ಬುಧವಾರ, ಜೂನ್ 16, 2021
21 °C

ರೂ 183 ಕೋಟಿ ಭೂಹಗರಣ ಆರೋಪ: ಡಿಕೆಶಿ ವಿರುದ್ಧ ಖಾಸಗಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್.ಪುರ ತಾಲ್ಲೂಕಿನ ಬೆನ್ನಿಗಾನಹಳ್ಳಿಯ ಸರ್ವೆ ನಂಬರ್ 20ರ 4.20 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ನಗರದ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆಯ ಟಿ.ಜೆ.ಅಬ್ರಹಾಂ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಲವು ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಅಬ್ರಹಾಂ, 4.20 ಎಕರೆ ಭೂಮಿಯನ್ನು ಕಾನೂನಿಗೆ ವಿರುದ್ಧವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಪರಿಣಾಮವಾಗಿ ಸರ್ಕಾರಕ್ಕೆ 183 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ಕೋರಿದ್ದಾರೆ. ದೂರನ್ನು ವಿಚಾರಣೆಗೆ ಸ್ವೀಕರಿಸುವ ಸಂಬಂಧ ಬುಧವಾರ ಆದೇಶ ಹೊರಡಿಸುವುದಾಗಿ ಪ್ರಕಟಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ವಿಚಾರಣೆಯನ್ನು ಮುಂದೂಡಿದರು.ದೂರಿನಲ್ಲಿರುವ ಆರೋಪ: ಎನ್‌ಜಿಇಎಫ್‌ಬಡಾವಣೆ ನಿರ್ಮಾಣಕ್ಕಾಗಿ ಬೆನ್ನಿಗಾನಹಳ್ಳಿಯ ಸರ್ವೆ ನಂಬರ್ 20ರಲ್ಲಿರುವ ಬಿ.ಕೆ.ಶ್ರೀನಿವಾಸನ್ ಅವರ 4.20 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1986ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಭೂಮಿ ಬಿಡಿಎ ಸ್ವಾಧೀನದಲ್ಲಿರುವಾಗಲೇ 2003ರಲ್ಲಿ ಶಿವಕುಮಾರ್ ಅದನ್ನು ಖರೀದಿಸಿದ್ದರು. ಖರೀದಿ ಸಂದರ್ಭದಲ್ಲಿ ಸಚಿವರಾಗಿದ್ದ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ದೂರಿನಲ್ಲಿದೆ.`ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಶಿವಕುಮಾರ್ ಅವರು ಶ್ರೀನಿವಾಸನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ, ಬೆನ್ನಿಗಾನಹಳ್ಳಿಯ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ ಯಡಿಯೂರಪ್ಪ, 4.20 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು 2010ರ ಮೇ 13ರಂದು ಆದೇಶ ಹೊರಡಿಸಿದ್ದರು.ಅರ್ಜಿ ಸಲ್ಲಿಸುವಾಗಲೇ ಶ್ರೀನಿವಾಸನ್ ಮೃತರಾಗಿದ್ದರು. ಈ ಸಂಗತಿಯನ್ನು ಮುಚ್ಚಿಟ್ಟು ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು~ ಎಂದು ದೂರಿದ್ದಾರೆ.ಮೆಟ್ರೊ ರೈಲು ಯೋಜನೆಯಿಂದ ಬೆನ್ನಿಗಾನಹಳ್ಳಿಯ ಭೂಮಿಯ ಬೆಲೆ ದುಬಾರಿಯಾಗಿದೆ. ಇಂತಹ ಪ್ರದೇಶದಲ್ಲಿನ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಪಡೆಯುವ ಮೂಲಕ ಶಿವಕುಮಾರ್ 183 ಕೋಟಿ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಅಷ್ಟೇ ಮೊತ್ತದ ನಷ್ಟ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿದೆ ಎಂಬ ಆರೋಪ ಮಾಡಲಾಗಿದೆ.4.20 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮುನ್ನವೇ ಅಲ್ಲಿ ಜಂಟಿ ಪಾಲುದಾರಿಕೆ ಯೋಜನೆಗಾಗಿ ರಿಯಲ್ ಎಸ್ಟೇಟ್ ಕಂಪೆನಿ ಜೊತೆ ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದರು.

ಕಾನೂನುಬಾಹಿರ ಆದೇಶ ಪಡೆಯುವ ಸಂಚು ಮೊದಲೇ ನಡೆದಿತ್ತು ಎಂಬುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ ಎಂದು ಅಬ್ರಹಾಂ ಆರೋಪಿಸಿದ್ದಾರೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಕರ್ನಾಟಕ ಭೂ ಪರಭಾರೆ ನಿಯಂತ್ರಣ ಕಾಯ್ದೆ, ಭಾರತೀಯ ದಂಡ ಸಂಹಿತೆಯ ವಿವಿಧ ಕಲಮುಗಳ ಅಡಿಯಲ್ಲಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.ದೂರಿನಲ್ಲಿರುವ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ. ದೂರಿನಲ್ಲಿ ಶಿವಕುಮಾರ್ ಒಬ್ಬರನ್ನು ಮಾತ್ರ ಆರೋಪಿ ಎಂದು ಹೆಸರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.