ಬುಧವಾರ, ಜೂನ್ 16, 2021
22 °C

ರೂ. 30 ಲಕ್ಷ ಬ್ಯಾಂಕ್‌ ಹಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ಐಡಿಬಿಐ ಬ್ಯಾಂಕಿನಿಂದ ತಮ್ಮ ಶಾಖೆಗೆ ರೂ. 30 ಲಕ್ಷ ನಗದು ಕೊಂಡೊಯ್ಯುತ್ತಿದ್ದ ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಕಣ್ತಪ್ಪಿಸಿದ ಆಗಂತುಕನೊಬ್ಬ ಹಣದ ಚೀಲವನ್ನು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.ಮೂವರು ಸಿಬ್ಬಂದಿ ಬ್ಯಾಂಕಿನಿಂದ ಹಣ ಪಡೆದು, ಕೊರ್ಲಗುಂದಿಗೆ ತೆರಳುವಾಗ ನಗರದ ಹೊರ ವಲಯದಲ್ಲಿರುವ ಶಾಂತಿ ಶಿಶುವಿಹಾರ ಶಾಲೆ ಬಳಿ ಕಾರು ಪಂಕ್ಚರ್‌ ಆಗಿದೆ. ದುರಸ್ತಿಗಾಗಿ ಮೋಕಾ ರಸ್ತೆಯಲ್ಲಿರುವ ಗ್ಯಾರೇಜ್‌ ಒಳಗೆ ವಾಹನ ನಿಲ್ಲಿಸಿದ್ದ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಅಪರಿಚಿತನೊಬ್ಬ ಕಾರಿನಲ್ಲಿದ್ದ ಹಣದ ಚೀಲವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಚಿೀಲವನ್ನು ಎತ್ತಿಕೊಂಡು ಓಡಿ ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿದರೂ ಆತ ಕೈಗೆ ಸಿಗಲಿಲ್ಲ.ಸ್ವಲ್ಪ ದೂರ ಹೋದ ನಂತರ ಅಲ್ಲೇ ಕಾಯುತ್ತಿದ್ದ ಇಂಡಿಕಾ ಕಾರು ಹತ್ತಿ ಪರಾರಿಯಾದ’ ಎಂದು ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಾಜಶೇಖರ್‌, ಗುಮಾಸ್ತೆ ಅರುಣಾ ಹಾಗೂ ಚಾಲಕ ಗಾದಿಲಿಂಗಪ್ಪ ಗಾಂಧಿನಗರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿದರೂ ಹಣದೊಂದಿಗೆ ಪರಾರಿಯಾದ ವ್ಯಕ್ತಿ ಪತ್ತೆಯಾಗಲಿಲ್ಲ ಎಂದು ಡಿವೈಎಸ್‌ಪಿ ಟಿ.ಎಸ್‌. ಮುರುಗಣ್ಣನವರ್‌ ತಿಳಿಸಿದ್ದಾರೆ.ಗ್ರಾಹಕರೊಬ್ಬರು ಶನಿವಾರ ಬ್ಯಾಂಕಿಗೆ ತೆರಳಿ ತಮ್ಮ ಠೇವಣಿ ವಾಪಸ್‌ ನೀಡುವಂತೆ ಕೇಳಿದ್ದರು. ಅಷ್ಟೊಂದು ಪ್ರಮಾಣದ ಹಣ ಶಾಖೆಯಲ್ಲಿ ಇರಲಿಲ್ಲ. ಹಾಗಾಗಿ ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿರುವ ಪ್ರವರ್ತಕ ಶಾಖೆಗೆ ಸೋಮವಾರ ಬಂದಿದ್ದ ಸಿಬ್ಬಂದಿ, ಅಲ್ಲಿಂದ ಚೆಕ್‌ ಪಡೆದು, ಪಕ್ಕದಲ್ಲಿರುವ ಐಡಿಬಿಐ ಬ್ಯಾಂಕ್‌ ಶಾಖೆಯಿಂದ ಹಣ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.