾರ ದುರುಪಯೋಗ ಮಾಡಿದ್ದಾರೆ~ ಎಂದು ದೂರಿರುವ ಅವರು, `ಈ ಸಂಬಂಧ ಮಾಹಿತಿ ಕೊಡಬೇಕು ಎಂದು ಜಲಾಯನಯನ ಅಧಿಕಾರಿಗಳಿಗೆ ಕೇಳಿದ್ದರೂ ಇನ್ನೂ ಮಾಹಿತಿ ಪೂರೈಸಿಲ್ಲ~ ಎಂದು ಪತ್ರದಲ್ಲಿ ದೂರಿದ್ದಾರೆ.`ಮಾಹಿತಿ ಪೂರೈಸದೇ ಇರುವುದಕ್ಕೆ ಜಲಾನಯನ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆ ಬಳಿಕವಷ್ಟೇ ಮಾಹಿತಿಯನ್ನು ನೀಡಲಾಗಿದೆ. ಆದರೆ ಇನ್ನೂ ಹಲವು ಮಾಹಿತಿಗಳನ್ನು ಕೇಳಿದ್ದು, ಅವುಗಳನ್ನು ಇಲ್ಲಿಯವರೆಗೂ ನೀಡಿಲ್ಲ~ ಎಂದು ವೀರನಗೌಡರ ಹೇಳಿದರು.ಈ ಸಂಬಂಧ `ಪ್ರಜಾವಾಣಿ~ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಬಿರಾದಾರ, `ನಾವು ಮೇತ್ರಿ ಅವರನ್ನು ಇಡೀ ಗ್ರಾ.ಪಂ. ಸಂಬಂಧಿಸಿದಂತೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿಲ್ಲ. ಬರೀ ಜಲಾನಯನ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಮಾತ್ರ ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು. ವೀರನಗೌಡ್ರ  ನೀಡಿದ ದೂರಿನ ಆಧಾರದ ಮೇಲೆ ತನಿಖಾ ಸಮಿತಿಯನ್ನು ನೇಮಕ ಮಾಡಿ ವಾರದಲ್ಲಿ ವರದಿಯನ್ನು ತರಿಸಿಕೊಳ್ಳುತ್ತೇವೆ~ ಎಂದರು.`ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಆದರೆ ಮೇತ್ರಿ ಅವರಿಗೆ ನೇಮಕಾತಿ ಮಾಡಿದ್ದು ತಾತ್ಕಾಲಿಕವಷ್ಟೇ. ಆ ಅಧಿಕಾರ ನನಗಿಲ್ಲ~ ಎಂಬುದನ್ನೂ ಒಪ್ಪಿಕೊಂಡರು.ಹಣ ದುರುಪಯೋಗ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಜಿ.ಮೇತ್ರಿ, `ನಾನು ಆಡಳಿತಾಧಿಕಾರಿಯಾಗಿದ್ದಾಗ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಕೃಷಿ ಹೊಂಡಗಳನ್ನು ತೋಡುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ ಆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ಆಗಿಯೇ ಇಲ್ಲ. ವೈಯಕ್ತಿಕ ದ್ವೇಷದಿಂದ ವೃಥಾ ಆರೋಪ ಮಾಡುತ್ತಿದ್ದಾರೆ~ ಎಂದು ಸ್ಪಷ್ಟನೆ ನೀಡಿದರು. ಪತ್ರಕರ್ತನಿಗೆ ಹಣದ ಆಮಿಷ

ತಮ್ಮ ಬಗೆಗಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಸೋಮವಾರ ಸಂಜೆ ಧಾರವಾಡದ `ಪ್ರಜಾವಾಣಿ~ ಕಚೇರಿಗೆ ಆಗಮಿಸಿದ್ದ ತಾಲ್ಲೂಕು ಜಲಾನಯನ ಅಧಿಕಾರಿ ಸಿ.ಜಿ.ಮೇತ್ರಿ, ವರದಿ ಬರೆಯದಂತೆ ತಡೆಯಲು ಹಣದ ಆಮಿಷ ಒಡ್ಡಿದರು. ತಮ್ಮ ಜೊತೆಗಿದ್ದ ಫೈಲ್‌ನಿಂದ ಹಣವಿರುವ ಕವರ್ ತೆಗೆದುಕೊಡಲು ಮುಂದಾದರು. `ಕೆಲ ಪತ್ರಕರ್ತರು ನಮ್ಮ ಕಚೇರಿಗೆ ಬಂದು ಏನೋ ತಾಪತ್ರಯ ಇದೆ ಎಂದು ಹಣ ಪಡೆಯುತ್ತಾರೆ. ನಿಮಗೂ...~ ಎಂದು ರಾಗವೆಳೆದರು.ಹಣ ತೆಗೆದುಕೊಳ್ಳುವುದಿಲ್ಲ ಎಂದು ಖಾತ್ರಿಯಾದ ಬಳಿಕ ಕಚೇರಿಯಿಂದ ಹೊರಟ ಮೇತ್ರಿ, `ಕೆಲವರು ತೆಗೆದುಕೊಳ್ಳುತ್ತಾರಲ್ಲ ಎಂದು ಕೊಡಲು ಬಂದೆ. ದಯವಿಟ್ಟು ಕ್ಷಮಿಸಿ. ಇದನ್ನು ಪತ್ರಿಕೆಯಲ್ಲಿ ಬರೆಯಬೇಡಿ~ ಎಂದರು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry