ಮಂಗಳವಾರ, ಡಿಸೆಂಬರ್ 10, 2019
26 °C
ಪರಿಶುದ್ಧ ನೀರು ಯೋಜನೆ

ರೂ 2ಕ್ಕೆ 25 ಲೀಟರ್ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂ 2ಕ್ಕೆ 25 ಲೀಟರ್ ನೀರು

ರಾಜರಾಜೇಶ್ವರಿನಗರ: ನಗರದಲ್ಲಿ ಪ್ರಥಮ ಬಾರಿಗೆ ರಾಜರಾಜೇಶ್ವರಿನಗರ ವಾರ್ಡ್‌ನಲ್ಲಿ ಬಿಬಿಎಂಪಿ ಸದಸ್ಯ ಜಿ.ಎಚ್.ರಾಮಚಂದ್ರ ಅವರು ರೂ2ಕ್ಕೆ 25 ಲೀಟರ್ ಪರಿಶುದ್ಧ ನೀರು ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ವ್ಯವಸ್ಥೆಯನ್ನು ಗುರುವಾರ ಉದ್ಘಾಟಿಸಲಾಯಿತು.ಶಾಸಕ ಆರ್.ಅಶೋಕ ಅವರು ಶುದ್ಧ ಕುಡಿಯುವ ನೀರಿನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, `ಬಡ-ಮಧ್ಯಮ ಜನಾಂಗದವರಿಗೆ ಪರಿಶುದ್ಧ ನೀರನ್ನು ನೀಡುವ ಕಾರ್ಯ ಶ್ಲಾಘನೀಯ. ಉಳ್ಳವರು ಮತ್ತು ಜನಪ್ರತಿನಿಧಿಗಳು ಬಡವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ' ಎಂದರು.ಬಿಬಿಎಂಪಿ ಸದಸ್ಯ ಜಿ.ಎಚ್.ರಾಮಚಂದ್ರ ಮಾತನಾಡಿ, `ಎಲ್ಲ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ಗಡಸು ನೀರು ಮತ್ತು ಅಶುದ್ಧ ನೀರನ್ನು ಸಾರ್ವಜನಿಕರು ಕುಡಿಯುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ಜನರಿಗೆ ಪರಿಶುದ್ಧ ನೀರನ್ನು ಸರಬರಾಜು ಮಾಡಲು ಚಿಂತನೆ ನಡೆಸಿ ಆರು ಕಡೆ ನೀರು ಸರಬರಾಜು ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮನೆಗಳ ಮಾಲೀಕರು ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದು ಮೂರು ದಿನಕ್ಕೊಮ್ಮೆ ನೀರನ್ನು ಪಡೆಯಬಹುದು. ನೀರು ಸಂಗ್ರಹಕ್ಕಾಗಿ ಕ್ಯಾನ್‌ಗಳನ್ನು ನಾವೇ ನೀಡುತ್ತೇವೆ. ಗ್ರಾಹಕರು ರೂ75 ಕೊಟ್ಟು ಖರೀದಿಸಬೇಕು' ಎಂದರು,ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ, `ಉಳ್ಳವರು ಬಡವರ ಕಷ್ಟಕ್ಕೆ ಭಾಗಿಯಾಗುವುದರ ಮೂಲಕ ಎಲ್ಲೆಡೆ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಬೇಕು' ಎಂದರು.ಬಿಬಿಎಂಪಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ತಿಮ್ಮರಾಜು, ಲಕ್ಷ್ಮಿಕಾಂತ ರೆಡ್ಡಿ, ಶಶಿರೇಖಾ ಜಯರಾಮ್, ಎ.ಎಚ್.ಬಸವರಾಜು, ಆಶಾ ಸುರೇಶ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)